ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೋದಿ ವಿರುದ್ಧ ಯುವಜನರು ಸಿಟ್ಟಾಗಿದ್ದಾರೆ : ಸಲೀಂ ಅಹ್ಮದ್

Last Updated 26 ಆಗಸ್ಟ್ 2018, 15:33 IST
ಅಕ್ಷರ ಗಾತ್ರ

ಮಂಗಳೂರು: ‘ಪ್ರಧಾನಿ ನರೇಂದ್ರ ಮೋದಿಯವರ ಮಾತು ನಂಬಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ಚಲಾಯಿಸಿದ್ದ ಯುವಜನರು ಈಗ ಭ್ರಮನಿರಸನಗೊಂಡಿದ್ದು, ತಕ್ಕ ಪಾಠ ಕಲಿಸಲು ಸಜ್ಜಾಗುತ್ತಿದ್ದಾರೆ’ ಎಂದು ಎಐಸಿಸಿ ಕಾರ್ಯದರ್ಶಿ ಸಲೀಂ ಅಹ್ಮದ್ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಉದ್ಯೋಗ ಸೃಜನೆ, ವಿದೇಶದಿಂದ ಕಪ್ಪುಹಣ ವಾಪಸ್ ತರುವುದು, ಭ್ರಷ್ಟಾಚಾರ ನಿಯಂತ್ರಣ ಸೇರಿದಂತೆ ಹಲವು ವಿಚಾರಗಳಲ್ಲಿ ಮೋದಿ ಆಶ್ವಾಸನೆ ನೀಡಿದ್ದರು. ಅಧಿಕಾರಕ್ಕೆ ಬಂದು ನಾಲ್ಕು ವರ್ಷ ಕಳೆದರೂ ಮಾತನಾಡುತ್ತಲೇ ಇದ್ದಾರೆ. ಯಾವ ಪ್ರಗತಿಯೂ ಆಗಿಲ್ಲ. ಈ ಕಾರಣಕ್ಕಾಗಿ ಮೋದಿ ವಿರುದ್ಧ ಯುವಜನರು ಸಿಟ್ಟಿಗೆದ್ದಿದ್ದಾರೆ. ರಾಫೆಲ್‌ ಹಗರಣ ಬಿಜೆಪಿಗೆ ಮುಳುವಾಗಲಿದೆ. ಈ ಕುರಿತು ಕಾಂಗ್ರೆಸ್‌ ಪ್ರಬಲ ಹೋರಾಟ ರೂಪಿಸುತ್ತಿದೆ’ ಎಂದರು.

ಲೋಕಸಭಾ ಚುನಾವಣೆಗಾಗಿ ಪಕ್ಷವನ್ನು ಬಲಗೊಳಿಸುವ ಕೆಲಸಕ್ಕೆ ಕಾಂಗ್ರೆಸ್ ಚಾಲನೆ ನೀಡಿದೆ. ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಯವರ ನಿರ್ದೇಶನದಂತೆ ಎಲ್ಲ ಹಂತಗಳಲ್ಲಿ ಸಂಘಟನೆಯನ್ನು ಬಲಿಷ್ಠಗೊಳಿಸಲು ಕಾರ್ಯಕ್ರಮ ರೂಪಿಸಲಾಗಿದೆ. ರಾಹುಲ್‌ ನೇತೃತ್ವದಲ್ಲಿ ಯುಪಿಎ ಮೈತ್ರಿಕೂಟವನ್ನು ಬಲಗೊಳಿಸುವ ಕೆಲಸವೂ ನಡೆಯುತ್ತಿದೆ ಎಂದು ಹೇಳಿದರು.

ರಾಜ್ಯದಲ್ಲಿ ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರ ಇಡುವ ಉದ್ದೇಶದಿಂದ ಕಾಂಗ್ರೆಸ್– ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಐದು ವರ್ಷಗಳ ಕಾಲ ಸಮ್ಮಿಶ್ರ ಸರ್ಕಾರ ಮುಂದುವರಿಯಲಿದೆ. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಕೂಡ ಯುಪಿಎ ಭಾಗವಾಗಲಿದೆ. ಈ ಬಗ್ಗೆ ಶೀಘ್ರದಲ್ಲೇ ಅಂತಿಮ ತೀರ್ಮಾನ ಹೊರಬೀಳಲಿದೆ. ಕಾಂಗ್ರೆಸ್‌ ರಾಜ್ಯದಲ್ಲಿ 20 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದರು.

ಪ್ರಚಾರದ ಕೊರತೆ ಕಾರಣ:ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಐದು ವರ್ಷಗಳ ಕಾಲ ರಾಜ್ಯದಲ್ಲಿ ಅತ್ಯುತ್ತಮ ಕೆಲಸಗಳನ್ನು ಮಾಡಿತ್ತು. ಆದರೆ, ಪ್ರಚಾರದ ಕೊರತೆಯಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಅನುಭವಿಸಿತು. ಸರ್ಕಾರದ ಯೋಜನೆಗಳು, ಕಾರ್ಯಕ್ರಮಗಳ ಕುರಿತು ಮತದಾರರಿಗೆ ಸರಿಯಾದ ಮಾಹಿತಿ ತಲುಪಿದ್ದರೆ ಬಹುಮತ ಲಭಿಸುತ್ತಿತ್ತು ಎಂದು ಹೇಳಿದರು.

‘ಮತ್ತೆ ಮುಖ್ಯಮಂತ್ರಿ ಆಗುತ್ತೇನೆ ಎಂದು ಸಿದ್ದರಾಮಯ್ಯ ಅವರು ಹೇಳಿರುವುದನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. ಸಮ್ಮಿಶ್ರ ಸರ್ಕಾರವನ್ನು ಅವರು ಎಲ್ಲಿಯೂ ವಿರೋಧಿಸಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಹರೀಶ್ ಕುಮಾರ್, ಕೆಪಿಸಿಸಿ ‍ಪ್ರಧಾನ ಕಾರ್ಯದರ್ಶಿ ಜಿ.ಎ.ಬಾವಾ, ಕಾರ್ಯದರ್ಶಿ ನವೀನ್‌ ಡಿಸೋಜ, ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಬಲರಾಜ ರೈ, ಕಾರ್ಯದರ್ಶಿ ನೀರಜ್‌ ಪಾಲ್‌, ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ ಅರುಣ್ ಕುವೆಲ್ಲೋ, ಎನ್‌ಎಸ್‌ಯುಐ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ತೇಜಸ್ವಿ ರಾಜ್‌ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT