ಖರ್ಚು ಹೆಚ್ಚಿದ್ದರೂ ಹತ್ತಿ ಬೆಳೆಯುತ್ತಿದ್ದೇವೆ. ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗಬೇಕು. ಕೃಷಿ ಉತ್ಪನ್ನಗಳಿಗೆ ಕಮಿಷನ್ ಮುಕ್ತ ವ್ಯವಹಾರ ನಡೆಯಬೇಕು
ಕುತುಬುದ್ದೀನ್ ಅಲ್ಲಾಪುರ
‘ಎಕರೆಗೆ ₹40 ಸಾವಿರ ಖರ್ಚು’
‘ಹತ್ತಿ ಬೆಳೆಯಲು ಖರ್ಚು ಹೆಚ್ಚಿದೆ. ಬಿತ್ತನೆಯಿಂದ ಹಿಡಿದು ಕಟಾವು ಮಾಡುವವರೆಗೂ ಸುಮಾರು ₹ 30 ಸಾವಿರದಿಂದ ₹ 40 ಸಾವಿರ ಖರ್ಚಾಗುತ್ತದೆ. ಉಳಿದಂತೆ ಗೋವಿನ ಜೋಳ ಹಾಗೂ ಇತರೆ ಬೆಳೆಗೆ ಹೆಚ್ಚು ಖರ್ಚು ಆಗುವುದಿಲ್ಲ. ಅದೇ ಕಾರಣಕ್ಕೆ ರೈತರು ಹತ್ತಿ ಬೆಳೆಯಲು ಹಿಂದೇಟು ಹಾಕುತ್ತಿದ್ದಾರೆ’ ಎಂದು ಹಾನಗಲ್ ತಾಲ್ಲೂಕಿನ ಅಲ್ಲಾಪುರ ಗ್ರಾಮದ ರೈತ ಕುತುಬುದ್ದೀನ್ ಹೇಳಿದರು. ‘ಅತೀ ಹೆಚ್ಚು ಹತ್ತಿ ಬೆಳೆಯುತ್ತಿದ್ದ ಜಿಲ್ಲೆ ಹಾವೇರಿಯಾಗಿತ್ತು. ಆದರೆ ಈಗ ಹತ್ತಿ ಬೆಳೆ ಪ್ರದೇಶ ಕಡಿಮೆಯಾಗುತ್ತಿದೆ. ಬಟ್ಟೆ ಹಾಗೂ ಇತರೆ ಉತ್ಪನ್ನಗಳ ತಯಾರಿಕೆಗೆ ಹತ್ತಿ ಬೇಕು. ಆದರೆ ರೈತರು ಹತ್ತಿ ಬೆಳೆಯಿಂದ ಕ್ರಮೇಣ ವಿಮುಖರಾಗುತ್ತಿದ್ದಾರೆ. ಹತ್ತಿಗೆ ಸದ್ಯ ಕ್ವಿಂಟಲ್‌ಗೆ ₹ 6 ಸಾವಿರದಿಂದ ₹ 8 ಸಾವಿರ ಬೆಲೆಯಿದೆ. ಇದರಿಂದ ಖರ್ಚು ಸಹ ವಾಪಸು ಬರುವುದಿಲ್ಲ. ಸೂಕ್ತ ಬೆಲೆ ಸಿಗದಿದ್ದರೆ ಮುಂದಿನ ದಿನಗಳಲ್ಲಿ ಹತ್ತಿ ಬೆಳೆಯೇ ನಶಿಸಿ ಹೋಗಬಹುದು’ ಎಂದು ತಿಳಿಸಿದರು.