‘ಸ್ಥಳ ಆಯ್ಕೆಯಲ್ಲಿ ಎಡವಿದ ನಿರ್ಮಿತಿ’
ರಸ್ತೆಯಲ್ಲಿ ಶಾಶ್ವತ ತಂಗುದಾಣ ನಿರ್ಮಿಸಿದ್ದೇ ತಪ್ಪು ಮುಖ್ಯರಸ್ತೆಯಾಗಿದ್ದು ವಾಹನಗಳ ದಟ್ಟಣೆ ಇರುತ್ತದೆ. ಹಾಗಾಗಿ ರಸ್ತೆಗೆ ಅಡ್ಡಲಾಗಿರುವ ಕಟ್ಟಡದಿಂದ ಸಂಚಾರಕ್ಕೆ ತೊಂದರೆಯಾಗುತ್ತದೆ ಎಂಬ ಬಗ್ಗೆ ಆರಂಭದಲ್ಲೇ ಸಾರ್ವಜನಿಕರಿಂದ ಅಪಸ್ವರ ಕೇಳಿಬಂದಿದ್ದವು. ಅದನ್ನು ಲೆಕ್ಕಿಸದ ನಿರ್ಮಿತಿ ಕೇಂದ್ರದ ಎಂಜಿನಿಯರ್‌ಗಳು ಸೂಕ್ತ ಸ್ಥಳ ಮತ್ತು ತಂಗುದಾಣದ ವಿನ್ಯಾಸ ಆಯ್ಕೆ ವಿಷಯದಲ್ಲಿ ವಿವೇಚನೆ ಇಲ್ಲದಂತೆ ಹಣ ಖರ್ಚು ಮಾಡುವ ಒಂದೇ ಉದ್ದೇಶದಿಂದ ಏಕಾಏಕಿ ರಸ್ತೆಯಲ್ಲಿ ಕಟ್ಟಡ ನಿರ್ಮಿಸಿದ್ದು ಈಗ ತೊಡಕಾಗಿ ಪರಿಣಮಿಸಿದೆ. ಆಗಿನ ಶಾಸಕರ ಬೆಂಬಲಿಗರೇ ಸ್ಥಳ ಆಯ್ಕೆ ಮಾಡಿದ್ದರು. ಅದರ ಸಾಧಕ ಬಾಧಕಗಳ ಬಗ್ಗೆ ನಿರ್ಮಿತಿ ಎಂಜಿನಿಯರ್‌ಗಳು ಪರಿಶೀಲಿಸುವ ಗೋಜಿಗೆ ಹೋಗದ ಕಾರಣ ಈಗ ಇಕ್ಕಟ್ಟಿಗೆ ಸಿಲುಕುವಂತಾಗಿದೆ ಎಂದು ಮೂಲಗಳು ತಿಳಿಸಿವೆ.