ಭಾನುವಾರ, ಜುಲೈ 3, 2022
23 °C

‘ಸ್ನೇಹಿತರೊಡನೆ ಬಂಕರ್‌ನಲ್ಲಿ ದಿನ ಕಳೆದೆವು’: ಉಕ್ರೇನ್‌ನಿಂದ ಮರಳಿದ ವಿದ್ಯಾರ್ಥಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಡೂರು: ಉಕ್ರೇನಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಕಡೂರಿನ ಸೋಮೇಶ್ವರ ನಗರದ ಅರುಣ್ ಕುಮಾರ್ ಅವರನ್ನು ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಭೇಟಿ ಮಾಡಿ ಕುಶಲ ವಿಚಾರಿಸಿದರು.

ಬ್ಯಾಂಕ್ ಉದ್ಯೋಗಿ ಎಸ್.ಎಂ.ಶಿವಪ್ಪ ಹಾಗೂ ಮಂಜುಳಾ ದಂಪತಿ ಪುತ್ರ ಅರುಣ್ ಕುಮಾರ್, ಉಕ್ರೇನ್ ನ್ಯಾಷನಲ್ ಯೂನಿವರ್ಸಿಟಿಯಲ್ಲಿ ಮೂರನೇ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದರು. ಸೋಮವಾರ ಕಡೂರಿನ ತಮ್ಮ ನಿವಾಸಕ್ಕೆ ಬಂದ ಅವರು ಕರಾಳ ಅನುಭವ ಬಿಚ್ಚಿಟ್ಟರು.

‘ಯುದ್ಧ ಆರಂಭವಾದ ನಂತರ ಮೂವರು ಸ್ನೇಹಿತರು ಜೊತೆಗೂಡಿ ಬಂಕರ್‌ನಲ್ಲಿ ದಿನ ಕಳೆದೆವು. ನಂತರ ₹ 6,000 ದಷ್ಟು ಪಾವತಿಸಿ ರಷ್ಯಾ ಗಡಿಗೆ ಬಂದು ನಂತರ ರೈಲಿನಲ್ಲಿ ಹಾರ್ಕಿವ್‌ನಿಂದ ಲಿವಿವ್‌ವರೆಗೆ ನಿಂತುಕೊಂಡೇ ಪ್ರಯಾಣ ಮಾಡಿದೆವು. ಅಲ್ಲಿಂದ ಪೋಲೆಂಡ್ ಗಡಿವರೆಗೆ ನಡೆದು ಅಲ್ಲಿ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಒಂದು ದಿನ ಇದ್ದೆವು. ನಂತರ ಭಾರತ ಸರ್ಕಾರ ಕಲ್ಪಿಸಿದ್ದ ಏರ್‌ಲಿಫ್ಟ್ ಮೂಲಕ ನವದೆಹಲಿ ತಲುಪಿ ಅಲ್ಲಿನ ಕರ್ನಾಟಕ ಭವನದಲ್ಲಿ ಉಳಿದು ನಂತರ ಬೆಂಗಳೂರು ಮೂಲಕ ಕಡೂರು ತಲುಪಿದೆ. ದೇಶದ ಬಗ್ಗೆ ಕೆಲವರು ಅಪಪ್ರಚಾರ ನಡೆಸಿದ್ದಾರೆ. ಉಕ್ರೇನ್‌ನಲ್ಲಿರುವ ವಿದ್ಯಾರ್ಥಿಗಳ ಬಗ್ಗೆ ಭಾರತ ಸರ್ಕಾರ ಜವಾಬ್ದಾರಿಯಿಂದ ನಡೆದುಕೊಂಡಿದೆ ಎಂಬುದಕ್ಕೆ ನಾನು ಬಂದಿರುವುದೇ ಸಾಕ್ಷಿ’ ಎಂದರು.

ಭಂಡಾರಿ ಶ್ರೀನಿವಾಸ್ ಮಾತನಾಡಿ, ‘ಕಡೂರಿನ ವಿದ್ಯಾರ್ಥಿ ಯುದ್ಧಪೀಡಿತ ಪ್ರದೇಶದಿಂದ ಸುರಕ್ಷಿತವಾಗಿ ಮರಳಿರುವುದು ಸಂತಸಕರ. ಇವರ ಮುಂದಿನ ವಿದ್ಯಾಭ್ಯಾಸಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಗತ್ಯ ಸಹಕಾರ ನೀಡಬೇಕು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು