ಹಿಂದೂ, ಮುಸ್ಲಿಮರಿಂದ ಗಣಪ ದೇಗುಲ

ಚಿತ್ರದುರ್ಗ: ‘ದೇವನೊಬ್ಬ ನಾಮ ಹಲವು’ ಎಂಬ ಮಾತು ಇಂದಿಗೂ ಚಾಲ್ತಿಯಲ್ಲಿದೆ. ಎಲ್ಲ ಧರ್ಮೀಯರು ಅಣ್ಣ–ತಮ್ಮಂದಿರಂತೆ ಜೀವಿಸಲು ದೇಶದ ಸಂವಿಧಾನದಲ್ಲಿ ಅವಕಾಶವಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ಹಿಂದೂ, ಮುಸ್ಲಿಮರು ಸಮಾಗಮಗೊಂಡು ಗಣೇಶ ದೇಗುಲ ನಿರ್ಮಿಸಿದ್ದಾರೆ.
ದೇಗುಲ ಪೂರ್ತಿ ಹಿಂದೂ ಸಂಪ್ರದಾಯದಂತೆ ನಿರ್ಮಾಣವಾಗಿದ್ದರೂ ಗೋಪುರ ಮಾತ್ರ ಮುಸ್ಲಿಂ ಸಂಪ್ರದಾಯದ ಗುಂಬಜ್ ಮಾದರಿಯಲ್ಲಿದೆ. ಕೇಸರಿ, ಹಸಿರು ಎರಡೂ ಧರ್ಮೀಯರ ಬಣ್ಣವೂ ಇಲ್ಲಿ ಸಮ್ಮಿಲನಗೊಂಡಿದೆ. ಈ ಮೂಲಕ ಜಾತಿ, ಧರ್ಮ ಮೀರಿ ‘ನಾವೆಲ್ಲರೂ ಕೂಡಿ ಬಾಳೋಣ’ ಎಂಬ ಭಾವೈಕ್ಯದ ಸಂದೇಶ ಸಾರುತ್ತಿದೆ.
ಇದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಚಿತ್ರದುರ್ಗದ ನೂತನ ಡಿಪೊ ಆವರಣದಲ್ಲಿ ನಿರ್ಮಾಣವಾಗಿರುವ ರಕ್ಷಾ ಗಣಪತಿ ದೇಗುಲದಲ್ಲಿ ಕಂಡುಬಂದ ದೃಶ್ಯ.
ಇಲ್ಲಿ ಕೆಎಸ್‌ಆರ್‌ಟಿಸಿಯ ಸುಮಾರು 400 ನೌಕರರು ಇದ್ದಾರೆ. ಅದರಲ್ಲಿ 350 ಜನ ಹಿಂದೂಗಳು, 30ಕ್ಕೂ ಹೆಚ್ಚು ಮುಸ್ಲಿಮರು ಇದ್ದಾರೆ. ದೇಗುಲ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಿದ್ದಾರೆ. ಹೀಗಾಗಿ ಒಟ್ಟು ₹ 8 ಲಕ್ಷ ವೆಚ್ಚದಲ್ಲಿ ದೇಗುಲ ನಿರ್ಮಾಣವಾಗಿದೆ.
ನಿರ್ಮಾಣಕ್ಕೆ ಕಾರಣ: 2018ರಲ್ಲಿ ಡಿಪೊ ಸ್ಥಳಾಂತರಗೊಂಡಿತು. ಅದಕ್ಕೂ ಹಿಂದೆ ಇದ್ದ ಡಿಪೊದಲ್ಲಿ ಗಣೇಶ, ಆಂಜನೇಯ ಸ್ವಾಮಿ ದೇಗುಲ ಇತ್ತು. ಪ್ರತಿ ಶನಿವಾರ ಎಲ್ಲರೂ ಒಗ್ಗೂಡಿ ಅನ್ಯೋನ್ಯವಾಗಿ ಪೂಜೆ ಸಲ್ಲಿಸುತ್ತಿದ್ದರು. ಪ್ರಸಾದವನ್ನೂ ಸ್ವೀಕರಿಸುತ್ತಿದ್ದರು. ಸ್ಥಳಾಂತರಗೊಂಡ ನಂತರ ಪೂಜಾ ಕಾರ್ಯ ನಿಂತಿತು.
ನೂತನ ಡಿಪೊ ಜಾಗದಲ್ಲಿ ದೇಗುಲ ನಿರ್ಮಾಣ ಮಾಡುವಂತಿಲ್ಲ ಎಂದು ಅಧಿಕಾರಿಗಳು ಮೊದಲು ಹೇಳಿದ್ದು ಉಂಟು. ‘ವೈಮನಸ್ಸು ಉಂಟಾಗದಂತೆ ನೋಡಿಕೊಳ್ಳುತ್ತೇವೆ’ ಎಂದು ಎರಡೂ ಧರ್ಮಗಳ ನೌಕರರು ನೀಡಿದ ಭರವಸೆಯ ಮೇಲೆ ಈ ಹಿಂದೆ ಇಲ್ಲಿನ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಆಗಿದ್ದ ಪ್ರಸನ್ನಕುಮಾರ್ ಕೆ. ಬಾಲನಾಯಕ್ ಒಪ್ಪಿಗೆಯ ಜತೆಗೆ ದೇಣಿಗೆಯನ್ನು ನೀಡಿದರು.
ಮೊದಲಿನಂತೆಯೇ ಆಚರಣೆ ಮುಂದುವರಿಯಬೇಕು ಎಂಬುದು ಮುಸ್ಲಿಂ ಆಗಿದ್ದರೂ ಆಂಜನೇಯ, ಗಣಪತಿಯ ಭಕ್ತರಾಗಿರುವ ಸಂಸ್ಥೆಯ ಹಿರಿಯ ನಿವೃತ್ತ ಚಾಲಕ ರಹೀಂ ಸಾಬ್ ಆಶಯವಾಗಿತ್ತು. ನಿವೃತ್ತ ಹಿರಿಯ ಚಾಲಕ ಎಚ್.ಜಿ.ರುದ್ರಪ್ಪ ಮಾರ್ಗದರ್ಶನದೊಂದಿಗೆ 2019ರ ಜೂನ್‌ನಲ್ಲಿ ಭೂಮಿಪೂಜೆಯೂ ನಡೆಯಿತು.
2020 ಆಗಸ್ಟ್ 20ರ ಸ್ವರ್ಣಗೌರಿ ಹಬ್ಬದಂದು ಕೆಎಸ್‌ಆರ್‌ಟಿಸಿ ವಾಹನದಲ್ಲೇ ಗಣಪತಿ ಮೂರ್ತಿ ತರುವ ಮೂಲಕ ಪ್ರತಿಷ್ಠಾಪನಾ ಕಾರ್ಯ ನೆರವೇರಿತು. ಶಾಸ್ತ್ರೋಕ್ತವಾಗಿ ಹೋಮ, ಹವನ, ಕಳಸಾರೋಹಣ ಪೂಜಾ ವಿಧಿವಿಧಾನಗಳು ನಡೆದವು. ಗೌರಿ, ಗಣೇಶ ಹಬ್ಬದಲ್ಲಿ ನಡೆದ ಅನ್ನಸಂತರ್ಪಣೆ ಕಾರ್ಯದಲ್ಲೂ ಹಿಂದೂಗಳ ಜತೆ ಮುಸ್ಲಿಂ ನೌಕರರ ಕುಟುಂಬದವರು ಪಾಲ್ಗೊಂಡು ಹೋಳಿಗೆ ಊಟವನ್ನು ಸಾಮೂಹಿಕವಾಗಿ ಸ್ವೀಕರಿಸಿ, ಸಾಮರಸ್ಯ ಮೆರೆದರು.
ಜೋಗಿಮಟ್ಟಿ ರಸ್ತೆ, ಬುದ್ಧನಗರದಲ್ಲಿಯೂ ಹಿಂದೂ-ಮುಸ್ಲಿಂ ಧರ್ಮೀಯರು ಒಗ್ಗೂಡಿ ಅನೇಕ ವರ್ಷ ಗಣೇಶೋತ್ಸವ ಆಚರಿಸಿರುವ ಉದಾಹರಣೆ ಚಿತ್ರದುರ್ಗದಲ್ಲಿದೆ.
ನನ್ನ ಕಷ್ಟಗಳಿಗೆ ಆಂಜನೇಯ, ಗಣಪತಿ ದೇವರಿಂದ ಪರಿಹಾರ ಸಿಕ್ಕಿದೆ. ನನಗೆ ಅಲ್ಲಾಹು, ಗಣಪತಿ ಬೇರೆಯಲ್ಲ. ಎರಡೂ ಧರ್ಮಗಳ ಆಚರಣೆಯಲ್ಲಿ ಈಗಲೂ ಪಾಲ್ಗೊಳ್ಳುತ್ತೇನೆ. ನಾವು ಅಣ್ಣ,ತಮ್ಮಂದಿರಂತೆ ಬದುಕಬೇಕು ಎಂದು ಕಿವಿಮಾತು ಹೇಳುತ್ತಾರೆ ನಿವೃತ್ತ ಹಿರಿಯ ಚಾಲಕ ರಹೀಂ ಸಾಬ್.
ಗಣಪತಿ ವಿಘ್ನನಿವಾರಕ. ಸತತ 3 ವರ್ಷಗಳ ಹೋರಾಟದ ಫಲವಾಗಿ ದೇಗುಲ ನಿರ್ಮಾಣವಾಗಿದೆ. ಎರಡೂ ಧರ್ಮೀಯರು ಒಗ್ಗೂಡಿ ದೇಗುಲ ನಿರ್ಮಿಸಿದ್ದೇವೆ. ನೌಕರರಲ್ಲಿ ಜಾತೀಯತೆ ಇಲ್ಲ ಎನ್ನುವುದು ಚಾಲಕ ಮಲ್ಲಿಕಾರ್ಜುನಪ್ಪ ಅವರ ಅಭಿಪ್ರಾಯ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.