ಮಂಗಳವಾರ, ಅಕ್ಟೋಬರ್ 26, 2021
27 °C
ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವರ್ಣರಂಜಿತ ಚಾಲನೆ

ಮೈಸೂರು ದಸರಾ: ಎ.ವಿ.ಆನಂದ್‌ಗೆ ‘ರಾಜ್ಯ ಸಂಗೀತ ವಿದ್ವಾನ್’ ಪ್ರಶಸ್ತಿ ಪ್ರದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ನಾಡಹಬ್ಬ ದಸರಾ ಉತ್ಸವದ ಅಂಗವಾಗಿ ಅರಮನೆ ಅಂಗಳದಲ್ಲಿ ಆಯೋಜಿಸಿರುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಗುರುವಾರ ಸಂಜೆ ವರ್ಣರಂಜಿತ ಚಾಲನೆ ಲಭಿಸಿತು.

ಉದ್ಘಾಟನೆ ಸಮಾರಂಭದಲ್ಲಿ ಹೆಸರಾಂತ ಮೃದಂಗ ಕಲಾವಿದ ಎ.ವಿ.ಆನಂದ್ ಅವರಿಗೆ ‘ರಾಜ್ಯ ಸಂಗೀತ ವಿದ್ವಾನ್’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನ ಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಕನ್ನಡ ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸೇರಿದಂತೆ ಇತರೆ ಗಣ್ಯರು ಪ್ರಶಸ್ತಿ ಪ್ರದಾನ ಮಾಡಿದರು.

ಮೃದಂಗ ವಾದಕ ಎ.ವೆಂಕೋಬಾಚಾರ್ಯ ಅವರ ಪುತ್ರರಾಗಿ 1936 ಏಪ್ರಿಲ್ 16ರಂದು ಹಾಸನದಲ್ಲಿ ಜನಿಸಿದ ಎ.ವಿ.ಆನಂದ್ ಅವರು, ಬಾಲ್ಯ ದಲ್ಲಿಯೇ ಲಯದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದರು. ನಾಡಿನ ಹಾಗೂ ಹೊರ ನಾಡಿನ ಮೂರ್ನಾಲ್ಕು ತಲೆಮಾರಿನ ಕಲಾವಿದರಿಗೆ ಮೃದಂಗ ಸಹಕಾರ ನೀಡಿದ ಹೆಗ್ಗಳಿಕೆ ಇವರದ್ದು. ಆಕಾಶವಾಣಿಯ ಎ ಗ್ರೇಡ್ ಕಲಾವಿದರಾಗಿದ್ದಾರೆ. ಇವರಿಗೆ ಕರ್ನಾಟಕ ಕಲಾಶ್ರೀ, ಲಯಭೂಷಣ, ಲಯ ಕಲಾ ನಿಪುಣ ಸೇರಿದಂತೆ ಅನೇಕ ಪ್ರಶಸ್ತಿ ದೊರೆತಿವೆ.

ಶಾಸಕರಾದ ಜಿ.ಟಿ.ದೇವೇಗೌಡ, ಎಸ್.ಎ‌.ರಾಮದಾಸ್, ಎಲ್.ನಾಗೇಂದ್ರ, ಮೇಯರ್ ಸುನಂದಾ ಫಾಲನೇತ್ರ, ಉಪ ಮೇಯರ್ ಅನ್ವರ್ ಬೇಗ್, ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ರಘು ಆರ್.ಕೌಟಿಲ್ಯ, ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ಸ್ ಅಧ್ಯಕ್ಷ ಅಪ್ಪಣ್ಣ, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಎಂ.ಆರ್.ಕೃಷ್ಣಪ್ಪಗೌಡ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ರಾಜೀವ್, ಮೈಸೂರು ಬಣ್ಣ ಮತ್ತು ಅಗರು ಕಾರ್ಖಾನೆಯ ಅಧ್ಯಕ್ಷ ಫಣೀಶ್ ಪಾಲ್ಗೊಂಡಿದ್ದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಹರೀಶ್ ಪಾಂಡವ್ ಮತ್ತು ತಂಡದಿಂದ ಸ್ಯಾಕ್ಸೋಫೋನ್ ಕಾರ್ಯಕ್ರಮ ನೆರವೇರಿತು. ಮೈಸೂರು ಸಂಸ್ಥಾನ ಗೀತೆ 'ಕಾಯೋ ಶ್ರೀ ಗೌರಿ' ಯನ್ನು ಉನ್ನತಿ ಸಂಸ್ಥೆಯ ಕಲಾವಿದರು ಹಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು