ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪರ್ಧಾತ್ಮಕ ಪರೀಕ್ಷೆ ಆಕಾಂಕ್ಷಿಗಳ ಕನಸಿಗೆ ಬಲ

‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಸಹಯೋಗದಲ್ಲಿ ನವೋ ಪ್ರಮತಿ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕಾರ್ಯಾಗಾರ
Last Updated 6 ಜನವರಿ 2021, 7:43 IST
ಅಕ್ಷರ ಗಾತ್ರ

ಮೈಸೂರು: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸುವ ಬಗೆಯನ್ನು ಅರಿಯಲು ನೂರಾರು ಯುವ ಜನರು ಅಲ್ಲಿ ಸೇರಿದ್ದರು. ಮೈಸೂರು, ಮಂಡ್ಯ, ಹಾಸನ, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಯ ಹಳ್ಳಿ, ಪಟ್ಟಣಗಳಿಂದ ಹಲವು ನಿರೀಕ್ಷೆಗಳನ್ನು ಹೊತ್ತು ಬಂದಿದ್ದರು. ಅವರ ನಿರೀಕ್ಷೆ ಹುಸಿಯಾಗಲಿಲ್ಲ.

‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಸಹಯೋಗದಲ್ಲಿ ನವೋದಯ ಫೌಂಡೇಷನ್– ನವೋ ಪ್ರಮತಿ ಸ್ಪರ್ಧಾತ್ಮಕಪರೀಕ್ಷೆ ತರಬೇತಿ ಕೇಂದ್ರವು ಮಂಗಳವಾರ ಕಲಾಮಂದಿರದಲ್ಲಿ ಆಯೋಜಿಸಿದ್ದ ಯುಪಿಎಸ್‌ಸಿ (ಐಎಎಸ್‌) ಮತ್ತು ಕೆಪಿಎಸ್‌ಸಿ (ಕೆಎಎಸ್‌) ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗಾಗಿ ಒಂದು ದಿನದ ಉಚಿತ ಕಾರ್ಯಾಗಾರವು ಸ್ಪರ್ಧಾರ್ಥಿಗಳಮನಸ್ಸಿನಲ್ಲಿ ಇದ್ದ ಭಯ ಮತ್ತು ಸಂದೇಹಗಳನ್ನು ನಿವಾರಿಸಿತು.

ಕೊರೊನಾ ಕಾರಣದಿಂದಾಗಿ ಕೇವಲ ಆನ್‌ಲೈನ್‌ ಮೂಲಕವೇ ತರಬೇತಿ ಪಡೆಯುತ್ತಿದ್ದ ಪರೀಕ್ಷಾಕಾಂಕ್ಷಿಗಳಿಗೆ ಹಲವು ದಿನಗಳ ಬಿಡುವಿನ ಬಳಿಕ ಸಂಪನ್ಮೂಲ ವ್ಯಕ್ತಿಗಳಿಂದ ನೇರವಾಗಿ ಮಾರ್ಗದರ್ಶನ ಪಡೆಯುವ ಅವಕಾಶ ದೊರೆಯಿತು. ಪ್ರಶ್ನೆಗಳನ್ನು ಕೇಳಿ ಮನಸ್ಸಿನ ಗೊಂದಲ ನಿವಾರಿಸಿಕೊಂಡರು.

ಕಾರ್ಯಾಗಾರ ಉದ್ಘಾಟಿಸಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ‘ಪರೀಕ್ಷೆ ತಯಾರಿ ಅಂದು–ಇಂದು’ ವಿಷಯದ ಕುರಿತು ಮಾತನಾಡಿದರು. ದಶಕದ ಹಿಂದೆ ಪರೀಕ್ಷೆ ಬರೆದ ಅನುಭವವನ್ನು ಬಿಚ್ಚಿಟ್ಟರು.

‘ಯುಪಿಎಸ್‌ಸಿ ಬರೆದು 11 ವರ್ಷ ಆಗಿದೆ. ಈಗ ಪರೀಕ್ಷಾ ಮಾದರಿ ಬದಲಾಗಿದೆ. ಪದವಿಯಲ್ಲಿರುವಾಗಲೇ ಪರೀಕ್ಷೆಗೆ ತಯಾರಿ ಆರಂಭಿಸುವುದು ಒಳಿತು. ಬೇಗ ಓದಲು ಆರಂಭಿಸಿದವರಿಗೆ ಪರೀಕ್ಷಾ ತಿಳಿವಳಿಕೆ ಹೆಚ್ಚಿರುತ್ತದೆ. ಪ್ರತಿ ವಿಷಯಕ್ಕೆ ಸಮಯವನ್ನು ಎಷ್ಟು ಕೊಟ್ಟಿದ್ದೇವೆ ಎಂಬುದು ಮುಖ್ಯವಾಗುತ್ತದೆ. ಹೀಗಾಗಿ ವಿಷಯದ ಆಯ್ಕೆ ಮಾಡಿಕೊಳ್ಳುವುದಕ್ಕೆ ಸಮಯ ವ್ಯರ್ಥ ಮಾಡಬಾರದು’ ಎಂದರು.

ಸಾಮಾನ್ಯ ಓದು ಮುಖ್ಯ: ಯಾವ ವಿಷಯಗಳಲ್ಲಿ ಹೆಚ್ಚು ಬಲವಾಗಿದ್ದೀರಿ, ದುರ್ಬಲರಾಗಿದ್ದೀರಿ ಎಂಬ ಅಂಶಗಳನ್ನು ಪಟ್ಟಿ ಮಾಡಿಕೊಂಡು ಅಧ್ಯಯನ ನಡೆಸಬೇಕು. ಅನ್ವಯ ಮಾದರಿಯ ಪ್ರಶ್ನೆಗಳು ಪರೀಕ್ಷೆಯಲ್ಲಿ ಹೆಚ್ಚು ಕೇಳುವುದರಿಂದ ಓದಿದ ವಿಷಯಗಳನ್ನು ಪ್ರಚಲಿತ ವಿದ್ಯಮಾನ ಮತ್ತು ಸುತ್ತಮುತ್ತ ನಡೆಯುವ ಸಂಗತಿಗಳೊಂದಿಗೆ ಸಮೀಕರಿಸಿ ಅನ್ವಯಿಸಿಕೊಳ್ಳಬೇಕು. ಇದರಿಂದ ವಿಷಯದಲ್ಲಿ ಪಕ್ವತೆ ಸಿಗುತ್ತದೆ. ಆತ್ಮವಿಶ್ವಾಸವೂ ಹೆಚ್ಚುತ್ತದೆ ಎಂದು ತಿಳಿಸಿದರು.

ಪೂರ್ವಭಾವಿ (ಪ್ರಿಲಿಮ್ಸ್) ಪರೀಕ್ಷೆಯಲ್ಲಿ ಪ್ರಶ್ನೆಗಳನ್ನು ಹೇಗೆ ಬೇಕಾದರೂ ಎಲ್ಲಿಂದ ಬೇಕಾದರೂ ಕೇಳಬಹುದು. ಹಳೆಯ ಪ್ರಶ್ನೆ ಪತ್ರಿಕೆಗಳು, ಪ್ರಶ್ನೆಗಳ ಮಾದರಿಗಳನ್ನು ಅಭ್ಯಸಿಸಿ ಉತ್ತರಿಸಬೇಕು. ಪ್ರಶ್ನೆಗಳನ್ನು ಬಿಡಿಸಿ ಉತ್ತರ ಕಂಡುಕೊಳ್ಳುವ ಉಪಾಯವು ‘ಮಾಕ್‌ ಟೆಸ್ಟ್‌’ಗಳಲ್ಲಿ ಭಾಗವಹಿಸಿದರೆ ಸಿಗುತ್ತದೆ. ಪುನರ್‌ಮನನ ಮಾಡಿಕೊಳ್ಳುವ ಅಭ್ಯಾಸ ಹೆಚ್ಚಿಸಿಕೊಂಡರೆ ಪೂರ್ವಭಾವಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಬಹುದು ಎಂದು ನುಡಿದರು.

ಟೀಕೆಗಳನ್ನು ನಿರ್ಲಕ್ಷಿಸಿ: ಟೀಕೆಗಳು ಸಾಯುತ್ತವೆ. ಕೆಲಸಗಳು ಉಳಿಯುತ್ತವೆ ಎಂಬ ಕುವೆಂಪು ಅವರ ಮಾತನ್ನು ಯುವತಿಯರು ನೆನಪಿನಲ್ಲಿಡಬೇಕು. ವಿಶ್ವೇಶ್ವರಯ್ಯ ಅವರು ದಿವಾನರಾಗಿ ಬಂದಾಗ ಟೀಕೆಗಳು ಬಂದವು. ಸಮಾಜ ಮತ್ತು ನಿಮ್ಮ ಒಳಿತಿಗಾಗಿ ಟೀಕೆಗಳು ಬಂದರೆ ಸ್ವೀಕರಿಸಿ. ನಿಮ್ಮ ಸಾಧನೆಗೆ ತೊಂದರೆಯಾಗುತ್ತಿದ್ದರೆ ನಿರ್ಲಕ್ಷಿಸಿ ಎಂದು ಸಲಹೆ ನೀಡಿದರು.

ಎಸ್‌ಪಿ ಸಿ.ಬಿ.ರಿಷ್ಯಂತ್, ಯುಪಿಎಸ್‌ಸಿ ಮಾಸ್ಟರ್‌ ಟ್ರೇನರ್ ಸಂದೀಪ್ ಮಹಾಜನ್, ಸ್ಪರ್ಧಾತ್ಮಕ ಪರೀಕ್ಷೆ ಕುರಿತ ಅಂಕಣ ಬರಹಗಾರ ಮೊಹಮ್ಮದ್‌ ರಫೀಕ್‌ ಪಾಷಾ, ನವೋ ಪ್ರಮತಿಯ ಸಂಚಾಲಕ ಫಣಿರಾಜ್‌, ಟ್ರೇನರ್‌ ಪರಶಿವಮೂರ್ತಿ, ನವೋದಯ ಫೌಂಡೇಷನ್‌ ಮ್ಯಾನೇಜಿಂಗ್‌ ಟ್ರಸ್ಟಿ ಸಿ.ಎಸ್‌.ಪ್ರಿಯದರ್ಶಿನಿ, ಕಾರ್ಯದರ್ಶಿ ಎಸ್.ಆರ್‌.ರವಿ, ಪ್ರಜಾವಾಣಿ ಮೈಸೂರು ಬ್ಯೂರೊ ಮುಖ್ಯಸ್ಥರಾದ ವಿಶಾಲಾಕ್ಷಿ ಅಕ್ಕಿ, ಡೆಕ್ಕನ್‌ ಹೆರಾಲ್ಡ್‌ ಮುಖ್ಯಸ್ಥ ಟಿ.ಆರ್‌.ಸತೀಶ್‌ ಕುಮಾರ್, ಮುಡಾ ಅಧ್ಯಕ್ಷ ಎಚ್‌.ವಿ.ರಾಜೀವ್ ಪಾಲ್ಗೊಂಡರು.

‘ಆತ್ಮಸಾಕ್ಷಿಯ ಜೊತೆ ಮೌಲ್ಯ ಮಾರ್ಗ ಅನುಸರಿಸಿ’

‘ಪರೀಕ್ಷೆಗೆ ಅವಶ್ಯವಿರುವ ಮಾನಸಿಕ ಸ್ಥಿತಿ’ ಕುರಿತು ಕೇಂದ್ರ ಸರ್ಕಾರದ ನಿವೃತ್ತ ಹೆಚ್ಚುವರಿ ಕಾರ್ಯದರ್ಶಿ ಸಿ.ವಿ.ಗೋಪಿನಾಥ್ ಮಾತನಾಡಿದರು.

ವಿದ್ಯಾರ್ಥಿಗಳು ನಂಬಿಕೆಗಳ ಬೇರುಗಳನ್ನು ಬಲಗೊಳಿಸಿಕೊಳ್ಳಬೇಕು. ಮೌಲ್ಯದ ಬೇರುಗಳು ಗಟ್ಟಿಯಾದಾಗ ಎಲ್ಲಿ ಬೇಕಾದರೂ ಜೀವನ ಕಂಡುಕೊಳ್ಳಬಹುದು. ಬದುಕಿನ ಯಾವುದೇ ಪರೀಕ್ಷೆಗಳನ್ನು ಎದುರಿಸಬಹುದು ಎಂದು ಹೇಳಿದರು.

ತಾಯಿಯ ಕಣ್ಣಿಗೆ ಬಟ್ಟೆ ಕಟ್ಟಿ ಅಡುಗೆ ಮನೆಯಲ್ಲಿ ಬಿಟ್ಟು ಇಂಥ ಅಡುಗೆ ಪದಾರ್ಥಗಳನ್ನು ಕೊಡಿ ಅಂದರೆ ಆಕೆ ಎಲ್ಲವನ್ನು ಕೊಡುತ್ತಾಳೆ. ಅಭ್ಯಾಸ ಬಲದಿಂದ ಇದು ಸಾಧ್ಯ. ಅದೇ ಮಾದರಿಯಲ್ಲಿ ವಿಷಯವನ್ನು ಕಲಿಯಲು ಸತತ ಅಭ್ಯಾಸ ಮಾಡಬೇಕು ಎಂದರು.

ಕೇವಲ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಓದುವುದಲ್ಲ. ಓದಿದ್ದನ್ನು ನಾಲ್ಕು ದಿಕ್ಕಿನಲ್ಲಿ ಅಭ್ಯಾಸ ನಡೆಸಬೇಕು. ಜೀವನದ ಮೌಲ್ಯಗಳನ್ನು ಬೆಳೆಸಿಕೊಂಡರೆ ಪರೀಕ್ಷೆಯಲ್ಲಿ ತೇರ್ಗಡೆಯಾಗಬಹುದು ಎಂದು ಸಲಹೆ ನೀಡಿದರು.

ಅಭೂತಪೂರ್ವ ಸ್ಪಂದನೆ

ಯುಪಿಎಸ್‌ಸಿ ಮತ್ತು ಕೆಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗಾಗಿ ಆಯೋಜಿಸಿದ್ದ ಒಂದು ದಿನದ ಉಚಿತ ಕಾರ್ಯಾಗಾರಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಯಿತು.

ಬೆಳಿಗ್ಗೆ 8.30 ರಿಂದ 9.30ರ ವರೆಗೆ ನೋಂದಣಿಗೆ ಅವಕಾಶ ನೀಡಲಾಗಿತ್ತು. ಆದರೆ ವಿವಿಧ ಭಾಗಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳು ಬೆಳಿಗ್ಗೆ 8 ರಿಂದಲೇ ಕಲಾಮಂದಿರಕ್ಕೆ ಬರಲು ಶುರುಮಾಡಿದ್ದರು.

ಕೋವಿಡ್‌ಗೆ ಸಂಬಂಧಿಸಿದಂತೆ ಸರ್ಕಾರದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿತ್ತು. ಮೊದಲು ಬಂದ 400 ಮಂದಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಆದರೆ ನಿರೀಕ್ಷೆಗೂ ಮೀರಿ ವಿದ್ಯಾರ್ಥಿಗಳು ಬಂದಿದ್ದರು.

ಸ್ಯಾನಿಟೈಸರ್‌ ಹಾಕಿ, ಥರ್ಮಲ್ ಸ್ಕ್ರೀನಿಂಗ್ ಮಾಡಿ ಕಲಾಮಂದಿರದ ಒಳ ಬಿಡಲಾಯಿತು. ಮೈಸೂರು ನಗರ, ಗ್ರಾಮೀಣ, ಹಾಸನ, ಕೊಡಗು, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಗಳಿಂದಲೂ ಬಂದಿದ್ದರು.

ನವೋದಯ ಫೌಂಡೇಷನ್– ನವೋ ಪ್ರಮತಿ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರದ ಸಿಬ್ಬಂದಿ ಮೂರು ಕೌಂಟರ್‌ಗಳಲ್ಲಿ ನೋಂದಣಿ ಮಾಡಿಕೊಂಡರು.

‘ಸವಾಲುಗಳಿದ್ದರೆ ಮನುಷ್ಯ ಬಲಗೊಳ್ಳುವನು’

‘ಸವಾಲುಗಳು ಎದುರಾದಷ್ಟು ಮನುಷ್ಯ ಮತ್ತಷ್ಟು ಬಲಗೊಳ್ಳುತ್ತಾನೆ. ಕಷ್ಟಪಟ್ಟು ಸಾಧನೆ ಮಾಡಿದವರು
ಇತರರಿಗಿಂತ ಮಾನಸಿಕವಾಗಿ ಗಟ್ಟಿತನ ಹೊಂದಿರುತ್ತಾರೆ’ ಎಂದು ಎಸ್‌ಪಿ ಸಿ.ಬಿ.ರಿಷ್ಯಂತ್‌ ಹೇಳಿದರು.

‘ಮನೆಯಲ್ಲಿ ಕಷ್ಟ ಇದೆ, ಹಣಕಾಸಿನ ತೊಂದರೆ ಇದೆ, ಓದುವಾಗ ಏಕಾಗ್ರತೆ ಸಿಗುತ್ತಿಲ್ಲ. ಮುಂತಾದ ಕಾರಣಗಳನ್ನು ನೀಡಿ ಕಲಿಕೆಯಿಂದ ಹಲವರು ದೂರ ಹೋಗುತ್ತಾರೆ. ಸಮಸ್ಯೆಗಳನ್ನೆಲ್ಲಾ ಪಕ್ಕಕ್ಕಿಟ್ಟು ಓದಬೇಕು. ಸಮಸ್ಯೆಗಳನ್ನು ಮೀರಿ ನಿಲ್ಲಲು ನಮಗೆ ಬೇಕಿರುವುದು ಉತ್ತೇಜನ’ ಎಂದು ಕಿವಿಮಾತು ಹೇಳಿದರು.

‘ಒಮ್ಮೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ, ಅಧ್ಯಯನದ ಅವಧಿಯಲ್ಲಿ ನೀವು ಪಟ್ಟಂತಹ ಎಲ್ಲ ಕಷ್ಟಗಳೂ ತಕ್ಷಣವೇ ಮರೆತು ಹೋಗುತ್ತದೆ. ಅಂತಹ ಅದ್ಭುತ ಅನುಭವ ನಿಮಗೆ ಉಂಟಾಗುತ್ತದೆ. ಆದ್ದರಿಂದ ಶ್ರದ್ಧೆಯಿಂದ ಆಧ್ಯಯನ ಮಾಡಿ ಯಶಸ್ಸು ಸಾಧಿಸಿ’ ಎಂದರು.

ಕಲಾಮಂದಿರದಲ್ಲಿ ನಡೆದ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು
ಕಲಾಮಂದಿರದಲ್ಲಿ ನಡೆದ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು

***
ಗ್ರಾಮೀಣ ಪ್ರದೇಶಗಳಿಂದ ಬಂದವರಿಗೆ ಸ್ಥಳೀಯ ಸಮಸ್ಯೆಗಳ ಬಗ್ಗೆ ಅರಿವಿರುತ್ತದೆ. ಅವರು ಅಧಿಕಾರಿಗಳಾದರೆ ಸಮಾಜದ ಸುಧಾರಣೆ ಸಾಧ್ಯ

- ಎಚ್‌.ವಿ.ರಾಜೀವ್‌, ಮುಡಾ ಅಧ್ಯಕ್ಷ

***

ಐಪಿಎಸ್‌ ಅಧಿಕಾರಿಯಾಗಿ ನನ್ನ ಕೆಲಸವನ್ನು ಆನಂದಿಸುತ್ತಾ ಇದ್ದೇನೆ. ಪ್ರತಿದಿನವೂ ಹೊಸ ರೀತಿಯ ಸವಾಲುಗಳು ಎದುರಾಗುತ್ತವೆ

- ಸಿ.ಬಿ. ರಿಷ್ಯಂತ್‌, ಎಸ್‌ಪಿ

***

ಗುರಿ, ಮಾರ್ಗ ಸ್ಪಷ್ಟವಿದ್ದರೆ ಯಶಸ್ಸು

ಮೈಸೂರು: ‘ಗುರಿ ಮತ್ತು ಮಾರ್ಗ ಸ್ಪಷ್ಟವಾಗಿದ್ದರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಬಹುದು’ ಎಂದು ಯುಪಿಎಸ್‌ಸಿ ಮಾಸ್ಟರ್‌ ಟ್ರೇನರ್‌ ಸಂದೀಪ್‌ ಮಹಾಜನ್‌ ಹೇಳಿದರು.

ಯುಪಿಎಸ್‌ಸಿ ಮತ್ತು ಕೆಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗಾಗಿ ಮಂಗಳವಾರ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿ, ‘ನಾನು ಈಗಾಗಲೇ ಒಬ್ಬ ಐಎಎಸ್‌ ಅಥವಾ ಐಪಿಎಸ್‌ ಅಧಿಕಾರಿ ಎಂಬ ಭಾವನೆ ತಲೆಯಲ್ಲಿಟ್ಟುಕೊಂಡು ಅಧ್ಯಯನ ಶುರು ಮಾಡಿ. ಆಗ ನೀವು ಒಂದು ವಿಷಯವನ್ನು ನೋಡುವ ರೀತಿ ಬೇರೆಯದೇ ಆಗಿರುತ್ತದೆ’ ಎಂದು ತಿಳಿಸಿದರು.

‘ಯುಪಿಎಸ್‌ಸಿ ಸಂದರ್ಶನ ನಡೆಸುವರು ನಿಮ್ಮ ಜ್ಞಾನವನ್ನು ನೋಡುವುದಿಲ್ಲ. ನಿಮ್ಮ ಜ್ಞಾನ ಏನೆಂಬುದನ್ನು ಪ್ರಿಲಿಮ್ಸ್‌ ಮತ್ತು ಮುಖ್ಯ ಪರೀಕ್ಷೆಯಲ್ಲಿ ಅಳೆದು ನೋಡುತ್ತಾರೆ. ಸಂದರ್ಶನದಲ್ಲಿ ನಿಮ್ಮ ವರ್ತನೆಯನ್ನು ಗಮನಿಸುವರು’ ಎಂದರು.

‘ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಅದೃಷ್ಟವೇ ಅಂತಿಮವಲ್ಲ. ಅದೃಷ್ಟ ನಿಮ್ಮನ್ನು ಒಂದು ಹಂತದವರೆಗೆ ಕೊಂಡೊಯ್ಯಬಹುದು. ಆದರೆ ಗುರಿ ತಲುಪಬೇಕಾದರೆ ಪರಿಶ್ರಮವೂ ಬೇಕು’ ಎಂದು ಹೇಳಿದರು.
ಸ್ಪರ್ಧಾತ್ಮಕ ಪರೀಕ್ಷೆ ಕುರಿತ ಅಂಕಣ ಬರಹಗಾರ ಮೊಹಮ್ಮದ್‌ ರಫೀಕ್‌ ಪಾಷಾ ಮಾತನಾಡಿ, ‘ಅಧ್ಯಯನದ ಅವಧಿಯಲ್ಲಿ ನೀವು ನಿಮ್ಮ ಮೇಲೆ ಹೆಚ್ಚಿನ ಹೊರೆ ಹಾಕಬೇಡಿ. ಆನಂದದಿಂದಲೇ ಅಧ್ಯಯನದಲ್ಲಿ ತೊಡಗಿಸಿಕೊಳ್ಳಿ’ ಎಂದರು.

‘ಪತ್ರಿಕೆಗಳನ್ನು ಓದಿ’

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಚಲಿತ ವಿದ್ಯಮಾನಗಳ ಬಗ್ಗೆಯೂ ಪ್ರಶ್ನೆಗಳು ಇರುತ್ತವೆ. ಜಗತ್ತಿನ ನಿತ್ಯದ ಆಗುಹೋಗುಗಳ ಬಗ್ಗೆ ತಿಳಿದುಕೊಳ್ಳಬೇಕಾದರೆ ದಿನಪತ್ರಿಕೆಗಳನ್ನು ಓದಬೇಕು ಎಂದು ಸಂದೀಪ್‌ ಮಹಾಜನ್‌ ಸಲಹೆ ನೀಡಿದರು.

ಶೇ 40 ರಿಂದ 50 ರಷ್ಟು ಪ್ರಶ್ನೆಗಳು ದಿನಪತ್ರಿಕೆಗಳಿಂದಲೇ ನೇರವಾಗಿ ಕೇಳುತ್ತಾರೆ. ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳನ್ನು ಓದುವುದರಿಂದ ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳಿಗೆ ಸಹಾಯಕವಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿಗೆ ಪ್ರಶ್ನೆಗಳ ಸುರಿಮಳೆ

‘ಪರೀಕ್ಷೆ ತಯಾರಿ ಅಂದು–ಇಂದು’ ವಿಷಯದ ಕುರಿತು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮಾತನಾಡಿದ ನಂತರ ಪ್ರಶ್ನೆಗಳನ್ನು ಕೇಳಲು ಅವಕಾಶ ನೀಡಲಾಯಿತು. ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳು ಪ್ರಶ್ನೆ ಕೇಳಿ ತಮ್ಮ ಅನುಮಾನ ಬಗೆಹರಿಸಿಕೊಂಡರು.

l ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ಹಿನ್ನೆಲೆಯವರಿಗೆ ಇತಿಹಾಸ, ಮಾನವಿಕ ವಿಷಯಗಳು ಕಷ್ಟ ಆಗುತ್ತವೆ. ಇದಕ್ಕೆ ಏನು ಮಾಡಬೇಕು? - ಸಂಜನಾ ಎಚ್‌.ಡಿ., ಮೈಸೂರು

ಡಿಸಿ: ಎಂಜಿನಿಯರಿಂಗ್‌, ಗಣಿತ ಓದಿನ ಹಿನ್ನೆಲೆಯವರು ನಾಲ್ಕು ಸಾಲುಗಳಲ್ಲಿ ಉತ್ತರಿಸುತ್ತಾರೆ. ಆದರೆ, ನೀವು ಅದೃಷ್ಟವಂತರು. ಈಗ 15 ಅಂಕಗಳಿಗೆ ಪ್ರಶ್ನೆ ಕೇಳುತ್ತಾರೆ. ನಮಗೆ 60 ಅಂಕಗಳಿಗೆ ನಾಲ್ಕೈದು ಪುಟಗಳಷ್ಟು ಬರೆಯಬೇಕಿತ್ತು. ಈಗ ಒಂದೂವರೆ ಪುಟ ಬರೆದರೆ ಸಾಕು. ವಿಷಯಗದ ಕಡೆ ಹೆಚ್ಚಿನ ಗಮನ ಕೊಡಿ.

l ಐಎಫ್‌ಎಸ್‌ ಪರೀಕ್ಷೆ ಬರೆಯಬೇಕು ಎಂದುಕೊಂಡಿದ್ದೇನೆ. ನನಗೆ 33 ವರ್ಷ. ನನ್ನ ಹಾಗೂ ಪತ್ನಿಯ ಒಟ್ಟು ವಾರ್ಷಿಕ ಆದಾಯ ಸುಮಾರು ₹10.50 ಲಕ್ಷ ಇದೆ. ಒಬಿಸಿ ನಾನ್‌ ಕ್ರೀಮಿಲೇಯರ್‌ನಲ್ಲಿ ಅಪ್ಲಿಕೇಷನ್‌ ಹಾಕಲು ಅರ್ಹನಾ?- ಪ್ರಮೋದ್‌, ಮಂಡ್ಯ

ಡಿಸಿ: ವಾರ್ಷಿಕ ₹10.50 ಲಕ್ಷ ಆದಾಯ ಹೆಚ್ಚಿರುವುದರಿಂದ ಒಬಿಸಿಯಲ್ಲಿ ಬರೆಯಲಾಗುವುದಿಲ್ಲ.

l ಬಹಳಷ್ಟು ಅಭ್ಯರ್ಥಿಗಳಿಗೆ ಭಯ ಇರುತ್ತದೆ. ಹೇಗೆ ಎದುರಿಸಬೇಕು? - ಶಿಲ್ಪಾಶ್ರೀ, ಮಂಡ್ಯ

ನಾವು ಮಕ್ಕಳನ್ನು ಗದರಿಸುವಾಗ ‘ಭಯ ಇಲ್ಲ ನಿನಗೆ, ಅದಕ್ಕೆ ಹೀಂಗಾಡ್ತೀಯಾ’ ಅಂತ ಹೇಳುತ್ತೇವೆ. ಲಕ್ಷಾಂತರ ಜನ ಸ್ಪರ್ಧಿಸುತ್ತಾರೆ. ನಾವು ಯಶಸ್ವಿ ಆಗುತ್ತೇವೆಯೋ ಇಲ್ಲವೊ ಎಂಬ ಬಗ್ಗೆ ಸಾಮಾನ್ಯವಾಗಿ ಭಯ ಇದ್ದೇ ಇರುತ್ತದೆ. ಆದರೆ ನೀವು ಹೇಗೆ ನಿರ್ವಹಿಸುತ್ತೀರಾ ಅನ್ನೊದು ಮುಖ್ಯ. ಭಯನೇ ಇಲ್ಲ ಅಂದ್ರೆ ಅದೂ ಒಳ್ಳೆಯದಲ್ಲ, ಆತ್ಮವಿಶ್ವಾಸ ಮುಖ್ಯ. ಎಷ್ಟೇ ಓದಿದರೂ ಭಯ ಇದ್ದೇ ಇರುತ್ತದೆ.

l ಐಎಎಸ್‌, ಐಪಿಎಸ್‌ ಆಯ್ಕೆಯಾದ ಮೇಲೆ ಕೆಲಸ ನಿರ್ವಹಿಸುವಾಗ ಎದುರಾಗುವ ಸಮಸ್ಯೆಗಳನ್ನು ಹೇಗೆ ನಿಭಾಯಿಸುತ್ತೀರಿ?- ಯಶವಂತ್‌ ಗೌಡ, ಪಾಂಡವಪುರ

ಡಿಸಿ: ನೀವೇನು ಆಗಬೇಕು ಎಂದುಕೊಂಡಿದ್ದೀರಿ, ಅದನ್ನೆಲ್ಲ ಮೊದಲು ಪಾಸ್‌ ಮಾಡಿಕೊಂಡು ಬನ್ನಿ. ಸಮಸ್ಯೆಗಳನ್ನು ಹೇಗೆ ನಿಭಾಯಿಸಬೇಕು ಎಂದು ನೀವಾಗಿಯೇ ಕಲಿಯುತ್ತೀರಿ.

ಗಮನ ಸೆಳೆದ ಕವನ ವಾಚನ

ಕಾರ್ಯಾಗಾರಕ್ಕೆ ಬಂದಿದ್ದ ಪಾಂಡವಪುರದ ಅಕ್ಷತಾ ಟಿ.ಕೆ ಅವರು ‘ಒಳ್ಳೆಯ ಕೆಲಸಕ್ಕೆ ಸದಾ ಹಾಜರಿ‌, ದುಷ್ಟರ ಪಾಲಿಗೆ ಇವರು ಮಾರಿ, ಜನಗಳ ನೆಚ್ಚಿನ ಜಿಲ್ಲಾಧಿಕಾರಿ, ಸದಾ ಕಾಲ ಖುಷಿಯಾಗಿರಿ, ನಮ್ಮೆಲ್ಲರ ಪಾಲಿನ ರೋಹಿಣಿ ಸಿಂಧೂರಿ’ ಎಂದು ಕವನ ವಾಚಿಸುವ ಮೂಲಕ ಗಮನ ಸೆಳೆದರು.

ಆಕಾಂಕ್ಷಿಗಳು ಏನಂತಾರೆ?

ಅಂಕಗಳಿಕೆಗೆ ಅಡಿಪಾಯ

ಮೊದಲ ಬಾರಿಗೆ ಇಂತಹ ಕಾರ್ಯಕ್ರಮಕ್ಕೆ ಹಾಜರಾದೆ. ಹೆಚ್ಚು ಅಂಕಗಳನ್ನು ಗಳಿಸುವುದಕ್ಕೆ ಇದೊಂದು ಅಡಿಪಾಯದಂತಾಗಿದೆ. ನಿಜಕ್ಕೂ ಈ ಕಾರ್ಯಕ್ರಮ ಪ್ರಯೋಜನ ಎನಿಸಿತು

- ಇವ್ಯಾಂಜಲೀನ್, ಬಿ.ಎಸ್ಸಿ ವಿದ್ಯಾರ್ಥಿನಿ, ಹುಣಸೂರು

***

ಸಿದ್ಧತೆಗೆ ಮಾಹಿತಿ ಲಭಿಸಿತು

ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಲು ಇದೊಂದು ರೀತಿಯಲ್ಲಿ ಸ್ಫೂರ್ತಿಯಾಗಿ ಪರಿಣಮಿಸಿತು. ಈಗಿನಿಂದಲೇ ಹೇಗೆ ಸಿದ್ಧತೆ ಮಾಡಿಕೊಳ್ಳಬೇಕು ಎನ್ನುವುದರ ಕುರಿತು ಮಾಹಿತಿ ಲಭಿಸಿತು.

- ಕೆ.ಎಂ.ಅಂಜು, ಬಿ.ಎಸ್ಸಿ ವಿದ್ಯಾರ್ಥಿನಿ, ಕೆ.ಆರ್.ನಗರ

***

‘ಮೋಟಿವೇಷನ್‌’ ಸಿಕ್ಕಿತು

ಐಎಎಸ್, ಕೆಎಎಸ್‌ ಸೇರಿದಂತೆ ಇತರೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಕಾರ್ಯಾಗಾರವು ಒಂದು ರೀತಿಯಲ್ಲಿ ‘ಮೋಟಿವೇಷನ್‌’ ನಂತೆ ಅನ್ನಿಸಿತು. ತುಂಬಾ ಚೆನ್ನಾಗಿ ಮೂಡಿ ಬಂದಿತು.

- ಸಿ.ಎಂ.ಸ್ವಾತಿ, ಎಂಎಸ್‌ಡಬ್ಲೂ ವಿದ್ಯಾರ್ಥಿನಿ, ಹಾಸನ

***

ಸಮಯದ ಅರಿವು

ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಸಂಬಂಧ ಅನೇಕ ಗೊತ್ತಿರದ ವಿಚಾರಗಳನ್ನು ಕಾರ್ಯಾಗಾರಕ್ಕೆ ಬಂದು ಕಲಿತುಕೊಂಡೆವು. ಸಮಯದ ಹೊಂದಾಣಿಕೆ ಹೇಗೆ ಮಾಡಬೇಕು ಎಂಬ ಅರಿವು ಮೂಡಿತು

- ಹೇಮಲತಾ, ಎಂಎಸ್‌ಡಬ್ಲೂ, ಹಾಸನ

***

ಸಕಾರಾತ್ಮಕ ಮನೋಭಾವ

ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಒಂದು ವಿಧದ ಸಕಾರಾತ್ಮಕ ಮನೋಭಾವ ಈ ಕಾರ್ಯಾಗಾರದಿಂದ ನನ್ನಲ್ಲಿ ಮೂಡಿತು. ಅತ್ಯುತ್ತಮವಾದ ವಿಚಾರಗಳನ್ನು ಕಲಿತುಕೊಂಡೆವು

- ಹರೀಶ್, ಬಿ.ಇಡಿ ವಿದ್ಯಾರ್ಥಿ, ತಿ.ನರಸೀಪುರ

***

ಆಸೆಗೆ ಉತ್ತೇಜನ

ಕಾರ್ಯಾಗಾರವು ಬಹಳ ಪ್ರಯೋಜನಕಾರಿಯಾಗಿತ್ತು. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ನಮ್ಮ ಆಸೆಗೆ ಉತ್ತೇಜನ ನೀಡಿತು. ಆದರೆ, ನಾವು ಹೇಗೆ ಓದಬೇಕು ಎನ್ನುವ ಕುರಿತು ಮಾಹಿತಿ ನೀಡಬೇಕಿತ್ತು ಎನ್ನಿಸಿತು

- ಎಚ್.ಜೆ. ಪ್ರಮೋದ್‌ಕುಮಾರ್, ಬಿಎಸ್ಸಿ ವಿದ್ಯಾರ್ಥಿ, ವಿದ್ಯಾವಿಕಾಸ ಕಾಲೇಜು, ಮೈಸೂರು

***

ಮಾಹಿತಿ ಒದಗಿಸಿತು

ಕೇವಲ ಪರೀಕ್ಷೆ ಬಗ್ಗೆಯಷ್ಟೇ ಇಲ್ಲಿ ಮಾಹಿತಿ ನೀಡಲಾಯಿತು. ನಿಜಕ್ಕೂ ಐಎಎಸ್‌ ಅಧಿಕಾರಿ ಆದ ಮೇಲೆ ಅವರು ಅನುಭವಿಸಿದ ಕಷ್ಟಗಳನ್ನು ಹೇಳಲಿಲ್ಲ. ಪರೀಕ್ಷೆ ಎದುರಿಸುವ ದೃಷ್ಟಿಯಿಂದ ಕಾರ್ಯಾಗಾರ ಮಾಹಿತಿ ಒದಗಿಸಿತು

- ನಸೀಂಉಲ್ಲಾ, ಬಿಎಸ್ಸಿ, ವಿದ್ಯಾವಿಕಾಸ ಕಾಲೇಜು, ಮೈಸೂರು

***

ಸಾಕಷ್ಟು ಮಾಹಿತಿ

ರವಿ ಚೆನ್ನಣ್ಣನವರ್ ಬರುತ್ತಾರೆ ಎಂದು ಬಂದೆ. ಆದರೆ, ಅವರು ಬಾರದಿರುವುದು ನಿರಾಸೆ ತರಿಸಿತು. ಉಳಿದಂತೆ ಸಾಕಷ್ಟು ಮಾಹಿತಿಯನ್ನು ಕಾರ್ಯಾಗಾರ ನೀಡಿತು

- ಪ್ರಶಾಂತ್, ಹೊಮ್ಮರಗಳ್ಳಿ, ಎಚ್.ಡಿ.ಕೋಟೆ

***

ಖುಷಿ ತರಿಸಿತು

ಕಾರ್ಯಾಗಾರದಲ್ಲಿ ಭಾಗಿಯಾಗಿದ್ದು ತುಂಬ ಖುಷಿ ತರಿಸಿತು. ಸ್ಪರ್ಧಾತ್ಮಕ ಪರೀಕ್ಷೆಗೆ ಪೂರ್ವತಯಾರಿ ಕುರಿತು ಸಾಕಷ್ಟು ವಿಚಾರಗಳನ್ನು ಕಲಿತುಕೊಂಡೆವು

-ಮನೋಜ್, ಬೀರಂಬಳ್ಳಿ, ಎಚ್.ಡಿ.ಕೋಟೆ

***

ಭಯ ಮಾಯ

ಸ್ಪರ್ಧಾತ್ಮಕ ಪರೀಕ್ಷೆ ಕುರಿತು ಇದ್ದ ಭಯ ಕಾರ್ಯಾಗಾರದಲ್ಲಿ ಭಾಗಿಯಾದ ನಂತರ ಹೋಯಿತು.

- ಎಸ್.ಬಿಂದು, ಬಿ.ಕಾಂ ವಿದ್ಯಾರ್ಥಿನಿ, ತಿ.ನರಸೀಪುರ

***

ಲಾಭವಾಗಿದೆ

ಸಿದ್ಧತೆ ಹೇಗೆ ಮಾಡಿಕೊಳ್ಳಬೇಕು, ಯಾವ ಪುಸ್ತಕ ಓದಬೇಕು ಎನ್ನುವ ಕುರಿತು ಮಾಹಿತಿ ಸಿಕ್ಕಿತು. ಒಟ್ಟಾರೆ, ಕಾರ್ಯಾಗಾರದಿಂದ ಲಾಭವಾಗಿದೆ

- ಎಂ.ಮೇಘಾ, ಬಿ.ಕಾಂ ವಿದ್ಯಾರ್ಥಿನಿ, ತಿ.ನರಸೀಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT