ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ಸಂಘ, ದಸಂಸದಿಂದ ಪ್ರತಿಭಟನೆ

ಎಪಿಎಂಸಿ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ
Last Updated 17 ಸೆಪ್ಟೆಂಬರ್ 2020, 7:10 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಎಪಿಎಂಸಿ ಮತ್ತು ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ಹಾಗೂ ವಿದ್ಯುತ್‌ ಖಾಸಗೀಕರಣ ಖಂಡಿಸಿ ರೈತ ಸಂಘ ಮತ್ತು ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಬುಧವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಇಲ್ಲಿನ ಮಿನಿ ವಿಧಾನಸೌಧದ ಎದುರು ಅರ್ಧ ತಾಸಿಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

‘ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದರೆ ಕೃಷಿ ಉತ್ಪನ್ನಗಳ ಬೆಲೆ ನಿಗಧಿ ಅಧಿಕಾರ ಬಹುರಾಷ್ಟ್ರೀಯ ಕಂಪನಿಗಳಿಗೆ ಸಿಗುತ್ತದೆ. ರೈತರ ಶೋಷಣೆಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಶ್ರೀಮಂತರು ಸುಲಭವಾಗಿ ಬಡ ರೈತರ ಜಮೀನು ಖರೀದಿಸಲು ಸರ್ಕಾರ ಅನುವು ಮಾಡಿಕೊಡುತ್ತಿದೆ. ಕ್ಷಣಿಕ ಆಸೆಗೆ ರೈತರು ಜಮೀನು ಮಾರಿಕೊಳ್ಳಲಿದ್ದಾರೆ. ಶ್ರೀಮಂತರು ಮತ್ತು ಬಡವರ ನಡುವೆ ಮತ್ತಷ್ಟು ಕಂದಕ ಸೃಷ್ಟಿಯಾಗಲಿದೆ. ಹಾಗಾಗಿ ಎಪಿಎಂಸಿ ಹಾಗೂ ಭೂ ಸುಧಾರಣಾ ಕಾಯ್ದೆಗಳಿಗೆ ತರಲು ಉದ್ದೇಶಿಸಿರುವ ತಿದ್ದುಪಡಿಗಳನ್ನು ಕೈ ಬಿಡಬೇಕು’ ಎಂದು ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮರಳಾಗಾಲ ಕೃಷ್ಣೇಗೌಡ ಆಗ್ರಹಿಸಿದರು.

‘ವಿದ್ಯುತ್‌ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆಯನ್ನು ಖಾಸಗೀಕರಣ ಮಾಡಲು ಹೊರಟಿರುವ ಸರ್ಕಾರದ ಕ್ರಮ ಸರಿಯಲ್ಲ. ಕೇಂದ್ರ ಸರ್ಕಾರ ರೈಲು, ವಿಮಾನ ಸಂಸ್ಥೆಗಳನ್ನು ಕೂಡಾ ಖಾಸಗೀಕರಣ ಮಾಡಲು ಮುಂದಾಗಿದೆ. ಇದರಿಂದ ಸಾರ್ವಜನಿಕ ಕ್ಷೇತ್ರ ದುರ್ಬಲಗೊಳ್ಳಲಿದೆ. ಪ್ರಜಾಪ್ರಭುತ್ವಕ್ಕೆ ಕೊಡಲಿ ಪೆಟ್ಟು ಬೀಳಲಿದೆ. ಜನಪ್ರತಿನಿಧಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನ ವಿರೋಧಿ ನೀತಿಗಳನ್ನು ಗಟ್ಟಿ ಧ್ವನಿಯಲ್ಲಿ ವಿರೋಧಿಸಬೇಕು. ಸದನದಲ್ಲಿ ಒಪ್ಪಿಗೆ ಸಿಗದಂತೆ ಮಾಡಬೇಕು’ ಎಂದು ಪಿಎಸ್‌ಎಸ್‌ಕೆ ಮಾಜಿ ನಿರ್ದೇಶಕ ಪಾಂಡು ಹೇಳಿದರು.

ಶಾಸಕ ರವೀಂದ್ರ ಶ್ರೀಕಂಠಯ್ಯ ಅವರನ್ನು ಪ್ರತಿಭಟನಕಾರರು ತಾ.ಪಂ. ಕಚೇರಿ ಆವರಣದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು. ಹಾಗೂ ತಾಲ್ಲೂಕು ಆಡಳಿತದ ಮೂಲಕ ಸರ್ಕಾರಕ್ಕೆ ಪ್ರತ್ಯೇಕ ಮನವಿ ಸಲ್ಲಿಸಿದರು.

ಕೃಷಿಕ ಸಮಾಜದ ನಿರ್ದೇಶಕ ಕಡತನಾಳು ಬಾಲಕೃಷ್ಣ, ರೈತ ಸಂಘದ ಕಾರ್ಯದರ್ಶಿ ಶಂಕರೇಗೌಡ, ಕಾರ್ಯಾಧ್ಯಕ್ಷ ಬಿ.ಎಸ್‌. ರಮೇಶ್‌, ತಮ್ಮಣ್ಣ, ಕಾಳೇಗೌಡ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ರವಿಚಂದ್ರ, ಕುಬೇರಪ್ಪ, ಜಯರಾಮೇಗೌಡ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT