ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗೇರಿ: ಖಾದಿ ನೇಯ್ದ ಹಾದಿ...

Published 31 ಆಗಸ್ಟ್ 2023, 5:58 IST
Last Updated 31 ಆಗಸ್ಟ್ 2023, 5:58 IST
ಅಕ್ಷರ ಗಾತ್ರ

ಮಹಮ್ಮದ್ ಶರೀಫ್‌

ಹುಬ್ಬಳ್ಳಿ: ಪ್ರತಿವರ್ಷ ಜನವರಿ 26ರಂದು ದೆಹಲಿಯ ಕೆಂಪುಕೋಟೆಯ ಮೇಲೆ ತ್ರಿವರ್ಣ ಧ್ವಜ ಅರಳುತ್ತದೆ. ದೇಶದ ಮೂಲೆ ಮೂಲೆಯಲ್ಲಿ ಕುಳಿತು ಟಿವಿ ಪರದೆ ಮೇಲೆ ಜನರು ಆ ದೃಶ್ಯ ಕಣ್ತುಂಬಿಕೊಳ್ಳುತ್ತಾರೆ. ಅಂದು ಹುಬ್ಬಳ್ಳಿಯ ಬೆಂಗೇರಿ ಖಾದಿ ಗ್ರಾಮೋದ್ಯೋಗ ಕೇಂದ್ರದ ಮಹಿಳೆಯರ ಕೈಗಳು ಚಪ್ಪಾಳೆ ತಟ್ಟುತ್ತವೆ. ಮನಸ್ಸು ಹೆಮ್ಮೆಯಿಂದ ಬೀಗುತ್ತದೆ.

ಹಲವು ರಾಜ್ಯಗಳಿಗೆ ಖಾದಿ ರಾಷ್ಟ್ರಧ್ವಜವನ್ನು ತಯಾರಿಸಿ ತಲುಪಿಸುವ ದೇಶದ ಏಕೈಕ ಕೇಂದ್ರ ಹುಬ್ಬಳ್ಳಿಯ ಬೆಂಗೇರಿಯಲ್ಲಿ ಇರುವ ಖಾದಿ ಗ್ರಾಮೋದ್ಯೋಗ ಕೇಂದ್ರ. 1957ರಲ್ಲಿ ಸ್ಥಾಪನೆಯಾದ ‘ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ’ (ಕೆಕೆಜಿಎಸ್‌ಎಸ್), ರಾಷ್ಟ್ರಧ್ವಜ ತಯಾರಿಕೆಗೆ ಭಾರತೀಯ ಮಾನಕ ಸಂಸ್ಥೆಯಿಂದ (ಬಿಐಎಸ್‌) ಮಾನ್ಯತೆ ಪಡೆದಿರುವ ಏಕೈಕೆ ಸಂಘವಾಗಿದೆ.

ದೇಶದ ಅತ್ಯುನ್ನತ ಹುದ್ದೆಯಲ್ಲಿರುವವರ, ರಾಜಕಾರಣಿಗಳ ಕಾರುಗಳಲ್ಲಿ ರಾರಾಜಿಸುವ ರಾಷ್ಟ್ರಧ್ವಜ ತಯಾರಾಗುವುದೂ ಇದೇ ಕೇಂದ್ರದಲ್ಲಿ. ರಾಹುಲ್‌ ಗಾಂಧಿ ನಾಯಕತ್ವದಲ್ಲಿ ಈಚೆಗೆ ದೇಶದಾದ್ಯಂತ ನಡೆದ ‘ಭಾರತ ಜೋಡೊ ಯಾತ್ರೆ’ ಯಲ್ಲೂ ಇಲ್ಲಿ ತಯಾರಾದ ಧ್ವಜವೇ ರಾರಾಜಿಸಿತ್ತು. ಅಲ್ಲದೆ ಕೇಂದ್ರಕ್ಕೆ ರಾಹುಲ್‌ ಗಾಂಧಿ ಭೇಟಿಯೂ ನೀಡಿದ್ದರು.

ಗಾಂಧಿ ಪ್ರಭಾವ, ಮಾಗಡಿ ಕನಸು

‘ಧ್ವಜ ಎನ್ನುವುದು ಎಲ್ಲ ದೇಶಗಳಿಗೂ ಅಗತ್ಯ’ ಎಂಬುದು ಗಾಂಧಿ ನುಡಿ. ಅಷ್ಟಕ್ಕೂ ಖಾದಿ ಚಳುವಳಿಯನ್ನು ಹುಟ್ಟುಹಾಕಿ ಸ್ವದೇಶಿ ಪ್ರಜ್ಞೆಯನ್ನು ಗಟ್ಟಿಗೊಳಿಸಿದ್ದು ಮಹಾತ್ಮ ಗಾಂಧಿಯೇ. ಇದೇ ಹಾದಿಯಲ್ಲಿ ದೇಶದ ಹಲವು ಹಳ್ಳಿಗಳ ಜನರು ಖಾದಿ ಬಟ್ಟೆ ತಯಾರಿಸಲು ಆರಂಭಿಸಿದ್ದರು. ಗಾಂಧಿ ಪ್ರಭಾವ ಮುಂದುವರಿದಿದ್ದು, 1957ರಲ್ಲಿ ಹುಬ್ಬಳ್ಳಿಯ ಸ್ವಾತಂತ್ರ್ಯ ಹೋರಾಟಗಾರ ವೆಂಕಟೇಶ ಮಾಗಡಿ ಖಾದಿ ಬೆಂಬಲಿಸಿ ಖಾದಿ ಗ್ರಾಮೋದ್ಯೋಗ ಸಂಘದ ಸ್ಥಾಪನೆಗೆ ಕಾರಣರಾದರು. ಸಂಘದ ಸಂಸ್ಥಾಪಕ ಅಧ್ಯಕ್ಷರೂ ಆಗಿದ್ದರು. ಅದರ ಫಲಿತಾಂಶವೆಂಬಂತೆ ಪ್ರಸ್ತುತ ರಾಷ್ಟ್ರಧ್ವಜ ತಯಾರಿಕೆಯ ಏಕೈಕ ಕೇಂದ್ರವಾಗಿ ಬೆಂಗೇರಿ ಗಮನ ಸೆಳೆದಿದೆ.

ಇದೇ ಅವಧಿಯಲ್ಲಿ ಉತ್ತರಪ್ರದೇಶದ ರಾಯ್‌ಬರೇಲಿಯಲ್ಲಿ ಆರಂಭವಾಗಿದ್ದ ಖಾದಿ ಸಂಸ್ಥೆ ಅಸ್ತಿತ್ವ ಕಳೆದುಕೊಂಡಿದೆ. ಆದರೆ ಹುಬ್ಬಳ್ಳಿಯ ಸಂಘ ಮಾತ್ರ ವರ್ಷದಿಂದ ವರ್ಷಕ್ಕೆ ಪ್ರಗತಿ ಸಾಧಿಸುತ್ತಿದೆ. ಒಟ್ಟು 27 ಕೇಂದ್ರಗಳಲ್ಲಿ ಸ್ವಂತ ಕಟ್ಟಡವನ್ನು ಸಂಘ ಹೊಂದಿರುವ ಖಾದಿ ಗ್ರಾಮೋದ್ಯೊಗ ಸಂಯುಕ್ತ ಸಂಘದಡಿ ಒಟ್ಟು 1200 ಮಂದಿ ಕಾರ್ಯನಿರ್ವಹಿಸುತ್ತಾರೆ.

ಈ ಕೇಂದ್ರದ ವಿಶೇಷ ಎಂದರೆ ಇಲ್ಲಿನ ಉದ್ಯೊಗಿಗಳು ಶೇಕಡ 95ರಷ್ಟು ಮಹಿಳೆಯರೇ ಆಗಿದ್ದಾರೆ. ಖಾದಿಗೆ ಪ್ರೋತ್ಸಾಹದ ಜೊತೆಗೆ ಮಹಿಳಾ ಸಬಲೀಕರಣಕ್ಕೂ ಈ ಕೇಂದ್ರ ಒತ್ತು ಕೊಟ್ಡಿದೆ. ಬಟ್ಟೆಯನ್ನು ಗಾತ್ರಕ್ಕೆ ತಕ್ಕ ಹಾಗೆ ಕತ್ತರಿಸುವುದು, ಹೊಲಿಯುವುದು, ವಿನ್ಯಾಸಗಳ ಮುದ್ರಣ ಹೀಗೆ ಪ್ರತಿ ಕೆಲಸವೂ ಇಲ್ಲಿ ಮಹಿಳೆಯರಿಂದಲೇ ನಡೆಯುತ್ತದೆ. ಇಲ್ಲಿ ತಯಾರಾಗುವ ಧ್ವಜಗಳಿಗೆ ಅಧಿಕೃತ ಐಎಸ್‌ಐ ಗುರುತು ಕೂಡ ಇದೆ.

ಕೇಂದ್ರದಲ್ಲಿ 25-30 ಜನರು ಹೊಲಿಗೆ, ಟ್ಯಾಗಲ್ಸ್ ಹಾಕುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. 100 ಜನ ಆಡಳಿತ ಸಿಬ್ಬಂದಿ ಇದ್ದಾರೆ. ಖಾದಿ ಬಟ್ಟೆ, ಧ್ವಜ ಮಾತ್ರವಲ್ಲದೆ ಖಾದಿ ಪಾಲಿಸ್ಟರ್, ಮಸ್ಲಿಂವ್‌ ಖಾದಿ, ನೂಲು, ಜಮಖಾನ, ಬೆಡ್‌ಶೀಟ್‌ನಂತಹ ಅನೇಕ ವಸ್ತುಗಳ ನೇಯ್ಗೆ ಇಲ್ಲಿಯೇ ಆಗುತ್ತಿದೆ.

ಗ್ರಾಮೋದ್ಯೋಗ ಸಂಘ ಮೊದಲು ಆರಂಭವಾಗಿದ್ದು ಪಕ್ಕದ ಬಾಗಲಕೋಟೆ ಜಿಲ್ಲೆಯಲ್ಲಿ. ಆಗ 27 ಗ್ರಾಮಗಳ 2,500 ಜನರಿಗೆ ತರಬೇತಿ ನೀಡಿ ಉದ್ಯೋಗಾವಕಾಶ ಕಲ್ಪಿಸಿತ್ತು. ಈಗಲೂ ಧ್ವಜಕ್ಕೆ ಬೇಕಾದ ಖಾದಿ ಬಟ್ಟೆ ಬಾಗಲಕೋಟೆಯಿಂದಲೇ ಇಲ್ಲಿನ ಕೇಂದ್ರಕ್ಕೆ ತಲುಪುತ್ತದೆ.

ಬಿಐಎಸ್‌ ಅನುಮತಿ

ಸ್ವಾತಂತ್ರ್ಯದ ನಂತರ ದೇಶದ ಎಲ್ಲ ರಾಜ್ಯಗಳ ಧ್ವಜಗಳಿಗೆ ಧಾರವಾಡ ತಾಲ್ಲೂಕಿನ ಗರಗ ಖಾದಿ ಕೇಂದ್ರದಿಂದ ಬಟ್ಟೆ ಪೂರೈಕೆ ಆಗುತ್ತಿತ್ತು. ಮುಂಬೈಯ ಖಾಸಗಿ ಸಂಸ್ಥೆಯೊಂದು ಧ್ವಜಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿತ್ತು. ಆದರೆ, 2004ರಲ್ಲಿ ಬಿ.ಎಸ್. ಪಾಟೀಲ ಅವರು ಹುಬ್ಬಳ್ಳಿಯ ಬೆಂಗೇರಿ ಖಾದಿ ಸಂಘದ ಅಧ್ಯಕ್ಷರಾದ ನಂತರ ಇಲ್ಲಿ ರಾಷ್ಟ್ರಧ್ವಜ ನಿರ್ಮಾಣದ ಪರಿಕಲ್ಪನೆ ಮೂಡಿತು.

2006ರ ಫೆಬ್ರುವರಿ 18ರಂದು ಬಿಐಎಸ್‌ನಿಂದ ಅನುಮತಿ ಸಿಕ್ಕಿತು. ಅಂದಿನಿಂದ ಒಂದೇ ಕೇಂದ್ರದಲ್ಲಿ ಬಟ್ಟೆ, ಬ್ಲೀಚಿಂಗ್ ಆಗಿ ಧ್ವಜ ನಿರ್ಮಾಣವಾಗುವ ಏಕೈಕ ಸಂಸ್ಥೆ ಎಂಬ ಕೀರ್ತಿಯ ಗರಿ ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಘ ಮುಡಿಗೇರಿಸಿಕೊಂಡಿತು.

