ಶುಕ್ರವಾರ, ಅಕ್ಟೋಬರ್ 7, 2022
28 °C

ಬಿಜೆಪಿಯವರದು ಪ್ರತಿಭಟನೆಯಲ್ಲ, ಕಪಿಚೇಷ್ಟೆ: ಸಿದ್ದರಾಮಯ್ಯ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶೃಂಗೇರಿ: ‘ನಾನು ಶೃಂಗೇರಿಗೆ ಬರುವಾಗ ಬಿಜೆಪಿಯವರು ಮಾಡಿರುವುದು ಪ್ರತಿಭಟನೆ ಅಲ್ಲ, ಅದು ಕಪಿ ಚೇಷ್ಟೆ. ಬಡವರ ಸಂಕಷ್ಟವನ್ನು ಕೇಳಲು ನಾನು ಪ್ರವಾಸ ಮಾಡುತ್ತಿದ್ದೇನೆ. ಬಿಜೆಪಿಯವರು ಅಭಿವೃದ್ಧಿ ಕಾರ್ಯ ಮಾಡುವತ್ತ ಗಮನ ಹರಿಸಲಿ, ಇಲ್ಲವಾದರೆ ತೊಲಗಲಿ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಶೃಂಗೇರಿ ಪಟ್ಟಣದ ಡಾ.ವಿ.ಆರ್ ಗೌರೀಶಂಕರ್ ಸಭಾಂಗಣದಲ್ಲಿ ಶುಕ್ರವಾರ ಬ್ಲಾಕ್ ಕಾಂಗ್ರೆಸ್ ಆಯೋಜಿಸಿದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸರ್ಕಾರ ಹಾಗೂ ಪೊಲೀಸ್ ಇಲಾಖೆ ಜತೆಗಿದೆ ಎಂದು ಬಿಜೆಪಿ ಕಾರ್ಯಕರ್ತರು ನಮ್ಮನ್ನು ಹೆದರಿಸಲು ಸಾಧ್ಯವಿಲ್ಲ. ಯಾವುದೇ ಪ್ರತಿಭಟನೆಗೆ ನಾನು ಬಗ್ಗುವುದಿಲ್ಲ. ರೈತರ ಸಂಕಷ್ಟವನ್ನು ವಿಚಾರಿಸುವ ಸಲುವಾಗಿ ಮಲೆನಾಡಿನ ಹಲವು ಪ್ರದೇಶಗಳಿಗೆ ಭೇಟಿ ನೀಡಲು ಬಂದಿದ್ದೇನೆ. ಪ್ರತಿಭಟನೆ ಮಾಡುವ ಮೂಲಕ ಬಿಜೆಪಿಯವರು ಹೇಡಿತನವನ್ನು ಪ್ರದರ್ಶಿಸುತ್ತಿದ್ದಾರೆ. ಬಿಜೆಪಿಯವರು ಪುಕ್ಕಲರು’ ಎಂದು ಛೇಡಿಸಿದರು.

‘ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಚುನಾವಣೆಯ ಪ್ರಣಾಳಿಕೆಯ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇನೆ. ಆದರೆ, ಬಿಜೆಪಿಯವರಲ್ಲಿ ಅಭಿವೃದ್ಧಿ ಪಟ್ಟಿ ಕೇಳಿದರೆ ಅವರು ಕೊಡುವುದಿಲ್ಲ. ಈಗಾಗಲೇ ಮಲೆನಾಡಿನಲ್ಲಿ ಅತಿವೃಷ್ಟಿಯಿಂದ ಅಡಿಕೆ, ಕಾಳುಮೆಣಸು, ಕಾಫಿ ಬೆಳೆಗಳು ಹಾನಿಯಾಗಿವೆ. ಮೂರು ವರ್ಷಗಳಿಂದ ರೈತರಿಗೆ ಬೆಳೆ ಪರಿಹಾರ ನೀಡಿಲ್ಲ. ಅತಿವೃಷ್ಟಿಯಿಂದ ಹಾಳಾದ ಕಾಮಗಾರಿಗಳನ್ನು ಮಾಡಿಲ್ಲ. ಬೆಳೆ ಹಾನಿ ವರದಿ ನೀಡಲು ಅಧಿಕಾರಿಗಳಿಗೆ ಎಷ್ಟು ಸಮಯ ಬೇಕು’ ಎಂದು ಗುಡುಗಿದರು.

ದಾವಣಗೆರೆ ಸಮಾವೇಶದಲ್ಲಿ ಸೇರಿದ ಜನರನ್ನು ಕಂಡು ಬಿಜೆಪಿಯವರು ಹತಾಶರಾಗಿದ್ದಾರೆ. ಭ್ರಷ್ಟ ಹಾಗೂ ಕೋಮುವಾದಿ ಬಿಜೆಪಿಗೆ ಮುಂಬರುವ ದಿನಗಳಲ್ಲಿ ಅಧಿಕಾರ ಸಿಗುವುದು ಕನಸಿನ ಮಾತು. ಮುಂದಿನ ಚುನಾವಣೆಯಲ್ಲಿ ಸೋಲುವುದು ಅವರಿಗೆ ಖಾತ್ರಿಯಾಗಿದೆ. ಯಾವುದೇ ಕೆಲಸ ಮಾಡಬೇಕಾದರೆ ಶೇ 40 ಕಮಿಷನ್ ಬಿಜೆಪಿ ಪಡೆಯುತ್ತಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

ಶಾಸಕ ಟಿ.ಡಿ.ರಾಜೇಗೌಡ, ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಡಾ.ಅಂಶುಮಂತ್, ವಿಧಾನ ಪರಿಷತ್ ಸದಸ್ಯೆ ಮಾಜಿ ಗಾಯತ್ರಿ ಶಾಂತೇಗೌಡ, ರಾಜ್ಯ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮೀಗ, ಮಾಜಿ ಶಾಸಕ ತರೀಕೆರೆ ಶ್ರೀನಿವಾಸ್, ಕಾಂಗ್ರೆಸ್ ಮುಖಂಡರಾದ ರಸೂಲ್ ಖಾನ್, ಕಡೂರು ಆನಂದ್, ನಟರಾಜ್, ಸುಧೀರ್‍ ಕುಮಾರ್ ಮುರೊಳ್ಳಿ, ಕೆ.ಸಿ.ವೆಂಕಟೇಶ್, ಗೋಪಾಲ್‍ನಾಯ್ಕ್, ಕುರಾದಮನೆ ವೆಂಕಟೇಶ್, ಪಟ್ಟಣ ಪಂಚಾಯಿತಿ ಸದಸ್ಯರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.

ಮೆಣಸೆಯಲ್ಲಿ ಪ್ರತಿಭಟನೆ

ಸಿದ್ದರಾಮಯ್ಯ ಅವರು ಬಾಳೆಹೊನ್ನೂರಿನಿಂದ ಶೃಂಗೇರಿಗೆ ಬರುವ ಸಂದರ್ಭದಲ್ಲಿ ಮೆಣಸೆ ಬಳಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಕಪ್ಪು ಪಟ್ಟಿ ಧರಿಸಿ ಸಾವರ್ಕರ್ ಫೋಟೊ ಹಿಡಿದು, ಸಾವರ್ಕರ್‌ಗೆ ಜೈ, ‌ಸಿದ್ದು ಗೋ ಬ್ಯಾಕ್ ಎಂದು ಫೋಷಣೆ ಕೂಗಿದರು. ಹಿಂದೂ ವಿರೋಧಿ ನಾಯಕನಿಗೆ ಧಿಕ್ಕಾರ ಎಂದು ಕೂಗುತ್ತಾ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಮುಖಾಮುಖಿಯಾದಾಗ ಉದ್ವಿಗ್ನ ವಾತಾವರಣ ಉಂಟಾಯಿತು. ಪೊಲೀಸರು ಎರಡು ಬಣಗಳನ್ನು ನಿಯಂತ್ರಿಸಲು ಹರಸಾಹಸ ಪಟ್ಟರು. ಸ್ಥಳದಲ್ಲಿ ಪ್ರತಿಭಟನೆ ನಡೆಸಿದ ಪಟ್ಟಣ ಪಂಚಾಯಿತಿ ಅಧ್ಯಕ್ಷ ಹರೀಶ್ ಶೆಟ್ಟಿ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸುನೀಲ್ ಸಂಪೇಕೊಳಲು ಸೇರಿದಂತೆ 30 ಮಂದಿಯನ್ನು ಪೊಲೀಸರು ವಶಕ್ಕೆ ಕಾರ್ಯಕ್ರಮ ಮುಗಿದ ಬಳಿಕ ಬಿಡುಗಡೆಗೊಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು