ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಳಿವಾಡ ನಿವಾಸದ ಮೇಲೆ ನಡೆದ ಐಟಿ ದಾಳಿ ಬಿಜೆಪಿ ಕುತಂತ್ರ: ಪ್ರಕಾಶ್‌ ಕೋಳಿವಾಡ

ಸಿಎಂ ಯಡಿಯೂರಪ್ಪ, ಗೃಹ ಸಚಿವ ಬೊಮ್ಮಾಯಿ ವಿರುದ್ಧ ಪ್ರಕಾಶ ಕೋಳಿವಾಡ ವಾಗ್ದಾಳಿ
Last Updated 4 ಡಿಸೆಂಬರ್ 2019, 15:15 IST
ಅಕ್ಷರ ಗಾತ್ರ

ರಾಣೆಬೆನ್ನೂರು: ‘ಕಾಂಗ್ರೆಸ್‌ ಅಭ್ಯರ್ಥಿ ಕೋಳಿವಾಡ ಅವರ ಮನೆಯ ಮೇಲಿನ ಐ.ಟಿ ದಾಳಿ ರಾಜಕೀಯ ಷಡ್ಯಂತ್ರಮತ್ತು ದ್ವೇಷದ ರಾಜಕಾರಣಕ್ಕೆ ಸಾಕ್ಷಿಯಾಗಿದೆ. ಇಂತಹ ಏಕಾಏಕಿ ದಾಳಿಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರೇ ನೇರ ಕಾರಣ’ ಎಂದು ಕೋಳಿವಾಡ ಅವರ ಪುತ್ರ ಪ್ರಕಾಶ ಕೋಳಿವಾಡ ಗಂಭೀರ ಆರೋಪ ಮಾಡಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಚುನಾವಣೆಯಲ್ಲಿ ಎಲ್ಲ ಕಡೆ ಕಾಂಗ್ರೆಸ್ ಅಲೆ ಇರುವುದನ್ನು ಸಹಿಸದೇ ಬಿಜೆಪಿ ನಾಯಕರು ಈ ಕುತಂತ್ರ ನಡೆಸಿದ್ದಾರೆ’ ಎಂದು ದೂರಿದರು.

‘ಕೆ.ಬಿ.ಕೋಳಿವಾಡ ಅವರು ತಪ್ಪು ಮಾಡಿದ್ದರೆ ಜೈಲಿಗೆ ಕಳಿಸಿಲಿ. ಮತದಾರರ ಅನುಕಂಪ ಪಡೆಯಲು ಕೋಳಿವಾಡರೇ ತಮ್ಮ ಮನೆಯ ಮೇಲೆ ದಾಳಿ ಮಾಡಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಬಿತ್ತರಿಸಲಾಗುತ್ತಿದೆ. ಬಿಜೆಪಿಯವರ ದಬ್ಬಾಳಿಕೆಯಿಂದ ಪ್ರಜಾಪ್ರಭುತ್ವ ಉಳಿಯುತ್ತದೋ ಇಲ್ಲವೋ ಎನ್ನುವಂತಾಗಿದೆ. ಇದಕ್ಕೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ಈ ದಾಳಿಯಿಂದ ಕೋಳಿವಾಡರ ಗೆಲುವಿನ ಅಂತರ ದುಪ್ಪಟ್ಟಾಗಿದೆ. ಕಾರ್ಯಕರ್ತರು, ಯುವಕರಲ್ಲಿ ಹುಮ್ಮಸ್ಸು ಹೆಚ್ಚಿದೆ. ಯಾವ ಕಾರ್ಯಕರ್ತರೂ ಆತ್ಮಸ್ಥೈರ್ಯ ಕಳೆದುಕೊಂಡಿಲ್ಲ. ಬಿಜೆಪಿ ಅಭ್ಯರ್ಥಿ ಮೇಲೆ ಐದು ಕ್ರಿಮಿನಲ್ ಕೇಸು ದಾಖಲಾಗಿದ್ದು, ಈಚೆಗೆ ಅರೆಸ್ಟ್ ವಾರೆಂಟ್ ಜಾರಿಯಾದರೂ ಅವರನ್ನು ಬಂಧಿಸದೇ ನಮ್ಮ ಮನೆ ಮೇಲೆ ದಾಳಿ ಮಾಡಿದ್ದಾರೆ’ ಎಂದು ತಿರುಗೇಟು ನೀಡಿದರು.

‘ಇವಿಎಂ ಯಂತ್ರದ ಬಗ್ಗೆ ನಮಗೆ ಭಯ ಮೂಡಿದೆ. ಚುನಾವಣಾಧಿಕಾರಿಗಳು ಒಳ್ಳೆಯ ಯಂತ್ರಗಳನ್ನು ಕಳಿಸುವ ಮೂಲಕ ಪ್ರಜಾಪ್ರಭುತ್ವ ಉಳಿಸಬೇಕು ಎಂದು ಆಯೋಗಕ್ಕೆ ಮನವಿ ಮಾಡಿದರು.ಅನರ್ಹ ಶಾಸಕ ಆರ್.ಶಂಕರ್‌ ಅವರು ಈ ಹಿಂದೆ ಕೆಪಿಜೆಪಿ ಕಾರ್ಯಕರ್ತರಿಂದ ಖಾಲಿ ಬಾಂಡ್ ಪೇಪರ್‌ಗೆ ಸಹಿ ಹಾಕಿಸಿಕೊಂಡಿದ್ದು ಮತ್ತು ಖಾಲಿ ಚೆಕ್‌ನಲ್ಲಿ ಸಹಿ ಮಾಡಿಸಿಕೊಂಡ ಬಗ್ಗೆ ನಮ್ಮ ಬಳಿ ದಾಖಲೆಗಳು ಇವೆ’ ಎಂದರು.

‘ಕೆ.ಬಿ.ಕೋಳಿವಾಡ ಅವರು ಒಬ್ಬ ಹಿರಿಯ ರಾಜಕಾರಣಿ, ಉಪ ಚುನಾವಣೆಯಲ್ಲಿ ಎಲ್ಲ ಕಡೆ ಕಾಂಗ್ರೆಸ್ ಪಕ್ಷದತ್ತ ಅಲೆ ಇರುವುದನ್ನು ಸಹಿಸದೇ ಸೋಲಿನ ಭೀತಿಯಿಂದ ಹತಾಶರಾಗಿ ಬಿಜೆಪಿಯವರು ನಡೆಸಿದ ಕುತಂತ್ರ ಇದು’ ಕಾಂಗ್ರೆಸ್‌ ಮುಖಂಡಪ್ರಕಾಶ ಜೈನ್ ತಿಳಿಸಿದ್ದಾರೆ.

ನಾಗರಾಜ ಪವಾರ, ಇರ್ಫಾನ್ ದಿಡಗೂರ, ಮೃತ್ಯುಂಜಯ ಗುದಿಗೇರ, ಬಸುವರಡ್ಡಿ, ಹನುಮಂತಪ್ಪ ಕಬ್ಬಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT