ಭಾನುವಾರ, ಫೆಬ್ರವರಿ 23, 2020
19 °C
ನರಗುಂದ ತಾಲ್ಲೂಕಿನ ಅಂಗನವಾಡಿ ಕಾರ್ಯಕರ್ತೆಯರಿಗೆ ಪಾವತಿಯಾಗದ ಬಾಕಿ ಮೊತ್ತ

ಅಂಗನವಾಡಿ ಮಕ್ಕಳಿಗೆ ಫೆ.1ರಿಂದ ಮೊಟ್ಟೆ ಭಾಗ್ಯ ಇಲ್ಲ..!

ಬಸವರಾಜ ಹಲಕುರ್ಕಿ Updated:

ಅಕ್ಷರ ಗಾತ್ರ : | |

Prajavani

ನರಗುಂದ: ತಾಲ್ಲೂಕಿನ ಅಂಗನವಾಡಿ ಮಕ್ಕಳಿಗೆ ವಾರದಲ್ಲಿ ಎರಡು ದಿನ ಸಿಗುತ್ತಿದ್ದ ಮೊಟ್ಟೆ ಫೆ.1ರಿಂದ ಸ್ಥಗಿತಗೊಂಡಿದೆ. ಗರ್ಭಿಣಿಯರು ಮತ್ತು ಬಾಣಂತಿಯರಿಗೆ ವಾರದಲ್ಲಿ ಎಲ್ಲ ದಿನ ಇದ್ದ ಮೊಟ್ಟೆ ಭಾಗ್ಯವೂ ಬಂದ್ ಆಗಿದೆ. ಮೊಟ್ಟೆ ಮಾತ್ರವಲ್ಲ, ಸಾಂಬಾರಿಗೆ ಬಳಸುವ ತರಕಾರಿ ಖರೀದಿಗೂ ಹಣ ಬಿಡುಗಡೆಯಾಗಿಲ್ಲ. ಹೀಗಾಗಿ ಸದ್ಯ ಮಕ್ಕಳು ಮತ್ತು ಗರ್ಭಿಣಿಯರು ಬೇಳೆ ಸಾರಿಗೆ ತೃಪ್ತಿಪಟ್ಟುಕೊಳ್ಳುತ್ತಿದ್ದಾರೆ.

2019ರ ಜೂನ್‌ ತಿಂಗಳವರೆಗೆ ಮಾತ್ರ ಮೊಟ್ಟೆ ಹಾಗೂ ತರಕಾರಿ ಖರೀದಿಯ ಬಿಲ್ ಪಾವತಿಯಾಗಿದೆ. ನಂತರ 7 ತಿಂಗಳಿಂದ (2019ರ ಜುಲೈನಿಂದ 2020ರ ಜನವರಿವರೆಗೆ) ಇದಕ್ಕೆ ಅನುದಾನವೇ ಬಿಡುಗಡೆಯಾಗಿಲ್ಲ. ಅಂಗನವಾಡಿ ಕಾರ್ಯಕರ್ತೆಯರು ತಮಗೆ ಲಭಿಸುವ ಸಹಾಯಧನದಲ್ಲೇ ಮೊಟ್ಟೆ ಮತ್ತು ತರಕಾರಿ ಖರೀದಿಸಿ, ಇಷ್ಟು ದಿನ ಮಕ್ಕಳಿಗೆ, ಗರ್ಭಿಣಿಯರಿಗೆ ಉಣಬಡಿಸಿದ್ದಾರೆ. ಆದರೆ,7 ತಿಂಗಳು ಕಳೆದರೂ, ಬಾಕಿ ಬಿಡುಗಡೆಯಾಗದ ಕಾರಣ, ರೋಸಿ ಹೋಗಿರುವ ಅವರು, ಫೆ.1ರಿಂದ ಮೊಟ್ಟೆ ವಿತರಣೆಯನ್ನು ಸಂಪೂರ್ಣ ಸ್ಥಗಿತಗೊಳಿಸಿದ್ದಾರೆ.

ಬಾಕಿ ಮೊತ್ತ ಬಿಡುಗಡೆ ಮಾಡಿ ಎಂದು ಅಂಗನವಾಡಿ ಕಾರ್ಯಕರ್ತೆಯರು ಶಿಶುಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ನಿರಂತರ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ತಾಲ್ಲೂಕಿನಲ್ಲಿ 130 ಅಂಗನವಾಡಿಗಳಿದ್ದು, 6 ತಿಂಗಳಿನಿಂದ 6 ವರ್ಷದವರೆಗಿನ 7938 ಮಕ್ಕಳು ಇಲ್ಲಿ ದಾಖಲಾಗಿದ್ದಾರೆ.  ಮಕ್ಕಳಿಗೆ ವಾರದ ಎರಡು ದಿನ ಅಂದರೆ ಮಂಗಳವಾರ ಹಾಗೂ ಗುರುವಾರ ಮೊಟ್ಟೆ ವಿತರಿಸಲಾಗುತ್ತಿದೆ.

 13, ಗರ್ಭಿಣಿಯರು 938, ಬಾಣಂತಿಯರು ಇದ್ದು, ಇವರಿಗೆ ವಾರದ ಆರು ದಿನವೂ ಮೊಟ್ಟೆ ನೀಡಲಾಗುತ್ತದೆ. ಅಪೌಷ್ಟಿಕತ ಹೊಂದಿದ 119 ಮಕ್ಕಳಿದ್ದು ಅವರಿಗೆ ವಾರದ ಐದು ದಿನ ಮೊಟ್ಟೆ ಕೊಡಬೇಕಾಗುತ್ತದೆ. ಆದರೆ, ಕಳೆದ ನಾಲ್ಕು ದಿನಗಳಿಂದ ಮೊಟ್ಟೆ ವಿತರಣೆಗೆ ತಡೆ ಬಿದ್ದಿದೆ. ಎಲ್ಲ ಸೇರಿ 10,246 ಫಲಾನುಭವಿಗಳಿಗೆ ಮೊಟ್ಟೆ ಭಾಗ್ಯ ಇಲ್ಲದಂತಾಗಿದೆ.  ಈ ಎಲ್ಲ ಫಲಾನುಭವಿಗಳಿಗೆ ಮೊಟ್ಟೆ ವಿತರಿಸಲು ಪ್ರತಿ ತಿಂಗಳು ಸರಾಸರಿ ₹4.37 ಲಕ್ಷ ಮೊತ್ತ ಬೇಕಾಗುತ್ತದೆ. ಈಗಾಗಲೇ ಮೊಟ್ಟೆ ಖರೀದಿಗೆ ಖರ್ಚು ಮಾಡಿರುವ ₹30.59 ಲಕ್ಷ ಬಾಕಿ ಬಿಡುಗಡೆಯಾಗಬೇಕಿದೆ.

‘ಅನುದಾನದ ಕೊರತೆ ಉಂಟಾಗಿದ್ದರಿಂದ ಬಿಲ್ ಪಾವತಿಸಲು ಹಣ ಇಲ್ಲದ್ದಕ್ಕೆ ಮೊಟ್ಟೆ ವಿತರಣೆ ನಡೆಯುತ್ತಿಲ್ಲ. ಎಲ್ಲರೂ ಅನ್ನ, ಸಾಂಬಾರ್‌, ಬಿಸಿಬೇಳೆ ಬಾತ್, ಪಾಯಸ, ಶೇಂಗಾ, ಬೆಲ್ಲಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಿದೆ’ ಎಂದು ಅಂಗನವಾಡಿ ಕಾರ್ಯಕರ್ತೆಯರು ಹೇಳಿದರು. 

'ಕಳೆದ 7 ತಿಂಗಳಿನಿಂದ ಮೊಟ್ಟೆ ಹಾಗೂ 9 ತಿಂಗಳಿನಿಂದ ತರಕಾರಿಯನ್ನು ನಮ್ಮ ಗೌರವಧನದಲ್ಲೇ ಖರೀದಿಸಿ, ಮಕ್ಕಳು ಮತ್ತು ಗರ್ಭಿಣಿಯರಿಗೆ ವಿತರಿಸಲಾಗಿದೆ. ಪ್ರತಿ ತಿಂಗಳು ₹4 ರಿಂದ ₹5 ಸಾವಿರ ಇದಕ್ಕಾಗೀ ಖರ್ಚು ಮಾಡಿದ್ದೇವೆ. ಆದರೂ, ಇಲ್ಲಿಯವರೆಗೆ ಬಾಕಿ ಹಣ ಬಂದಿಲ್ಲ. ಇನ್ನು ಮುಂದೆ ವಿತರಿಸಲು ಸಾಧ್ಯವಾಗುತ್ತಿಲ್ಲ. ಇದು ನಮಗೆ ಹೊರೆಯಾಗಿದೆ. ಇದರ ಬಗ್ಗೆ ಮೇಲಾಧಿಕಾರಿಗಳು ಗಮನಹರಿಸಬೇಕು’ ಎಂದು ತಾಲ್ಲೂಕಿನ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಸಂಘದ ಶಾರದಾ ಹಳೇಮನಿ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು