ಶುಕ್ರವಾರ, ಮೇ 20, 2022
19 °C
ಮಂಡ್ಯದಲ್ಲಿ ಬಿಜೆಪಿಗಿದ್ದ ಮತಗಳು ಏನಾದವು ಎಂದು ಪ್ರಶ್ನೆ

ಬಿಜೆಪಿ ಮತಗಳನ್ನು ಕಾಂಗ್ರೆಸ್‌ಗೆ ಹಾಕಿಸಿರುವ ಸಚಿವ ನಾರಾಯಣ ಗೌಡ: ಜೆಡಿಎಸ್‌ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆ.ಆರ್.ಪೇಟೆ: ‘ವಿಧಾನ ಪರಿಷತ್ ಚುನಾವಣೆಯಲ್ಲಿ ಜಿಲ್ಲೆಯ ಬಿಜೆಪಿ ಬೆಂಬಲಿಗರ ಮತಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಅವರು ಕಾಂಗ್ರೆಸ್‌ ಪಕ್ಷಕ್ಕೆ ಮಾರಾಟ ಮಾಡಿದ್ದಾರೆ. ಈ ಮೂಲಕ ಜೆಡಿಎಸ್ ಸೋಲಿನ ಬಗ್ಗೆ ಮಾತನಾಡುವ ನೈತಿಕತೆ ಕಳೆದುಕೊಂಡಿ ದ್ದಾರೆ’ ಎಂದು ಮನ್‌ಮುಲ್‌ ನಿದೇರ್ಶಕ ಎಚ್.ಟಿ.ಮಂಜು ಕಿಡಿಕಾರಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಜಾನಕೀರಾಮು ನೇತೃತ್ವದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಕ್ಷೇತ್ರದ ಶಾಸಕರೂ ಆದ ಸಚಿವ ನಾರಾಯಣಗೌಡ ಅವರು ತಮ್ಮ ಪಕ್ಷಕ್ಕೆ ಜಿಲ್ಲೆಯಲ್ಲಿ 700 ರಿಂದ 800 ಮತಗಳಿವೆ. ತಾಲ್ಲೂಕಿನಲ್ಲಿ 20ಕ್ಕೂ ಅಧಿಕ ಗ್ರಾಮ ಪಂಚಾಯಿತಿ, ಪುರಸಭೆಗಳಲ್ಲಿ ತಮ್ಮ ಪಕ್ಷ ಅಧಿಕಾರದಲ್ಲಿದ್ದು, ಸುಮಾರು 300ಕ್ಕೂ ಅಧಿಕ ಮಂದಿ ಬೆಜೆಪಿ ಬೆಂಬಲಿತ ಸದಸ್ಯರು ಇದ್ದಾರೆ ಎಂದಿದ್ದರು. ಆದರೆ ಫಲಿತಾಂಶದಲ್ಲಿ ಬಿಜೆಪಿ ಅಭ್ಯರ್ಥಿ ಕೇವಲ 50 ಮತ ಪಡೆದಿದ್ದಾರೆ. ಹಾಗಾದರೆ ನೀವು ಹೇಳಿದ ಮತಗಳು ಏನಾದವು? ಅವುಗಳನ್ನು ಮಾರಾಟ ಮಾಡಿದಿರಾ’ ಎಂದು ಪ್ರಶ್ನಿಸಿದರು.

‘ಹಿಂದಿನ ಚುನಾವಣೆ ಸಂದರ್ಭ ಅಧಿಕಾರದಲ್ಲಿ ಕಾಂಗ್ರೆಸ್ ಸರ್ಕಾರವಿತ್ತು. ಆಗ ಜಿಲ್ಲೆಯಲ್ಲಿ ಬಿಜೆಪಿಯ ಶಾಸಕರು ಇರಲಿಲ್ಲ. ಆದರೂ ಬಿಜೆಪಿ ಅಭ್ಯರ್ಥಿಗೆ 150ಕ್ಕೂ ಅಧಿಕ ಮತಗಳು ಬಂದಿದ್ದವು. ಆದರೆ, ಈಗ ನೀವು ಹೇಳಿದ 700ರಿಂದ 800 ಮತಗಳು ಏನಾದವು? ಎಷ್ಟಕ್ಕೆ ಮಾರಾಟ ಮಾಡಿದ್ದೀರಿ?’ ಎಂದರು.

‘ಸ್ವಾರ್ಥ ರಾಜಕೀಯ ಮತ್ತು ಆರ್ಥಿಕ ವ್ಯವಹಾರಕ್ಕಾಗಿ ಬಿಜೆಪಿ ಅಭ್ಯರ್ಥಿ ಬೂಕಹಳ್ಳಿ ಮಂಜು ಅವರನ್ನು ಬಲಿ ಪಶುಮಾಡಿ ಈಗ ನಮ್ಮ ಅಭ್ಯರ್ಥಿಯ ಸೋಲಿನ ಬಗ್ಗೆ, ನಮ್ಮ ಪಕ್ಷದ ಶಾಸಕರು ಮತ್ತು ಮುಖಂಡರ ಬಗ್ಗೆ ಮಾತನಾಡುವ ನೈತಿಕತೆ ನಿಮಗಿಲ್ಲ. ಜಿಲ್ಲೆಯಾದ್ಯಂತ ಜೆಡಿಎಸ್ ಬೆಂಬಲಿತ ಮತ 1900 ಇದ್ದವು. ನಮಗೆ 1800 ಮತಗಳು ಬಂದಿವೆ. ಜಿಲ್ಲೆಯ ಎಲ್ಲ ತಾಲೂಕಿನಲ್ಲೂ ನಿರೀಕ್ಷಿತ ಮತಗಳು ಬಂದಿವೆ’ ಎಂದರು.

ತಾಲ್ಲೂಕು ಘಟಕದ ಅಧ್ಯಕ್ಷ ಜಾನಕೀರಾಂ ಮಾತನಾಡಿ, ಜಿಲ್ಲೆಯ ಜೆಡಿಎಸ್ ನಾಯಕರಲ್ಲಿ ಒಗ್ಗಟ್ಟಿಲ್ಲ ಎಂಬ ಸಚಿವರ ಹೇಳಿಕೆ ಬಾಲಿಶವಾಗಿದೆ. ತಾಲ್ಲೂಕಿನಾದ್ಯಂತ ಮೂಲಸೌಕರ್ಯದ ಕೊರತೆ ಕಾಡುತ್ತಿದೆ. ಆ ಬಗ್ಗೆ ಗಮನಹರಿಸಿ ಎಂದು ಆಗ್ರಹಿಸಿದರು.

ಟಿಎಪಿಸಿಎಂಎಸ್ ನಿದೇಶಕರಾದ ಬಲದೇವ್, ಮಂಜುನಾಥ್, ನವೀನ್‌ ಕುಮಾರ್, ಶೀಳನೆರೆ ಮೋಹನ್, ಎಂಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಶೋಕ್, ಎಪಿಎಂಸಿ ಮಾಜಿ ಅಧ್ಯಕ್ಷ ನಾಗರಾಜೇಗೌಡ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು