ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ: ದಕ್ಷಿಣ ಕನ್ನಡದಲ್ಲಿ ಎಲ್ಲ 15 ವರದಿಗಳೂ ನೆಗೆಟಿವ್‌

3,164 ಜನರಿಗೆ ಹೋಂ ಕ್ವಾರಂಟೈನ್: ನಿಗಾ ಅವಧಿ ಪೂರೈಸಿದ 20 ಜನ
Last Updated 29 ಮಾರ್ಚ್ 2020, 11:04 IST
ಅಕ್ಷರ ಗಾತ್ರ

ಮಂಗಳೂರು: ಶುಕ್ರವಾರ ಎರಡು ಪ್ರಕರಣಗಳು ದೃಢಪಟ್ಟ ನಂತರ ಶನಿವಾರದ ಮಟ್ಟಿಗೆ ಜಿಲ್ಲೆಯ ಜನರು ನಿರಾಳರಾಗುವಂತಾಗಿದೆ. ಪರೀಕ್ಷೆಗೆ ಕಳುಹಿಸಿದ್ದ 15 ಮಂದಿಯ ಗಂಟಲು ದ್ರವದ ಮಾದರಿಯ ಪರೀಕ್ಷಾ ವರದಿ ಬಂದಿದ್ದು, ಯಾವುದೇ ಕೋವಿಡ್‌–19 ಪ್ರಕರಣ ಇಲ್ಲ ಎಂಬುದು ದೃಢಪಟ್ಟಿದೆ.

ಶನಿವಾರ ಒಟ್ಟು 94 ಜನರ ಆರೋಗ್ಯ ತಪಾಸಣೆ ಮಾಡಲಾಗಿದ್ದು, 25 ಮಂದಿಯ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಮತ್ತೆ ಆರು ಶಂಕಿತ ಪ್ರಕರಣಗಳು ಬಂದಿದ್ದು, ಎಲ್ಲರಿಗೂ ವೈದ್ಯಕೀಯ ನಿಗಾದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 38,209 ಜನರ ಆರೋಗ್ಯ ತಪಾಸಣೆ ಮಾಡಲಾಗಿದ್ದು, 3,164 ಮಂದಿಗೆ ಮನೆಯಲ್ಲಿಯೇ ವೈದ್ಯಕೀಯ ನಿಗಾದಲ್ಲಿ ಇರುವಂತೆ ಸೂಚಿಸಲಾಗಿದೆ. ಶನಿವಾರ 20 ಜನರು ಮನೆಯ ವೈದ್ಯಕೀಯ ನಿಗಾ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. ನಗರದ ಇಎಸ್ಐ ಆಸ್ಪತ್ರೆಯಲ್ಲಿ ಒಟ್ಟು 29 ಮಂದಿಗೆ ಚಿಕಿತ್ಸೆ ಮುಂದುವರಿಸಲಾಗಿದೆ.

ಮಾಹಿತಿ ನೀಡಿ: ಕೊರೊನಾ ಸೋಂಕು ತಡೆಗಟ್ಟಲು ಹಾಗೂ ಸಾರ್ವಜನಿಕ ಹಿತದೃಷ್ಟಿಯಲ್ಲಿ ಈಗಾಗಲೇ ಜಿಲ್ಲೆಯಾದ್ಯಂತ ಎಲ್ಲ ರೀತಿಯ ಮದ್ಯ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಮದ್ಯ ಮಾರಾಟ, ಹಂಚಿಕೆ, ಸಾಗಣೆಯನ್ನು ನಿಷೇಧಿಸಲಾಗಿದೆ.

ಇಂತಹ ಸಮಯದಲ್ಲಿ ಅಲ್ಲಲ್ಲಿ ಅಕ್ರಮ ಮದ್ಯ ಮಾರಾಟ ಕಂಡು ಬಂದರೆ, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ನೀಡಬಹುದು ಎಂದು ಅಬಕಾರಿ ಇಲಾಖೆ ಉಪ ಆಯುಕ್ತರು ತಿಳಿಸಿದ್ದಾರೆ. ಅಕ್ರಮ ಮದ್ಯ,ನಕಲಿ ಮದ್ಯ, ಕಳ್ಳಭಟ್ಟಿ, ಸೇಂದಿಯನ್ನು ತಯಾರಿಸಿ ಮಾರಾಟ ಮಾಡುವುದು ಕಂಡು ಬಂದರೆ ಅಧಿಕಾರಿಗಳಿಗೆ ಮಾಹಿತಿ ನೀಡಬಹುದು ಎಂದು ತಿಳಿಸಲಾಗಿದೆ.

ನಿಗಾಕ್ಕೆ ಸೂಚನೆ

ದುಬೈನಿಂದ ಬಂದಿದ್ದ ಬೆಳ್ತಂಗಡಿ ತಾಲ್ಲೂಕಿನ ಕಲ್ಲೇರಿಯ ಯುವಕನ ಸಂಪರ್ಕದ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಆತ ಪ್ರಯಾಣಿಸಿದ ವಿವರವನ್ನು ನೀಡಿರುವ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌, ಈ ಸಂಪರ್ಕದಲ್ಲಿ ಇರುವ ಎಲ್ಲರೂ 28 ದಿನ ಮನೆಯಲ್ಲಿಯೇ ವೈದ್ಯಕೀಯ ನಿಗಾದಲ್ಲಿ ಮುಂದುವರಿಯಬೇಕು ಎಂದು ಸೂಚಿಸಿದ್ದಾರೆ.

ಇದೇ 21 ರಂದು 8.30ಕ್ಕೆ ದುಬೈನಿಂದ ಬೆಂಗಳೂರಿಗೆ ಬಂದಿದ್ದ ಈ ಯುವಕ, ನಂತರ ಬಿಎಂಟಿಸಿ ಬಸ್‌ ಮೂಲಕ ಮೆಜೆಸ್ಟಿಕ್‌ ಬಸ್‌ ನಿಲ್ದಾಣಕ್ಕೆ ತೆರಳಿದ್ದ. ಮಧ್ಯಾಹ್ನ 2 ಗಂಟೆಗೆ ಮೆಜೆಸ್ಟಿಕ್‌ನಲ್ಲಿ ಊಟ ಮಾಡಿದ್ದು, ಸಂಜೆ 4.30ಕ್ಕೆ ಬೆಂಗಳೂರು–ಮಂಗಳೂರು ಕೆಎಸ್‌ಆರ್‌ಟಿಸಿ ಬಸ್‌ ಸಂಖ್ಯೆ ಕೆಎ–19, ಎಫ್‌3329 ಮೂಲಕ ಪ್ರಯಾಣ ಬೆಳೆಸಿದ್ದ. ದಾರಿ ಮಧ್ಯೆ ಕುಣಿಗಲ್‌ನಲ್ಲಿ ಚಹಾ ಕುಡಿದಿದ್ದು, 22 ರಂದು ಬೆಳಿಗ್ಗೆ 3 ಗಂಟೆಗೆ ಉಪ್ಪಿನಂಗಡಿಯಲ್ಲಿ ಇಳಿದುಕೊಂಡಿದ್ದ. ನಂತರ ಆಟೋದ ಮೂಲಕ ಮನೆ ತಲುಪಿದ್ದ.

ಈ ಬಸ್‌ನಲ್ಲಿ ಪ್ರಯಾಣಿಸಿದ ಎಲ್ಲ ಪ್ರಯಾಣಿಕರು ಹಾಗೂ ಆಟೊ ಚಾಲಕ ಸೇರಿದಂತೆ ಎಲ್ಲರೂ 28 ದಿನಗಳ ಹೋಂ ಕ್ವಾರಂಟೈನ್‌ನಲ್ಲಿ ಇರಬೇಕು. ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT