ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲೋಕ’ ಕದನ: ಕಲಬುರಗಿ ಕ್ಷೇತ್ರದಲ್ಲಿ ಗರಿಗೆದರಿದ ‘ಮತ ಗಣಿತ’

Published 9 ಮೇ 2024, 6:15 IST
Last Updated 9 ಮೇ 2024, 6:15 IST
ಅಕ್ಷರ ಗಾತ್ರ

ಕಲಬುರಗಿ: ‘ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ...’ ಎಂಬಂತೆ ಮತದಾನದ ತರುವಾಯ ಕ್ಷೇತ್ರದಲ್ಲಿ ಇದೀಗ ಸೋಲು–ಗೆಲುವಿನ ಲಕ್ಕಾಚಾರ ಚರ್ಚೆ ಜೋರಾಗಿದೆ.

ಸಾರ್ವಜನಿಕರಲ್ಲಿ ಬಿಸಿಲಿನ ಧಗೆಯನ್ನು ಮೀರಿಸುವಂತೆ ರಾಜಕೀಯ ಚರ್ಚೆಗಳು ನಡೆಯುತ್ತಿವೆ. ಮತದಾನದ ಮಾರನೇ ದಿನ ಅಭ್ಯರ್ಥಿಗಳು, ಮುಖಂಡರು ಮನೆ, ಪಕ್ಷದ ಕಚೇರಿಗಳಲ್ಲಿ ಕುಳಿತು ಫಲಿತಾಂಶ ಬಗ್ಗೆ ಚರ್ಚೆ ನಡೆಸಿದರು.

ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ಡಾ. ಉಮೇಶ ಜಾಧವ, ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಸೇರಿದಂತೆ 14 ಮಂದಿ ಸ್ಪರ್ಧಿಸಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆದಿರುವುದರಿಂದ ಮತದಾರರು ಈ ಇಬ್ಬರಲ್ಲಿ ಯಾರು ಗೆಲ್ಲಬಹುದು ಎಂಬ ಚರ್ಚೆಯಲ್ಲಿ ತೊಡಗಿದ್ದಾರೆ.

ಹೊಸ ಸಂಸದರ ಹೆಸರು ಘೋಷಣೆಗೆಯಾಗಲು ಇನ್ನೂ 27 ದಿನ ಕಾಯಬೇಕಾಗಿದೆ. ಆದರೆ, ಹೋಟೆಲ್, ಉದ್ಯಾನ, ಬಸ್‌ ನಿಲ್ದಾಣ, ರೈಲು ನಿಲ್ದಾಣ, ಜನನಿಬಿಡ ಪ್ರದೇಶಗಳು, ದೇವಸ್ಥಾನದ ಆವರಣ, ಹಳ್ಳಿ ಕಟ್ಟೆ, ಆಟೊ ಸ್ಟ್ಯಾಂಡ್... ಹೀಗೆ ನಾಲ್ಕು ಜನ ಸೇರಿದರೂ ಚುನಾವಣೆಯ ಫಲಿತಾಂಶದ್ದೇ ಮಾತು. ಯಾವ ಗ್ರಾಮಗಳಲ್ಲಿ ಎಷ್ಟು ಮತಗಳು ದಕ್ಕಲಿವೆ? ಯಾರಿಗೆ ಗೆಲುವಿನ ಸಾಧ್ಯತೆಗಳಿವೆ ಎಂದು ಕೂಡಿ ಕಳೆಯುವ ಲೆಕ್ಕಾಚಾರ ಹಾಕುತ್ತಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ–ಜೆಡಿಎಸ್‌ ಅಭ್ಯರ್ಥಿಗಳು ಗಳಿಸಿದ್ದ ಮತಗಳ ಪ್ರಮಾಣದ ಬಗ್ಗೆಯೂ ಚರ್ಚೆಗಳು ಗರಿಗೆದರಿವೆ. ಪ್ರತಿಸ್ಪರ್ಧಿಯನ್ನು ಸೋಲಿಸಿದ ಮತಗಳ ಅಂತರ, ಪಾರಾಜಿತ ಅಭ್ಯರ್ಥಿ ಗಳಿಸಿದ ಮತ ಹಾಗೂ ಜೆಡಿಎಸ್‌ ಪಾಲಾದ ‘ಮತಗಣಿತ’ ಚರ್ಚೆಯಲ್ಲಿ ನುಸುಳುತ್ತಿವೆ. 2019ರ ಚುನಾವಣೆಯಲ್ಲಿ ಪಡೆದ ಮತಗಳು, ವಿಧಾನಸಭಾ ಕ್ಷೇತ್ರವಾರು ಗಳಿಸಿದ್ದ ‘ಲೀಡ್‌’ ಮತಗಳ ಪ್ರಮಾಣವನ್ನು ತಾಳೆ ಹಾಕಲಾಗುತ್ತಿದೆ.

ರಾಜ್ಯ ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮಿ ಯೋಜನೆಯಡಿ ನೀಡುತ್ತಿರುವ ₹2,000, ಶಕ್ತಿ ಯೋಜನೆಯಡಿಯ ಉಚಿತ ಬಸ್ ಪ್ರಯಾಣಕ್ಕೆ ಮೆಚ್ಚಿ ಬಹುಸಂಖ್ಯೆಯ ಮಹಿಳೆಯರು ತಮ್ಮ ‘ಕೈ’ ಹಿಡಿಯುತ್ತಾರೆ ಎಂಬ ವಿಶ್ವಾಸ ಕಾಂಗ್ರೆಸ್ಸಿಗರದ್ದು. ಜತೆಗೆ ಕಳೆದ 10 ವರ್ಷಗಳಲ್ಲಿ 371 (ಜೆ) ಲಾಭ ಪಡೆದವರೂ ನಮ್ಮ ‘ಕೈ’ ಬಲಪಡಿಸುತ್ತಾರೆ ಎಂಬ ನಂಬಿಕೆಯೂ ಅವರದ್ದು.

ಮೋದಿಯ ಅಲೆ, ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿಯ ಬಲ, ಚುನಾವಣೆಯ ಹೊಸ್ತಿಲಲ್ಲಿ ಎರಡು ರೈಲು ಓಡಿಸಿದ್ದು, ಇತ್ತೀಚಿನ ‘ಹಲ್ಲೆ’ ಪ್ರಕರಣ ಮತ್ತು ಅಟ್ರಾಸಿಟಿ ಕೇಸ್‌ ಆರೋಪದಲ್ಲಿ ಯುವಕನ ಆತ್ಮಹತ್ಯೆ ಪ್ರಕರಣದ ಬಳಿಕ ಸಮುದಾಯಗಳ ಮುನಿಸಿನ ಹಿನ್ನೆಲೆಯಲ್ಲಿ ಮತದಾರರು ನಮ್ಮ ಕಡೆಗೆ ವಾಲಿದ್ದಾರೆ ಎಂಬುದು ‘ಕಮಲ’ ಪಾಳೆಯದ ಲೆಕ್ಕಾಚಾರ.

‘ಕೈ’– ‘ಕಮಲ’ ಕದನದ ನಡುವೆ ಕೇವಲ ಹೆಸರಿಗಷ್ಟೇ ಸ್ಪರ್ಧಿಸಿರುವವರು ತಮಗೆ ಎಷ್ಟು ಮತ ಬೀಳಬಹುದು ಎಂದು ಲೆಕ್ಕ ಹಾಕತೊಡಗಿದ್ದಾರೆ. ಮತ್ತೊಂದು ಕಡೆ ಯಾರು ಗೆಲ್ಲುತ್ತಾರೆ ಎಂಬ ಬೆಟ್ಟಿಂಗ್ ಕೂಡ ಆರಂಭವಾಗಿದೆ.

ಯಾರು ಏನೇ ಲೆಕ್ಕಾಚಾರ ಹಾಕಿ, ‘ಮತಗಣಿತ’ ಮಾಡಿದರೂ ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿ ಕುಳಿತಿದೆ. ವಿಜಯಲಕ್ಷ್ಮಿ ಜಾಧವ ಅವರಿಗೆ ಒಲಿಯಲಿದ್ದಾರೆಯೋ ಅಥವಾ ರಾಧಾಕೃಷ್ಣ ಅವರಿಗೋ ಎಂಬುದು ಬಹಿರಂಗಗೊಳ್ಳಲು ಜೂನ್‌ 4ರವರೆಗೆ ಕಾಯಬೇಕು. ಅಲ್ಲಿಯವರೆಗೆ ಈ ಚರ್ಚೆ ನಡೆಯುತ್ತಲೇ ಇರುತ್ತದೆ.

ಶೇ 1.39ರಷ್ಟು ಮತ ಪ್ರಮಾಣ ಹೆಚ್ಚಳ ಯಾರಿಗೆ ವರ?
ಕಳೆದ ಲೋಕಸಭಾ ಚುನಾವಣೆಯಲ್ಲಿ 609411 ಪುರುಷ 574824 ಮಹಿಳೆ ಹಾಗೂ 6 ಮಂದಿ ಲಿಂಗತ್ವ ಅಲ್ಪಸಂಖ್ಯಾತರು ಸೇರಿ ಒಟ್ಟು 1184241 ಮತದಾರರು ಮತ ಚಲಾಯಿಸಿದ್ದರು. ಒಟ್ಟಾರೆ ಶೇ 60.88ರಷ್ಟು ಮತದಾನವಾಗಿತ್ತು. ಈ ಬಾರಿ ಶೇ 62.27ರಷ್ಟು ಮತದಾನವಾಗಿದ್ದು ಶೇ 1.39ರಷ್ಟು ಹೆಚ್ಚಳವಾಗಿದೆ. ಈ ಬಾರಿ ಹೆಚ್ಚಳವಾಗಿರುವ ಶೇ 1.39ರಷ್ಟು ಮತಗಳು ಯಾರಿಗೆ ಹೋಗಿರಬಹುದು ಎಂಬುದು ಕುತೂಹಲ ಕೆರಳಿಸಿದೆ. ಹೊಸ ಮತದಾರರಾ? ವಲಸಿಗ ಮತದಾರರಾ? ಯಾರಿಗೆ ಜೈ ಎಂದಿದ್ದಾರೆ ಎಂಬಿತ್ಯಾದಿ ವಿಷಯಗಳ ಚರ್ಚೆಗಳು ವಿಶ್ಲೇಷಣೆಗಳು ಸಾರ್ವಜನಿಕರ ವಲಯದಲ್ಲಿ ನಡೆಯುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT