ಗುರುವಾರ , ನವೆಂಬರ್ 14, 2019
19 °C

ದಾವಣಗೆರೆ| ಮಳೆಗೆ ಕೋಡಿ ಬಿದ್ದ ಕೊಂಡಜ್ಜಿ ಕೆರೆ, ಮೈದುಂಬಿ ಜಮೀನಿಗೆ ನುಗ್ಗಿದ ಹಳ್ಳ

Published:
Updated:

ದಾವಣಗೆರೆ: ಜಿಲ್ಲೆ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ವ್ಯಾಪಕವಾಗಿ ಮಳೆಯಾಗಿದ್ದು, ಹಳ್ಳ–ಕೊಳ್ಳಗಳು ಮೈದುಂಬಿ ಹರಿಯುತ್ತಿವೆ. ಕೆರೆ ಕಟ್ಟೆಗಳು ಭರ್ತಿಯಾಗಿವೆ. ಜಮೀನುಗಳಿಗೆ ನೀರು ನುಗ್ಗಿದ್ದು, ಬೆಳೆಗಳು ನೀರಿನಲ್ಲಿ ಮುಳುಗಿವೆ.

ಹರಿಹರ ತಾಲ್ಲೂಕಿನ ಕೊಂಡಜ್ಜಿ ಕೆರೆ ತುಂಬಿದ್ದು, ಮಂಗಳವಾರ ಬೆಳಿಗ್ಗೆ ಕೋಡಿ ಬಿದ್ದಿದೆ. ಕೆರೆ ತುಂಬಿ ಕೋಡಿ ಬಿದ್ದಿರುವುದನ್ನು ನೋಡಲು ಜನ ತಂಡೋಪತಂಡವಾಗಿ ಬರುತ್ತಿದ್ದಾರೆ. ಕೆರೆ ತುಂಬಿರುವುದಕ್ಕೆ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.

ಕೆರೆ ಭದ್ರಾ ಜಲಾಶಯದ ಅಚ್ಚುಕಟ್ಟು ವ್ಯಾಪ್ತಿಯ ಕೊನೆ ಭಾಗದ ಕೊನೆಯ ಕೆರೆಯಾಗಿದ್ದು, ಜಲಾಯಶದಿಂದ ನೀರು ಹರಿಸಲಾಗುತ್ತಿತ್ತು. ಮುಕ್ಕಾಲು ಭಾಗದಷ್ಟು ತುಂಬಿದ್ದ ಕೆರೆ ಎರಡು ದಿನಗಳ ಧಾರಾಕಾರ ಮಳೆಗೆ ಪೂರ್ಣ ತುಂಬಿದ್ದು, ಕೋಡಿ ಬಿದ್ದಿದೆ.


ಕೆರೆ ಕೋಡಿ ಬಿದ್ದಿರುವುದನ್ನು ಜನ ಕುತೂಹಲದಿಂದ ನೋಡುತ್ತಿದ್ದಾರೆ.

’ಕೆರೆ ತುಂಬಿ ಕೋಡಿ ಬಿದ್ದಿರುವುದು ಸಂತಸ ತಂದಿದೆ. ಜನ ಜಾನುವಾರುಗಳಿಗೆ ನೀರಿನ ಕೊರತೆ ಇಲ್ಲದಂತಾಗಿದೆ. ಕೆರೆಯಲ್ಲಿ ನೀರಿದ್ದರೆ ಅಂರ್ಜಲಮಟ್ಟ ಹೆಚ್ಚಾಗಿ ಕೊಳವೆ ಬಾವಿಗಳಲ್ಲಿ ಸಮೃದ್ಧ ನೀರು ಸಿಗಲಿದೆ. ಈ ಮೂಲಕವಾದರೂ ರೈತರು ಬೆಳೆ ಬೆಳೆಯಬಹುದು‘ ಎಂದು ಹೇಳಿದರು ಬುಳ್ಳಾಪುರ ಗ್ರಾಮದ ರೈತರಾದ ಜಿ.ಆರ್‌.ವಿಶ್ವನಾಥ್‌ ಹಾಗೂ ಸಂದೀಪ್‌.

ಕೆರೆ ಕೋಡಿ ಬಿದ್ದಿರುವುದರಿಂದ ಗೇಟ್‌ಗಳನ್ನು ತೆರೆದು ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.  

ಒಂದು ತಿಂಗಳ ಹಿಂದೆಯಷ್ಟೇ ಕೆರೆಯಲ್ಲಿ ಹನಿ ನೀರಲ್ಲದೆ ಬಣಗುಡುತ್ತಿತ್ತು. ಈಗ ಮೈದುಂಬಿದೆ.  


ಬುಳ್ಳಾಪುರ ಗ್ರಾಮದ ಜಮೀನುಗಳಿಗೆ ಹಳ್ಳದ ನೀರು ನುಗ್ಗಿರುವುದು.

ಮೈದುಂಬಿದ ಕಕ್ಕರಗೊಳ್ಳ–ಕೊಂಡಜ್ಜಿ ಹಳ್ಳ

ದಾವಣಗೆರೆ ನಗರ ಹಾಗೂ ಸುತ್ತ, ಆವರಗೊಳ್ಳ, ಕಕ್ಕರಗೊಳ್ಳ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಮಳೆಯಾಗಿದ್ದು ಕಕ್ಕರಗೊಳ್ಳ–ಕೊಂಡಜ್ಜಿ–ಬುಳ್ಳಾಪುರ ಹಳ್ಳ ಮೈದುಂಬಿ ಹರಿಯುತ್ತಿದೆ. ಜಮೀನುಗಳಿಗೆ ಹಳ್ಳದ ನೀರು ನುಗ್ಗಿದ್ದು, ಬೆಳೆ ನೀರಿನಲ್ಲಿ ಮುಗಳುಗಿವೆ.


ಕಕ್ಕರಗೊಳ್ಳ–ಕೊಂಡಜ್ಜಿ ಹಳ್ಳ ಬುಳ್ಳಾಪುರ ವ್ಯಾಪ್ತಿಯಲ್ಲಿ ಮೈದುಂಬಿ ಹರಿಯುತ್ತಿರುವುದು.

ಪಂಪ್ ಹೌಸ್‌ಗಗೆ ನುಗ್ಗಿದ ನೀರು

ಕಣ್ಣು ಹಾಯಿಸಿದಷ್ಟೂ ದೂರಕ್ಕೆ ನೀರು ಕಾಣುತ್ತಿದ್ದು, ಹಳ್ಳ ನದಿಯೋಪಾದಿಯಲ್ಲಿ ಮೈದುಂಬಿ ಹರಿಯುತ್ತಿದೆ. ಹಳ್ಳದ ದಂಡೆಯಲ್ಲಿದ್ದ ಪಂಪ್‌ ಹೌಸ್‌ಗಳು ಮುಳುಗಡೆಯಾಗಿವೆ. ರಾತ್ರೋರಾತ್ರಿ ಭಾರಿ ಪ್ರಮಾಣದಲ್ಲಿ ಹಳ್ಳ ಬಂದಿದ್ದರಿಂದ ಪಂಪ್‌ಗಳೂ ಪೂರ್ಣ ನೀರಿನಲ್ಲಿ ಮುಳುಗಡೆಯಾಗಿವೆ. ಅವುಗಳನ್ನು ಮೇಲಕ್ಕೆ ತರಲು ಆಗದ ಅಪಾಯಮಟ್ಟದಲ್ಲಿ ನಿರು ಹರಿಯುತ್ತಿದೆ.


ಬುಳ್ಳಾಪುರ ಗ್ರಾಮದ ಜಗೀಶಪ್ಪ ಅವರ ಹಳ್ಳದ ದಂಡೆಯ ಪಂಪ್‌ ಹೌಸ್‌ಗೆ ನೀರು ನುಗ್ಗಿದ್ದು, ಪಂಪ್‌ಗಳು ನೀರಿನಲ್ಲಿ ಮುಳುಗಿವೆ.

27 ವರ್ಷದ ಬಳಿಕ ಮತ್ತೆ ಹಳ್ಳ...

’ಪಂಪ್‌ಗಳು ನೀರಿನಲ್ಲಿ ಮುಳುಗಿವೆ. ನೀರು ಕಡಿಮೆ ಆದ ಬಳಿಕ ಅವುಗಳನ್ನು ರಿಪೇರಿ ಮಾಡಿಸಿಯೇ ಚಾಲು ಮಾಡಬೇಕು. ಇನ್ನು ತೋಟಗಳಲ್ಲಿನ ತೆಂಗಿನ ಕಾಯಿಗಳೂ ನೀರಿನಲ್ಲಿ ಕೊಚ್ಚಿಹೋಗುತ್ತಿವೆ. ಈ ಪ್ರಮಾಣದ ಭಾರೀ ಹಳ್ಳ 27 ವರ್ಷಗಳ ಹಿಂದೆ(1992) ಬಂದಿತ್ತು. ಮತ್ತೆ ಈಗ ಅದೇ ಪ್ರಮಾಣದಲ್ಲಿ ಹಳ್ಳ ಮೈದುಂಬಿದೆ‘ ಎಂದು ವಿವರ ನೀಡಿದರು ವಿಶ್ವನಾಥ್‌ ಹಾಗೂ ಇತರ ರೈತರು.


ಹಳ್ಳದ ದಂಡೆಯ ಜಮೀನುಗಳು ಜಲಾವೃತವಾಗಿವೆ

 

ಪ್ರತಿಕ್ರಿಯಿಸಿ (+)