ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

MP ಎಲೆಕ್ಷನ್ ಹೇಗೆ ನಡೆಯುತ್ತೆ ಎಂಬುದಕ್ಕೆ ಚಂಡೀಗಢ ಮೇಯರ್ ಚುನಾವಣೆ ಸಾಕು: ಖರ್ಗೆ

Published 21 ಫೆಬ್ರುವರಿ 2024, 9:11 IST
Last Updated 21 ಫೆಬ್ರುವರಿ 2024, 9:11 IST
ಅಕ್ಷರ ಗಾತ್ರ

ಕಲಬುರಗಿ: ‘ಕೇಂದ್ರ ಚುನಾವಣೆ ಆಯೋಗದ ಕಚೇರಿಯಿಂದ ಒಂದು ಗಂಟೆ ಪ್ರಯಾಣದ ದೂರದಲ್ಲಿರುವ ಚಂಡೀಗಢ ಮೇಯರ್ ಚುನಾವಣೆಯಲ್ಲಿ ಅಧಿಕಾರಿಯೊಬ್ಬ ತಾನೇ ಮತ ಚಲಾಯಿಸಿದ್ದಾನೆ ಎಂದರೇ ಲೋಕಸಭಾ ಚುನಾವಣೆ ಗೆಲ್ಲಲು ಮೋದಿ ಸರ್ಕಾರ ಗ್ರಾಮೀಣ ಭಾಗಗಳಲ್ಲಿ ಏನೇನು ಮಾಡುತ್ತಿರಬೇಕು ಎಂಬುದಕ್ಕೆ ಇದೇ ಅಂದಾಜು ಸಾಕು’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಇಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಪ್ರಜಾಪ್ರಭುತ್ವ ಉಳಿಯಬೇಕಾದರೆ ಎಲ್ಲರಿಗೂ ಸಮತಟ್ಟಾದ ಆಟದ ಮೈದಾನ ಸಿಗಬೇಕು. ಆಗ, ಒಮ್ಮೆ ನೀವು ಗೆಲ್ಲಬಹುದು, ಮತ್ತೊಮ್ಮೆ ನಾವು ಗೆಲ್ಲಬಹುದು. ಆದರೆ, ಜನರನ್ನು ಹೆದರಿಸಿ, ಬೆದರಿಸಿ ಪಕ್ಷಕ್ಕೆ ಸೆಳೆದುಕೊಂಡರೆ ಪ್ರಜಾಪ್ರಭುತ್ವ ಉಳಿಯುವುದಿಲ್ಲ. ಇದು ಹೀಗೆ ಮುಂದುವರಿದರೆ ಸಂವಿಧಾನ ಮತ್ತು ಜನರಿಗೂ ತೊಂದರೆ ಆಗುತ್ತದೆ. ಸಹಜವಾಗಿ ವಯಸ್ಕರ ಮತದಾನವೂ ಉಳಿಯುವುದಿಲ್ಲ’ ಎಂದರು.

‘ನಮ್ಮ ಬಳಿ ಇದ್ದಾಗ ಭ್ರಷ್ಟಾಚಾರಿಗಳು ಆಗಿರುತ್ತಾರೆ. ಒಮ್ಮೆ ನಿಮ್ಮ ಪಕ್ಷಕ್ಕೆ ಸೇರ್ಪಡೆಯಾದ ಮೇಲೆ ಪ್ರಾಮಾಣಿಕರು, ಪರಿಶುದ್ಧರು ಹೇಗಾಗುತ್ತಾರೆ? ಯಾರು ಎಲ್ಲೆ ಸಿಕ್ಕರೂ ಅವರನ್ನು ಒಳಗೆ ಹಾಕಿ, ಬೈಯುತ್ತಾರೆ. ಮುಂದೆ ಅವರನ್ನೇ ಕರೆದೊಯ್ದು ರಾಜಕೀಯ ಮಾಡುತ್ತಾರೆ. ಬಿಜೆಪಿಯವರ ಇಂತಹ ದ್ವಂದ್ವ ರಾಜಕಾರಣ ಮೊದಲಿನಿಂದಲೂ ನಡೆದುಕೊಂಡು ಬಂದಿದೆ’ ಎಂದು ಟೀಕಿಸಿದರು.

‘ದೇಶದಲ್ಲಿ ನಿರಂಕುಶ ನಾಯಕತ್ವ ಮತ್ತು ಸರ್ವಾಧಿಕಾರ ಆಡಳಿತ ತರಲು ಮೋದಿ ಸಾಹೇಬರು ಬಯಸುತ್ತಿದ್ದು, ಅದನ್ನೇ ಮಾಡಿ ತೋರಿಸುತ್ತಿದ್ದಾರೆ. ಈ ಬಗ್ಗೆ ನಾವು ಜನರಿಗೆ ತಿಳಿಸುತ್ತಿದ್ದೇವೆ. ಆದರೆ, ಕೆಲವರು ಮೋದಿ ಇದ್ದರೆ ಮಾತ್ರವೇ ದೇಶ ನಡೆಯುತ್ತದೆ, ಇಲ್ಲದಿದ್ದರೆ ಇಲ್ಲ ಎಂಬ ಗುಂಗಿನಲ್ಲಿ ಇದ್ದಾರೆ. ಕಳೆದ 70 ವರ್ಷಗಳಿಂದ ದೇಶ ನಡೆಯಲಿಲ್ಲವೇ? ಐ.ಕೆ. ಗುಜ್ರಾಲ್, ಎಚ್‌.ಡಿ. ದೇವೇಗೌಡ, ಅಟಲ್‌ ಬಿಹಾರಿ ವಾಜಪೇಯಿ ಸೇರಿದಂತೆ ಅನೇಕ ನಾಯಕರು ದೇಶ ಕಟ್ಟಿದ್ದಾರೆ. ಬಡವರ ಬಗ್ಗೆ ಅನುಕಂಪ ಇರಿಸಿಕೊಂಡು ಆಡಳಿತ ನಡೆಸಿದ್ದಾರೆ. ಆದರೆ, ಮೋದಿ ಅವರದ್ದು ಜಾಹೀರಾತು ಸರ್ಕಾರ. ಪತ್ರಿಕೆಯಲ್ಲಿ ಮೋದಿ ಫೋಟೊ, ಟಿವಿಯಲ್ಲಿ ಮೋದಿ ಮಾತು ಇಲ್ಲದೆ ಏನೂ ಸಿಗಲ್ಲ. ಹೀಗಾದರೆ, ದೇಶ ಹೇಗೆ ಬೆಳೆಯುತ್ತದೆ’ ಎಂದು ಪ್ರಶ್ನಿಸಿದರು.

‘ಇಂಡಿಯಾ’ ಮೈತ್ರಿಕೂಟದ ನಾಯಕರ ನಡುವೆ ಸೀಟು ಹಂಚಿಕೆಯ ಸಂಬಂಧ ಆಯಾ ಪಕ್ಷಗಳ ಜತೆಗೆ ಸಂವಹನ ನಡೆಸುವುದಕ್ಕಾಗಿಯೇ ಅಶೋಕ್ ಗೆಹಲೋತ್‌ ನೇತೃತ್ವದಲ್ಲಿ ಆರು ಸಂದಸ್ಯರ ತಂಡವನ್ನು ರಚಿಸಲಾಗಿದೆ. ತಂಡದ ಸದಸ್ಯರು ವಿವಿಧ ರಾಜ್ಯಗಳಿಗೆ ಭೇಟಿ ನೀಡಿ ನಾಯಕರ ಜತೆ ಮಾತುಕತೆ ನಡೆಸುತ್ತಿದ್ದಾರೆ. ಏನು ನಡೆಯುತ್ತಿದೆ ಎಂಬುದನ್ನು ಈಗಲೇ ಹೇಳಲು ಆಗುವುದಿಲ್ಲ’ ಎಂದು ತಿಳಿಸಿದರು.

‘ಬಿಜೆಪಿಯ ವರಿಷ್ಠರು ಪದೇ ಪದೇ ಕಲಬುರಗಿಗೆ ಏಕೆ ಬರುತ್ತಿದ್ದಾರೆ, ಯಾರನ್ನು ಟಾರ್ಗೆಟ್ ಮಾಡಿದ್ದಾರೋ ನನಗೆ ಗೊತ್ತಿಲ್ಲ. ತಮ್ಮ ಅಭ್ಯರ್ಥಿಯನ್ನು ನೋಡಿ, ಸಲಹೆ ಕೊಡಲು ಅಥವಾ ಕಾಂಗ್ರೆಸ್‌ನವರನ್ನು ಮುಗಿಸಲು ಬರುತ್ತಿರಬೇಕು. ನೀವೇ ಊಹಿಸಿಕೊಳ್ಳಿ’ ಎಂದು ಖರ್ಗೆ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT