ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ: ಅಂಧರಿಗೂ ಬಲ ತಂದ ಯೋಗ

Published 21 ಜೂನ್ 2024, 8:11 IST
Last Updated 21 ಜೂನ್ 2024, 8:11 IST
ಅಕ್ಷರ ಗಾತ್ರ

ಹುಬ್ಬಳ್ಳಿ: ದೈಹಿಕ, ಮಾನಸಿಕವಾಗಿ ದೃಢಗೊಳ್ಳಲು ಯೋಗ ಉಪಯುಕ್ತ. ಹೀಗಾಗಿ ಯೋಗ ಕಲಿಕೆಗೆ ಎಲ್ಲಾ ಕಡೆಯಲ್ಲೂ  ಬೇಡಿಕೆ. ದೃಷ್ಟಿದೋಷವುಳ್ಳವರಿಗೆ ಯೋಗದಿಂದ ಆಗುವ ಪ್ರಯೋಜನ ಇನ್ನೂ ಹೆಚ್ಚು ಎಂಬುದನ್ನು ಇಲ್ಲಿಯ ನವನಗರದ ಚಿಕೇನಕೊಪ್ಪ ಚನ್ನವೀರ ಶರಣರ ಅಂಧರ ಕಲ್ಯಾಣಾಶ್ರಮದಲ್ಲಿ ನೋಡಬಹುದು.

ಅಂಧರಿಗೆ ಯೋಗಾಸನ ಹೇಳಿಕೊಡುವುದು ಸುಲಭವಲ್ಲ. ನೋಡಿ ಕಲಿಯಲು ಅಂಧರಿಗೆ ಸಾಧ್ಯವಿಲ್ಲದ ಕಾರಣ ಪ್ರತಿಯೊಂದನ್ನು ಮಾತಿನಲ್ಲಿ ಹಾಗೂ ದೇಹವನ್ನು ಮುಟ್ಟಿ ಸ್ಪರ್ಶ ಜ್ಞಾನದಿಂದಲೇ ಮನವರಿಕೆ ಮಾಡಬೇಕು.ಇದಕ್ಕೆ ತಗುಲುವ ಸಮಯ ಸಹ ಹೆಚ್ಚು. ಚಿಕೇನಕೊಪ್ಪ ಚನ್ನವೀರ ಶರಣರ ಅಂಧರ ಕಲ್ಯಾಣಾಶ್ರಮದಲ್ಲಿಯ ವಿದ್ಯಾರ್ಥಿಗಳಿಗೆ ಕಳೆದ 4 ವರ್ಷಗಳಿಂದ ಯೋಗ ತರಬೇತಿ ನೀಡಲಾಗುತ್ತಿದೆ. ಹೆಗ್ಗೇರಿಯ ಆಯುರ್ವೇದ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯ ಸ್ವಸ್ಥ ವೃತ್ತ ಮತ್ತು ಯೋಗ ವಿಭಾಗದ ಯೋಗ ಶಿಕ್ಷಕ ಕುಮಾರ ಹಿರೇಮಠ ಅವರು ವಾರಕ್ಕೊಮ್ಮೆ ಈ ಆಶ್ರಮಕ್ಕೆ ತೆರಳಿ ಅಂಧ ವಿದ್ಯಾರ್ಥಿಗಳಿಗೆ ಉಚಿತವಾಗಿ ಯೋಗ ತರಬೇತಿ ನೀಡುತ್ತಿದ್ದಾರೆ.

‘ಓಂಕಾರ, ಪ್ರಾರ್ಥನೆ, ಪ್ರಾಣಾಯಾಮ, ವೃಕ್ಷಾಸನ, ಪಾದ ಹಸ್ತಾಸನ, ಸೂರ್ಯ ನಮಸ್ಕಾರ, ಅರ್ಧ ಚಕ್ರಾಸನ, ಭುಜಂಗಾಸನ, ಪದ್ಮಾಸನ, ಸೂರ್ಯ ನಮಸ್ಕಾರ, ಭ್ರಮರಿ ಪ್ರಾಣಾಯಾಮ ಹೇಳಿ ಕೊಡುತ್ತಿದ್ದೇನೆ. ನೆನಪಿನ ಶಕ್ತಿ, ಏಕಾಗ್ರತೆ ಹೆಚ್ಚಳಕ್ಕೆ ಯೋಗಾಸನ ಸಹಾಯಕ. ಸಾಮಾನ್ಯರು ಮಾಡುವ ಯೋಗವನ್ನು ತಾವೂ ಮಾಡಲು ಸಾಧ್ಯ ಎಂಬ ಸಂಗತಿಯು ದೃಷ್ಟಿ ವೈಕಲ್ಯವುಳ್ಳವರಲ್ಲಿ ಆತ್ಮವಿಶ್ವಾಸ ಹೆಚ್ಚಳಕ್ಕೆ ಕಾರಣವಾಗುತ್ತದೆ.  ಜ್ಯೋತಿ ತ್ರಾಟಕ ಹಾಗೂ ಜತ್ರ ತ್ರಾಟಕ ಎಂಬ ಆಸನಗಳು ಇವರಿಗೆ ಅತ್ಯುಪಯುಕ್ತ. ಅಂಧತ್ವ ಉಳ್ಳವರು ಸಂಗೀತದ ಪ್ರತಿಭೆ ಉಳ್ಳ ಕಾರಣ ಭ್ರಮರಿ ಪ್ರಾಣಾಯಾಮಕ್ಕೂ ಆದ್ಯತೆ ನೀಡಲಾಗುತ್ತದೆ’ ಎಂದು ಕುಮಾರ ಹಿರೇಮಠ ತಿಳಿಸಿದರು.

‘ವಾರಕ್ಕೊಮ್ಮೆ ಬೆಳಿಗ್ಗೆ 6:30ರಿಂದ 7:30ರವರೆಗೆ ಯೋಗಾಸನ ಹೇಳಿಕೊಡುತ್ತೇನೆ. ವಿದ್ಯಾರ್ಥಿಗಳಲ್ಲಿಯೇ ಮುಖ್ಯಸ್ಥರನ್ನು ನೇಮಕ ಮಾಡಲಾಗಿದ್ದು, ಉಳಿದ ದಿನಗಳಲ್ಲಿ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಯೋಗ ಮಾಡುತ್ತಾರೆ. ಅಂಧತ್ವ ಉಳ್ಳವರಿಗೆ ದೈಹಿಕ ಚಟುವಟಿಕೆಗಳು ಕಡಿಮೆ ಆಗುವ ಕಾರಣ ಎಸಿಡಿಟಿ, ಗ್ಯಾಸ್ಟ್ರಿಕ್‌, ಕತ್ತು ನೋವು, ಬೆನ್ನು ನೋವು ಹೆಚ್ಚಾಗಿರುತ್ತದೆ. ಯೋಗಾಸನ ಮಾಡಲಾರಂಭಿಸಿದ ನಂತರ ತಮ್ಮ ನೋವು, ಆರೋಗ್ಯ ಸಮಸ್ಯೆಗಳು ಬಹುತೇಕ ಪರಿಹಾರವಾಗಿವೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ’ ಎಂದು ಅವರು ವಿವರಿಸಿದರು.

ಹುಬ್ಬಳ್ಳಿ ನವನಗರದ ಚಿಕೇನಕೊಪ್ಪ ಚನ್ನವೀರ ಶರಣರ ಅಂಧರ ಕಲ್ಯಾಣಾಶ್ರಮದ ವಿದ್ಯಾರ್ಥಿಗಳಿಂದ ನಡೆದ ಯೋಗಾಸನ ಪ್ರದರ್ಶನ
ಹುಬ್ಬಳ್ಳಿ ನವನಗರದ ಚಿಕೇನಕೊಪ್ಪ ಚನ್ನವೀರ ಶರಣರ ಅಂಧರ ಕಲ್ಯಾಣಾಶ್ರಮದ ವಿದ್ಯಾರ್ಥಿಗಳಿಂದ ನಡೆದ ಯೋಗಾಸನ ಪ್ರದರ್ಶನ
ಈ ಆಶ್ರಮದ ಕೆಲವು ವಿದ್ಯಾರ್ಥಿಗಳು ವೃಶ್ಚಿಕ ಆಸನ ಶಲಭಾಸನ ಚಕ್ರಾಸನ ಧನುರಾಸನ ಅರ್ಧ ಮಚ್ಛೇಂದ್ರಾಸನ ಶೀರ್ಷಾಸನದಂಥ ಕ್ಲಿಷ್ಟ ಯೋಗಾಸನಗಳನ್ನೂ ಮಾಡುತ್ತಾರೆ
ಕುಮಾರ ಹಿರೇಮಠ ಯೋಗ ಶಿಕ್ಷಕ
ಅಂಧತ್ವ ಉಳ್ಳವರು ಯೋಗಾಸನಗಳನ್ನು ಕಲಿತು ಮಾಡುವುದು ಸವಾಲಿನ ಸಂಗತಿ. ಈ ಆಶ್ರಮದ ಮಕ್ಕಳಿಗೆ ಯೋಗ ತರಬೇತಿಯಿಂದ ಆರೋಗ್ಯ ಸುಧಾರಣೆ ಸಾಧ್ಯವಾಗಿದೆ. ಕ್ರಿಯಾಶೀಲತೆ ಹೆಚ್ಚಳವಾಗಿದೆ
ಶಂಕ್ರಯ್ಯ ಹಿರೇಮಠ ವ್ಯವಸ್ಥಾಪಕ ಚಿಕೇನಕೊಪ್ಪ ಚನ್ನವೀರ ಶರಣರ ಅಂಧರ ಕಲ್ಯಾಣಾಶ್ರಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT