ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಗೂಂಡಾ ರಾಜ್ಯವಾಗುತ್ತಿದೆ: ಮೃತ ಅಂಜಲಿ ಮನೆಗೆ ಭೇಟಿ ನೀಡಿದ ಶೆಟ್ಟರ್

Published 17 ಮೇ 2024, 8:21 IST
Last Updated 17 ಮೇ 2024, 8:21 IST
ಅಕ್ಷರ ಗಾತ್ರ

ಹುಬ್ಬಳ್ಳಿ: 'ಮೊದಲಿದ್ದ ಉತ್ತರ ಪ್ರದೇಶ ಮಾದರಿಯಲ್ಲಿ ಕರ್ನಾಟಕ ಗೂಂಡಾ ರಾಜ್ಯವಾಗುತ್ತಿದ್ದು, ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ' ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಆರೋಪಿಸಿದರು.

ನಗರದ ವೀರಾಪುರ ಓಣಿಯಲ್ಲಿನ ಮೃತ ಯುವತಿ ಅಂಜಲಿ ಅಂಬಿಗೇರ ನಿವಾಸಕ್ಕೆ ಶುಕ್ರವಾರ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು‌.

'ಉತ್ತರ ಪ್ರದೇಶ ಮೊದಲು ಗೂಂಡಾ ರಾಜ್ಯವಾಗಿತ್ತು. ಯೋಗಿ ಆದಿತ್ಯನಾಥ ಅವರು ಮುಖ್ಯಮಂತ್ರಿಯಾದ ಬಳಿಕ ಅಲ್ಲಿ ಶಾಂತಿ ನೆಲೆಸಿದೆ. ಅವರು ಯಾವುದೇ ಕಾನೂನು ಬದಲಾವಣೆ ಮಾಡದೆಯೇ, ಇದ್ದ ಕಾನೂನಿನಲ್ಲಿಯೇ ಎಲ್ಲವನ್ನೂ ನಿಭಾಯಿಸಿ ಶಾಂತಿ ನೆಲೆಸುವಂತೆ ಮಾಡಿದ್ದಾರೆ. ಅಂತಹ ದಿಟ್ಟ ನಿರ್ಧಾರವನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾಕೆ ತೆಗೆದುಕೊಳ್ಳುತ್ತಿಲ್ಲ' ಎಂದು ಪ್ರಶ್ನಿಸಿದರು.

'ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಾಗ ಗೃಹ ಸಚಿವರು ಸಭೆ ನಡೆಸಿ ಅಧಿಕಾರಿಗಳ ಕಾರ್ಯವೈಖರಿಯ ಕುರಿತು ಪರಿಶೀಲನೆ ಮಾಡಬೇಕಿತ್ತು. ಆದರೆ, ಗೃಹ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸದೆ, ನಿರ್ಲಕ್ಷ್ಯ ವಹಿಸಿತು. ಕೊಲೆ, ಸುಲಿಗೆ, ದರೋಡೆ ವಿಪರೀತವಾಗುತ್ತಿದೆ. ನಿಯಂತ್ರಿಸಲು ಸರ್ಕಾರದಿಂದ ಆಗುತ್ತಿಲ್ಲ‌. ನೇಹಾ ಕೊಲೆಯಾದಾಗ ಗೃಹಸಚಿವರು, ಮುಖ್ಯಮಂತ್ರಿ ಬೇಜಾವ್ದಾರಿಯಾಗಿ ಮಾತನಾಡಿದ್ದರಿಂದ, ಈಗ ಅಂಜಲಿ ಕೊಲೆಯಾಗಿದೆ' ಎಂದು ಹೇಳಿದರು.

'ಆರೋಪಿ ಗಿರೀಶ, ಅಂಜಲಿಗೆ ಕೊಲೆ ಬೆದರಿಕೆ ಹಾಕಿರುವ ಕುರಿತು ಕುಟುಂಬದವರು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದರು. ಆಗ ಪೊಲೀಸರು ಕುಚೇಷ್ಠೆ ಮಾಡಿ ಕಳುಹಿಸಿದ್ದರು. ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಹೋಗಿದೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT