ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿಯಲ್ಲಿ ಮತ್ತೊಬ್ಬ ಯುವತಿ ಕೊಲೆ: ಮಲಗಿದ್ದವಳನ್ನು ಚಾಕು ಇರಿದು ಕೊಂದ ಯುವಕ

ಮನೆಯಲ್ಲಿ ಮಲಗಿದ್ದ ಯುವತಿ ಅಂಜಲಿ ಅಂಬಿಗೇರಗೆ ಯುವಕನೊಬ್ಬ ಚಾಕು ಇರಿದು ಕೊಲೆ ಮಾಡಿ ಪರಾರಿಯಾದ ಪ್ರಕರಣ ಹುಬ್ಬಳ್ಳಿ ವೀರಾಪುರ ಓಣಿಯಲ್ಲಿ ಬುಧವಾರ ನಡೆದಿದೆ.
Published 15 ಮೇ 2024, 5:08 IST
Last Updated 15 ಮೇ 2024, 5:08 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಪ್ರೀತಿ ನಿರಾಕರಿಸಿದ್ದಕ್ಕೆ ಸಿಟ್ಟಿಗೆದ್ದ ಯುವಕ ವೀರಾಪುರ ಓಣಿಯಲ್ಲಿರುವ ಮನೆಯೊಳಕ್ಕೆ ನುಗ್ಗಿ ಯುವತಿಯನ್ನು ಚಾಕುವಿನಿಂದ ಇರಿದು ಬುಧವಾರ ನಸುಕಿನಲ್ಲಿ ಕೊಲೆ ಮಾಡಿ, ಪರಾರಿಯಾಗಿದ್ದಾನೆ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವೀರಾಪುರ ಓಣಿಯ ನಿವಾಸಿ ಅಂಜಲಿ ಅಂಬಿಗೇರ (20) ಕೊಲೆಯಾದವರು. ಯಲ್ಲಾಪುರ ಓಣಿಯ ನಿವಾಸಿ, ಆಟೊರಿಕ್ಷಾ ಚಾಲಕ ಗಿರೀಶ ಸಾವಂತ (23) ಕೊಲೆ ಆರೋಪಿ. ಆತನ ಬಂಧನಕ್ಕೆ ಕಾರ್ಯಾಚರಣೆ ನಡೆದಿದೆ ಎಂದು ಬೆಂಡಿಗೇರಿ ಠಾಣೆಯ ಪೊಲೀಸರು ತಿಳಿಸಿದ್ದಾರೆ.

‘ನಸುಕಿನ 5 ಗಂಟೆಗೆ ಅಂಜಲಿ ವಾಸವಿದ್ದ ಮನೆಗೆ ಬಂದ ಗಿರೀಶ ಜೋರಾಗಿ ಬಾಗಿಲು ಬಡಿದ. ಅಂಜಲಿಯ ಸಹೋದರಿ ಮತ್ತು ಅಜ್ಜಿ ಬಾಗಿಲು ತೆರೆದಾಗ, ಮೂವರ ನಡುವೆ ವಾಗ್ವಾದ ನಡೆದಿದೆ. ಆಕ್ರೋಶಗೊಂಡ ಆತ ಮನೆಯೊಳಗೆ ನುಗ್ಗಿ, ಅಂಜಲಿಗೆ ಮನ ಬಂದಂತೆ ಚಾಕುವಿನಿಂದ ಇರಿದ. ತೀವ್ರ ರಕ್ತಸ್ರಾವದಿಂದ ಆಕೆ  ಮೃತಪಟ್ಟಳು. ಆತ ಪರಾರಿಯಾಗಿದ್ದು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕೇಟರಿಂಗ್‌ನಲ್ಲಿ ಕೆಲಸ ಮಾಡುತ್ತಿದ್ದ ಅಂಜಲಿಗೆ ಗಿರೀಶ ಪ್ರೀತಿಸುವಂತೆ ಕಾಡುತ್ತಿದ್ದ. ಆಕೆ ನಿರಾಕರಿಸಿದ್ದಕ್ಕೆ ಕೃತ್ಯವನ್ನೆಸಗಿದ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಪಾಲಕರ ಆಕ್ರಂದನ; ಪ್ರತಿಭಟನೆ: ಕಿಮ್ಸ್‌ ಶವಾಗಾರದ ಬಳಿ ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು. ಶಾಸಕ ಮಹೇಶ ಟೆಂಗಿನಕಾಯಿ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.‌

ಕಿಮ್ಸ್‌ ಶವಾಗಾರದಿಂದ ಅಂಜಲಿ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಿದ ಕೆಲ ಹೊತ್ತಿನಲ್ಲೇ  ಈಚೆಗೆ ಕೊಲೆಯಾದ ನೇಹಾ ಅವರ ತಂದೆ ನಿರಂಜನಯ್ಯ ಹಿರೇಮಠ ನೇತೃತ್ವದಲ್ಲಿ ಜನರು ನಗರದ ಚನ್ನಮ್ಮ ವೃತ್ತದ ಬಳಿ ಪ್ರತಿಭಟನೆ ನಡೆಸಿದರು. ಅಂಜಲಿ ಮೃತದೇಹವಿದ್ದ ಆಂಬುಲೆನ್ಸ್‌ ಅನ್ನು ಅಲ್ಲಿಯೇ ನಿಲ್ಲಿಸಿ, ನ್ಯಾಯಕ್ಕೆ ಆಗ್ರಹಿಸಿದರು. ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಒತ್ತಾಯಿಸಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಟಯರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ವೀರಾಪುರ ಓಣಿಯ ನಿವಾಸಕ್ಕೆ ಮೃತದೇಹ ಒಯ್ಯಲಾಯಿತು. ಆದರೆ, ಜಿಲ್ಲಾಧಿಕಾರಿ ಸ್ಥಳಕ್ಕೆ ಬರುವವರೆಗೂ, ಅಂತ್ಯಕ್ರಿಯೆ ನಡೆಸುವುದಿಲ್ಲ ಎಂದು ಕುಟುಂಬ ವರ್ಗದವರು, ಸಾರ್ವಜನಿಕರು ಪಟ್ಟು ಹಿಡಿದರು. ಮಧ್ಯಾಹ್ನ 2.30ರಿಂದ ಸಂಜೆ 6ರವರೆಗೆ ಮನೆಯ ಎದುರಿನ ರಸ್ತೆಯಲ್ಲಿ ಮೃತದೇಹ ಇಟ್ಟು ಪ್ರತಿಭಟನೆ ನಡೆಸಿದರು. ಶಹರ ತಹಶೀಲ್ದಾರ್‌ ಕಲಗೌಡ ಪಾಟೀಲ, ಪೊಲೀಸ್‌ ಕಮಿಷನರ್‌ ರೇಣುಕಾ ಸುಕುಮಾರ ಪ್ರತಿಭಟನಕಾರರನ್ನು ಸಮಾಧಾನ ಪಡಿಸಿ, ಸರ್ಕಾರದ ಮಟ್ಟದಲ್ಲಿ ಪರಿಶೀಲಿಸಲು ಪತ್ರ ಬರೆಯುವುದಾಗಿ ಭರವಸೆ ನೀಡಿದರು. ನಂತರ ಪ್ರತಿಭಟನೆ ಹಿಂಪಡೆದು ಅಂತ್ಯಕ್ರಿಯೆ ನಡೆಸಲಾಯಿತು.

ಡಿಸಿಪಿಗಳಾದ ರಾಜೀವ್‌ ಎಂ. ಮತ್ತು ರವೀಶ್‌ ಸಿ.ಆರ್‌. ಇದ್ದರು. ಭದ್ರತೆಗೆ ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗಿತ್ತು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎನ್ನುವುದಕ್ಕೆ ಹುಬ್ಬಳ್ಳಿಯಲ್ಲಿ ನಡೆದ ಮತ್ತೊಂದು ಯುವತಿಯ ಕೊಲೆ ಸ್ಪಷ್ಟ ನಿದರ್ಶನ. ಪ್ರೇಮ ಪ್ರಕರಣಗಳಲ್ಲಿ ಸರ್ಕಾರ ಬಿಗಿ ಕ್ರಮ ಕೈಗೊಳ್ಳಬೇಕು
ಪ್ರಲ್ಹಾದ ಜೋಶಿ ಕೇಂದ್ರ ಸಚಿವ
ಒಂದು ವಾರದ ಹಿಂದೆಯೇ ಆರೋಪಿ ಗಿರೀಶ ಅಂಜಲಿಗೆ ಕೊಲೆ ಬೆದರಿಕೆ ಹಾಕಿದ್ದ ಎಂದು ಕುಟುಂಬದವರು ಠಾಣೆಗೆ ತಿಳಿಸಿದ್ದರು. ಆಗಲೇ ಕ್ರಮ ಕೈಗೊಂಡಿದ್ದರೆ ಅಂಜಲಿ ಕೊಲೆಯಾಗುತ್ತಿರಲಿಲ್ಲ
ಮಹೇಶ ಟೆಂಗಿನಕಾಯಿ ಶಾಸಕ
ಯುವತಿಯ ಕೊಲೆ ಮಾಡುವಂತಹ ಹೇಯ ಕೃತ್ಯ ಯಾರೇ ಮಾಡಿರಲಿ ಅವರನ್ನು ತಂದು ಗಲ್ಲಿಗೇರಿಸಿ. ಈ ರೀತಿ ಕೊಲೆ ಅತ್ಯಾಚಾರ ನಡೆಯುತ್ತಿದ್ದರೂ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ
ಬಸವರಾಜ ಬೊಮ್ಮಾಯಿ ಶಾಸಕ
ಅಂಬಿಗರ ಸಮಾಜದ ಯುವತಿ ಅಂಜಲಿ ಅಂಬಿಗೇರ ಅವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದವನಿಗೆ ಉಗ್ರ ಶಿಕ್ಷೆಯಾಗಬೇಕು. ಸರ್ಕಾರವು ಅಂಜಲಿ ಕುಟುಂಬಕ್ಕೆ ಪರಿಹಾರ ನೀಡಬೇಕು
ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಪೀಠಾಧಿಪತಿ ನಿಜಶರಣ ಅಂಬಿಗರ ಚೌಡಯ್ಯನ ಗುರುಪೀಠ

ಗೃಹ ಸಚಿವರನ್ನು ಬದಲಿಸಿ: ನಿರಂಜನಯ್ಯ

‘ಹುಬ್ಬಳ್ಳಿಯಲ್ಲಿ ಪದೇಪದೇ ಯುವತಿಯರ ಕೊಲೆ ಪ್ರಕರಣಗಳು ನಡೆಯುತ್ತಿದ್ದು ಆತಂಕದ ವಾತಾವರಣ ನಿರ್ಮಾಣವಾಗಿದೆ. ಸರ್ಕಾರ ಗೃಹ ಸಚಿವರನ್ನು ಹಾಗೂ ಹುಬ್ಬಳ್ಳಿ–ಧಾರವಾಡ ಮಹಾನಗರ ಪೊಲೀಸ್‌ ಕಮಿಷನರ್‌ ಅವರನ್ನು ತಕ್ಷಣ ಬದಲಾಯಿಸಬೇಕು’ ಎಂದು ನೇಹಾ ತಂದೆ ಪಾಲಿಕೆ ಸದಸ್ಯ ನಿರಂಜನಯ್ಯ ಹಿರೇಮಠ ಆಗ್ರಹಿಸಿದರು. ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ‘ಅಂಜಲಿ ಕೊಲೆಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣ. ಹು–ಧಾ ಮಹಾನಗರಕ್ಕೆ ಐಪಿಎಸ್‌ ಅಧಿಕಾರಿಯನ್ನು ನಿಯೋಜಿಸಬೇಕು. ಗೃಹ ಇಲಾಖೆಯ ನಿರ್ಲಕ್ಷ್ಯವೂ ಕಾಣುತ್ತಿದ್ದು ಸಮರ್ಥವಾಗಿ ನಿಭಾಯಿಸಲು ಆಗದಿದ್ದರೆ ಗೃಹ ಸಚಿವರನ್ನು ಬದಲಿಸಬೇಕು. ನೇಹಾ ಕೊಲೆಯಾದಾಗಲೇ ಆರೋಪಿ ಫಯಾಜ್‌ನನ್ನು ಎನ್​ಕೌಂಟರ್ ಮಾಡಿದ್ದರೆ ಮತ್ತೆ ಇಂತಹ ಪ್ರಕರಣಗಳು ಮರುಕಳಿಸುತ್ತಿರಲಿಲ್ಲ’ ಎಂದರು. ‘ಮಗಳು ನೇಹಾ ಕೊಲೆ ಹೇಗೆ ನಡೆದಿತ್ತೋ ಹಾಗೆಯೇ ಪ್ರಕರಣದ ತನಿಖೆಯನ್ನೂ ಸರ್ಕಾರ ಮುಚ್ಚಿ ಹಾಕಲು ಯತ್ನಿಸುತ್ತಿದೆ. ಅಂದು ಮನೆಗೆ ಬಂದು ಸಾಂತ್ವನ ಹೇಳಿ ಹೋದ ಮುಖ್ಯಮಂತ್ರಿ ಸಿದ್ದರಾಮಯ್ಯ ಈವರೆಗೂ ನನ್ನನ್ನು ಸಂಪರ್ಕಿಸಿಲ್ಲ. ಸೌಜನ್ಯಕ್ಕೂ ಗೃಹ ಸಚಿವರು ಭೇಟಿ ನೀಡಿಲ್ಲ ದೂರವಾಣಿ ಮೂಲಕವೂ ಸಂಪರ್ಕಿಸಿಲ್ಲ’ ಎಂದು ಆರೋಪಿಸಿದರು.

ಜಿಲ್ಲಾಧಿಕಾರಿಗೆ ಅಂಜಲಿ ಅಜ್ಜಿ ಮನವಿ ‘13 ವರ್ಷದ ಹಿಂದೆಯೇ ಅಂಜಲಿ ತಾಯಿ ಮೃತಪಟ್ಟಿದ್ದು ಅದಾದ ಕೆಲ ದಿನಗಳಲ್ಲಿಯೇ ಅವಳ ತಂದೆ ಮನೆ ಬಿಟ್ಟು ಹೋಗಿದ್ದಾರೆ. ಅಂಜಲಿಗೆ ಮೂವರು ತಂಗಿಯರಿದ್ದು ಕೇಟರಿಂಗ್ ಕೆಲಸಕ್ಕೆ ಹೋಗಿ ಮನೆ ಜವಾಬ್ದಾರಿ ನಿಭಾಯಿಸುತ್ತಿದ್ದಳು. ಇದೀಗ ಅವಳನ್ನೇ ಕಳೆದುಕೊಂಡ ನಾವು ಅನಾಥರಾಗಿದ್ದೇವೆ. ಕೊಲೆ ಪ್ರಕರಣದ ನಂತರ ಬಾಡಿಗೆ ಮನೆ ಬಿಡುವಂತೆ ಮಾಲೀಕ ಒತ್ತಾಯಿಸಿದ್ದಾರೆ. ಸರ್ಕಾರ ನಮಗೆ ಕುಟುಂಬ ನಿರ್ವಹಣೆಗೆ ಪರಿಹಾರ ನೀಡಬೇಕು. ಮೂವರು ಮೊಮ್ಮಕ್ಕಳಲ್ಲಿ ಒಬ್ಬರಿಗೆ ಸರ್ಕಾರಿ ಉದ್ಯೋಗ ಮತ್ತು ವಾಸಿಸಲು ಒಂದು ಮನೆ ಮಂಜೂರು ಮಾಡಿಕೊಡಬೇಕು‘ ಎಂದು ಅಂಜಲಿ ಅಜ್ಜಿ ಗಂಗಮ್ಮ ಅಂಬಿಗೇರ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರಿಗೆ ಮನವಿ ಪತ್ರ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT