ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ದುರ್ಗಾ ಹೋಮ- ಶಕ್ತಿದೇವತೆಗಳ ಸಮಾಗಮ

ಹಿಂದೂ ಮಹಾಗಣಪತಿ ಸನ್ನಿಧಿಯಲ್ಲಿ ಶಾಸ್ತ್ರೋಕ್ತವಾಗಿ ನಡೆದ ಗಣಹೋಮ
Last Updated 29 ಸೆಪ್ಟೆಂಬರ್ 2021, 13:13 IST
ಅಕ್ಷರ ಗಾತ್ರ

ಚಿತ್ರದುರ್ಗ: ವಿಶ್ವ ಹಿಂದೂ ಪರಿಷತ್, ಬಜರಂಗದಳದ ವತಿಯಿಂದ ಇಲ್ಲಿ ಪ್ರತಿಷ್ಠಾಪಿಸಿರುವ ಹಿಂದೂ ಮಹಾಗಣಪತಿ ಶೋಭಾಯಾತ್ರೆಯೂ ಅ. 2ರಂದು ನಡೆಯಲಿದೆ. ಇದರ ಅಂಗವಾಗಿ ಬುಧವಾರ ನಡೆದ ಗಣಹೋಮ ಹಾಗೂ ದುರ್ಗಾ ಹೋಮದಲ್ಲಿ ಇದೇ ಪ್ರಥಮ ಬಾರಿ ಚಿತ್ರದುರ್ಗದ ಶಕ್ತಿದೇವತೆಗಳು ಸಾಕ್ಷಿಯಾದರು. ನೂರಾರು ಭಕ್ತರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಹೋಮ ನೆರವೇರಿತು.

ಎಲ್ಲ ಶಕ್ತಿದೇವತೆಗಳನ್ನು ವಿವಿಧ ಬಗೆಯ ಪುಷ್ಪಗಳಿಂದ ವೈಭವೋಪೇತವಾಗಿ ಅಲಂಕರಿಸಲಾಗಿತ್ತು. ಬೆಳಿಗ್ಗೆ ಆರಂಭವಾದ ಹೋಮ ಮಧ್ಯಾಹ್ನ 3 ಗಂಟೆಗೆ ಪೂರ್ಣಾಹುತಿಹೊಂದಿಗೆ ಮುಕ್ತಾಯವಾಯಿತು. ಒಂದೇ ವೇದಿಕೆಯಲ್ಲಿ ಮಹಾಮಂಗಳಾರತಿಯೊಂದಿಗೆ ದೇವತೆಗಳ ದರ್ಶನ ಪಡೆದ ಭಕ್ತರು ಪುನೀತರಾದರು. ಪೂಜೆಯ ಬಳಿಕ ಪ್ರಸಾದ ವಿತರಿಸಲಾಯಿತು.

ಮೇಲುದುರ್ಗದ ಅಧಿದೇವತೆ ಏಕನಾಥೇಶ್ವರಿ ದೇವಿಯ ನೇತೃತ್ವದಲ್ಲಿ ಹೋಮಕ್ಕೂ ಮುನ್ನ ಭವ್ಯ ಮೆರವಣಿಗೆ ನಡೆಯಿತು. ಉಚ್ಚಂಗಿ ಯಲ್ಲಮ್ಮ, ನಗರದೇವತೆ ಬರಗೇರಮ್ಮ, ಗೌರಸಂದ್ರ ಮಾರಮ್ಮ, ಕಾಳಿಕಾಮಠೇಶ್ವರಿ, ಮಲೆನಾಡ ಚೌಡೇಶ್ವರಿ, ಬುಡ್ಡಾಂಬಿಕೆ, ಬನಶಂಕರಮ್ಮ, ದುರ್ಗಾ ದೇವಿ ಸೇರಿ ಒಂಬತ್ತು ದೇವತೆಗಳು ಪಾಲ್ಗೊಂಡಿದ್ದವು.

ಒಂಬತ್ತು ಶಕ್ತಿದೇವತೆಗಳು ಬುರುಜನಹಟ್ಟಿಯ ಸಿಹಿನೀರು ಹೊಂಡದ ಬಳಿ ಸೇರಿದವು. ಅಲ್ಲಿಂದ ಆರಂಭವಾದ ದೇವತೆಗಳ ಮೆರವಣಿಗೆ ಗೌರಸಂದ್ರ ಮಾರಮ್ಮ ದೇಗುಲದ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತ, ಗಾಂಧಿ ವೃತ್ತ, ಬಿ.ಡಿ. ರಸ್ತೆ, ಎಸ್‌ಬಿಐ ವೃತ್ತ, ಪ್ರವಾಸಿ ಮಂದಿರ, ಮದಕರಿನಾಯಕ ವೃತ್ತದ ಮಾರ್ಗವಾಗಿ ಸಂಚರಿಸಿ ಹೋಮ ನಡೆಯುವ ಸ್ಥಳವಾದ ಹಿಂದೂ ಮಹಾಗಣಪತಿ ಸನ್ನಿಧಾನಕ್ಕೆ ತಲುಪಿತು.

ನೂರಾರು ಮಹಿಳೆಯರು ಕುಂಭ ಹೊತ್ತು ಮೆರವಣಿಗೆಯಲ್ಲಿ ಸಾಗಿದರು. ಡೊಳ್ಳು ಕುಣಿತ, ಉರುಮೆ, ತಮಟೆ ವಾದ್ಯ, ಕಹಳೆ, ಕರಡಿ ಚಮ್ಮಳ ಸೇರಿ ವಿವಿಧ ಜನಪದ ಕಲಾತಂಡಗಳು ಮೆರವಣಿಗೆಗೆ ಮೆರಗು ನೀಡಿದವು.

ದಾರಿಯುದ್ದಕ್ಕೂ ಒಂದರ ಹಿಂದೆ ಮತ್ತೊಂದರಂತೆ ಸಾಗುತ್ತಿದ್ದ ದೇವತೆಗಳ ಮುಂಭಾಗದಲ್ಲಿ ಭಕ್ತರು ಕುಣಿದು ಸಂಭ್ರಮಿಸಿದರು. ಅಲ್ಲದೆ, ಉಧೋ ಉಧೋ ಎನ್ನುವ ಜಯಘೋಷದೊಂದಿಗೆ ಮೆರವಣಿಗೆ ಸಾಗಿತು. ಒಂದೆಡೆ ಸೇರಿದ ಶಕ್ತಿದೇವತೆಗಳ ಚಿತ್ರವನ್ನು ರಸ್ತೆ ಬದಿಯಲ್ಲಿ ನಿಂತಿದ್ದ ಭಕ್ತರು ಮೊಬೈಲ್‌ಗಳ ಮೂಲಕ ಅಲ್ಲಲ್ಲಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು.

ಮೂರನೇ ಬಾರಿ ಸಮಾಗಮ

ಐತಿಹಾಸಿಕ ಕೋಟೆನಗರಿಯಲ್ಲಿ ಈ ರೀತಿ ಶಕ್ತಿದೇವತೆಗಳು ಒಂದೆಡೆ ಸೇರುತ್ತಿರುವುದು ಇದು ಮೂರನೇ ಬಾರಿ. 2014ರಲ್ಲಿ ಶಕ್ತಿದೇವತೆಗಳ ಸಂಗಮ ಹೆಸರಿನಲ್ಲಿ ಆಯೋಜಿಸಿದ್ದ ಬೃಹತ್‌ ಶೋಭಾಯಾತ್ರೆಯಲ್ಲಿ ಜಿಲ್ಲೆಯ ಸುತ್ತಮುತ್ತ ಗ್ರಾಮಗಳ ಸುಮಾರು 58ಕ್ಕೂ ಹೆಚ್ಚು ಶಕ್ತಿದೇವತೆಗಳು ಪಾಲ್ಗೊಂಡಿದ್ದವು.

ಎರಡ್ಮೂರು ವರ್ಷಗಳ ಹಿಂದೆ ವಾಸವಿ ಮಹಲ್‌ ರಸ್ತೆಯ ಕನ್ಯಕಾ ಪರಮೇಶ್ವರಿ ದೇಗುಲದಲ್ಲಿ ಕೂಡ ಆರ್ಯವೈಶ್ಯ ಸಂಘದಿಂದ ನಡೆದ ಪೂಜಾ ಕಾರ್ಯಕ್ರಮದಲ್ಲಿ ಕೂಡ ನಗರದ ಪ್ರಮುಖ ಹತ್ತು ಶಕ್ತಿದೇವತೆಗಳು ಭಾಗವಹಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT