ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

650 ಪ್ರಕರಣ ಇತ್ಯರ್ಥ, 10 ಸಾವಿರ ಮಂದಿಗೆ ಹಕ್ಕುಪತ್ರ

2 ವರ್ಷದ ಸಾಧನೆ ಮೆಲುಕು ಹಾಕಿದ ಮುಲ್ಲೈ ಮುಗಿಲನ್
Published : 20 ಜೂನ್ 2025, 8:26 IST
Last Updated : 20 ಜೂನ್ 2025, 8:26 IST
ಫಾಲೋ ಮಾಡಿ
0
650 ಪ್ರಕರಣ ಇತ್ಯರ್ಥ, 10 ಸಾವಿರ ಮಂದಿಗೆ ಹಕ್ಕುಪತ್ರ
ಮುಲ್ಲೈ ಮುಗಿಲನ್ ದಂಪತಿಯನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.  ಸಂತೋಷ್‌ ಕುಮಾರ್‌, ಆನಂದ ಕೆ., ದರ್ಶನ್ ಎಚ್‌.ವಿ ಭಾಗವಹಿಸಿದ್ದರು

ಮಂಗಳೂರು: ‘ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಏಳು ವರ್ಷಗಳಿಂದ ಬಾಕಿ ಇದ್ದ 650 ಪ್ರಕರಣಗಳನ್ನು ಎರಡು ವರ್ಷಗಳ ಸೇವಾವಧಿಯಲ್ಲಿ ಇತ್ಯರ್ಥಗೊಳಿಸಲಾಗಿದೆ. ಕಂದಾಯ ಜಮೀನು ಹಂಚಿಕೆ ತೊಡಕು ನಿವಾರಿಸಿ 10 ಸಾವಿರ ಮಂದಿಗೆ ಹಕ್ಕುಪತ್ರ ವಿತರಿಸಲಾಗಿದೆ’ ಎಂದು ನಿಕಟಪೂರ್ವ ಜಿಲ್ಲಾಧಿಕಾರಿ ಮುಲ್ಲೈಮುಗಿಲನ್ ಎಂ.ಪಿ ತಿಳಿಸಿದರು.

ADVERTISEMENT
ADVERTISEMENT

ಪಡೀಲ್‌ನ  ‘ಪ್ರಜಾಸೌಧ'ದಲ್ಲಿ ಗುರುವಾರ  ಜಿಲ್ಲಾಡಳಿತದಿಂದ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಜಿಲ್ಲೆಯಲ್ಲಿ ಎರಡು ವರ್ಷಗಳ ಸೇವಾವಧಿಯನ್ನು ಮೆಲುಕು ಹಾಕಿದರು.

‘ಪ್ರಕೃತಿ ವಿಕೋಪ ನಿರ್ವಹಣೆಗೆ ಗ್ರಾಮ ಪಂಚಾಯಿತಿ ಹಾಗೂ ವಾರ್ಡ್ ಮಟ್ಟದಲ್ಲೇ ಸ್ಥಳೀಯ ಅಧಿಕಾರಿಗಳ ಮೂಲಕ ನಿರ್ವಹಿಸಲು ವ್ಯವಸ್ಥೆ ರೂಪಿಸಲಾಗಿದೆ.  ವಿವಿಧ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡುವಂತಹ ವಾತಾವರಣ ಇಲ್ಲಿದೆ. ಹಾಗಾಗಿ ಎರಡು ಚುನಾವಣೆಗಳನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಯಿತು’ ಎಂದರು. 

ತಂದೆ, ತಾಯಿ ಹಾಗೂ ಪತ್ನಿಯವರನ್ನೂ ಪರಿಚಯಿಸಿದ ಅವರು, ‘ಸರ್ಕಾರಿ ಅಧಿಕಾರಿಗಳಾಗಿದ್ದ ನನ್ನ ಪೋಷಕರು ಪ್ರಾಮಾಣಿಕವಾಗಿ ಕೆಲಸ ಮಾಡಿ ನಿವೃತ್ತರಾಗಿದ್ದಾರೆ. ಅವರ ಮೌಲ್ಯಗಳನ್ನು ಪಾಲಿಸಿದ ಹೆಮ್ಮೆ ಇದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ನೂತನ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ‘ಬುಧವಾರ ಅಧಿಕಾರ ಸ್ವೀಕರಿಸಿದ ಬಳಿಕ 15 ನಿಮಿಷದಲ್ಲಿ ಜಿಲ್ಲಾಧಿಕಾರಿಯ ಮೊಬೈಲ್‌ಗೆ 25ಕ್ಕೂ ಅಧಿಕ ಕರೆ ಹಾಗೂ ಸಂದೇಶಗಳು ಬಂದಿವೆ. ಅವುಗಳಲ್ಲಿ ಅಡಕವಾಗಿದ್ದ ಅಭಿಮಾನ ಮುಲ್ಲೈ ಮುಗಿಲನ್‌ ಅವರ ಜನಸ್ನೇಹಿ ವ್ಯಕ್ತಿತ್ವದ ಪರಿಚಯ ಮಾಡಿಕೊಟ್ಟಿದೆ. ಇದು ನನಗೆ ಇಲ್ಲಿ ಸಿಕ್ಕ ಮೊದಲ ಪಾಠ. ತಾಳ್ಮೆ, ಸೂಕ್ಷ್ಮತೆ ಮೈಗೂಡಿಸಿಕೊಂಡು ಅವರ ಹೆಜ್ಜೆ ಗುರುತು ಅನುಸರಿಸಲು ಯತ್ನಿಸುವೆ’ ಎಂದರು.

ADVERTISEMENT

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್, ಅರಣ್ಯ ಇಲಾಖೆಯ ಉಪ ಸಂರಕ್ಷಣಾಧಿಕಾರಿ ಆ್ಯಂಟನಿ ಮರಿಯಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಸಂತೋಷ್, ಲೇಡಿಗೋಶನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ದುರ್ಗಾಪ್ರಸಾದ್,  ನಿವೃತ್ತ ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಭಾಕರ ಶರ್ಮ, ಉಪವಿಭಾಗಾಧಿಕಾರಿ ಹರ್ಷವರ್ದನ್, ಸ್ಮಾರ್ಟ್ ಸಿಟಿ ಆಡಳಿತ ನಿರ್ದೇಶಕ ರಾಜು,  ಮೂಡುಬಿದಿರೆ ತಹಶೀಲ್ದಾರ್ ಶ್ರೀಧರ್ ಮೊದಲಾದವರು ಮಾತನಾಡಿದರು.
 

‘ಅಮೆರಿಕದಲ್ಲೂ ಸಿಕ್ಕ ತುಳುವರು’

‘ದಕ್ಷಿಣ ಕನ್ನಡ ಜಿಲ್ಲೆ ಎಲ್ಲಾ ರೀತಿಯಲ್ಲೂ ನನಗೆ ವಿಶೇಷ. ಕುಡ್ಲ ನನ್ನನ್ನು ಮನೆ ಮಗನಂತೆ  ಕಂಡಿದೆ ಎಂದು ಹಕ್ಕಿನಿಂದ ಹೇಳಬಲ್ಲೆ. ಕುಡ್ಲವನ್ನು ನನ್ನಿಂದ ಬಿಟ್ಟುಕೊಡಲಾಗದು. ಈಚೆಗೆ ಅಮೆರಿಕಕ್ಕೆ ತೆರಳಿದ್ದಾಗ  ಲಿಫ್ಟ್‌ನಲ್ಲಿ ಒಬ್ಬರು ತುಳುವಿನಲ್ಲಿ ಮಾತನಾಡುತ್ತಿದ್ದರು. ‘ನಾನು ಕುಡ್ಲದ ಡಿ.ಸಿ’ ಎಂದು ಪರಿಚಯಿಸಿಕೊಂಡೆ’ ಎಂದು ಮುಲ್ಲೈ ಮುಗಿಲನ್ ಹೇಳಿದರು. ವೃತ್ತಿಯಲ್ಲಿ ವಾಸ್ತುಶಿಲ್ಪಿಯಾಗಿರುವ ಪತ್ನಿಯನ್ನು ಅಭಿನಂದನೆ ಸ್ವೀಕರಿಸುವಾಗ ಬಲಬದಿಯಲ್ಲಿ ಕೂರಿಸಿಕೊಂಡ ಅವರು`ಇದು ತುಳುನಾಡ ಪದ್ಧತಿ' ಎಂದು ವಿವರಿಸಿದರು.    ‘ಸಾಂಸ್ಕೃತಿಕ ಶೈಕ್ಷಣಿಕವಾಗಿ ವಿಶೇಷ ಸಾಮರ್ಥ್ಯ ಹೊಂದಿರುವ ಜಿಲ್ಲೆಯ ಗರಿಮೆ ಜನರೇ ಎತ್ತಿಹಿಡಿಯಬೇಕು. ಇಲ್ಲಿನವರ ಕಾನೂನು ಜ್ಞಾನ ಶ್ರಮ ಸಂಸ್ಕೃತಿ ಎಲ್ಲರಿಗೂ ಮಾದರಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
Comments0