ಪತ್ರಕರ್ತ, ಸಾಹಿತಿ ದಿ. ಡಾ. ಪಾಟೀಲ ಪುಟ್ಟಪ್ಪ, ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಎಚ್.ಎಸ್. ದೊರೆಸ್ವಾಮಿ, ಎಚ್. ಹನುಮಂತಪ್ಪ, ಡಾ.ಎಚ್. ಶ್ರೀನಿವಾಸಯ್ಯ ಹಾಗೂ ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಘದ ಅಧ್ಯಕ್ಷ ಕೆ.ವಿ. ಪತ್ತಾರ ಅವರ ಶ್ರಮ ಖಾದಿ ಗೆಲುವಿನ ಹಾದಿಯ ಹಿಂದಿದೆ ಎಂಬುದು ಸದಾಕಾಲ ಸ್ಮರಣೀಯ.

ಮರೆಯಾಗುತ್ತಿರುವ ಖಾದಿ ಉದ್ಯಮದ ನಡುವೆ ನಾಡಿನಲ್ಲಿ ಖಾದಿ ಬೇರು ಹಿಡಿದುಕೊಂಡು ಗಾಂಧಿ ಹಾದಿಯಲ್ಲಿ ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಕೇಂದ್ರ ಸಾಗುತ್ತಿದ್ದು, ಹುಬ್ಬಳ್ಳಿಯ ಗರಿಮೆಯ ಪತಾಕೆ ಎಲ್ಲೆಡೆ ರಾರಾಜಿಸುವಂತೆ ಮಾಡಿದೆ.

ಕಾಡಿದ ಪಾಲಿಸ್ಟರ್ ಧ್ವಜ

ಕಳೆದ ವರ್ಷ ಸ್ವಾತಂತ್ರ್ಯದ ಅಮೃತಮಹೋತ್ಸವದ ಸಂದರ್ಭದಲ್ಲಿ ಎರಡು ಸನ್ನಿವೇಶಗಳಿಗೆ ಬೆಂಗೇರಿ ಖಾದಿ ಗ್ರಾಮೋದ್ಯೋಗ ಕೇಂದ್ರ ಸಾಕ್ಷಿಯಾಯಿತು. ಕೇಂದ್ರ ಸರ್ಕಾರ ‘ಧ್ವಜ ಸಂಹಿತೆ-2002’ಕ್ಕೆ ತಿದ್ದುಪಡಿ ತಂದು ಪಾಲಿಸ್ಟರ್‌ ಧ್ವಜಗಳ ತಯಾರಿಕೆಗೆ ಅನುಮತಿ ನೀಡಿತ್ತು. ಇದು ಖಾದಿಬಟ್ಟೆಯ ಧ್ವಜಗಳ ಮಾರಾಟದ ಮೇಲೆ ಪರಿಣಾಮ ಬೀರಿತ್ತು. ಈ ನಡುವೆಯೇ ಮನೆ ಮನೆಯಲ್ಲಿ ತ್ರಿವರ್ಣ ಧ್ವಜ (ಹರ್‌ ಘರ್‌ ತಿರಂಗಾ) ಅಭಿಯಾನವನ್ನು ಕೇಂದ್ರ ಸರ್ಕಾರ ಆರಂಭಿಸಿದ್ದು ಕಳೆದ ವರ್ಷ ಅಂದಾಜು ₹2.50 ಕೋಟಿ ಮೊತ್ತದ ಧ್ವಜಗಳ ದಾಖಲೆ ಮಾರಾಟವೂ ಆಗಿತ್ತು. ಈ ಬಾರಿ ₹1.10 ಕೋಟಿ ವಹಿವಾಟು ಆಗಿದೆ.

ಹುಬ್ಬಳ್ಳಿಯ ಖಾದಿ ಗ್ರಾಮೋದ್ಯೋಗ ಕೇಂದ್ರಕ್ಕೆ ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್‌ ಗಾಂಧಿ ಭೇಟಿ ಕೊಟ್ಟಿದ್ದ ಸಂದರ್ಭ (ಪ್ರಜಾವಾಣಿ ಸಂಗ್ರಹ ಚಿತ್ರ)
ಹುಬ್ಬಳ್ಳಿಯ ಖಾದಿ ಗ್ರಾಮೋದ್ಯೋಗ ಕೇಂದ್ರಕ್ಕೆ ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್‌ ಗಾಂಧಿ ಭೇಟಿ ಕೊಟ್ಟಿದ್ದ ಸಂದರ್ಭ (ಪ್ರಜಾವಾಣಿ ಸಂಗ್ರಹ ಚಿತ್ರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT