ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಮಂಚನಬೆಲೆಗೆ ಎರಡೆರಡು ಬಾರಿ ಬಾಗಿನ!

ಸಚಿವರು, ಸಂಸದರು ಭಾಗಿ; ಸರಳವಾಗಿ ಮುಗಿದ ಕಾರ್ಯಕ್ರಮ
Last Updated 28 ಆಗಸ್ಟ್ 2020, 15:24 IST
ಅಕ್ಷರ ಗಾತ್ರ

ರಾಮನಗರ: ಮಾಗಡಿ ತಾಲ್ಲೂಕಿನ ಮಂಚನಬೆಲೆ ಜಲಾಶಯ ಭರ್ತಿ ಆಗಿದ್ದು, ರಾಜ್ಯ ಸರ್ಕಾರದಿಂದ ಶುಕ್ರವಾರ ಬಾಗಿನ ಅರ್ಪಿಸಲಾಯಿತು. ಆದರೆ ಅತಿಥಿಗಳ ಬರುವಿಕೆಯ ಸಮಯ ಏರುಪೇರಾದ ಕಾರಣ ಎರಡೆರಡು ಬಾರಿ ಬಾಗಿನ ಸಮರ್ಪಣೆ ನಡೆಯಿತು.

1.22 ಟಿಎಂಸಿ ಸಾಮರ್ಥ್ಯದ ಈ ಜಲಾಶಯವು ಭರ್ತಿ ಆಗಿದ್ದು, ಆಗಾಗ್ಗೆ ಅರ್ಕಾವತಿ ನದಿಗೆ ನೀರು ಹರಿಸಲಾಗುತ್ತಿದೆ. ಜಲಾಶಯದ ಮೇಲ್ಬಾಗದಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಮೊದಲಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಬಾಗಿನ ಅರ್ಪಿಸಿದರು. ಅವರೊಟ್ಟಿಗೆ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ , ಮಾಗಡಿ ಶಾಸಕ ಎ.ಮಂಜುನಾಥ್‌ ಸಹ ಬಾಗಿನ ಬಿಟ್ಟರು.

ಕೆಲ ಹೊತ್ತಿನ ಬಳಿಕ ಜಲಾಶಯಕ್ಕೆ ಸಂಸದ ಡಿ.ಕೆ. ಸುರೇಶ್‌, ಸಚಿವರಾದ ನಾರಾಯಣ ಗೌಡ ಹಾಗೂ ಬೈರತಿ ಬಸವರಾಜು ಸಹ ಬಂದರು. ಹೀಗಾಗಿ ಮತ್ತೊಮ್ಮೆ ಬಾಗಿನ ಅರ್ಪಣೆ ಕಾರ್ಯ ನಡೆಯಿತು. ಎರಡೇ ಬಾಗಿನದ ಮೊರಗಳು ಉಳಿದ ಕಾರಣ ಒಂದನ್ನು ಸುರೇಶ್‌, ಮತ್ತೊಂದನ್ನು ಸಚಿವರಿಬ್ಬರೂ ಜಂಟಿಯಾಗಿ ಬಿಟ್ಟರು. ಈ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವರೂ ಇದ್ದರು. ಜೊತೆಗೆ ಶಾಸಕ ಮಂಜುನಾಥ್‌, ವಿಧಾನ ಪರಿಷತ್‌ ಸದಸ್ಯ ಎ.ರವಿ, ಮಾಗಡಿ ತಾಲ್ಲೂಕು ಆಡಳಿತದ ಜನಪ್ರತಿನಿಧಿಗಳು ಪಾಲ್ಗೊಂಡರು.

ಕೈಕೊಟ್ಟ ಬೋಟ್‌: ಬಾಗಿನ ಅರ್ಪಣೆ ತರುವಾಯ ಸಚಿವ ಅಶ್ವತ್ಥನಾರಾಯಣ ಯಾಂತ್ರಿಕ ದೋಣಿಯಲ್ಲಿ ಅಧಿಕಾರಿಗಳ ಜೊತೆ ಅಣೆಕಟ್ಟೆಯ ಹಿನ್ನೀರಿಯಲ್ಲಿ ವಿಹಾರಕ್ಕೆ ಹೊರಟರು. ಆರಂಭದಲ್ಲಿ ಸ್ಟಾರ್ಟ್‌ ಆಗಲು ಒಂದಿಷ್ಟು ನಿಮಿಷ ಕಾಡಿಸಿದ ಬೋಟ್‌ ನಂತರದಲ್ಲಿ ನೀರಿನ ಮಧ್ಯೆಯೇ ನಿಂತಿತು. ಹೀಗಾಗಿ ಸಚಿವರು ತಮ್ಮ ವಿಹಾರವನ್ನು ಅರ್ಧಕ್ಕೆ ಮೊಟಕುಗೊಳಿಸಿ ವಾಪಸ್‌ ಆಗಬೇಕಾಯಿತು.

ಅಂತರ ನಿರ್ಲಕ್ಷ್ಯ: ಕಾರ್ಯಕ್ರಮದಲ್ಲಿ ಜನರ ಪ್ರವೇಶಕ್ಕೆ ಮಿತಿ ಇರಲಿಲ್ಲ. ಮೂರು ಪ್ರಮುಖ ಪಕ್ಷಗಳ ಮುಖಂಡರೂ, ಕಾರ್ಯಕರ್ತರು ತುಂಬಿದ್ದರು. ಕಡೆಗೆ ಸಾರ್ವಜನಿಕರಿಗೂ ಪ್ರವೇಶ ನೀಡಲಾಯಿತು. ಇದರಿಂದಾಗಿ ಅಣೆಕಟ್ಟೆಯ ಅಂಗಳ ಜನರಿಂದ ತುಂಬಿತು. ಪರಿಣಾಮವಾಗಿ ಪರಸ್ಪರ ಅಂತರ ಕಾಯ್ದುಕೊಳ್ಳುವುದಕ್ಕೆ ತಿಲಾಂಜಲಿ ಹಾಡಲಾಯಿತು.

ವ್ಯರ್ಥ ವೇದಿಕೆ

ಬಾಗಿನ ಅರ್ಪಣೆ ತರುವಾಯ ಸಭಾ ಕಾರ್ಯಕ್ರಮಕ್ಕೆಂದು ಮೇಲ್ಬಾಗದ ಮೂಲೆಯಲ್ಲಿ ವೇದಿಕೆ ನಿರ್ಮಾಣ ಮಾಡಲಾಗಿತ್ತು. ಆದರೆ ಬಾಗಿನ ಸಮರ್ಪಣೆ ಮಾಡುತ್ತಲೇ ಜನಪ್ರತಿನಿಧಿಗಳು ತರಾತುರಿಯಲ್ಲಿ ಅಲ್ಲಿಂದ ನಿರ್ಗಮಿಸಿದರು. ಮಾಧ್ಯಮದವರಿಗೂ ಮುಖ ತೋರಿಸುವ ಸೌಜನ್ಯ ತೋರಲಿಲ್ಲ. ಇದರಿಂದಾಗಿ ವೇದಿಕೆ ಹಾಕಿದ್ದು ವ್ಯರ್ಥವಾಯಿತು. ಸಚಿವರನ್ನು ಕಾಣಲೆಂದು ಸಾಕಷ್ಟು ಸಂಖ್ಯೆಯಲ್ಲಿ ಸಾರ್ವಜನಿಕರೂ ಬಂದಿದ್ದರು. ಆದರೆ ಎಲ್ಲರಿಗೂ ಭೇಟಿಯ ಅವಕಾಶ ದೊರೆಯಲಿಲ್ಲ. ಹೀಗಾಗಿ ಅವರೂ ನಿರಾಸೆಯಿಂದ ನಿರ್ಗಮಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT