ಶನಿವಾರ, ಅಕ್ಟೋಬರ್ 1, 2022
20 °C
ನಾಗರಹೊಳೆ ಅಭಯಾರಣ್ಯದಲ್ಲಿವೆ 2 ಸಾವಿರ ಆನೆಗಳು; ಸಂತತಿ ಅಭಿವೃದ್ಧಿಗೆ ಪೂರಕ ವಾತಾವರಣ

ಹುಣಸೂರು: ಆನೆ–ಮಾನವ ಸಂಘರ್ಷಕ್ಕೆ ಕಡಿವಾಣ

ಎಚ್.ಎಸ್.ಸಚ್ಚಿತ್ Updated:

ಅಕ್ಷರ ಗಾತ್ರ : | |

Prajavani

ಹುಣಸೂರು: ಆನೆಗಳ ಸಂರಕ್ಷಣೆಗೆ ಅರಣ್ಯ ಇಲಾಖೆ ಕೈಗೊಂಡ ಕ್ರಮಗಳಿಂದಾಗಿ ನಾಗರಹೊಳೆ ಅಭಯಾರಣ್ಯದ ಅಂಚಿನಲ್ಲಿ ಆನೆ ಮತ್ತು ಮಾನವ ಸಂಘರ್ಷ ಕಡಿಮೆಯಾಗುತ್ತಿದೆ.

ನಾಗರಹೊಳೆ ಅಭಯಾರಣ್ಯ 843 ಚದರ ಕಿ.ಮೀ ವಿಸ್ತೀರ್ಣ ಹೊಂದಿದ್ದು, 2017ರ ಗಣತಿಯಂತೆ 1,500ರಿಂದ 2,000 ಆನೆಗಳಿವೆ. ಪ್ರತಿ ಚದರ ಕಿ.ಮೀ.ಗೆ 2– 3 ಆನೆಗಳು ವಾಸವಾಗಿವೆ. ದೇಶದಲ್ಲಿ 30 ಸಾವಿರ ಆನೆಗಳಿದ್ದು, ದಕ್ಷಿಣ ಭಾರತದಲ್ಲಿ 11,960, ಕರ್ನಾಟಕದಲ್ಲಿ ಅತ್ಯಧಿಕ 6,049 ಆನೆಗಳಿವೆ. ಕಬಿನಿ ಹಿನ್ನೀರು ಸೇರಿದಂತೆ ಹರಿದ್ವರ್ಣ ಕಾಡಿನಲ್ಲಿ ಆನೆಗಳಿಗೆ ಆಹಾರ ಮತ್ತು ಸಂತತಿ ಅಭಿವೃದ್ಧಿಗೆ ಪೂರಕ ವಾತಾವರಣವಿದೆ.

‘ಆನೆ– ಮಾನವ ಸಂಘರ್ಷ ನಿಯಂತ್ರಣಕ್ಕೆ 158 ಕಿ.ಮೀ ರೈಲ್ವೆ ತಡೆಗೋಡೆ ನಿರ್ಮಾಣಕ್ಕೆ ಹಸಿರು ನಿಶಾನೆ ಸಿಕ್ಕಿದ್ದು, ಈವರೆಗೆ ₹62 ಕೋಟಿ ವೆಚ್ಚದಲ್ಲಿ 55 ಕಿ.ಮೀ.ವರೆಗೆ ತಡೆಗೋಡೆ ನಿರ್ಮಿಸಲಾಗಿದೆ. 18 ಕಿ.ಮೀ ಕಾಮಗಾರಿ ಪ್ರಗತಿಯಲ್ಲಿದೆ. ₹2.60 ಕೋಟಿ 4 ಕಿ.ಮೀ ರೋಪ್ ಬ್ಯಾರಿಕೇಡ್ ನಿರ್ಮಾಣ ಮತ್ತು 257 ಕಿ.ಮೀ ಆನೆ ಕಂದಕ ನಿರ್ಮಿಸಲಾಗಿದೆ’ ಎಂದು ನಾಗರಹೊಳೆ ಯೋಜನಾ ನಿರ್ದೇಶಕ ಹರ್ಷಕುಮಾರ್ ನರಗುಂದ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆನೆ ದಾಳಿಯಿಂದ ಫಸಲು ನಾಶ, ಜೀವ ಹಾನಿ ಪ್ರಮಾಣ ಕಡಿಮೆಯಾಗುತ್ತಿದೆ. 2020ರಿಂದ 2022ರವರೆಗೆ ಒಟ್ಟು 9 ಮಂದಿ ಆನೆ ದಾಳಿಯಿಂದ ಮೃತಪಟ್ಟಿದ್ದಾರೆ. 2019ರಿಂದ 2022ರವರಗೆ ಒಟ್ಟು 28 ಮಂದಿ ಗಾಯಗೊಂಡಿದ್ದಾರೆ. ಆನೆ ದಾಳಿಯಿಂದ 2019–20ರಲ್ಲಿ 1,412 ಎಕರೆ, 2020–21ರಲ್ಲಿ 1,317, 2021–22ರಲ್ಲಿ 1,360 ಎಕರೆ ಫಸಲು ನಾಶವಾಗಿದೆ’ ಎಂದು ಹೇಳಿದರು.

‘ಲಾಂಟಾನ ಗಿಡಗಳಿಂದ ಆಹಾರದ ಸಮಸ್ಯೆ ಸೃಷ್ಟಿಸಿದೆ. ನಾಗರಹೊಳೆಯಲ್ಲಿ ನರೇಗಾ ಯೋಜನೆಯಡಿ 800 ಹೆಕ್ಟೇರ್ ಪ್ರದೇಶದಲ್ಲಿ ಲಾಂಟಾನ ಗಿಡ ತೆರವುಗೊಳಿಸಿ, ಹುಲ್ಲುಗಾವಲು ಪ್ರದೇಶ ನಿರ್ಮಿಸಲಾಗಿದೆ. ಅರಣ್ಯದಲ್ಲಿ 61 ಹಡ್ಲುಗಳಿದ್ದು (ಹುಲ್ಲು ಪ್ರದೇಶ) ವರ್ಷದ ಎಲ್ಲಾ ದಿನವೂ ಮೇವು ಸಿಗಲಿದೆ. ಕಾನನದಲ್ಲಿ 261 ಕೆರೆಗಳಲ್ಲಿ 6 ದೊಡ್ಡ ಕೆರೆಗಳಿವೆ. ಆನೆಗೆ ಅತಿ ಪ್ರಿಯವಾದ ಆಹಾರ ಬೊಂಬು. ಆನೆಗಳ ಸಂಖ್ಯೆಗೆ ಅನುಗುಣವಾಗಿ ಕಾನನದಲ್ಲಿ 2020ರಲ್ಲಿ 6ರಿಂದ 7 ಟನ್ ಬೊಂಬು ಬಿತ್ತನೆ ಅಭಿಯಾನ ನಡೆಸಲಾಗಿತ್ತು. ಇದರ ಫಲವಾಗಿ ಬೊಂಬು ವ್ಯಾಪಕವಾಗಿ ಆವರಿಸಿದೆ’ ಎಂದು ವಿವರಿಸಿದರು.

ಅರಣ್ಯದಲ್ಲಿ ಆನೆಗಳೊಂದಿಗೆ ನಾವು ಜೀವನ ಕಳೆದಿದ್ದೇವೆ. ಪುನರ್ವಸತಿಗೊಂಡು ಕೃಷಿ ಬೇಸಾಯದಲ್ಲಿ ತೊಡಗಿದ್ದೇವೆ. ಕಾಡಾನೆ ದಾಳಿಯಿಂದ ಬೆಳೆ ನಾಶವಾಗುತ್ತಿದೆ.

–ಜೆ.ಕೆ.ಮಣಿ, ನಾಗಾಪುರ ಪುನರ್ವಸತಿ ಕೇಂದ್ರದ ನಿವಾಸಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು