ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲರಿಗೂ ಕೋವಿಡ್ ಲಸಿಕೆ; ಸಿದ್ದರಾಮಯ್ಯ ಸಲಹೆ

ಸುತ್ತೂರು ಮಠದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಕಿಟ್‌ ಬಿಡುಗಡೆ
Last Updated 1 ಜುಲೈ 2021, 12:07 IST
ಅಕ್ಷರ ಗಾತ್ರ

ಮೈಸೂರು: ಕೋವಿಡ್‌ಗೆ ಲಸಿಕೆ ಪಡೆಯುವುದೊಂದೇ ಕೊರೊನಾ ಸೋಂಕಿಗೆ ಪರಿಹಾರ. ಎಲ್ಲರೂ ಯಾವುದೇ ಹಿಂಜರಿಕೆ ಇಲ್ಲದೇ ಕೋವಿಡ್ ಲಸಿಕೆ ಪಡೆಯಬೇಕು. ಸರ್ಕಾರ ಇದರ ಜತೆಗೆ, ಕೋವಿಡ್ ಪರೀಕ್ಷೆಯನ್ನೂ ಹೆಚ್ಚಿಸಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.

ಇಲ್ಲಿನ ಸುತ್ತೂರು ಶಾಖಾ ಮಠದಲ್ಲಿ ಅವರು ಗುರುವಾರ ಜೆಎಸ್‌ಎಸ್‌ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ವತಿಯಂದ ತಯಾರಾದ ‘ಹಿತಾಯು’ ಮತ್ತು ‘ಬಾಲರಸಾಯನ’ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಿಟ್‌ಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.

ಸರ್ಕಾರ ಈಗ 18 ವರ್ಷ ದಾಟಿದವರಿಗೆ ಕೋವಿಡ್ ಲಸಿಕೆ ನೀಡುತ್ತಿದೆ. ಆದರೆ, 12 ವರ್ಷ ದಾಟಿದ ಎಲ್ಲರಿಗೂ ಈ ಲಸಿಕೆ ನೀಡುವ ಅಗತ್ಯ ಇದೆ. ಲಸಿಕೆಯ ಜತೆಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವಂತಹ ಆಯುರ್ವೇದದ ಔಷಧಗಳನ್ನು ಸೇವಿಸಬೇಕು. ಆಗ ಮಾತ್ರ ಕೋವಿಡ್‌ನಿಂದ ರಕ್ಷಣೆ ಪಡೆಯಬಹುದು ಎಂದು ಅಭಿಪ್ರಾಯಪಟ್ಟರು.

‘ಲಸಿಕೆ ಪಡೆಯುವುದರಿಂದ ಏನಾದರೂ ಆಗಿ ಬಿಡುತ್ತದೆ ಎಂಬ ಭಯ ಬೇಡ. ನಾನೂ 2 ಡೋಸೆಜ್ ಲಸಿಕೆ ಪಡೆದಿದ್ದೇನೆ. ಲಸಿಕೆ ಪಡೆದ ಶೇ 80ರಷ್ಟು ಮಂದಿ ಈ ರೋಗದಿಂದ ರಕ್ಷಣೆ ಪಡೆಯಬಹುದು. ಹಾಗೆಂದು, ಬೇಕಾಬಿಟ್ಟಿ ಓಡಾವುದು ಸರಿಯಲ್ಲ. ಮಾಸ್ಕ್‌ ಧರಿಸಿ, ಪರಸ್ಪರ ಅಂತರ ಕಾಯ್ದುಕೊಂಡರೆ ಕೋವಿಡ್‌ನ್ನು ನಿಯಂತ್ರಿಸಬಹುದು’ ಎಂದರು.

ಲಾಕ್‌ಡೌನ್‌ ಇದ್ದುದ್ದರಿಂದ ಸಹಜವಾಗಿಯೇ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದಿದೆ. ಲಾಕ್‌ಡೌನ್‌ ತೆರವಾದ ನಂತರ ಜನರು ಮತ್ತೆ ಗುಂಪು ಗುಂಪಾಗಿ ಸೇರಿದರೆ ಕೊರೊನಾ ಹೆಚ್ಚಾಗುತ್ತದೆ. ಕೋವಿಡ್ ಅಲೆ ಬರುವುದು ಎಂದರೆ ಹೀಗೆ. ಹಾಗಾಗಿ, ಕೋವಿಡ್ ಅಲೆ ತಡೆಗಟ್ಟುವಲ್ಲಿ ಜನಸಾಮಾನ್ಯರ ಪಾತ್ರ ದೊಡ್ಡದು ಎಂದು ಹೇಳಿದರು.

ಆಯುರ್ವೇದದಲ್ಲೂ ಅನೇಕ ಒಳ್ಳೆಯ ಅಂಶಗಳಿವೆ. ‘ಪ್ಯೂರ್‌ ಆಯುರ್ವೇದ’ ನಿಜಕ್ಕೂ ಹಲವು ರೋಗಗಳನ್ನು ಸಂಪೂರ್ಣವಾಗಿ ವಾಸಿ ಮಾಡುತ್ತದೆ. ಕೇರಳದಲ್ಲಿ ಇಂತಹ ಪದ್ಧತಿಗಳು ಜನಪ್ರಿಯವಾಗಿವೆ. ಆಯುರ್ವೇದದ ಜತೆಗೆ ಇತರೆ ವೈದ್ಯಕೀಯ ಪದ್ಧತಿಗಳನ್ನು ಮಿಶ್ರಗೊಳಿಸಬಾರದು ಎಂದು ಅವರು ಹೇಳಿದರು.

ಸಿದ್ದರಾಮಯ್ಯ ಅವರು ಮಾಸ್ಕ್‌ ಹಾಗೂ ಫೇಸ್‌ಶೀಲ್ಡ್‌ ಜತೆಗೆ ವೈರಸ್‌ನಿಂದ ಹೆಚ್ಚಿನ ರಕ್ಷಣೆ ಒದಗಿಸುವ ‘ವೈರಲ್ ಬ್ಯಾರಿಯರ್’ ಸ್ಯಾಶೆಟ್‌ನ್ನು ಸಹ ಧರಿಸಿದ್ದರು. ಇದು ವೈರಸ್‌ನಿಂದ ಹೆಚ್ಚಿನ ರಕ್ಷಣೆ ಒದಗಿಸುತ್ತದೆ ಎಂದು ಅವರು ತಮ್ಮ ಆಪ್ತರಿಗೆ ಮಾಹಿತಿ ನೀಡಿದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕರಾದ ಡಾ.ಯತೀಂದ್ರ ಸಿದ್ದರಾಮಯ್ಯ, ಅನಿಲ್‌ಚಿಕ್ಕಮಾದು, ಕೆಪಿಸಿಸಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷರಾದ ಪುಷ್ಪಾ ಅಮರನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT