ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು | ಮಳೆಗಾಲದ ಪ್ರವಾಸೋದ್ಯಮ; ಬೇಕಿದೆ ಇನ್ನಷ್ಟು ಕಸುವು

Published 17 ಜುಲೈ 2023, 6:11 IST
Last Updated 17 ಜುಲೈ 2023, 6:11 IST
ಅಕ್ಷರ ಗಾತ್ರ

ಕೆ.ಎಸ್.ಗಿರೀಶ

‘ಕರ್ನಾಟಕದ ಕಾಶ್ಮೀರ’ ಎಂದೇ ಖ್ಯಾತವಾದ ಈ ಕಾಫಿನಾಡು ಕೊಡಗಿನಲ್ಲಿ ಮುಂಗಾರಿನಲ್ಲಿ ಸಂಚರಿಸುತ್ತಿದ್ದರೆ ಬಹು ವಿಸ್ಮಯದ ಅನುಭವಗಳಾಗುತ್ತವೆ. ಮಳೆಗೆ ಮೈದುಂಬಿ ಹರಿಯುವ ನದಿಗಳು, ಧುಮ್ಮಿಕ್ಕುವ ಜಲಪಾತಗಳು, ಹಚ್ಚ ಹಸಿರಿನಿಂದ ಕಂಗೊಳಿಸುವ ಗಿರಿ, ಕಂದರಗಳನ್ನು ಕಣ್ತುಂಬಿಕೊಳ್ಳುವುದೇ ಅಮೃತದ ಘಳಿಗೆಯಂತೆ. ಇಂತಹ ಅನುಭವ ಕೊಡುವ ‘ಮಳೆಗಾಲದ ಪ್ರವಾಸೋದ್ಯಮ’ದ ಪರಿಕಲ್ಪನೆಗೆ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಇನ್ನಷ್ಟು ನೀರೆರೆಯಬೇಕಿದೆ......

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆಗಾಲದಲ್ಲಷ್ಟೇ ಕಣ್ತುಂಬಿಕೊಳ್ಳಬಹುದಾದ ಸ್ಥಳಗಳು ಹೆಚ್ಚಿನ ಸಂಖ್ಯೆಯಲ್ಲಿವೆ ಎಂಬ ವಿಚಾರ ಹೆಚ್ಚಿನ ಜನರಿಗೆ ತಿಳಿದಿಲ್ಲ. ಮಳೆಗಾಲ ಎಂದರೆ ಕೊಡಗು ಜಿಲ್ಲೆಯ ಪಾಲಿಗೆ ಕೇವಲ ಭೂಕುಸಿತ, ಪ್ರವಾಹ ಮಾತ್ರವೇ ಅಲ್ಲ, ಮಳೆಗಾಲ ಎಂದರೆ ಕೊಡಗಿನ ‘ಸುವರ್ಣ ಕಾಲ’ ಎಂಬ ಸಂಗತಿಯನ್ನು ಹೊರ ಜಗತ್ತಿಗೆ ತಿಳಿಸುವ ಅನಿವಾರ್ಯತೆ ಇದೆ.

ಸರ್ವೇ ಸಾಮಾನ್ಯವಾಗಿ ಕೊಡಗಿನಲ್ಲಿ ಅಬ್ಬಿ ಜಲಪಾತ, ಇರ್ಪು ಜಲಪಾತ, ರಾಜಾಸೀಟ್ ಉದ್ಯಾನ, ದುಬಾರೆ ಆನೆಶಿಬಿರ, ನಿಸರ್ಗಧಾಮ, ಹಾರಂಗಿ, ಚಕ್ಲಿಹೊಳೆ ಹೀಗೆ ಕೆಲವೇ ಕೆಲವು ಬೆರಳೆಣಿಕೆಯಷ್ಟು ಪ್ರದೇಶಗಳು ಮಾತ್ರವೇ ಹೆಚ್ಚು ಪ್ರಸಿದ್ಧಿ ಪಡೆದಿವೆ. ಆದರೆ, ಕೊಡಗಿನಲ್ಲಿ ಇದಕ್ಕೂ ಮೀರಿದ ಅನೇಕ ಹತ್ತಾರು ಪ್ರವಾಸಿ ಸ್ಥಳಗಳು ಎಲೆಮರೆಯ ಕಾಯಂತಿದ್ದು, ಅವುಗಳನ್ನು ಪ್ರವಾಸಿಗರಿಗೆ ಪರಿಚಯಿಸಬೇಕಿದೆ.

ಮೈಸೂರು– ಬೆಂಗಳೂರು ಎಕ್ಸ್‌ಪ್ರೆಸ್ ವೇ ನಿರ್ಮಾಣದ ತರುವಾಯವಂತೂ ಕೊಡಗಿನಲ್ಲಿ ತಂಗುವ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದೆ. ಕೇವಲ ಒಂದು ದಿನದ ಪಿಕ್‌ನಿಕ್‌ಗೆ ಎಂದು ಬೆಂಗಳೂರಿನ ಮಂದಿಯೂ ಕೊಡಗನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಮೈಸೂರು–ಕುಶಾಲನಗರ ಚತುಷ್ಪಥ ರಸ್ತೆ ಕಾಮಗಾರಿ ಮುಗಿದರಂತೂ ಕೊಡಗಿನ ಪ್ರವಾಸೋದ್ಯಮ ಒಂದೇ ದಿನಕ್ಕೆ ಕುಗ್ಗಲಿದೆ ಎಂಬುದು ಹೋಟೆಲ್ ಉದ್ಯಮಿಗಳ ಆತಂಕ.

ಕೊಡಗಿಗೆ ಹೆಚ್ಚಿನ ಪ್ರವಾಸಿಗರು ಬರುತ್ತಿದ್ದಾರೆ. ಇವರಿಗೆ ಇಲ್ಲಿನ ಪ್ರವಾಸಿ ಸ್ಥಳಗಳ ಮಾಹಿತಿ ನೀಡುವಂತಹ ಫಲಕಗಳ ಅಳವಡಿಕೆ ವೆಬ್‌ಸೈಟ್‌ನಲ್ಲಿ ಮಾಹಿತಿ ಹಾಕುವುದು ಮೊದಲಾದ ಕ್ರಮಗಳನ್ನು ಕೈಗೊಳ್ಳುತ್ತೇವೆ. ಎಲ್ಲವನ್ನೂ ಒಂದೇ ವೇದಿಕೆಯಲ್ಲಿ ತರುವಂತಹ ಪ್ರಯತ್ನಗಳು ನಡೆಯುತ್ತಿವೆ.
ವೆಂಕಟರ್‌ ರಾಜಾ, ಕೊಡಗು ಜಿಲ್ಲಾಧಿಕಾರಿ

ಮಳೆಗಾಲದಲ್ಲಷ್ಟೇ ಧುಮ್ಮಿಕ್ಕುವ ಜಲಪಾತಗಳು ಇಲ್ಲಿ ಹತ್ತಾರು ಸಂಖ್ಯೆಯಲ್ಲಿವೆ. ಮಡಿಕೇರಿ ಚೆಟ್ಟಳ್ಳಿ ರಸ್ತೆಯಲ್ಲಿ ಅಭ್ಯಾಲ ಜಲಪಾತ, ಸುಂಟಿಕೊಪ್ಪದ ಸಮೀಪ ಹಾಲೇರಿ ಜಲಪಾತ, ಭಾಗಮಂಡಲ– ಕರಿಕೆ ಮಧ್ಯೆ ಸಿಗುವ ಹತ್ತಾರು ಜಲಪಾತಗಳು, ಮಡಿಕೇರಿ– ಮಂಗಳೂರು ರಸ್ತೆಯಲ್ಲಿ ದೇವರಕೊಲ್ಲಿ ಸಮೀಪ ಧುಮ್ಮಿಕ್ಕುವ ಜಲಧಾರೆ... ಹೀಗೆ ಹೇಳುತ್ತಾ ಹೋದರೆ ಮುಗಿಯುವುದೇ ಇಲ್ಲ. ಇಂತಹ ಅನೇಕ ಅಜ್ಞಾತ ಜಲಪಾತಗಳ ಮಾಹಿತಿಯನ್ನು ಹೆಚ್ಚು ಹೆಚ್ಚು ಪ್ರಚಾರಕ್ಕೆ ತರಬೇಕಿದೆ. ಪ್ರವಾಸೋದ್ಯಮ ಇಲಾಖೆ ಮಳೆಗಾಲದಲ್ಲಷ್ಟೇ ಸೃಷ್ಟಿಯಾಗುವ ಜಲಪಾತಗಳನ್ನು ಕುರಿತು ಹೆಚ್ಚಿನ ಪ್ರಚಾರ ನೀಡುವ ಅಗತ್ಯ ಇದೆ.

ಕೊಡಗಿನಲ್ಲಿ ಮಳೆಗಾಲದ ಪ್ರವಾಸೋದ್ಯಮದ ಅಭಿವೃದ್ಧಿಗೆ ಸರ್ಕಾರದ ಮಟ್ಟದಲ್ಲೇ ಉತ್ತೇಜನ ಸಿಗಬೇಕಿದೆ. ‘ಸ್ಕಾಟ್‌ಲ್ಯಾಂಡ್ ಆಫ್‌ ಇಂಡಿಯಾ’ ‘ಕರ್ನಾಟಕದ ಕಾಶ್ಮೀರ’ ಇಂತಹ ಪರಿಕಲ್ಪನೆಗಳನ್ನು ಹೆಚ್ಚು ಹೆಚ್ಚು  ಪ್ರಚಾರ ಮಾಡಬೇಕು. ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಮಾಡಬೇಕು. ಬಹುಮಹಡಿ ವಾಹನ ನಿಲುಗಡೆ ಕಟ್ಟಡಗಳನ್ನು ನಿರ್ಮಿಸಬೇಕು.
ನಾಗೇಂದ್ರಪ್ರಸಾದ್, ಕೊಡಗು ಜಿಲ್ಲಾ ಹೋಟೆಲ್‌ ರೆಸಾರ್ಟ್ಸ್‌ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್‌ ಅಧ್ಯಕ್ಷ

ಮಳೆಗಾಲದಲ್ಲಿ ರ‍್ಯಾಫ್ಟಿಂಗ್ ಮಾಡುವುದೂ ಸಹ ಮತ್ತೊಂದು ವಿಧದ ಸಾಹಸದ ಅನುಭವವನ್ನು ಕಟ್ಟಿಕೊಡುತ್ತದೆ. ಇಲ್ಲಿನ ಕುಶಾಲನಗರದ ದುಬಾರೆ ಸಮೀಪ ಕಾವೇರಿ ನದಿಯಲ್ಲಿ ಹಾಗೂ ಟಿ.ಶೆಟ್ಟಿಗೇರಿಯ ಟಾಟಾ ಚಹಾ ಎಸ್ಟೇಟ್ ಸಮೀಪದ ಬರಪೊಳೆ ಸೇರಿದಂತೆ ರ‍್ಯಾಫ್ಟಿಂಗ್ ನಡೆಸುವ ಸ್ಥಳಗಳ ಮಾಹಿತಿಯನ್ನು ಪ್ರವಾಸೋದ್ಯಮ ಇಲಾಖೆ ಇನ್ನಷ್ಟು ಪ್ರಚುರಪಡಿಸಬೇಕಿದೆ. ಜತೆಗೆ, ಜಲಸಾಹಸ ಕ್ರೀಡೆಗಳಿಗೆ ಇನ್ನಷ್ಟು ಸ್ಥಳಗಳನ್ನು ಗುರುತಿಸಿ,  ಅವುಗಳ ಅಭಿವೃದ್ಧಿಗೂ ಗಮನ ಕೊಡಬೇಕಿದೆ.

ಕೊಡಗಿನಲ್ಲಿ ಮಳೆಗಾಲದ ಪ್ರವಾಸೋದ್ಯಮ ಗರಿಗೆದರಲು ಇಲ್ಲಿ ಹಲವು ಮೇಳಗಳನ್ನು ಆಯೋಜಿಸುವ ಅವಕಾಶಗಳಿವೆ. ವೈನ್‌ ಮೇಳ ಜೇನು ಮೇಳ ಆಹಾರ ಮೇಳಗಳನ್ನು ಆಯೋಜಿಸಬಹುದು. ಈ ಮೂಲಕ ಪ್ರವಾಸೋದ್ಯಮಕ್ಕೆ ಉತ್ತೇಜನ ಕೊಡಬಹುದು.
ನವೀನ್‌ ಅಂಬೆಕಲ್, ಪ್ರಧಾನ ಕಾರ್ಯದರ್ಶಿ, ಚೇಂಬರ್ ಆಫ್‌ ಕಾಮರ್ಸ್

ಮಳೆಗಾಲದಲ್ಲಿ ಈ ಎರಡರ ಜತೆಗೆ ಮೋಡಗಳಿಂದ ಆವೃತವಾದ ಬೆಟ್ಟಗುಡ್ಡಗಳನ್ನು ನೋಡುವುದೂ ಅನನ್ಯ ಅನುಭವವನ್ನು ಕಟ್ಟಿಕೊಡುತ್ತದೆ. ಇಂತಹ ಕೆಲವೊಂದು ಗುಡ್ಡ, ಬೆಟ್ಟಗಳನ್ನು ಗೊತ್ತುಪಡಿಸಿ, ಪ್ರವಾಸಿಗರ ಚಾರಣಕ್ಕೊ ಅಥವಾ ವೀಕ್ಷಣೆಗೋ ಸ್ಥಳಗಳನ್ನು ಅಭಿವೃದ್ಧಿಪಡಿಸಲು ಅವಕಾಶವಿದೆ. ಇಂತಹ ಎಲ್ಲ ಸಾಧ್ಯತೆಗಳನ್ನು ಪರಿಶೀಲಿಸಿ, ಪ್ರವಾಸೋದ್ಯಮ ಇಲಾಖೆ ಕೊಡಗಿನಲ್ಲಿ ಮಳೆಗಾಲದ ಪ್ರವಾಸೋದ್ಯಮಕ್ಕೆ ಇನ್ನಷ್ಟು ಇಂಬು ಕೊಡಬೇಕಿದೆ.

ಇಲ್ಲಿ ಮಳೆ ನೋಡುವುದೇ ಚೆಂದ. ಹೆಚ್ಚು ಮಳೆ ಬೀಳುವ ಸ್ಥಳಗಳನ್ನು ಗುರುತಿಸಿ, ಮಳೆ ನೋಡುವುದಕ್ಕೆಂದೇ ವಿಶೇಷ ತಾಣಗಳನ್ನು ನಿರ್ಮಿಸಬಹುದು. ಮಳೆಗಾಲದ ತಿನಿಸುಗಳಾದ ಏಡಿ, ಕಳಲೆ, ಆಟಿ ಸೊಪ್ಪು, ಮರಕೆಸ ಮೊದಲಾದವುಗಳಿಗೆ ವಿಶೇಷ ಬ್ರಾಂಡಿಂಗ್ ಮಾಡಿ ಮಾರಾಟಕ್ಕೆ ವ್ಯವಸ್ಥೆ ಮಾಡುವುದೂ ಸೇರಿದಂತೆ ಹಲವು ಹೊಸ ಹೊಸ ಪರಿಕಲ್ಪನೆಗಳನ್ನು ಪರಿಚಯಿಸಿದರೆ ಮಳೆಗಾಲದ ಪ್ರವಾಸೋದ್ಯಮ ಗರಿಗೆದರುತ್ತದೆ. ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಟಾನಿಕ್ ದೊರೆತಂತಾಗುತ್ತದೆ.

ಕೊಡಗಿನಲ್ಲಿ ಮುಖ್ಯವಾಗಿ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕಿದೆ. ದುಬಾರೆಯಲ್ಲಿ ಸೇತುವೆ ನಿರ್ಮಾಣ ಮಾಡಬೇಕು. ನೀರು ಕಡಿಮೆ ಇದ್ದಾಗ ಅಲ್ಲಿ ಬೋಟಿಂಗ್ ಸಾಧ್ಯವಿಲ್ಲ. ಚೇಲಾವರ ಜಲಪಾತ ಸೇರಿದಂತೆ ಅನೇಕ ಜಲಪಾತಗಳನ್ನು ಅಭಿವೃದ್ಧಿಪಡಿಸಬೇಕು. ಜಲಸಾಹಸ ಕ್ರೀಡೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ರಾಜಾಸೀಟ್‌ನಲ್ಲಿ ರೈಲಿನ ವ್ಯವಸ್ಥೆ ಕಲ್ಪಿಸಬೇಕು.
ವಸಂತ ಕುಪ್ಪಂಡ, ಕೂರ್ಗ್ ಟ್ರಾವಲ್ ವರ್ಲ್ಡ್ ಮಾಲೀಕರು

ವಾಹನ ನಿಲುಗಡೆಗೆ ಸೂಕ್ತ ಸ್ಥಳಾವಕಾಶ‌ ಕಲ್ಪಿಸಿ

ಮುಖ್ಯವಾಗಿ ಕೊಡಗಿನಲ್ಲಿ ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಿದೆ. ಚಾಮುಂಡಿಬೆಟ್ಟದಲ್ಲಿ ನಿರ್ಮಿಸಿರುವಂತೆ ಬಹುಮಹಡಿ ವಾಹನ ನಿಲುಗಡೆ ತಾಣವನ್ನು ಕೊಡಗಿನ ಅಲ್ಲಲ್ಲಿ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ನಿರ್ಮಿಸಬೇಕು ಎಂದು ಹೋಟೆಲ್, ರೆಸಾರ್ಟ್ ಮಾಲೀಕರ ಸಂಘದ ಅಧ್ಯಕ್ಷ ನಾಗೇಂದ್ರಪ್ರಸಾದ್ ಒತ್ತಾಯಿಸುತ್ತಾರೆ.

ಮಳೆಗಾಲದ ಆಹಾರ ಮೇಳ ಏರ್ಪಡಿಸಿ

ಚೇಂಬರ್ ಆಫ್‌ ಕಾಮರ್ಸ್‌ನ  ಪ್ರಧಾನ ಕಾರ್ಯದರ್ಶಿ ನವೀನ್‌ ಅಂಬೆಕಲ್ ಅವರು ಮಳೆಗಾಲದ ಆಹಾರ ಮೇಳ ಏರ್ಪಡಿಸಿ ಎಂದು ಸಲಹೆ ಕೊಡುತ್ತಾರೆ. ಹೊರ ಜಿಲ್ಲೆಗಳಲ್ಲಿ ಹಚ್ಚಿನ ಪ್ರಚಾರ ನಡೆಸಿದರೆ ಮಳೆಗಾಲದ ಪ್ರವಾಸೋದ್ಯಮಕ್ಕೆ ಉತ್ತೇಜನ ಕೊಡಬಹುದು ಎಂದು ಹೇಳುತ್ತಾರೆ.

ಮೂಲಸೌಕರ್ಯ ಕಲ್ಪಿಸಿ ಕೊಡಗಿನಲ್ಲಿ ಕೃಷಿ ತೋಟಗಾರಿಕೆ ನಷ್ಟದ ಹಾದಿಯಲ್ಲಿದೆ. ಇಲ್ಲಿ ಕೈಗಾರಿಕೆಗಳೂ ಇಲ್ಲ. ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಬೇಕು. ರಸ್ತೆ ಅಭಿವೃದ್ಧಿ ವಾಹನ ನಿಲುಗಡೆಗೆ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡಬೇಕು.
ಶರಣು ಅಯ್ಯಪ್ಪ, ವಾಹನ ಚಾಲಕರು

ಇಲ್ಲಿ ಮಳೆಗಾಲದಲ್ಲಷ್ಟೇ ಸಿಗುವ ಕಣಿಲೆ, ಹಲಸಿನ ಬೀಜಗಳ ತಿನಿಸುಗಳು, ಮರಕೆಸ, ಏಡಿ ಹೀಗೆ ನಾನಾ ಬಗೆಯ ವಿಶಿಷ್ಟ ತಿನಿಸುಗಳನ್ನು ಪ್ರಧಾನವಾಗಿರಿಸಿಕೊಂಡು ಆಹಾರ ಮೇಳ, ವೈನ್ ಮೇಳ, ಜೇನು ಮೇಳಗಳನ್ನು ಆಯೋಜಿಸಲು ಆವಕಾಶ ಇದೆ ಎಂದು ಅವರು ಸಲಹೆ ನೀಡುತ್ತಾರೆ.

ಪ್ರವಾಸಿ ತಾಣಗಳ ಫಲಕ ಹಾಕಿ

ಮಡಿಕೇರಿಯಲ್ಲಿ ಹೆಚ್ಚಿನ ಕಡೆ ಪ್ರವಾಸಿ ಸ್ಥಳಗಳನ್ನು ಕುರಿತು ಮಾಹಿತಿ ಫಲಕಗಳು ಇಲ್ಲ
ಮಡಿಕೇರಿಯಲ್ಲಿ ಹೆಚ್ಚಿನ ಕಡೆ ಪ್ರವಾಸಿ ಸ್ಥಳಗಳನ್ನು ಕುರಿತು ಮಾಹಿತಿ ಫಲಕಗಳು ಇಲ್ಲ

ಕೊಡಗಿನಲ್ಲಿ ಪ್ರವಾಸಿ ಸ್ಥಳಗಳ ಫಲಕಗಳು ಸಾಕಷ್ಟು ಕಡೆ ಇಲ್ಲ. ಇದ್ದರೂ ಅವು ಕಣ್ಣಿಗೆ ಬೀಳದ ಹಾಗೇ ಇವೆ. ಖಾಸಗಿ ಹೋಟೆಲ್, ರೆಸಾರ್ಟ್‌ಗಳ ಫಲಕಗಳು ಕಣ್ಣಿಗೆ ಬೀಳುವ ಹಾಗೆ ಪ್ರವಾಸೋದ್ಯಮ ಇಲಾಖೆ ಪ್ರವಾಸಿ ತಾಣಗಳ ಮಾಹಿತಿಗಳಿರುವ ಫಲಕಗಳನ್ನು ಆಯಕಟ್ಟಿನ ಸ್ಥಳದಲ್ಲಿ ಅಳವಡಿಸಬೇಕು. ಇದರಿಂದ ಹೊರಗಿನಿಂದ ಬರುವ ಪ್ರವಾಸಿಗಳಿಗೆ ಸುಲಭವಾಗಿ ಪ್ರವಾಸಿ ಸ್ಥಳಗಳನ್ನು ತಲುಪಲು ಅನುಕೂಲವಾಗುತ್ತದೆ.

ಇರುವ ಫಲಕಗಳೂ ಮಾಸಿದ್ದು ಇನ್ನಷ್ಟು ಮಾಹಿತಿ ಫಲಕಗಳ ಅಗತ್ಯ ಇದೆ
ಇರುವ ಫಲಕಗಳೂ ಮಾಸಿದ್ದು ಇನ್ನಷ್ಟು ಮಾಹಿತಿ ಫಲಕಗಳ ಅಗತ್ಯ ಇದೆ
ಕೊಡಗು ಜಿಲ್ಲೆಯ ಚೆಟ್ಟಳ್ಳಿ– ಸಿದ್ದಾಪುರ ರಸ್ತೆಯಲ್ಲಿ ಮುಂಗಾರು ಬಂತೆಂದರೆ ಅನೇಕ ಜಲಪಾತಗಳು ರಸ್ತೆಯುದ್ದಕ್ಕೂ ಭೋರ್ಗರೆಯುತ್ತಿವೆ. ಇವುಗಳು ಯಾವುವೂ ಅಷ್ಟು ಪ್ರಸಿದ್ಧಿಗೆ ಬಂದಿಲ್ಲ. ಅವುಗಳಲ್ಲಿ ಒಂದಾದ ಅಬ್ಯಾಲ ಜಲಪಾತ 60ರಿಂದ 70 ಅಡಿಗಳಷ್ಟು ಎತ್ತರದಿಂದ ಬೆಳ್ನೊರೆಯಂತೆ ಧರೆಗಿಳಿಯುತ್ತಿರುವ ದೃಶ್ಯ ಮಳೆಗಾಲದಲ್ಲಿ ಮಾತ್ರವೆ  ಕಂಡು ಬರುತ್ತವೆ.
ಕೊಡಗು ಜಿಲ್ಲೆಯ ಚೆಟ್ಟಳ್ಳಿ– ಸಿದ್ದಾಪುರ ರಸ್ತೆಯಲ್ಲಿ ಮುಂಗಾರು ಬಂತೆಂದರೆ ಅನೇಕ ಜಲಪಾತಗಳು ರಸ್ತೆಯುದ್ದಕ್ಕೂ ಭೋರ್ಗರೆಯುತ್ತಿವೆ. ಇವುಗಳು ಯಾವುವೂ ಅಷ್ಟು ಪ್ರಸಿದ್ಧಿಗೆ ಬಂದಿಲ್ಲ. ಅವುಗಳಲ್ಲಿ ಒಂದಾದ ಅಬ್ಯಾಲ ಜಲಪಾತ 60ರಿಂದ 70 ಅಡಿಗಳಷ್ಟು ಎತ್ತರದಿಂದ ಬೆಳ್ನೊರೆಯಂತೆ ಧರೆಗಿಳಿಯುತ್ತಿರುವ ದೃಶ್ಯ ಮಳೆಗಾಲದಲ್ಲಿ ಮಾತ್ರವೆ  ಕಂಡು ಬರುತ್ತವೆ.
ಸೋಮವಾರಪೇಟೆ ತಾಲ್ಲೂಕಿನ ಗರ್ವಾಲೆ ಗ್ರಾಮದ ಜ್ಞಾನಗಂಗಾ ಜಲಪಾತ
ಸೋಮವಾರಪೇಟೆ ತಾಲ್ಲೂಕಿನ ಗರ್ವಾಲೆ ಗ್ರಾಮದ ಜ್ಞಾನಗಂಗಾ ಜಲಪಾತ
ಸೋಮವಾರಪೇಟೆ ತಾಲ್ಲೂಕಿನ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಒಂದು ಜಲಪಾತ 
ಸೋಮವಾರಪೇಟೆ ತಾಲ್ಲೂಕಿನ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಒಂದು ಜಲಪಾತ 
ಮೇರನಕೋಟೆ ಬೆಟ್ಟದ ಮೇಲಿಂದ ಕಾಣಸಿಗುವ ಮಲ್ಲಳ್ಳಿ ಜಲಪಾತ
ಮೇರನಕೋಟೆ ಬೆಟ್ಟದ ಮೇಲಿಂದ ಕಾಣಸಿಗುವ ಮಲ್ಲಳ್ಳಿ ಜಲಪಾತ
ಮಡಿಕೇರಿಯಲ್ಲಿ ದಟ್ಟ ಮಂಜು ಆವರಿಸಿದಾಗ ಕಾಣಸಿಗುವ ಅದ್ಭುತ ದೃಶ್ಯಕಾವ್ಯ
ಮಡಿಕೇರಿಯಲ್ಲಿ ದಟ್ಟ ಮಂಜು ಆವರಿಸಿದಾಗ ಕಾಣಸಿಗುವ ಅದ್ಭುತ ದೃಶ್ಯಕಾವ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT