ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಜಿಲ್ಲಾಸ್ಪತ್ರೆಯಲ್ಲಿ 500 ಬೆಡ್‌

ರೋಗಿಗಳ ಸಂಖ್ಯೆ ಹೆಚ್ಚಾದರೆ 100 ಹಾಸಿಗೆಗಳ ಇನ್ನೊಂದು ವಾರ್ಡ್‌ ವಿಸ್ತರಣೆ, ವೈದ್ಯರಿಂದ ಸಿದ್ಧತೆ
Last Updated 18 ಜನವರಿ 2022, 20:30 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲೆಯಾದ್ಯಂತ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಮಿಮ್ಸ್‌ ಆಸ್ಪತ್ರೆಯಲ್ಲಿ ಕೋವಿಡ್‌ ರೋಗಿಗಳಿಗಾಗಿಯೇ 500 ಹಾಸಿಗೆಯುಳ್ಳ ವಾರ್ಡ್‌ಗಳನ್ನು ಮೀಸಲಿಡಲಾಗಿದೆ.

ಕೋವಿಡ್‌ 2ನೇ ಅಲೆಯಲ್ಲಿ ಹಾಸಿಗೆ ಕೊರತೆಯಾಗಿ ರೋಗಿಗಳು ತೀವ್ರ ಸಂಕಷ್ಟ ಪರಿಸ್ಥಿತಿ ಅನುಭವಿಸಿದರು. ತರಾತುರಿಯಲ್ಲಿ ಹೊಸ ವಾರ್ಡ್‌ ನಿರ್ಮಿಸಿದರೂ ಆಮ್ಲಜನರ ಪೂರೈಕೆ ಇರದ ಕಾರಣ ಅದು ಉಪಯೋಗಕ್ಕೆ ಬರಲಿಲ್ಲ. ಸದ್ಯ ಹೊಸ ಆಮ್ಲಜನಕ ಘಟಕ ನಿರ್ಮಾಣ ಮಾಡಲಾಗಿದ್ದು ಎಲ್ಲಾ ವಾರ್ಡ್‌ಗಳಿಗೂ ಆಮ್ಲಜನಕ ಸಂಪರ್ಕ ಕಲ್ಪಿಸಲಾಗಿದೆ. ಆ ಮೂಲಕ 3ನೇ ಅಲೆಯನ್ನು ಪರಿಣಾಮಗಾರಿಯಾಗಿ ಎದುರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಜಿಲ್ಲೆಯ ಜನರಿಗೆ ಸಮರ್ಪಕ ವೈದ್ಯಕೀಯ ಸೌಲಭ್ಯ ಸಿಗುವಂತಾಗಲು ವಿವಿಧ ಸಂಘಟನೆಗಳು ದಾರಾಳವಾಗಿ ಜಿಲ್ಲಾಸ್ಪತ್ರೆಗೆ ದಾನ ನೀಡಿವೆ. ಚಿತ್ರ ನಿರ್ದೇಶಕ ಕಿರಗಂದೂರು ವಿಜಯ್‌ ತಮ್ಮ ಹೊಂಬಾಳೆ ಫಿಲ್ಮ್ಸ್‌ ಸಂಸ್ಥೆಯ ಮೂಲಕ ಹೊಸ ಐಸಿಯು ವಾರ್ಡ್‌ ಕಟ್ಟಿಸಿಕೊಟ್ಟಿದ್ದಾರೆ. ಅಮೆರಿಕದಲ್ಲಿ ಸರ್ಜನ್‌ ಜನರಲ್‌ ಆಗಿರುವ, ತಾಲ್ಲೂಕಿನ ಹಲ್ಲೇಗೆರೆ ಮೂಲದ ಡಾ.ವಿವೇಕ್‌ ಕುಟುಂಬರ ಸ್ಕೋಪ್‌ ಫೌಂಡೇಷನ್‌ನಿಂದ ವೈದ್ಯಕೀಯ ಉಪಕರಣ ನೀಡಲಾಗಿದೆ. ಅವೆಲ್ಲವೂ 3ನೇ ಅಲೆಯನ್ನು ಪರಿಣಾಮಕಾರಿಯಾಗಿ ಎದುರಿಸಲು ಸಹಾಯಕ್ಕೆ ಬರಲಿವೆ.

ಒಟ್ಟಾರೆ ಜಿಲ್ಲಾಸ್ಪತ್ರೆಯಲ್ಲಿ 850 ಹಾಸಿಗೆ ಸೌಲಭ್ಯವಿದೆ. ಅದರಲ್ಲಿ ಹೆರಿಗೆ ವಿಭಾಗಕ್ಕೆ 150, ಮಕ್ಕಳ ಆಸ್ಪತ್ರೆಗೆ 100 ಹಾಸಿಗೆ ಮೀಸಲಿಡಲಾಗಿದೆ. ಇಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿರುವ ಕಾರಣ ಇವುಗಳನ್ನು ಕೋವಿಡ್‌ ಸೇವೆಗೆ ಬಳಸಿಕೊಳ್ಳಲು ಸಾಧ್ಯವಿಲ್ಲ. ಮುಂದೆ ಪರಿಸ್ಥಿತಿ ಬಿಗಡಾಯಿಸಿದರೆ ಈಗಿರುವ 500 ಹಾಸಿಗೆ ಸಾಮರ್ಥ್ಯದ ಜೊತೆಗೆ ಬೇರೆ ವಿಭಾಗದಲ್ಲಿ 100 ಹಾಸಿಗೆಗಳನ್ನು ಹೆಚ್ಚುವರಿಯಾಗಿ ವಿಸ್ತರಣೆ ಮಾಡಿಕೊಳ್ಳಬಹುದು.

ಈಗ ಸಿದ್ಧಗೊಂಡಿರುವ ಒಟ್ಟು 500 ಹಾಸಿಗೆಯಲ್ಲಿ 364 ಹಾಸಿಗೆಗಳಿಗೆ ಆಮ್ಲಜನಕ ಸಂಪರ್ಕ ಕಲ್ಪಿಸಲಾಗಿದೆ. 76 ಹಾಸಿಗೆಗಳ ಐಸಿಯು ಸಿದ್ಧಗೊಂಡಿದೆ, 60 ವೆಂಟಿಲೇಟರ್‌ ಹಾಸಿಗೆಗಳಿವೆ. ಸದ್ಯ ಆಮ್ಲಜನಕ ಅವಶ್ಯಕತೆಯುಳ್ಳ ರೋಗಿಗಳನ್ನು ಮಾತ್ರ ಜಿಲ್ಲಾಸ್ಪತ್ರೆಯಲ್ಲಿ ದಾಖಲು ಮಾಡಿಕೊಳ್ಳಲಾಗುತ್ತಿದೆ. ಯಾವುದೇ ರೋಗ ಲಕ್ಷಣ ಇಲ್ಲದ ಕೋವಿಡ್‌ ರೋಗಿಗಳನ್ನು ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಒಕ್ಕಲಿಗರ ವಿದ್ಯಾರ್ಥಿ ನಿಲಯದ ಕೋವಿಡ್‌ ಕೇರ್‌ ಕೇಂದ್ರದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಆಮ್ಲಜನಕ ಸಾಮರ್ಥ್ಯ ಎಷ್ಟಿದೆ?: 2ನೇ ಅಲೆ ಸಂದರ್ಭದಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಉಂಟಾದ ಆಮ್ಲಜನಕ ಕೊರತೆ ರಾಜ್ಯದ ಗಮನ ಸೆಳೆದಿತ್ತು, ಆದರೆ ಈಗ ಅಂತಹ ಪರಿಸ್ಥಿತಿ ಇಲ್ಲ. 13 ಕೆ.ಎಲ್‌ (ಕಿಲೋ ಲೀಟರ್‌) ದ್ರವರೂಪದ ವೈದ್ಯಕೀಯ ಆಮ್ಲಜನಕ ಘಟಕ ಜಿಲ್ಲಾಸ್ಪತ್ರೆ ಆವರಣದಲ್ಲಿದೆ.

ಜೊತೆಗೆ ಹೊಸದಾಗಿ 1 ಸಾವಿರ ಎಲ್‌ಪಿಎಂ (ಲೀಟರ್‌ ಪರ್‌ ಮಿನಿಟ್‌) ಸಾಮರ್ಥ್ಯದ ಆಮ್ಲಜನಕ ಉತ್ಪಾದನಾ ಘಟಕ ನಿರ್ಮಾಣ ಮಾಡಲಾಗಿದೆ. ವಿವಿಧ ಸಂಘಸಂಸ್ಥೆಗಳ ಸಹಾಯಧನ ಬಳಸಿಕೊಂಡು ಇನ್ನೊಂದು 390 ಎಲ್‌ಪಿಎಂ ಸಾಮರ್ಥ್ಯದ ಹೊಸ ಆಮ್ಲಜನಕ ಉತ್ಪಾದನಾ ಘಟಕ ನಿರ್ಮಾಣಗೊಂಡಿದ್ದು ಕಾರ್ಯನಿರ್ವಹಣೆಯಲ್ಲಿದೆ.

ಈ ಮೂರು ಘಟಕಗಳ ಜೊತೆಗೆ ಮಿಮ್ಸ್‌ ಆಸ್ಪತ್ರೆಯಲ್ಲಿ 94 ಜಂಬೋ ಸಿಲಿಂಡರ್‌ಗಳಿದ್ದು ಅವುಗಳಲ್ಲಿ 7 ಸಾವಿರ ಕೆಎಲ್‌ ಆಮ್ಲಜನಕ ಸಂಗ್ರಹಿಸಿಕೊಳ್ಳಬಹುದಾಗಿದೆ. ಜೊತೆಗೆ 28 ಬಿ ಮಾದರಿ ಸಿಲಿಂಡರ್‌ಗಳಿದ್ದು ಅವುಗಳಲ್ಲಿ 1,500 ಕೆಎಲ್‌ ಆಮ್ಲಜನಕ ದೊರೆಯುತ್ತದೆ. ಇವುಗಳ ಜೊತೆಗೆ ದಾನಿಗಳು ನೀಡಿರುವ ಆಮ್ಲಜನಕ ಕಾನ್ಸಂಟ್ರೇಟರ್‌ಗಳು ಕೂಡ ಸಹಾಯಕ್ಕೆ ಬರಲಿವೆ.

‘ಸದ್ಯ ಜಿಲ್ಲಾಸ್ಪತ್ರೆಗೆ ಬರುತ್ತಿರುವ ಕೋವಿಡ್‌ ರೋಗಿಗಳಿಗೆ ಆಮ್ಲಜನಕದ ಅವಶ್ಯಕತೆ ಬರುತ್ತಿಲ್ಲ. ಬಂದವರೆಲ್ಲರೂ 2–3 ದಿನಗಳಲ್ಲಿ ಗುಣಮುಖರಾಗಿ ಮನೆಗೆ ಮರಳುತ್ತಿದ್ದಾರೆ. ಉಸಿರಾಟದ ಸಮಸ್ಯೆ ಇರುವವರನ್ನು ಮಾತ್ರ ಇಲ್ಲಿ ಇರಿಸಿಕೊಳ್ಳುತ್ತಿದ್ದೇವೆ. ಮುಂದೆ ಯಾವುದೇ ಪರಿಸ್ಥಿತಿ ಬಂದರೂ ಅದರನ್ನು ಎದುರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಮಿಮ್ಸ್‌ ನಿರ್ದೇಶಕ ಡಾ.ಎಂ.ಆರ್‌.ಹರೀಶ್‌ ತಿಳಿಸಿದರು.

ವಿದ್ಯುತ್‌ ವೈರಿಂಗ್‌ ಸರಿಪಡಿಸಲು ಒತ್ತಾಯ

ಮಿಮ್ಸ್‌ ಆಸ್ಪತ್ರೆಯ ವಿದ್ಯುತ್‌ ವೈರಿಂಗ್‌ ವ್ಯವಸ್ಥೆ ತುಂಬಾ ಹಳೆಯದಾಗಿದ್ದು ವಿದ್ಯುತ್‌ ವ್ಯತ್ಯಯ ಉಂಟಾಗುತ್ತಿದೆ. ಇದರಿಂದ ಆಮ್ಲಜನಕ, ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಪ್ರಾಣಕ್ಕೆ ತೊಂದರೆಯಾಗುತ್ತಿದೆ. ಹೀಗಾಗಿ ಹಳೆಯ ವಿದ್ಯುತ್‌ ವೈರಿಂಗ್‌ ವ್ಯವಸ್ಥೆಯನ್ನು ಬದಲಿಸಿ ಹೊಸದಾಗಿ ವೈರಿಂಗ್‌ ಮಾಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

‘2ನೇ ಕೋವಿಡ್‌ ಅಲೆಯ ವೇಳೆ ಕ್ಷಣ ಮಾತ್ರದಲ್ಲಿ ಉಂಟಾದ ವಿದ್ಯುತ್‌ ವ್ಯತ್ಯಯದಿಂದ 3–4 ರೋಗಿಗಳು ಮೃತಪಟ್ಟಿದ್ದರು. ಇದಕ್ಕೆ ವೈರಿಂಗ್‌ನಲ್ಲಿರುವ ದೋಷವೇ ಕಾರಣ. ಮಿಮ್ಸ್‌ ವೈದ್ಯರು ಇದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ತಂತ್ರಜ್ಞರಾದ ರವಿಕುಮಾರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT