ಬುಧವಾರ, ಮೇ 18, 2022
24 °C

ಸಿಂಧನೂರು: ಬಿಸಿಲಿನ ತಾಪಕ್ಕೆ ತತ್ತರಿಸಿದ ಜನ, ತಂಪು ಪಾನೀಯಗಳ ಮೊರೆಹೋದ ನಾಗರಿಕರು

ಡಿ.ಎಚ್.ಕಂಬಳಿ Updated:

ಅಕ್ಷರ ಗಾತ್ರ : | |

Prajavani

ಸಿಂಧನೂರು: ಕಳೆದ 15 ದಿನಗಳಿಂದ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲಿನ ತಾಪಕ್ಕೆ ತತ್ತರಿಸಿರುವ ಜನರಿ ತಂಪು ಪಾನೀಯಗಳತ್ತ ಮೊರೆ ಹೋಗುತ್ತಿದ್ದಾರೆ.

ಎರಡ್ಮೂರು ದಿನಗಳಿಂದ 41 ಡಿಗ್ರಿ ಸೆಲ್ಸಿಯಸ್‍ಗೆ ಬಿಸಿಲಿನ ಪ್ರಖರತೆ ತಲುಪಿದೆ. ಬೆಳಿಗ್ಗೆ ಎಂಟು ಗಂಟೆಯಾದರೆ ಸಾಕು ಬೆವರು ಹನಿಗಳು ಆರಂಭವಾಗುತ್ತವೆ. ಹತ್ತು ಗಂಟೆಗೆ ವಿಪರೀತ ಬಿಸಿಲಿನ ಝಳ ಆರಂಭವಾಗುತ್ತದೆ. ಇದರ ಜೊತೆಗೆ ಬಿಸಿಯಾದ ಗಾಳಿ ಮುಖಕ್ಕೆ ತಾಗುವುದರಿಂದ ಮುಖವೆಲ್ಲ ಸುಟ್ಟ ಅನುಭವ ಆಗುತ್ತಿದೆ.

ಇದರಿಂದಾಗಿ ಸದಾ ವಾಹನಗಳು ಮತ್ತು ಜನರಿಂದ ಗಿಜಿಗುಡುತ್ತಿದ್ದ ರಾಯಚೂರು, ಗಂಗಾವತಿ ಮತ್ತು ಕುಷ್ಟಗಿ ರಸ್ತೆಯಲ್ಲಿ ಮಧ್ಯಾಹ್ನದ ಸಮಯದಲ್ಲಿ ಸಂಚರಿಸುವವರ ಸಂಖ್ಯೆ ತೀರಾ ಇಳಿಮುಖವಾಗಿದೆ.

ಬೇಸಿಗೆಯ ಬಿರುಬಿಸಿಲು ಆರಂಭವಾಗುತ್ತಿದ್ದಂತೆ ನಗರದ ರಸ್ತೆ ಬದಿ, ಜನಸಂದಣಿ ಪ್ರದೇಶಗಳಲ್ಲಿ ತಂಪು ಪಾನೀಯ ಮತ್ತು ಎಳನೀರು ಅಂಗಡಿಗಳು ಎಲ್ಲೆಂದರಲ್ಲಿ ತಲೆ ಎತ್ತಿವೆ. ಬೇಸಿಗೆ ಬಿಸಿಲಿನಿಂದ ಬಸವಳಿದ ಜನರು ಹಣ್ಣು, ತಂಪು ಪಾನೀಯಗಳಿಗೆ ಮೊರೆ ಹೋಗುತ್ತಿರುವುದರಿಂದ ಎಳೆನೀರು, ಕಲ್ಲಂಗಡಿ, ಕಬ್ಬಿನ ಹಾಲಿನ ವ್ಯಾಪಾರ ಜೋರಾಗಿದೆ. ಜೊತೆಗೆ ಹಣ್ಣಿನ ಜ್ಯೂಸ್, ನಿಂಬು ರಸ, ಮಜ್ಜಿಗೆ ಮಾರಾಟ ಭರಾಟೆಯಿಂದ ಸಾಗಿದೆ. ₹ 10ಕ್ಕೆ ಗ್ಲಾಸ್ ಹಣ್ಣಿ ರಸ ಸಿಗುತ್ತಿರುವದರಿಂದ ಜನ ದಾಹ ತೀರಿಸಿಕೊಳ್ಳುತ್ತಿದ್ದಾರೆ.

‘ಕಲ್ಲಂಗಡಿ, ಕರಬುಜ ಹಣ್ಣುಗಳಿಗೆ ಜನರು ಮುಗಿಬೀಳುತ್ತಿರುವುದು ಸಾಮಾನ್ಯವಾಗಿದೆ. ಪ್ರತಿವಾರ ಹತ್ತಾರು ಲಾರಿಗಳು ಕಲ್ಲಂಗಡಿ, ಕರಬುಜ, ದ್ರಾಕ್ಷಿ ಹಣ್ಣುಗಳನ್ನು ತುಂಬಿಕೊಂಡು ನಗರಕ್ಕೆ ಬರುತ್ತಿವೆ. ಕಳೆದ ವರ್ಷದಕ್ಕಿಂತ ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಕಲ್ಲಂಗಡಿ ದಾಸ್ತಾನು ಬಂದಿದೆ. ಇದರಿಂದ ದರದಲ್ಲಿಯೂ ಸರಾಸರಿ ಪ್ರತಿ ಕೆಜಿಗೆ ₹ 20 ಇದೆ. ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಕರ್ನಾಟಕದ ಪಾವಗಡ, ಕೊಪ್ಪಳ ಜಿಲ್ಲೆಯ ಕನಕಗಿರಿ, ಕುಷ್ಟಗಿ ತಾಲ್ಲೂಕುಗಳಿಂದ ಕಲ್ಲಂಗಡಿ ಹಣ್ಣು ಇಲ್ಲಿಗೆ ಬರುತ್ತಿದೆ. ಪ್ರದಿದಿನ ತಾವು ಸರಾಸರಿ 500 ಕೆಜಿ ಮಾರಾಟ ಮಾಡುತ್ತಿರುವುದಾಗಿ’ ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿರುವ ಕಲ್ಲಂಗಡಿ ಮಾರಾಟ ಮಾಡುವ ಮರ್ದಾನಾಲಿ ಅಬ್ದುಲ್‍ಸಾಬ ಹೇಳುತ್ತಾರೆ.

ಬಿಸಿಲಿನ ಪ್ರಮಾಣ 41 ಸೆಲ್ಸಿಯಸ್ ಇದ್ದರೆ ಏಪ್ರಿಲ್, ಮೇದಲ್ಲಿ ನಾಗರಿಕರ ಸ್ಥಿತಿ ಏನಾಗಬಹುದೆಂದು ಎಲ್‍ಐಸಿ ಏಜೆಟ್ ಗುರುರಾಜ ಜಾಗೀರದಾರ್ ಆತಂಕ ವ್ಯಕ್ತಪಡಿಸುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು