ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರಿಗಾಹಿಯ ಬದುಕಿಗೆ ಬಡಿದ ಬರ ‘ಸಿಡಿಲು’

ಅಕ್ಷರ ಗಾತ್ರ

ಮೊಳಕಾಲ್ಮುರು: ‘ಕುರಿ ಮಂದೆ ಮಲಗಿಸಲು ಕೊಂಡ್ಲಹಳ್ಳಿ ಸಮೀಪದ ಮಾರಮ್ಮನಹಳ್ಳಿಗೆ ಹೋಗಬೇಕಿತ್ತು. ಹುಣ್ಣಿಮೆ ಇದೆ ಎಂದು ನಾಳೆ ಹೋಗೋಣ ಎಂದು ಉಳಿದುಕೊಂಡೆವು. ಸಂಜೆ ಹೊತ್ತಿಗೆ ವಿಧಿಯಾಟಕ್ಕೆ ಕುರಿಗಳು ಪ್ರಾಣ ಕಳೆದುಕೊಂಡಿವೆ’.

ಸೋಮವಾರ ಸಂಜೆ ಸಿಡಿಲಿನಿಂದ 153 ಕುರಿಗಳನ್ನು ಕಳೆದುಕೊಂಡ ಘಟನೆಯ ಮಾಲೀಕ ತುಮಕೂರ್ಲಹಳ್ಳಿ ಬೈಯಣ್ಣ ಹಾಗೂ ಬೋರಯ್ಯ ಅವರ ನೋವಿನ ಮಾತುಗಳು ಇವು.

‘ಬಳ್ಳಾರಿ ಭಾಗದಲ್ಲಿ ಮೇವಿಗಾಗಿ ಕುರಿಗಳನ್ನು ಕಳುಹಿಸಿದ್ದೆವು. ಅಲ್ಲಿ ₹ 60 ಸಾವಿರ ಕಟ್ಟಿ ಹತ್ತಿ ಹೊಲದಲ್ಲಿ ಬಿಟ್ಟಿದ್ದೆವು. ನಮ್ಮ ಕಡೆ ಮಳೆ ಪ್ರಾರಂಭವಾಗಿದೆ. ಮೇವು ಸಿಗುತ್ತದೆ ಎಂದು 3 ದಿನದ ಹಿಂದೆ ಕುರಿಗಳನ್ನು ಗ್ರಾಮಕ್ಕೆ ವಾಪಸ್ ಕರೆತರಲಾಗಿತ್ತು. ಅರವಿನದೊಡ್ಡಿ ಬಳಿ ಹೊಲವೊಂದರಲ್ಲಿ ಮಂದೆ ಬಿಡಲಾಗಿದ್ದು, ಇದನ್ನು ಮುಗಿಸಿ ಮಾರಮ್ಮನಹಳ್ಳಿಗೆ ಹೋಗಬೇಕಿತ್ತು ಎಂದು ಬೋರಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಳೆ ಆರಂಭವಾಗುತ್ತಿದ್ದಂತೆ ಮೊದಲು ಮೇಕೆಗಳು ಮರ ಕೆಳಕ್ಕೆ ಹೋದವು, ಅವುಗಳ ಹಿಂದೆ ಕುರಿಗಳು ಹೋಗಿ ನಿಂತುಕೊಂಡವು. ಬೆಂಕಿ ಉಂಡೆಯಂತಹ ಬಳೆಯೊಂದು ಜತೆಯಲ್ಲಿದ್ದ ಹಸುವಿಗೆ ಬಂದು ಮೊದಲು ಎರಗಿತು, ನಂತರ ಸುತ್ತಲಿದ್ದ ಕುರಿ, ಮೇಕೆಗಳು ಬಲಿಯಾದವು. ಸಮೀಪದ ಮರದ ಕೆಳೆಗಡೆ ನಾನು ಸಂಬಂಧಿಕರಾದ ಪ್ರಕಾಶ್, ಪ್ರಹ್ಲಾದ್, ಸುರೇಶ್ ಎನ್ನುವವರ ಜತೆ ನಿಂತುಕೊಂಡಿದ್ದೆ. ಸ್ವಲ್ಪ ಹೆಚ್ಚು ಕಮ್ಮಿಯಾಗಿದ್ದಲ್ಲಿ ನಮ್ಮ ಜೀವಗಳು ಬಲಿಯಾಗುತ್ತಿದ್ದವು’ ಎಂದು ಬೈಯಣ್ಣ ವಿವರಿಸಿದರು.

‘ನಮ್ಮ ಪ್ರಕಾರ ₹ 15 ಲಕ್ಷಕ್ಕೂ ಅಧಿಕ ನಷ್ಟವಾಗಿದೆ. ಸರ್ಕಾರ ಇದರಲ್ಲಿ ಅರ್ಧದಷ್ಟೂ ಪರಿಹಾರ ನೀಡುವುದಿಲ್ಲ. ಹತ್ತಾರು ವರ್ಷದಿಂದ ಕಟ್ಟಿ ಬೆಳೆಸಿದ್ದ ಮಂದೆ ಕಣ್ಣ ಮುಂದೆಯೇ ಹಾಳಾಗಿ ಹೋಯಿತು’ ಎಂದು ಅಳಲು ತೋಡಿಕೊಂಡರು.

ಭೇಟಿ: ಮಂಗಳವಾರ ಸ್ಥಳಕ್ಕೆ ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಮಗದ ಅಧ್ಯಕ್ಷ ಶರಣು ಬಿ. ತಳ್ಳಿಕೇರಿ ನೇತೃತ್ವದ ತಂಡ ಭೇಟಿ ನೀಡಿ ಮಾಹಿತಿ ಪಡೆಯಿತು.

ಸರ್ಕಾರದಿಂದ ಪ್ರತಿ ಕುರಿ, ಮೇಕೆಗೆ ₹ 5 ಸಾವಿರ ಪರಿಹಾರ ಕೊಡಲು ಅವಕಾಶವಿದೆ. ತಾಲ್ಲೂಕು ಆಡಳಿತ ಪ್ರಕೃತಿ ವಿಕೋಪ ಪರಿಹಾರದಲ್ಲಿ ನೀಡುವ ಪರಿಹಾರಕ್ಕೆ ಹೊಂದಾಣಿಕೆಯಾಗಿ ಉಳಿಕೆ ಪರಿಹಾರ ಮಂಜೂರು ಮಾಡಲಾಗುವುದು. ಈ ಘಟನೆ ನೋವಿನ ಸಂಗತಿಯಾಗಿದೆ. ನಷ್ಟಕ್ಕೀಡಾಗಿರುವವರಿಗೆ ಸರ್ಕಾರಿಂದ ಶೀಘ್ರ ಪರಿಹಾರ ಕೊಡಿಸಲಾಗುವುದು ಎಂದು ಭರವಸೆ ನೀಡಿದರು. ಇದೇ ವೇಳೆ ಅವರು ವೈಯಕ್ತಿಕವಾಗಿ ₹ 25 ಸಾವಿರ ಪರಿಹಾರ ನೀಡಿದರು.

ಮಂಡಲಾಧ್ಯಕ್ಷ ಡಾ. ಮಂಜುನಾಥ್, ನಗರಾಧ್ಯಕ್ಷ ಕಿರಣ್ ಗಾಯಕ್ವಾಡ್, ಮಂಜುನಾಥ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ. ಲಕ್ಷ್ಮಣ್ ಇದ್ದರು.

ಬಾಲ್ಯದಿಂದಲೇ ಕುರಿಸಾಕಣೆ
ಬಾಲಕನಾಗಿದ್ದಲ್ಲಿಂದಲೇ ಬೈಯಣ್ಣ ಕುರಿ ಕಾಯುವ ವೃತ್ತಿಯನ್ನು ಮಾಡುತ್ತಿದ್ದು, ಇದೇ ಪ್ರಮುಖ ಜೀವನಾಧಾರವಾಗಿತ್ತು. ಮೂವರು ಹೆಣ್ಣು ಮಕ್ಕಳು ಸೇರಿದಂತೆ ಒಟ್ಟು 6 ಜನ ಮಕ್ಕಳಿದ್ದು ವಿದ್ಯಾಭ್ಯಾಸ ಸೇರಿದಂತೆ ಎಲ್ಲದಕ್ಕೂ ಕುರಿ ಸಾಗಣೆ ಆಸರೆಯಾಗಿತ್ತು. ಈ ಘಟನೆಯಿಂದಾಗಿ ಭವಿಷ್ಯಕ್ಕೆ ಬರಸಿಡಿಲು ಬಡಿದಿದೆ.

ಪ್ರಚಾರಕ್ಕೆ ಮನವಿ
ಮಳೆಗಾಲದಲ್ಲಿ ಸಿಡಿಲಿನ ಹೊಡೆತಕ್ಕೆ ರೈತರು, ಕುರಿಗಾಹಿಗಳು, ಜಾನುವಾರುಗಳು ಸಾವನ್ನಪ್ಪುವ ಘಟನೆಗಳು ಈ ಭಾಗದಲ್ಲಿ ವರ್ಷದಿಂದ, ವರ್ಷಕ್ಕೆ ಹೆಚ್ಚುತ್ತಿವೆ. ಆದ್ದರಿಂದ ಜಿಲ್ಲಾಡಳಿತ, ಪಶು ಇಲಾಖೆ ಮಳೆಗಾಲದ ಅನಾಹುತಗಳಿಂದ ಹೇಗೆ ತಪ್ಪಿಸಿಕೊಳ್ಳಲು ಸಾಧ್ಯವಿದೆ ಎಂಬ ನಿಟ್ಟಿನಲ್ಲಿ ಗ್ರಾಮಗಳಲ್ಲಿ ಪ್ರಚಾರ ಮಾಡಬೇಕು. ಇದರಿಂದ ಸಂಭವನೀಯ ಜೀವಹಾನಿಗೆ ಕಡಿವಾಣ ಬೀಳಲಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಚಾರ ಮಾಡುತ್ತಿದ್ದೇವೆ ಎಂದು ಪಶು ಇಲಾಖೆ ಹೇಳುತ್ತಿದ್ದು, ಅದು ಕುರಿಗಾಹಿಗಳನ್ನು ಮುಟ್ಟಲಾರದು ಎಂದು ರೈತ ಮಂಜುನಾಥ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT