ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಮ್ಮಟಗಳ ನಗರಿಯ ಬಹುದೊಡ್ಡ ‘ಜ್ಞಾನಗುಮ್ಮಟ’: ಸುತ್ತೂರುಶ್ರೀ

Last Updated 3 ಜನವರಿ 2023, 5:20 IST
ಅಕ್ಷರ ಗಾತ್ರ

ಮೈಸೂರು: ಸಿದ್ದೇಶ್ವರ ಸ್ವಾಮೀಜಿ ನಿಧನಕ್ಕೆ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.

'ವಿಜಯಪುರ ಜ್ಞಾನಯೋಗಾಶ್ರಮದ ಚರಮೂರ್ತಿಗಳಾಗಿದ್ದ ಶ್ರೀ ಸಿದ್ದೇಶ್ವರ ಸ್ವಾಮಿಗಳವರು ಸೋಮವಾರ ಲಿಂಗೈಕ್ಯರಾದ ಸುದ್ದಿ ನಾಡಿನ ಜನರ ಪಾಲಿಗೆ ದಿಗ್ಭ್ರಮೆಯುಂಟು ಮಾಡಿದೆ'

'ಶ್ರೀ ಸಿದ್ದೇಶ್ವರಸ್ವಾಮಿಗಳವರು ಯಾವ ಲೌಕಿಕ ವಿಶೇಷಣಗಳಿಗೂ ನಿಲುಕುವಂತವರಲ್ಲ, ಅವರನ್ನು ಜನತೆ 'ನಡೆದಾಡುವ ದೇವರು" ಎಂದು ಪ್ರೀತ್ಯಾದರಗಳಿಂದ ಗೌರವಿಸುತ್ತಿದ್ದರು. ನಿಜವಾದ ಅರ್ಥದಲ್ಲಿ ಅವರೊಬ್ಬರು ಅವಧೂತರು, ವೇದಾಂತಕೇಸರಿ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳವರಿಂದ ಅಧ್ಯಾತ್ಮದೀಕ್ಷೆ ಪಡೆದು, ಸಕಲಶಾಸ್ತ್ರವಿಶಾರದರಾದ ಅವರು ಪುರಾಣಕಾಲದ ಋಷಿಸದೃಶ್ಯ ವ್ಯಕ್ತಿತ್ವ ಹೊಂದಿದ್ದ ಜ್ಞಾನನಿಧಿಗಳು'

'ಸಿದ್ಧೇಶ್ವರಸ್ವಾಮಿಗಳವರು ಇಹದ ಮಹಾಮಣಿಹವನ್ನು ಪೂರೈಸಿ ಅಸ್ತಂಗತರಾಗಿರುವುದು ಅನುಭಾವಲೋಕದಲ್ಲಿ ದಟ್ಟ ಕತ್ತಲೆ ಆವರಿಸಿದಂತಾಗಿದೆ. ಅನಾರೋಗ್ಯದಿಂದ ಅಲ್ಪ ಕಾಲ ವಿಶ್ರಾಂತಿಗೆ ಸಂದಿದ್ದರೂ, ಅದು ಅವರ ಶಾಶ್ವತ ವಿಶ್ರಾಂತಿಗೆ ಕಾರಣವಾಗುತ್ತದೆ ಎನ್ನುವುದನ್ನು ಊಹಿಸಿಕೊಳ್ಳುವುದೂ ಕಷ್ಟವಾಗುತ್ತಿದೆ. ನಡೆಯಲ್ಲಿ ನುಡಿಯನ್ನು, ನುಡಿಯಲ್ಲಿ ನಡೆಯನ್ನು ಸಂಲಗ್ನಗೊಳಿಸಿಕೊಂಡು, ಶಿವಪಥದಲ್ಲಿ ಸುದೀರ್ಘ ಬದುಕನ್ನು ನಡೆದ ಅವರ ಪರಿ ಚಿಜ್ಯೋತಿಯ ವ್ಯಕ್ತ ಪ್ರತಿರೂಪದಂತೆ ಇದ್ದಿತು. ಹಳೆಯ ಮೈಸೂರು ಹಾಗೂ ಉತ್ತರ ಕರ್ನಾಟಕದ ನೆರೆಹಾವಳಿಗೆ ಸಹಾಯ ಹಸ್ತ ನೀಡಲು ತೆರಳಿದ್ದ, ಮೈಸೂರು ಭಾಗದ ಜನತೆಗೆ ಅವರು ಕೃತಜ್ಞತೆ ತಿಳಿಸಲು ಆಡಿದ ಮಾತುಗಳು ಅಲ್ಲಿ ನೆರೆದಿದ್ದವರ ಹೃದಯವನ್ನು ಆವರಿಸಿ ಕಣ್ಣಂಚಿನಲ್ಲಿ ಕಂಬನಿ ತುಂಬಿಕೊಂಡ ಚಿತ್ರ ಈಗಲೂ ಕಣ್ಣಿಗೆ ಕಟ್ಟಿದಂತಿದೆ'

'ಸುತ್ತೂರು ಶ್ರೀಮಠಕ್ಕೆ ಪ್ರತಿವರ್ಷವೂ ತಪ್ಪದೆ ಆಗಮಿಸಿ, ತಿಂಗಳುಗಟ್ಟಲೆ ವಾಸ್ತವ್ಯ ಹೂಡಿ ಮಠಾಧಿಪತಿಗಳಿಗೆ ಹಾಗೂ ಶ್ರೀಸಾಮಾನ್ಯರಿಗೆ ಅವರ ಜ್ಯೋತಿರ್ಲಿಂಗಸ್ವರೂಪದ ದಾರ್ಶನಿಕ ಮಾತುಗಳಿಂದ ಎಲ್ಲರ ಮನದ ಕೊಳೆಯನ್ನು ತೊಳೆಯುತ್ತಿದ್ದುದನ್ನು ನೆನೆಸಿಕೊಂಡರೆ ಈಗ ದೊಡ್ಡ ಶೂನ್ಯ ಆವರಿಸಿದಂತಾಗಿದೆ'

'ಭಾರತೀಯ ಪರಂಪರೆಗೆ ಅನುಗುಣವಾಗಿ ಅವರು ಉತ್ತರಾಯಣ ಪುಣ್ಯಕಾಲದಲ್ಲಿ - ವೈಕುಂಠ ಏಕಾದಶಿಯ ಪರ್ವದಿನದಂದು - ದೇಹತ್ಯಾಗ ಮಾಡಿದುದು ಅನಿರೀಕ್ಷಿತ. ಸರ್ವಧರ್ಮ ಸಮಭಾವದ ಈ ಆಧ್ಯಾತ್ಮಿಕ ಅಧ್ವರ್ಯುಗಳು ನುಡಿದಂತೆ ನಡೆದ ವಿಶ್ವಮಾನ್ಯರು. ಗುಮ್ಮಟಗಳ ನಗರಿಯ ಬಹು ದೊಡ್ಡ ‘ಜ್ಞಾನಗುಮ್ಮಟ’ ಬಯಲಲ್ಲಿ ಲೀನವಾಗಿದೆ. ಅವರ ಮೌನಸದೃಶವಾದ ಮಾತು-ಮಾತುಗಳ ನಡುವಣ ಮೌನದ ಮಹಾಬೆಳಕು ಈಗ ಇಲ್ಲವಾಗಿದೆ'

'ಹೀಗೆ ಬಯಲಲ್ಲಿ ಬಯಲಾಗಿ ಹೋಗಿರುವ ಜ್ಞಾನಸೂರ್ಯ ಶ್ರೀ ಸಿದ್ಧೇಶ್ವರಸ್ವಾಮಿಗಳವರ ಭಕ್ತಾದಿಗಳು ಈ ಅಗಲಿಕೆಗಾಗಿ ದುಃಖಿಸದೆ, ಅವರು ಸಾರಿದ ಸಾರ್ವಕಾಲಿಕ ಮೌಲ್ಯಗಳನ್ನು ಅನುಸರಿಸುವ ಮೂಲಕ ಅವರಿಗೆ ಕೃತಜ್ಞತೆಯ ಶ್ರದ್ಧಾಂಜಲಿಗಳನ್ನು ಅರ್ಪಿಸಬೇಕೆಂದು ಹಾರೈಸುತ್ತೇವೆ' ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT