ಶುಕ್ರವಾರ, ಆಗಸ್ಟ್ 6, 2021
25 °C
ಊರ ಹೊರಗೆ ಎರಡು ಎಕರೆ ಜಾಗ ಗುರುತಿಸುವಂತೆ ಸೂಚನೆ

ಸೋಂಕಿತ ಶವಗಳ ಅಂತ್ಯಕ್ರಿಯೆಗೆ ಪ್ರತ್ಯೇಕ ಜಾಗಕ್ಕೆ ಶೀಘ್ರವೇ ಆದೇಶ: ಶ್ರೀರಾಮುಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಚಿಕ್ಕಬಳ್ಳಾಪುರ: ‘ಕೋವಿಡ್‌ನಿಂದ ಮೃತಪಟ್ಟವರ ಶವಗಳ ಅಂತ್ಯಕ್ರಿಯೆಗೆ ಊರ ಹೊರಗಡೆ ಎರಡು ಎಕರೆ ಜಮೀನು ಗುರುತಿಸುವಂತೆ ಶೀಘ್ರದಲ್ಲೇ ಆದೇಶ ಮಾಡುವೆ’ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದರು.

ನಗರದಲ್ಲಿ ಬುಧವಾರ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೋವಿಡ್‌ ಸೋಂಕಿತರ ಶವಗಳ ಅಂತ್ಯಕ್ರಿಯೆ ವಿಚಾರವಾಗಿ ದೂರುಗಳು ಬರುತ್ತಿವೆ. ಅದರಲ್ಲೂ ನಗರ ವ್ಯಾಪ್ತಿಯಲ್ಲಿ ಆಕ್ಷೇಪಣೆಗಳು ಹೆಚ್ಚಿವೆ’ ಎಂದು ತಿಳಿಸಿದರು.

‘ಶವಸಂಸ್ಕಾರದ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮಧ್ಯಪ್ರದೇಶದ ಮಾದರಿಯಲ್ಲಿ ಊರ ಹೊರಗೆ ಸುಮಾರು ಎರಡು ಎಕರೆ ಜಾಗ ಗುರುತಿಸಿ ಅಲ್ಲೇ ಸೋಂಕಿತರ ಶವಗಳ ಅಂತ್ಯಕ್ರಿಯೆ ಮಾಡುವಂತೆ ಬೆಂಗಳೂರಿಗೆ ಹೋದ ತಕ್ಷಣ ಆದೇಶಿಸುವೆ’ ಎಂದರು.

‘ಆಯುರ್ವೇದ ವೈದ್ಯ ಡಾ.ಗಿರಿಧರ ಕಜೆ ಅವರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ 10 ಸೋಂಕಿತರ ಮೇಲೆ ನಡೆಸಿದ ಆಯುರ್ವೇದ ಮಾತ್ರೆಗಳು, ಔಷಧಿ ಪ್ರಯೋಗ ಯಶಸ್ವಿಯಾಗಿದೆ. ಸೋಂಕಿತರು ಗುಣಮುಖರಾಗಿದ್ದಾರೆ. ಡಾ. ಗಿರಿಧರ ಅವರು ಸೋಂಕಿತರ ಸಂಪರ್ಕಕ್ಕೆ ಬಂದ ಸುಮಾರು 42 ಸಾವಿರ ಮಂದಿಗೆ ಉಚಿತವಾಗಿ ಆಯುರ್ವೇದ ಔಷಧಿ ನೀಡುವುದಾಗಿ ತಿಳಿಸಿದ್ದಾರೆ’ ಎಂದು ಹೇಳಿದರು.

‘ಈ ಕುರಿತು ಕಾರ್ಯಪಡೆ ಸಭೆಯಲ್ಲಿ ಚರ್ಚಿಸಲಾಗಿದೆ. ಚಿಕಿತ್ಸೆಯಲ್ಲಿ ಆಯುರ್ವೇದ ಬಳಕೆ ಮಾಡುವ ಕುರಿತು ವರದಿ ನೀಡುವಂತೆ ಆರ್‌ಜಿಯುಎಚ್‌ಎಸ್‌ ಕುಲಪತಿ ಅವರಿಗೆ ತಿಳಿಸಲಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಶ್ವೇತಪತ್ರಕ್ಕೆ ಒತ್ತಾಯಿಸಿದ್ದಾರಲ್ಲ ಎಂಬ ಪ್ರಶ್ನೆಗೆ, ‘ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಶ್ವೇತಪತ್ರ ಹೊರಡಿಸಲು ನಾವು ಸಿದ್ಧರಾಗಿದ್ದೇವೆ. ಕೋವಿಡ್‌ ಸಂದರ್ಭದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳು ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ. ಮುಖ್ಯಮಂತ್ರಿ ಅವರ ಆದೇಶದಂತೆ ಸಚಿವರೆಲ್ಲ ಕೋವಿಡ್ ನಿಯಂತ್ರಿಸಲು ಕಾರ್ಯೋನ್ಮುಖರಾಗಿದ್ದೇವೆ’ ಎಂದು ಹೇಳಿದರು. 

‘ಕೋವಿಡ್ ಸೋಂಕಿತರ ಹೆಚ್ಚಳದಿಂದ ಮುಂದೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ವೈದ್ಯಕೀಯ ಶಿಕ್ಷಣ ಕಾಲೇಜು ಮತ್ತು  ಸರ್ಕಾರಿ ಆಸ್ಪತ್ರೆಗಳಲ್ಲಿ ಸುಮಾರು 10 ಸಾವಿರ ಹಾಸಿಗೆಗಳನ್ನು ಸಜ್ಜುಗೊಳಿಸುತ್ತಿದ್ದೇವೆ‘ ಎಂದು ತಿಳಿಸಿದರು.

‘ಆಂಬುಲೆನ್ಸ್‌ನಲ್ಲಿ ಸೋಂಕಿತರೊಬ್ಬರು ಮೃತ‍ಪಟ್ಟ ಪ್ರಕರಣದ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಇಲಾಖೆಯ ಆಯುಕ್ತರಿಗೆ ಸೂಚಿಸಿರುವೆ. ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುತ್ತೇವೆ. ನಮ್ಮಲ್ಲಿ ಸಮನ್ವಯತೆ ಕೊರತೆ ಇಲ್ಲ. ಎಲ್ಲರೂ ಒಗ್ಗಟ್ಟಿನಿಂದ ಸಿಎಂ ನೇತೃತ್ವದಲ್ಲಿ ಕೆಲಸ ಮಾಡುತ್ತಿದ್ದೇವೆ’ ಎಂದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು