ಸೋಮವಾರ, ನವೆಂಬರ್ 30, 2020
24 °C

‘ಪುಸ್ತಕಗಳು ಮಸ್ತಕ ಅರಳಿಸಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಬೇಧ- ಭಾವವಿಲ್ಲದೆ ಪ್ರಕೃತಿ ಎಲ್ಲರಿಗೂ ಸಮ ಸಮವಾಗಿ ಹೂವು ಹಣ್ಣು, ಗಾಳಿ, ನೀರು ಬೆಳಕು ಕೊಡುವಂತೆ, ನಿಜವಾದ ಸೃಜನಶೀಲ ಸಾಹಿತ್ಯ ಎಲ್ಲ ಓದುಗರಿಗೆ ಮುಟ್ಟಬೇಕು. ಪುಸ್ತಕಗಳು ಮಸ್ತಕ ಅರಳಿಸುವ ಕೆಲಸ ಮಾಡಬೇಕು’ ಎಂದು ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಹೇಳಿದರು. 

ಸಾಹಿತಿ ಕಲಾವಿದರ ಬಳಗ, ಮಲೆನಾಡು ಪ್ರಕಾಶನ ಚಿಕ್ಕಮಗಳೂರು ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ನಗರದ ಹುಕ್ಕೇರಿಮಠದಲ್ಲಿ ಮಂಗಳವಾರ ಏರ್ಪಡಿಸಿದ್ದ ಯುವ ಲೇಖಕ ವಾಗೀಶ ಹೂಗಾರ ಸಂಪಾದಿಸಿದ ‘ಅಂಕಣ ತೋಟ’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು. 

ಈ ಕೃತಿಯಲ್ಲಿ ಎಂಟೂ ಲೇಖಕರು ಸಹಜ ಶೈಲಿಯಲ್ಲಿ ಬರೆದಿದ್ದು, ಇದೊಂದು ಯುವ ಲೇಖಕರ ಯಶಸ್ವಿ ಕೃತಿ. ಪುಸ್ತಕ ಓದುವ ಸಂಸ್ಕೃತಿ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು. 

ಪುಸ್ತಕದ ಪರಿಚಯವನ್ನು ಮಾಡಿದ ಲೇಖಕಿ ಡಾ.ಮಹಾದೇವಿ ಕಣವಿ, ವಿಭಿನ್ನ ದೃಷ್ಟಿಕೋನಗಳಲ್ಲಿ ಎಂಟು ಯುವ ಲೇಖಕರು ಬರೆದಿರುವ ಅಂಕಣ ತೋಟ ಕೃತಿ, ಹೊಸ ಲೇಖಕರಿಗೆ ಸಿಕ್ಕ ದೊಡ್ಡ ಅವಕಾಶ. ಸಾಧಕರ ಪರಿಚಯ, ಶಿಕ್ಷಣ ಸಂಸ್ಕೃತಿ, ಮಹಿಳಾ ಆರೋಗ್ಯ ಮತ್ತು ಸಬಲೀಕರಣ ಕುರಿತಾದ ಸದಭಿರುಚಿಯ ಲೇಖನಗಳು ಓದಿಗೆ ಸೆಳೆಯುತ್ತವೆ’ ಎಂದು ಶ್ಲಾಘಿಸಿದರು.

ವಿಶ್ರಾಂತ ಪ್ರಾಚಾರ್ಯ ಬಿ. ಬಸವರಾಜಪ್ಪ ಮಾತನಾಡಿ, ‘ಯಾವುದೇ ಸಾಹಿತ್ಯ ಸಮಾಜದ ಹಿತ ಬಯಸಬೇಕು. ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಕಲೆಗಳ ಪಾತ್ರ ದೊಡ್ಡದು. ಪ್ರತಿಭೆಗೆ ಪುರಸ್ಕಾರಗಳು ಸಿಗಬೇಕು’ ಎಂದರು.

ಹಿರಿಯ ಛಾಯಾಗ್ರಾಹಕ ಶಿವಣ್ಣ ಬಣಕಾರ ಮಾತನಾಡಿದರು. ವಾಗೀಶ ಹೂಗಾರರ ಜೊತೆಗೆ ಇತರ ಪುಸ್ತಕದಲ್ಲಿರುವ ಅಂಕಣ ಬರಹಗಾರರಾದ ಸರ್ವಶ್ರೀ ಜಿ.ಎಂ. ಓಂಕಾರಣ್ಣನವರ, ಚಿನ್ನು ಎಸ್. ರಾಗಿ, ರಾಜೇಶ್ವರಿ ರವಿ ಸಾರಂಗಮಠ, ರೇಖಾ ರಂಗನಾಥ ಭೈರಕ್ಕನವರ ಅವರುಗಳನ್ನು ಸನ್ಮಾನಿಸಲಾಯಿತು.

ಅಂಕಣ ಬರಹಗಳನ್ನು ಪ್ರಕಟಿಸಿದ ಮೂಡಣ ಪತ್ರಿಕೆಯ ಸಂಪಾದಕಿ ತೇಜಶ್ವಿನಿ ಕಾಶೆಟ್ಟಿ ಮತ್ತು ಮುಖಪುಟ ಚಿತ್ರ ರಚಿಸಿದ ಕಲಾವಿದ ವೀರಣ್ಣ ಶೀಲವಂತರ ಅವರನ್ನೂ ಕೂಡ ಸನ್ಮಾನಿಸಲಾಯಿತು. ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಇದ್ದರು. 

ಎಸ್.ಆರ್. ಹಿರೇಮಠ ಸ್ವಾಗತಿಸಿದರೆ, ಕಾರ್ಯಕ್ರಮವನ್ನು ನಾಗರಾಜ ನಡುವಿನಮಠ ನಡೆಸಿದರು. ಚಂದ್ರಶೇಖರ ಮಾಳಗಿ ವಂದಿಸಿದರು. ಅಕ್ಷತಾ ಮತ್ತು ಬ್ರಹ್ಮಿಣಿ ಅವರುಗಳ ನೃತ್ಯ ಪ್ರದರ್ಶನ ಗಮನಸೆಳೆಯಿತು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು