ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಲ್ಹಾದ ಜೋಶಿ ಪರ ಜೆಡಿಎಸ್‌ ಪ್ರಚಾರ: ಬಿ.ಬಿ. ಗಂಗಾಧರಮಠ

Published 16 ಮಾರ್ಚ್ 2024, 16:00 IST
Last Updated 16 ಮಾರ್ಚ್ 2024, 16:00 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಪಕ್ಷದ ವರಿಷ್ಠರ ನಿರ್ಧಾರದಂತೆ ಜೆಡಿಎಸ್‌ ಪಕ್ಷವು ಎನ್‌ಡಿಎ ಮೈತ್ರಿಕೂಟದ ಭಾಗವಾಗಿದ್ದು, ಇದರನ್ವಯ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಪರ ಪ್ರಚಾರ ನಡೆಸಲು ತೀರ್ಮಾನಿಸಲಾಗಿದೆ. ಧಾರವಾಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಪರ ಪ್ರಚಾರ ನಡೆಸಲಾಗುವುದು ಎಂದು ಜೆಡಿಎಸ್‌ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಬಿ. ಗಂಗಾಧರಮಠ ಹೇಳಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಕ್ಷದ ವರಿಷ್ಠರಾದ ಎಚ್‌.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲ ಮನ್ನಾ ಮಾಡಿದ್ದರು. ಇದರ ಲಾಭವನ್ನು ಸಾಕಷ್ಟು ಜನ ರೈತರು ಪಡೆದುಕೊಂಡಿದ್ದರು. ಈ ವಿಷಯವನ್ನು ಮನೆಮನೆಗೆ ತೆರಳಿ ಪ್ರಚಾರ ಮಾಡಲಾಗುವುದು. ಜೋಶಿ ಅವರಿಗೆ ಮತ ಚಲಾಯಿಸುವ ಮೂಲಕ ಆ ಋಣವನ್ನು ತೀರಿಸಬೇಕೆಂದು ಕೇಳಿಕೊಳ್ಳಲಾಗುವುದು’ ಎಂದರು.

ಜೆಡಿಎಸ್‌ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಗುರುರಾಜ ಹುಣಸಿಮರದ ಮಾತನಾಡಿ, ‘ವಿಜಯಪುರ, ಬೀದರ್‌, ರಾಯಚೂರು, ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಪಕ್ಷದ ಅಭ್ಯರ್ಥಿಗಳಿಗೆ ಅವಕಾಶ ನೀಡುವಂತೆ ಕೇಳಿದ್ದೇವು. ಆದರೆ ಬಿಜೆಪಿ ಜೊತೆ ಮೈತ್ರಿಯಾದ ಕಾರಣ, ಪಕ್ಷದ ಅಭ್ಯರ್ಥಿಗೆ  ಅವಕಾಶ ಸಿಗಲಿಲ್ಲ. ಎಲ್ಲ ಕ್ಷೇತ್ರಗಳಿಗೆ ಸ್ಪರ್ಧಿಸುವುದಕ್ಕಿಂತ ಪಕ್ಷ ಬಲಿಷ್ಠವಾಗಿರುವ ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸಲು ವರಿಷ್ಠರು ತೀರ್ಮಾನಿಸಿದರು. ಅದರ ಪರಿಣಾಮವಾಗಿ ನಮಗೆ 3 ಕ್ಷೇತ್ರಗಳಲ್ಲಿ ಅವಕಾಶ ಸಿಕ್ಕಿದೆ. ಇನ್ನುಳಿದ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿ ಪರ ಕೆಲಸ ಮಾಡಲು ವರಿಷ್ಠರು ಸೂಚಿಸಿದ್ದಾರೆ’ ಎಂದು ಹೇಳಿದರು.

ಕಾಂಗ್ರೆಸ್‌ ದುರಾಡಳಿತ ಕೊನೆಗಾಣಿಸಲು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲಾಗಿದೆ. ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಿಂದಾಗಿ ಜನರು ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ. ಇದರ ವಿರುದ್ಧ ಪ್ರಚಾರ ಮಾಡಲಾಗುವುದು ಎಂದು ತಿಳಿಸಿದರು.

ಬಿಜೆಪಿ ಜೊತೆಗಿನ ಮೈತ್ರಿಯನ್ನು ಕೇವಲ ಲೋಕಸಭೆ ಚುನಾವಣೆಗೆ ಸೀಮಿತಗೊಳಿಸದೆ ಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಚುನಾವಣೆಗೂ ಮುಂದುವರಿಸಬೇಕೆಂದು ವರಿಷ್ಠರನ್ನು ಕೇಳಿದ್ದೇವೆ ಎಂದರು.

ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಮಾತನಾಡಿ, ‘ಈ ಭಾಗದ ಪ್ರಮುಖ ಬೇಡಿಕೆಯಾಗಿರುವ ಕಳಸಾ– ಬಂಡೂರಿ ನಾಲಾ ಯೋಜನೆ ಅನುಷ್ಠಾನಗೊಳಿಸಲು ಆದ್ಯತೆ ನೀಡಬೇಕೆಂದು ಜೋಶಿ ಅವರನ್ನು  ಕೋರಲಾಗುವುದು’ ಎಂದರು. 

ಮಾಜಿ ಸಚಿವ ಕೆ.ಎನ್‌. ಗಡ್ಡಿ, ವಿನಾಯಕ ಗಾಡಿವಡ್ಡರ, ಬಾಷಾಸಾಬ ಮುದಗಲ್ಲ, ನವೀನ ಮಡಿವಾಳರ, ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT