ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉದ್ಘಾಟನೆಗಷ್ಟೇ ಸೀಮಿತವಾದ ವಿದ್ಯುತ್ ಚಿತಾಗಾರ

ಚಿತಾಗಾರ ನಿರ್ವಹಣೆಗೆ ಸಿಬ್ಬಂದಿ ಕೊರತೆ; ವರ್ಷವಾದರೂ ಬಳಕೆಗೆ ಮುಕ್ತವಾಗಿಲ್ಲ
Published : 13 ಸೆಪ್ಟೆಂಬರ್ 2024, 5:35 IST
Last Updated : 13 ಸೆಪ್ಟೆಂಬರ್ 2024, 5:35 IST
ಫಾಲೋ ಮಾಡಿ
Comments

ರಾಮನಗರ: ನಗರದ ಬೆಂಗಳೂರು– ಮೈಸೂರು ರಸ್ತೆಯಲ್ಲಿ ಎಪಿಎಂಸಿ ಎದುರಿಗೆ ಇರುವ ಸ್ಮಶಾನದಲ್ಲಿ ನಿರ್ಮಿಸಿರುವ ವಿದ್ಯುತ್ ಚಿತಾಗಾರ ಉದ್ಘಾಟನೆಗೊಂಡು ಆರು ತಿಂಗಳಾದರೂ, ಇದುವರೆಗೆ ಸಾರ್ವಜನಿಕರ ಬಳಕೆಗೆ ಮುಕ್ತವಾಗಿಲ್ಲ. ಜನ ಅನಿವಾರ್ಯವಾಗಿ ಹಿಂದಿನಂತೆ ಸೌದೆ ತಂದು ಶವ ಸುಡುವ ಮೂಲಕ ಅಂತ್ಯಕ್ರಿಯೆ ನೆರವೇರಿಸುವುದನ್ನೇ ಮುಂದುರಿಸಿಕೊಂಡು ಹೋಗುತ್ತಿದ್ದಾರೆ.

ಚಿತಾಗಾರ ನಿರ್ಮಾಣಗೊಂಡು ಒಂದೂ ಮುಕ್ಕಾಲು ವರ್ಷದ ಬಳಿಕ, ಲೋಕಸಭಾ ಚುನಾವಣೆಗೆ ಮುಂಚೆ ಮಾರ್ಚ್ 14ರಂದು ಅಂದಿನ ಸಂಸದ ಡಿ.ಕೆ. ಸುರೇಶ್ ಅವರು ಚಿತಾಗಾರವನ್ನು ಉದ್ಘಾಟನೆ ಮಾಡಿದ್ದರು. ಆದರೆ, ಅಂದಿನಿಂದ ಇದುವರೆಗೆ ಚಿತಾಗಾರದಲ್ಲಿ ಒಂದೇ ಒಂದು ಶವವನ್ನು ದಹನ ಮಾಡಿಲ್ಲ.

ಸುಸ್ಥಿತಿಯಲ್ಲಿದೆ: ‘ಚಿತಾಗಾರವನ್ನು ಇತ್ತೀಚೆಗೆ ಪ್ರಾಯೋಗಿಕವಾಗಿ ಪರಿಶೀಲನೆ ನಡೆಸಲಾಗಿದ್ದು, ಅಲ್ಲಿರುವ ಯಂತ್ರಗಳೆಲ್ಲವೂ ಸುಸ್ಥಿತಿಯಲ್ಲಿವೆ. ಕಟ್ಟಡದಲ್ಲಿರುವ ಎರಡು ಚಿತಾಗಾರಗಳ ಪೈಕಿ, ಸದ್ಯ ಒಂದರಲ್ಲಿ ಮಾತ್ರ ಎಲೆಕ್ಟ್ರಿಕ್ ಫರ್ನಸ್ ಯಂತ್ರ ಅಳವಡಿಸಲಾಗಿದೆ. ಮತ್ತೊಂದಕ್ಕೆ ಅಳವಡಿಕೆ ಬಾಕಿ ಇದೆ. ನಗರಕ್ಕೆ ಸದ್ಯ ಒಂದೇ ಸಾಕಾಗಿದ್ದು, ಅಗತ್ಯವಿದ್ದರೆ ಮತ್ತೊಂದಕ್ಕೂ ಫರ್ನಸ್ ಯಂತ್ರ ಅಳವಡಿಸಲಾಗುವುದು’ ಎಂದು ನಗರಸಭೆ ಪೌರಾಯುಕ್ತ ಜಯಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

₹3.75 ಕೋಟಿ ವೆಚ್ಚ: ‘ಸ್ಮಶಾನದಲ್ಲಿರುವ ವಿದ್ಯುತ್‌ ಚಿತಾಗಾರವನ್ನು ₹3.75 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಅದಕ್ಕೆ ನಗರಸಭೆಯು ₹1.20 ಕೋಟಿ ನೀಡಿದೆ. ಉಳಿದ ಮೊತ್ತವನ್ನು ಕೆಪಿಟಿಸಿಎಲ್ ಹಾಗೂ ಹಿಂದಿನ ಸಂಸದ ಡಿ.ಕೆ. ಸುರೇಶ್ ಅವರ ಅನುದಾನದಿಂದ ಭರಿಸಲಾಗಿದೆ. ಜಿಲ್ಲಾ ನಿರ್ಮಿತಿ ಕೇಂದ್ರದಿಂದ 2019ರಲ್ಲಿ ಶುರುವಾದ ಚಿತಾಗಾರದ ಕಾಮಗಾರಿ 2022ರಲ್ಲಿ ಪೂರ್ಣಗೊಂಡಿತು. ನಂತರ ನಗರಸಭೆಗೆ ಕಟ್ಟಡ ಹಸ್ತಾಂತರವಾಯಿತು’ ಎಂದು ನಗರಸಭೆ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

‘ನಗರ ಸ್ಮಶಾನಗಳಲ್ಲಿ ಶವವನ್ನು ಹೂಳಲು ಜಾಗವಿಲ್ಲದಿರುವುದು ಒಂದು ಸಮಸ್ಯೆಯಾದರೆ, ಮೃತದೇಹ ಸುಡುವುದಕ್ಕೆ ಸೌದೆ ಹೊಂದಿಸುವುದು ಸಹ ಮತ್ತೊಂದು ಸವಾಲು. ಇದಕ್ಕೆ ಪರಿಹಾರವಾಗಿ ಪರಿಹಾರವಾಗಿ ವಿದ್ಯುತ್ ಚಿತಾಗಾರ ನಿರ್ಮಾಣವಾಗಿ ಉದ್ಘಾಟನೆಯೂ ಆಗಿದೆ. ಆದರೆ, ಬಳಕೆ ಮಾತ್ರ ಆಗುತ್ತಿಲ್ಲ. ಒಳಗಿರುವ ಯಂತ್ರಗಳು ತುಕ್ಕು ಹಿಡಿದು ಹೋಗುತ್ತಿವೆ. ಅವುಗಳೇನಾದರೂ ದುರಸ್ತಿಗೆ ಬಂದರೆ, ಚಿತಾಗಾರ ಮತ್ತೆ ಕಾರ್ಯನಿರ್ವಹಿಸುವುದಕ್ಕೆ ಅದೆಷ್ಟು ತಿಂಗಳುಗಳು ಬೇಕಾಗುತ್ತದೊ’ ಎಂದು ಸ್ಥಳೀಯ ನಿವಾಸಿ ಪದ್ಮನಾಭ ಬೇಸರ ವ್ಯಕ್ತಪಡಿಸಿದರು.

ಜಯಣ್ಣ ಪೌರಾಯುಕ್ತ ರಾಮನಗರ ನಗರಸಭೆ
ಜಯಣ್ಣ ಪೌರಾಯುಕ್ತ ರಾಮನಗರ ನಗರಸಭೆ
ವಿದ್ಯುತ್ ಚಿತಾಗಾರ ನಿರ್ವಹಣೆಗೆ ನುರಿತ ಸಿಬ್ಬಂದಿ ಇಲ್ಲ. ಸದ್ಯ ನಮ್ಮ ಸಿಬ್ಬಂದಿಗೆ ಬೇರೆ ಚಿತಾಗಾರದಲ್ಲಿ ತರಬೇತಿ ನೀಡಲಾಗುತ್ತಿದ್ದು ತರಬೇತಿ ಮುಗಿದ ಬಳಿಕ ಇಲ್ಲಿನ ಚಿತಾಗಾರ ಕಾರ್ಯಾರಂಭಿಸಲಿದೆ
ಜಯಣ್ಣ ಪೌರಾಯುಕ್ತ ನಗರಸಭೆ ರಾಮನಗರ

ಟೆಂಡರ್‌ ಕತೆ ಏನಾಯಿತು?

ವರ್ಷದ ಹಿಂದೆಯೇ ವಿದ್ಯುತ್ ಚಿತಾಗಾರ ನಿರ್ವಹಣೆ ಮತ್ತು ಭದ್ರತಾ ಸಿಬ್ಬಂದಿಗಾಗಿ ಟೆಂಡರ್ ಕರೆಯಲಾಗಿದ್ದು ಇಪ್ಪತ್ತು ದಿನದೊಳಗೆ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ನಗರಸಭೆಯ ಹಿಂದಿನ ಪೌರಾಯುಕ್ತ ಎಲ್. ನಾಗೇಶ್ ಅವರು ವರ್ಷದ ಹಿಂದೆಯೇ ಹೇಳಿದ್ದರು. ಅವರ ವರ್ಗಾವಣೆ ಬಳಿಕ ಬಂದಿರುವ ಜಯಣ್ಣ ಅವರು ಇಲ್ಲಿನ ಸಿಬ್ಬಂದಿಗೆ ಬೇರೆ ಕಡೆ ತರಬೇತಿ ಕೊಡಿಸಿ ಚಿತಾಗಾರ ಕಾರ್ಯಾರಂಭಿಸಲು ಮುಂದಾಗಿದ್ದಾರೆ. ಹಾಗಾದರೆ ಹಿಂದಿನ ಪೌರಾಯುಕ್ತರು ಕರೆದಿದ್ದ ಟೆಂಡರ್ ಕತೆ ಏನಾಯಿತು? ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT