ಶನಿವಾರ, ನವೆಂಬರ್ 28, 2020
25 °C
ಫ್ರಾನ್ಸ್ ಅಧ್ಯಕ್ಷರ ಹೇಳಿಕೆಯ ಕರಪತ್ರ ಹಂಚಿಕೆ ಆರೋಪ

ಮುಸ್ಲಿಂ ಯುವಕರ ವಶಕ್ಕೆ ಪಡೆದು ಬಿಡುಗಡೆ, ಪೊಲೀಸ್ ಠಾಣೆ ಮುಂದೆ ಗಲಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಮೊಹಮ್ಮದ್‌ ಪೈಗಂಬರ್‌ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಫ್ರಾನ್ಸ್‌ ಅಧ್ಯಕ್ಷರ ಸಂದೇಶಗಳನ್ನು ಒಳಗೊಂಡ ಭಿತ್ತಿಪತ್ರಗಳನ್ನು ಹಂಚುತ್ತಿದ್ದಾರೆ ಎನ್ನುವ ಆರೋಪದ ಮೇಲೆ ಮುಸ್ಲಿಂ ಸಮಾಜದ ಐವರು ಯುವಕರನ್ನು ಇಲ್ಲಿನ ಕಸಬಾಠಾಣೆ ಪೊಲೀಸರು ವಶಕ್ಕೆ ಪಡೆದಿದ್ದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯ ಮುಸ್ಲಿಂ ಮುಖಂಡರು ಹಾಗೂ ಅಂಜುಮನ್ ಸಮಿತಿ ಸದಸ್ಯರು ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಕೆಲ ಹೊತ್ತಿನ ಬಳಿಕ ಅವರನ್ನು ಬಿಡುಗಡೆ ಮಾಡಲಾಯಿತು.

‘ಮುಸ್ಲಿಂ ಧರ್ಮಗುರುವಿನ ಬಗ್ಗೆ ಫ್ರಾನ್ಸ್ ಅಧ್ಯಕ್ಷರು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಯುವಕರು ಕರಪತ್ರ ಹಂಚುತ್ತಿದ್ದ ವಿಡಿಯೊ ವೈರಲ್‌ ಆಗಿದೆ. ಶಾಂತಿ ಕದಡದಂತೆ ಎಚ್ಚರಿಕೆ ವಹಿಸಲು ಮುಂಜಾಗ್ರತಾ ಕ್ರಮವಾಗಿ ಅವರನ್ನು ವಶಕ್ಕೆ ಪಡೆದಿದ್ದೆವು’ ಎಂದು ಕಸಬಾ ಠಾಣೆ ಪೊಲೀಸರು ತಿಳಿಸಿದರು.

ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸಮಾಜದ ಮುಖಂಡರು ‘ಈದ್ ಮಿಲಾದ್‌ ದಿನದಂದು ರಸ್ತೆಯಲ್ಲಿ ಬಿದ್ದಿದ್ದ ಕರಪತ್ರಗಳನ್ನು ನಮ್ಮ ಸಮಾಜದ ಕೆಲ ಯುವಕರು ತುಳಿದಿದ್ದರು. ಅವುಗಳನ್ನು ಯಾರು ಹಂಚಿದ್ದಾರೆ ನಮಗೆ ಗೊತ್ತಿಲ್ಲ. ಯಾರೂ ದೂರು ನೀಡದಿದ್ದರೂ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ’ ಎಂದು ದೂರಿದರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮುಸ್ಲಿಂ ಸಮಾಜದ ಮುಖಂಡ ಹಾಗೂ ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಅಲ್ತಾಫ್‌ ಹಳ್ಳೂರ ‘ಫ್ರಾನ್ಸ್‌ ಅಧ್ಯಕ್ಷರ ಹೇಳಿಕೆಯಿಂದ ನಮಗೆ ತೀವ್ರ ನೋವಾಗಿದೆ. ಇದನ್ನು ಪ್ರತಿಭಟಿಸಲು ಯೋಜನೆ ರೂಪಿಸಿದ್ದೆವು. ವಿನಾಕಾರಣ ಪೊಲೀಸರು ನಮ್ಮ ಸಮಾಜದ ಯುವಕರನ್ನು ವಶಕ್ಕೆ ಪಡೆದಿದ್ದಾರೆ’ ಎಂದು ಆರೋಪಿಸಿದರು.

ಸಮಾಜದ ಪ್ರಮುಖರು ಕಸಬಾಠಾಣೆ ಪೊಲೀಸರ ಜೊತೆ ಮಾತುಕತೆ ನಡೆಸಿದ ಬಳಿಕ ಆ ಯುವಕರನ್ನು ಬಿಡಲಾಯಿತು. ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು