ಚಿಕ್ಕಮಗಳೂರು: ಧಾರಾಕಾರವಾಗಿ ಸುರಿಯುತ್ತಿರುವ ಮುಂಗಾರು ಪೂರ್ವ ಮಳೆ ಮಲೆನಾಡಿನಲ್ಲಿ ಆತಂಕ ತರಸಿದ್ದರೆ, ಬಯಲು ಸೀಮೆಯಲ್ಲಿ ಉತ್ತಮ ಬೆಳೆಯ ನಿರೀಕ್ಷೆ ಮೂಡಿಸಿದೆ.

ಮುಂಗಾರು ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲು ಮಲೆನಾಡಿನಲ್ಲಿ ಮಳೆ ಅವಕಾಶವನ್ನೇ ನೀಡಿಲ್ಲ. ಕಾಫಿ ಬೆಳೆಗೆ ಔಷಧ ಸಿಂಪರಣೆ ಮಾಡಿಕೊಳ್ಳಲು ಸಾಧ್ಯವಾಗದೆ ಬೆಳೆಗಾರರು ಪರದಾಡುತ್ತಿದ್ದಾರೆ. ಮಳೆ ಕಡಿಮೆಯಾಗುವಷ್ಟರಲ್ಲಿ ಮುಂಗಾರ ಮಳೆ ಆರಂಭವಾಗುವ ಸಾಧ್ಯತೆ ಇದ್ದು, ಆತಂಕ ಮನೆ ಮಾಡಿದೆ.

ಇನ್ನು ಬಯಲು ಸೀಮೆಯಲ್ಲಿ ನಿರೀಕ್ಷೆಗೆ ಮುನ್ನವೇ ಮಳೆ ಬಂದಿರುವುದು ಕೃಷಿ ಚಟುವಟಿಕೆ ಚುರುಕುಗೊಳಿಸಿದೆ. ಕೊಂಚವೂ ಬಿಡುವು ನೀಡದಿರುವುದು ಬಿತ್ತನೆ ಕಾರ್ಯಕ್ಕೆ ತೊಡಕಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

‘ಪೂರ್ವ ಮುಂಗಾರಿನಲ್ಲಿ 8,500 ಹೆಕ್ಟೇರ್ನಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಸದ್ಯ 4,500 ಎಕರೆಯಷ್ಟು ಬಿತ್ತನೆಯಾಗಿದೆ. ಅಶ್ವಿನಿ ಮತ್ತು ಭರಣಿ ಮಳೆಯಲ್ಲಿ ರೈತರು ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದರು. ಅಲಸಂದೆ, ಉದ್ದು, ಹೆಸರು ಕಾಳುಗಳ ಬಿತ್ತನೆಯಾಗಿದೆ. ಈಗ ಕೃತ್ತಿಕ ಮಳೆ ಸುರಿಯುತ್ತಿದ್ದು, ಬಿಡುವು ನೀಡದಿರುವುದು ಬಿತ್ತನೆಗೆ ಕೊಂಚ ಹಿನ್ನೆಡೆಯಾಗಿದೆ’ ಎಂದು ಕೃಷಿ ಜಂಟಿ ನಿರ್ದೇಶಕಿ ಎಚ್.ಎಲ್. ಸುಜಾತಾ ಹೇಳುತ್ತಾರೆ.

ರಸಗೊಬ್ಬರ ಮತ್ತು ಬಿತ್ತನೆ ಬೀಜ ಸಾಕಷ್ಟು ದಾಸ್ತಾನಿದೆ. ಬಿತ್ತನೆ ಬೀಜ ಗುಣಮಟ್ಟ ಪರಿಶೀಲನೆಗೂ ಒತ್ತು ನೀಡಲಾಗಿದೆ ಎಂದು ತಿಳಿಸಿದರು.

‘ಮಲೆನಾಡಿನಲ್ಲಿ ವಿಪರೀತ ಮಳೆ ಸುರಿಯುತ್ತಿರುವುದು ಕಾಫಿ ಬೆಳೆಗಾರರಲ್ಲಿ ಆತಂಕ ತರಿಸಿದೆ. ತೋಟಗಳಲ್ಲಿ ಕೆಲಸ ಸಂಪೂರ್ಣ ಸ್ಥಗಿತಗೊಂಡಿದೆ. ಆಗಸ್ಟ್ನಲ್ಲಿ ಕಾಡುತ್ತಿದ್ದ ಕಳೆ ರೋಗದ ಆತಂಕ ಈಗಲೇ ಶುರುವಾಗಿದೆ’ ಎಂದು ಕಾಫಿ ಬೆಳೆಗಾರರ ಹಿತರಕ್ಷಣಾ ವೇದಿಕೆ ಜಿಲ್ಲಾ ಘಟಕದ ಕಾರ್ಯದರ್ಶಿ ಹೊಲದಗದ್ದೆ ಗಿರೀಶ್ ಹೇಳಿದರು.

ಪೂರ್ವ ಮುಂಗಾರು: ಹಾನಿಯೇ ಹೆಚ್ಚು

ಮೂಡಿಗೆರೆ: ತಾಲ್ಲೂಕಿನಲ್ಲಿ ಸುರಿದ ಪೂರ್ವ ಮುಂಗಾರು ಮಳೆಯಿಂದ ಈ ಬಾರಿ ಕೃಷಿಯಲ್ಲಿ ಹಾನಿಯೇ ಹೆಚ್ಚಾಗಿದೆ. ಮಳೆಯಿಂದ ಆರಂಭದಲ್ಲಿ ಕಾಫಿಗೆ ನೀರಾಯಿಸುವ ಹಣ ಉಳಿತಾಯವಾಗಿದ್ದರೂ ಕಾಫಿ ಕಾಯಿ ಕಟ್ಟುವ ವೇಳೆ ನಿರಂತರ ಮಳೆಯಾಗಿದ್ದರಿಂದ ಅದು ಕಪ್ಪಾಗಿ ಉದುರತೊಡಗಿದೆ. ಅಲ್ಲದೇ ಪೂರ್ವ ಮುಂಗಾರಿನಲ್ಲಿಯೇ ಕಾಫಿಗೆ ಗೊಬ್ಬರ ಹಾಕಬೇಕಿದ್ದು ಮಳೆ ಬಿಡುವು ನೀಡದ ಕಾರಣ ಗೊಬ್ಬರ ಹಾಕುವ ಚಟುವಟಿಕೆ ಸ್ಥಗಿತವಾಗಿದೆ. ಇದು ಮುಂದಿನ ಬೆಳೆಯ ಗುಣಮಟ್ಟಕ್ಕೆ ಹಾನಿಯಾಗುತ್ತದೆ ಎಂಬುದು ರೈತರ ಅಳಲಾಗಿದೆ. ಕಾಳು ಮೆಣಸಿಗೆ ಮಳೆ ಹದವಾಗಿದ್ದು ತೆನೆಕಟ್ಟಲು ಸಹಾಯವಾಗಿದೆ. ಆದರೆ ಜೂನ್ ತಿಂಗಳಿನಲ್ಲಿ ಮಳೆ ಕೈಕೊಟ್ಟರೆ ತೆನೆ ಹೊಡೆಯಲು ಸಿದ್ದವಾಗಿದ್ದ ಗಿಡಗಳಲ್ಲಿ ತೆನೆ ಸುಟ್ಟು ಹೋಗುವ ಸಾಧ್ಯತೆ ಇದೆ. ಅವಧಿಗೂ ಮೊದಲೇ ಕಾಳುಮೆಣಸು ತೆನೆ ಕಟ್ಟಿದರೆ ಗುಣಮಟ್ಟಕ್ಕೂ ಹಾನಿಯಾಗುತ್ತದೆ ಎಂಬುದು ಬೆಳೆಗಾರರ ಲೆಕ್ಕಾಚಾರ. ತಾಲ್ಲೂಕಿನಲ್ಲಿ ಶುಂಠಿ ಬೆಳೆಗೂ ಮಳೆ ಹಾನಿಯುಂಟು ಮಾಡಿದೆ. ಮೊಳಕೆಯಾಗುತ್ತಿದ್ದ ಶುಂಠಿಗೆ ಎಡಬಿಡದೆ ಮಳೆಯಾಗಿದ್ದರಿಂದ ಮೊಳಕೆಯಲ್ಲಿಯೇ ಕೊಳೆ ರೋಗ ಕಾಣಿಸಿಕೊಳ್ಳತೊಡಗಿದ್ದು ರಭಸವಾದ ಮಳೆ ಹನಿಯಿಂದ ಸುಳಿ ಕರಗುವಂತಾಗಿದೆ. ಭತ್ತದ ಗದ್ದೆಗೆ ಮಳೆ ವರದಾನವಾಗಿದ್ದು ಬಹುತೇಕ ಗದ್ದೆಗಳಲ್ಲಿ ನೀರು ಬಸಿದಿರುವುದರಿಂದ ಮಳೆ ಬಿಡುವು ನೀಡಿದರೆ ಗದ್ದೆಗಳಲ್ಲಿ ಕೃಷಿ ಚಟುವಟಿಕೆ ಗರಿಗೆದರಲಿವೆ.

ಅವಧಿ ಪೂರ್ವ ಮುಂಗಾರು: ಕೃಷಿಗೆ ಹಿನ್ನಡೆ

ಕಳಸ: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆ ಕೃಷಿ ಕಾರ್ಯಕ್ಕೆ ಹಿನ್ನಡೆ ತಂದಿದೆ. ಸಾಮಾನ್ಯವಾಗಿ ಮೇ ತಿಂಗಳ ಕೊನೆ ಭಾಗದಲ್ಲಿ ಕಾಫಿ ತೋಟಕ್ಕೆ ರಾಸಾಯನಿಕ ಗೊಬ್ಬರ ಪೂರೈಸಲಾಗುತ್ತದೆ. ಕೆಲ ಬೆಳೆಗಾರರು ಕಾಫಿಗೆ ಕೂಡ ಇದೇ ಅವಧಿಯಲ್ಲಿ ಬೋರ್ಡೊ ಮಿಶ್ರಣ ಸಿಂಪಡಣೆ ಮಾಡುತ್ತಾರೆ. ಆದರೆ ಸತತ ಮಳೆ ಈ ಎರಡೂ ಕೆಲಸಕ್ಕೆ ತಡೆ ನೀಡಿದೆ. ಏಪ್ರಿಲ್ನಿಂದ ಆರಂಭಿಸಿ ಸತತವಾಗಿ ಸುರಿಯುತ್ತಿರುವ ಮಳೆಯು ಕಾಫಿ ಅಡಿಕೆ ತೋಟದಲ್ಲಿ ವಿಪರೀತ ಎನ್ನುವಷ್ಟು ಕಳೆ ಗಿಡಗಳು ಸೊಕ್ಕಿ ಬೆಳೆಯುವಂತೆ ಮಾಡಿದೆ. ಇದರಿಂದ ಮೇ ತಿಂಗಳಲ್ಲೇ ಕಳೆ ನಿವಾರಣೆಯ ಹೊಸ ಕೆಲಸ ಖರ್ಚು ಭರಿಸುವ ಅನಿವಾರ್ಯತೆ ಬೆಳೆಗಾರರಿಗೆ ಒದಗಿದೆ. ಕಾಳುಮೆಣಸಿನ ಬಳ್ಳಿಗಳಲ್ಲಿ ಹೂಗೆರೆಗಳು ಮೂಡಲು ಈ ಮಳೆ ಪೂರಕವಾಗಿದೆ. ಕಳೆದ ವರ್ಷದ ಬೇಸಿಗೆಯಲ್ಲಿ ಹೆಚ್ಚಿದ್ದ ಉಷ್ಣಾಂಶದಿಂದಾಗಿ ಫಸಲು ಕನಿಷ್ಟ ಇತ್ತು. ಮುಂದಿನ ಸಾಲಿಗೆ ಮೆಣಸಿನ ಉತ್ತಮ ಫಸಲು ನಿರೀಕ್ಷಿಸಲಾಗಿದೆ. ಅಡಿಕೆ ತೋಟದಲ್ಲಿ ನೀರು ಬಸಿದು ಹೋಗಲು ಚರಂಡಿ ನಿರ್ವಹಣೆ ತುರ್ತಾಗಿ ಆಗಬೇಕಿದೆ. ಆದರೆ ಸತತ ಮಳೆ ಜತೆಗೆ ಕಾರ್ಮಿಕರ ಕೊರತೆ ಕೂಡ ಈ ಕೆಲಸಕ್ಕೆ ಅಡ್ಡಿ ತರುತ್ತಿದೆ. ಒಟ್ಟಾರೆ ಅವಧಿಗೆ ಮುನ್ನವೇ ಆರಂಭವಾಗಿರುವ ಮಳೆಗಳು ಕೃಷಿ ಕ್ಷೇತ್ರದ ಎಲ್ಲ ಕೆಲಸಗಳಿಗೂ ತಡೆ ತರುತ್ತಿದೆ.

ಹತ್ತಿ ಈರುಳ್ಳಿ ಬೆಳೆಗೆ ಅನುಕೂಲ

ಕಡೂರು: ಪೂರ್ವ ಮುಂಗಾರು ಮಳೆ ತಾಲ್ಲೂಕಿನಾದ್ಯಂತ ಉತ್ತಮವಾಗಿ ಸುರಿದಿದೆ. ರೈತರು ಸಂತಸಗೊಂಡಿದ್ದಾರೆ. ಈ ಭಾಗದಲ್ಲಿ ಸಾಮಾನ್ಯವಾಗಿ ಮೇ ಮೊದಲ ವಾರದಲ್ಲಿ ಹತ್ತಿ ಈರುಳ್ಳಿ ನಾಟಿ ಮಾಡಲಾಗುತ್ತದೆ. ಮಳೆ ಬರಲಿ ಬಿಡಲಿ ಭರಣಿ ಮಳೆಗೆ ಹತ್ತಿ ಮತ್ತು ಕೃತ್ತಿಕೆ ಮಳೆಗೆ ಈರುಳ್ಳಿ ಬಿತ್ತನೆ ಮಾಡುವುದು ವಾಡಿಕೆ. ಈ ಬಾರಿಯೂ ಈರುಳ್ಳಿ ಬಿತ್ತನೆ ಮಾಡಿದವರಿಗೆ ಮಳೆ ಬಾರದೆ ತೊಂದರೆಯಾಗುವ ಸಂಭವವಿತ್ತು. ಆದರೆ ಮಳೆ ಉತ್ತಮವಾಗಿ ಬಂದಿರುವುದರಿಂದ ಮುಂಗಾರು ಬೆಳೆಗಳಾದ ಎಳ್ಳು ಶೇಂಗಾ ಮುಂತಾದ ಬೆಳೆಗಳಿಗೆ ಅನುಕೂಲವಾಗಿದೆ. ಈಗಾಗಲೇ ಈರುಳ್ಳಿ ಬಿತ್ತನೆ ಮಾಡಿದವರಿಗೆ ಬೀಜ ಚೆನ್ನಾಗಿ ಮೊಳೆಯಲು ಪೂರಕವಾದರೆ ಹತ್ತಿ ಬೆಳವಣಿಗೆಗೆ ಮತ್ತಷ್ಟು ಅನುಕೂಲವಾಗಿದೆ. ಬಹುಮುಖ್ಯವಾಗಿ ಕಾದಿದ್ದ ಭೂಮಿ ತಂಪಾಗಿರುವುದು ರೈತರ ಬೆಳೆಗಳಿಗೆ ಕಾವು ತಟ್ಟುವುದು ತಪ್ಪಿದೆ. ಅಡಿಕೆ ಬೆಳೆಗಂತೂ ಮಳೆ ಸುರಿಯುತ್ತಿರುವುದು ಹೆಚ್ಚು ಅನುಕೂಲಕರ ವಾತಾವರಣ ಕಲ್ಪಿಸಿದೆ. ಹೆಸರು ಉದ್ದು ಸೂರ್ಯಕಾಂತಿ ಬಿತ್ತನೆಗೂ ಮಳೆ ಉತ್ತಮ ಅವಕಾಶ ಕಲ್ಪಿಸಿದೆ. ಮಳೆ ಸುರಿಯುತ್ತಿರುವುದು ಟೊಮೆಟೊ ಬೆಳೆಗೆ ಅಲ್ಪ ಪ್ರಮಾಣದ ಅನಾನುಕೂಲ ಕಲ್ಪಿಸಿದೆ. ದಪ್ಪ ಹನಿಗಳಿಂದ ಟೊಮೆಟೊ ಹೂವು ಉದುರಿದರೆ ಕಾಯಿಗಳಿಗೆ ಪೆಟ್ಟು ಬಿದ್ದು ಉದುರುವ ನೀರು ಹೆಚ್ಚಾದರೆ ಗಿಡ ಕೊಳೆಯುವ ಸಂಭವ ಹೆಚ್ಚಿದೆ. ತಾಲ್ಲೂಕಿನಲ್ಲಿ ಅಲ್ಪ ಪ್ರಮಾಣದಲ್ಲಿ ಬೆಳೆಯುವ ಹೂವಿನ ಬೆಳೆಗಳು ಹಾನಿಯಾಗುವ ಸಂಭವವಿದೆ.

ಮುಂಗಾರು ಪೂರ್ವ ಸಿದ್ಧತೆ ಅಪೂರ್ಣ

ಶೃಂಗೇರಿ: ತಾಲ್ಲೂಕಿನಲ್ಲಿ ಮುಂಗಾರು ಪೂರ್ವ ಮಳೆಯಿಂದ ತೋಟಗಾರಿಕ ಬೆಳೆಗಳಾದ ಅಡಿಕೆ ಕಾಫಿ ಕಾಳು ಮೆಣಸಿನ ಹಳೇಯ ಮರ ಮತ್ತು ಬಳ್ಳಿಗಳಿಗೆ ಹಾನಿಯಾಗಿದೆ. ಇದರಿಂದ ರೈತರಿಗೆ ಮಳೆಗಾಲದ ಪೂರ್ವದಲ್ಲಿ ಮಾಡಿಕೊಳ್ಳುವ ಸಿದ್ಧತೆ ಮಾಡಲು ಸಾಧ್ಯವಾಗಿಲ್ಲ. ಈ ಮಳೆ ಹೀಗೆ ಮುಂದುವರಿದು ಮುಂಗಾರು ಮಳೆಗಾಲ ಪ್ರಾರಂಭವಾದರೆ ಔಷಧಿ ಸಿಂಪರಣೆ ಸಾಧ್ಯವಾಗದೆ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗುತ್ತದೆ. ಮಳೆಯಿಂದ ತೋಟಗಳಿಗೆ ಮಣ್ಣು ಹಾಕಿ ಬೇಸಾಯ ಮಾಡುವ ಕಾರ್ಯ ಸ್ಥಗಿತವಾಗಿದೆ. ಗ್ರಾಮೀಣ ರಸ್ತೆಗಳು ಹದಗೆಟ್ಟಿದ್ದು ದುರಸ್ಥಿ ಮಾಡಿಕೋಳ್ಳಲು ಸಾಧ್ಯವಾಗಿಲ್ಲ. ಮೇ ಜೂನ್ನಲ್ಲಿ ಗಿಡಗಳಿಗೆ ನಿಗದಿತ ಪ್ರಮಾಣದಲ್ಲಿ ರಾಸಯನಿಕ ಗೋಬ್ಬರ ನೀಡಬೇಕಿದ್ದು ಮಳೆಯಿಂದ ಯಾವುದೇ ಕೆಲಸ ಸಾಧ್ಯವಾಗಿಲ್ಲ ಎಂದು ರೈತರು ಹೇಳುತ್ತಾರೆ.

ಕೃಷಿಗೆ ಉತ್ತೇಜನ

ಕೊಪ್ಪ: ತಾಲ್ಲೂಕಿನಲ್ಲಿ ಈ ಬಾರಿ ಸಾಕಷ್ಟು ಪ್ರಮಾಣದಲ್ಲಿ ಮುಂಗಾರು ಪೂರ್ವ ಮಳೆಯಾಗಿದ್ದು ಕೃಷಿ ಚಟುವಟಿಕೆಗಳಿಗೆ ಉತ್ತೇಜನ ಸಿಕ್ಕಿದಂತಾಗಿದೆ. ತೇವಾಂಶದಿಂದ ಮಣ್ಣು ಹದವಾಗಿದ್ದು ಭತ್ತದ ಗದ್ದೆಗಳಲ್ಲಿ ಉಳುಮೆ ಕೆಲಸ ಆರಂಭಿಸಲಾಗಿದೆ. ಮೇ ತಿಂಗಳಲ್ಲಿಯೇ ಮಳೆ ಬಿರುಸು ಪಡೆಯುತ್ತಿದ್ದು ಭತ್ತ ಕೃಷಿಗೆ ಅನುಕೂಲ ಪರಿಸ್ಥಿತಿ ಒದಗಿಸಿದೆ. ಕಾಫಿ ಗಿಡಗಳಿಗೆ ಮಾರ್ಚ್ ಕೊನೆಯ ದಿನಗಳಿಂದಲೇ ಮಳೆ ನೀರು ಬಿದ್ದಿದ್ದರಿಂದ ಇದೀಗ ರೊಬಸ್ಟಾ ತಳಿಯ ಕಾಫಿ ಕಾಳು ಕಟ್ಟಿವೆ. ಅತ್ಯಧಿಕ ನೀರು ಬಯಸುವ ಗೊಬ್ಬರಗಳಾದ ಕೋಳಿ ಗೊಬ್ಬರ ಕುರಿ ಗೊಬ್ಬರ ಇತ್ಯಾದಿಗಳನ್ನು ಹಾಕಿ ಬೇಸಾಯ ಮಾಡಿದ ಅಡಿಕೆ ತೋಟಗಳಿಗೆ ಈ ಬಾರಿ ಮುಂಗಾರು ಪೂರ್ವ ಮಳೆ ಸಾಕಷ್ಟು ಬಿದ್ದಿದ್ದರಿಂದ ಪ್ರತ್ಯೇಕವಾಗಿ ಪಂಪ್ ಸೆಟ್ ಬಳಸಿ ನೀರು ಹಾಯಿಸುವ ಕೆಲಸ ಕಡಿಮೆಯಾಗಿದೆ. ಕಾಳುಮೆಣಸಿನ ಗರಿ ಆರಂಭವಾಗಿದ್ದು ಮುಂದಿನ ಜನವರಿ ವೇಳೆಹೆ ಫಸಲು ಕೊಯ್ಲಿಗೆ ಬರುವ ಸಾಧ್ಯತೆ ಇದೆ. ಇತ್ತೀಚೆಗೆ ಏಲಕ್ಕಿ ಕೃಷಿಯಲ್ಲಿಯೂ ಆಸಕ್ತಿ ವಹಿಸಿರುವ ರೈತರಿಗೆ ನಾಟಿ ಮಾಡಲು ಬೇಕಾದ ಏಲಕ್ಕಿ ಕಂದು(ಮೊಳಕೆ ಗಿಡ) ಮಳೆಗಾಲ ಮುಗಿಯುವುದರೊಳಗೆ ಸಿದ್ಧಗೊಳ್ಳುವ ನಿರೀಕ್ಷೆ ಇದೆ.

ಉತ್ತಮ ಬೆಳೆ ನಿರೀಕ್ಷೆ

ತರೀಕೆರೆ: ಪ್ರಸಕ್ತ ಸಾಲಿನಲ್ಲಿ ವಾಡಿಕೆಗಿಂತ ಮುಂಚಿತವೇ ಮಳೆಯಾಗುತ್ತಿದ್ದು ಬಾರಿ ರೈತರು ಉತ್ತಮ ಬೆಳೆ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ರೈತರು ಬಿತ್ತನೆಗೆ ತಮ್ಮ ಜಮೀನು ಹಸನು ಮಾಡಿಕೊಂಡಿದ್ದಾರೆ. ನೆಲಗಡಲೆ ಎಳ್ಳು ಸೂರ್ಯಕಾಂತಿ ಹೆಸರು ಮೆಕ್ಕೆಜೋಳ ಬಟಾಣಿ ಆಲೂಗೆಡ್ಡೆ ಬೆಳೆಯಲು ರೈತರು ಸಿದ್ಧತೆ ನಡೆಸಿದ್ದಾರೆ. ದ್ವಿದಳ ಧಾನ್ಯಗಳು ಮತ್ತು ಎಣ್ಣೆ ಕಾಳುಗಳನ್ನು ಹೆಚ್ಚಾಗಿ ಬಿತ್ತನೆ ಮಾಡಲು ಕೃಷಿ ಇಲಾಖೆ ಪ್ರೋತ್ಸಾಹಿಸುತ್ತಿದೆ. ತರೀಕೆರೆ ಮತ್ತು ಅಜ್ಜಂಪುರ ತಾಲ್ಲೂಕು ವ್ಯಾಪ್ತಿಯಲ್ಲಿರುವ ರೈತ ಸಂಪರ್ಕ ಕೇಂದ್ರ ಹಾಗೂ ಗೊಬ್ಬರದ ಅಂಗಡಿಗಳಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ಸಾಕಷ್ಟು ದಾಸ್ತಾನಿದ್ದು ರೈತರು ತಮಗೆ ಅಗತ್ಯವಿದ್ದಷ್ಟು ಪಡೆದುಕೊಳ್ಳಲು ಅವಕಾಶವಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಲೋಕೇಶ್ ತಿಳಿಸಿದ್ದಾರೆ.

ಮುಂಗಾರು ಚುರುಕು ಬಿತ್ತನೆಗೆ ಸಿದ್ದತೆ

ಅಜ್ಜಂಪುರ: ತಾಲ್ಲೂಕಿನಲ್ಲಿ ಪೂರ್ವ ಮುಂಗಾರು ಚುರುಕಾಗಿದೆ. ಉತ್ತಮ ಮಳೆ ಕೃಷಿ ಭೂಮಿಯನ್ನು ಹದಗೊಳಿಸಿದೆ. ಬಿತ್ತನೆಗೆ ಪೂರಕ ವಾತಾವರಣ ಸೃಷ್ಟಿಸಿದೆ. ರೈತರು ಬಿತ್ತನೆಗೆ ಸಿದ್ದತೆ ನಡೆಸಿದ್ದಾರೆ. ತಾಲ್ಲೂಕಿನಲ್ಲಿ ಶೇಂಗಾ ಅಲಸಂಡೆ ಹೆಸರು ಉದ್ದು ಶೇ 50ರಷ್ಟು ಬಿತ್ತನೆಯಾಗಿದ್ದು ಇನ್ನುಳಿದ ಅರ್ಧ ಭಾಗ ಜೂನ್ 15ರ ವೇಳೆಗೆ ಪೂರ್ಣಗೊಳ್ಳುವ ನೀರಿಕ್ಷೆ ಇದೆ. ಮುಂಗಾರು ಬೆಳೆ ಮುಸುಕಿನ ಜೋಳ ಶೇಂಗ ಅಲಸಂಡೆ ಸೇರಿದಂತೆ ಹಲವು ಬಿತ್ತನೆ ಬೀಜ ಕೃಷಿ ಇಲಾಖೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನಿವೆ. ರೈತರು ಡಿಎಪಿ ರಾಸಾಯಿನಿಕ ಗೊಬ್ಬರ ಬದಲಿಗೆ ಬೆಳೆ ಬೆಳವಣಿಗೆ ಮತ್ತು ಇಳುವರಿ ಹೆಚ್ಚಿಸುವ ಸಾರಜನಕ ರಂಜಕ ಪೊಟಾಶ್ ಗಂಧಕ ಯುಕ್ತ ಗೊಬ್ಬರ ಬಳಸುವಂತೆ ಸಹಾಯಕ ಕೃಷಿ ನಿರ್ದೇಶಕ ಶಿವಪ್ರಸಾದ್ ಸಲಹೆ ನೀಡಿದ್ದಾರೆ. ಪ್ರಮುಖ ವಾಣಿಜ್ಯ ಬೆಳೆ ಈರುಳ್ಳಿ ಸುಮಾರು ಐದೂವರೆ ಸಾವಿರ ಹೆಕ್ಟೇರ್ನಲ್ಲಿ ಬಿತ್ತನೆಯ ಗುರು ಇದೆ. ಬಿತ್ತನೆ ಆರಂಭವಾಗಿಲ್ಲ. ಜೂನ್ ಮಧ್ಯಭಾಗದೊಳಗೆ ಬಿತ್ತನೆ ಸಾಧ್ಯತೆ ಹೆಚ್ಚಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.