ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೇಂದ್ರ, ರಾಜ್ಯದಲ್ಲಿರುವುದು ಪಿಕ್ ಪಾಕೆಟ್ ಸರ್ಕಾರ: ಮೊಹಮ್ಮದ್ ನಲಪಾಡ್

Last Updated 10 ಏಪ್ರಿಲ್ 2022, 10:24 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೇಂದ್ರ ಮತ್ತು ರಾಜ್ಯದಲ್ಲಿರುವುದು ಪಿಕ್ ಪಾಕೆಟ್ ಸರ್ಕಾರ.‌ ಬೆಲೆ ಏರಿಕೆ ಹೆಸರಿನಲ್ಲಿ ಜನ ಸಾಮಾನ್ಯರ ಜೇಬಿನಿಂದ‌ ಪಿಕ್ ಪಾಕೆಟ್ ಮಾಡುತ್ತಿವೆ ಎಂದು ರಾಜ್ಯ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಆಕ್ರೋಶ ವ್ಯಕ್ತಪಡಿಸಿದರು.

ಬೆಲೆ ಏರಿಕೆ ವಿರುದ್ಧ ನಗರದಲ್ಲಿ ಭಾನುವಾರ ನಡೆದ ಪ್ರತಿಭಟನಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಮೋದಿ ಸರ್ಕಾರ ಬರೀ ಸುಳ್ಳು ಹೇಳುತ್ತಿದೆ. ಇಂತಹ ಸುಳ್ಳು ಸರ್ಕಾರವನ್ನು ಸೋಲಿಸಲು‌ ಜನರು ಕಾಂಗ್ರೆಸ್ ಜೊತೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಇತ್ತೀಚೆಗೆ ನಡೆದ ಪಂಚ ರಾಜ್ಯ ಚುನಾವಣೆ ಸಂದರ್ಭದಲ್ಲಿ ಕೇಂದ್ರ ಸರ್ಕಾರ ದೇಶದಲ್ಲಿ ತೈಲ ಬೆಲೆ ಮೇಲೆ ಲಾಕ್ ಡೌನ್ ಹೇರಿತ್ತು. ಚುನಾವಣೆ ಮುಗಿಯುತ್ತಿದ್ದಂತೆಯೇ ಪ್ರತಿ ದಿನ ಬೆಲೆ ಏರಿಕೆ ಮಾಡಲಾಗುತ್ತಿದೆ. ಇಂತಹ ಲೂಟಿಕೋರ ಮತ್ತು ಪಿಕ್ ಪಾಕೆಟ್ ಸರ್ಕಾರಕ್ಕೆ ಜನ ತಕ್ಕ ಪಾಠ ಕಲಿಸಬೇಕಾಗಿದೆ ಎಂದರು.

ರಾಜ್ಯದಲ್ಲಿ ಶುರುವಾಗಿರುವ ಹಲಾಲ್, ಹಿಜಾಬ್, ಆಜಾನ್ ನಿನ್ನೆ ಮೊನ್ನೆಯದಲ್ಲ. ಬಿಜೆಪಿ ಸಮಾಜವನ್ನು ಒಡೆಯಲು ಯತ್ನಿಸುತ್ತಿದೆ. ಆ ಪಕ್ಷ ಯಾಕೆ ಕೋಮುಭಾವನೆ ಮೂಡಿಸುತ್ತಿದೆ ಎನ್ನುವುದರ ಬಗ್ಗೆ ಜನ ಆಲೋಚಿಸಬೇಕಾಗಿದೆ. ನಾವೆಲ್ಲರೂ ಒಂದೇ. ಆದರೆ, ಕೋಮುವಾದದ ರಾಜಕೀಯ ಮಾಡುವ ಬಿಜೆಪಿಗೆ ಧಾರ್ಮಿಕ ಸೌಹಾರ್ದ ಬೇಕಿಲ್ಲ. ಪ್ರಧಾನಿ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ಬೆಲೆ ಏರಿಕೆ ಬಗ್ಗೆ ಒಮ್ಮೆಯಾದರೂ ಮಾತನಾಡಿದ್ದಾರಾ? ಎಂದು ಪ್ರಶ್ನಿಸಿದರು.

ಇಂತಹದ್ದೇ ಧರ್ಮ ಬೇಕೆಂದು ಯಾರು ಅರ್ಜಿ ಹಾಕಿಕೊಂಡು ಹುಟ್ಟಲ್ಲ. ಆದರೆ, ನಿನ್ನೆ ಧಾರವಾಡದ ನುಗ್ಗಿಕೇರಿಯ ಹನುಮಂತ ದೇವಸ್ಥಾನದಲ್ಲಿ ಮುಸ್ಲಿಂ ಎಂಬ ಕಾರಣಕ್ಕೆ ವ್ಯಾಪಾರಿಯೊಬ್ಬರ ಅಂಗಡಿಯಲ್ಲಿ ದಾಂಧಲೆ ನಡೆಸಿ, ಹಣ್ಣುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದು ಖಂಡನೀಯ. ಆತನನ್ನು ಒಬ್ಬ ಮುಸ್ಲಿಂನಾಗಿ ನೋಡಬೇಡಿ. ಕನ್ನಡಿಗ, ಭಾರತೀಯ ಹಾಗೂ ನಮ್ಮಲ್ಲಿ ಅವನೂ ಒಬ್ಬ ಎಂದು ನೋಡಬೇಕು. ಆದರೆ, ಬಿಜೆಪಿ ತಮ್ಮ ವೈಫಲ್ಯಗಳನ್ನು ಮರೆಮಾಚಲು ಧರ್ಮಾಧಾರಿತ ರಾಜಕೀಯ ಮಾಡುತ್ತಿದೆ ಎಂದು ಹರಿಹಾಯ್ದರು.

ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ ಮಾತನಾಡಿ, ದೇಶದಲ್ಲಿ ಬಿಜೆಪಿ ನಾಟಕ ಮಾಡಿಕೊಂಡು ಓಡಾಡುತ್ತಿದೆ. ಬಿಜೆಪಿಯವರಿಗೆ ನಿಜವಾಗಿಯೂ ದೇಶದ ಬಗ್ಗೆ ಕಾಳಜಿ ಇದ್ದರೆ, ಕೋಮು ಗಲಭೆ ಸೃಷ್ಟಿಸುವುದನ್ನು ಬಿಡಬೇಕು. ಬೆಲೆ ಏರಿಕೆ ಬಗ್ಗೆ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಬಿಜೆಪಿ ರಾಜ್ಯದಲ್ಲಿ ಅಶಾಂತಿ ಮೂಡಿಸುವ ಕೆಲಸ‌ ಮಾಡುತ್ತಿದೆ ಎಂದು ಟೀಕಿಸಿದರು.

ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಚನ್ನಮ್ಮ ವೃತ್ತ ಮಾರ್ಗವಾಗಿ ಮಿನಿ ವಿಧಾನಸೌಧದವರೆಗೆ ಪ್ರತಿಭಟನಾ ರ‍್ಯಾಲಿ ನಡೆಯಿತು. ಮಾರ್ಗದುದ್ದಕ್ಕೂ ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯ ಸರ್ಕಾರ ಮತ್ತು ಬಿಜೆಪಿ ವಿರುದ್ಧ ಘೋಷಣೆ ಕೂಗಿದರು.

ಪ್ರತಿಭಟನೆಯಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಇಮ್ರಾನ್ ಎಲಿಗಾರ, ಧಾರವಾಡ ಗ್ರಾಮೀಣ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ವಿನೋದ ಅಸೂಟಿ, ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸ್ವಾತಿ ಮಾಳಗಿ, ಮಹಾನಗರ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ ಹಳ್ಳೂರ, ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಅನಿಲಕುಮಾರ ಪಾಟೀಲ್, ಮುಖಂಡರಾದ ಎನ್.ಎಚ್. ಕೋನರಡ್ಡಿ, ರಜತ್ ಉಳ್ಳಾಗಡ್ಡಿಮಠ, ಆರೀಫ್ ಭದ್ರಾಪುರ, ಆಕಾಶ ಕೋನರೆಡ್ಡಿ, ಅಬ್ದುಲ್ ದೇಸಾಯಿ, ಚೇತನ ಬಿಜವಾಡ, ಬಾಬು ಗವಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT