ಶುಕ್ರವಾರ, ಜನವರಿ 22, 2021
21 °C
ಕಾರ್ಮಿಕ ಸಂಘದ ಸ್ಪಷ್ಟನೆ

ಹೋರಾಟ ಮುಂದುವರಿಕೆ: ಲಾಕೌಟ್‌ ಹಿಂಪಡೆದ ಟೊಯೊಟಾ ಕಾರ್ಖಾನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಇರುವ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್‌ ಕಂಪನಿಯು ಕಾರ್ಖಾನೆಯ ಲಾಕೌಟ್‌ ಆದೇಶವನ್ನು ಅಧಿಕೃತವಾಗಿ ಹಿಂಪಡೆದಿದೆ. ಆದಾಗ್ಯೂ ಕಾರ್ಮಿಕ ಸಂಘವು ಹೋರಾಟ ಮುಂದುವರಿಸಿದೆ.

‘ಮಂಗಳವಾರ ಎರಡನೇ ಪಾಳಿಯಿಂದಲೇ ಕಾರ್ಖಾನೆಯಲ್ಲಿ ಉತ್ಪಾದನಾ ಚಟುವಟಿಕೆಗಳು ಪೂರ್ಣ ಪ್ರಮಾಣದಲ್ಲಿ ಆರಂಭ ಆಗಿವೆ. ಕೆಲಸಕ್ಕೆ ಮರಳುವ ನೌಕರರು ಕಾರ್ಖಾನೆಯ ಒಳಗೆ ಉತ್ತಮ ನಡವಳಿಕೆ ತೋರುವ ಮುಚ್ಚಳಿಕೆ ಪತ್ರಕ್ಕೆ ಸಹಿ ಹಾಕಬೇಕಿದೆ. ಕಂಪನಿಯ ಕಾರ್ಮಿಕರು ಮತ್ತು ಅವರ ಕುಟುಂಬಗಳ ಹಿತದೃಷ್ಟಿಯಿಂದ ಲಾಕೌಟ್‌ ಹಿಂಪಡೆಯಲಾಗಿದೆ’ ಎಂದು ಟಿಕೆಎಂ ಆಡಳಿತ ಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ. ಆದರೆ 66 ನೌಕರರ ಅಮಾನತು ಆದೇಶ ಮುಂದುವರಿಯಲಿದೆ. ಅವರ ವಿರುದ್ಧದ ಆರೋಪಗಳ ಕುರಿತು ನ್ಯಾಯಸಮ್ಮತ ತನಿಖೆ ಮುಂದುವರಿಯಲಿದೆ ಎಂದು ಕಂಪನಿಯು ಹೇಳಿದೆ.

ಆಡಳಿತ ಮಂಡಳಿ ಹಾಗೂ ಕಾರ್ಮಿಕರ ನಡುವಿನ ಬಿಕ್ಕಟ್ಟಿನಿಂದಾಗಿ 2020ರ ನವೆಂಬರ್‌ 18ರಂದು ಟೊಯೊಟಾ ಲಾಕೌಟ್‌ ಘೋಷಿಸಿತ್ತು. ಸರ್ಕಾರದ ಮಧ್ಯಸ್ಥಿಕೆಯಿಂದ ಮತ್ತೆ ಕಾರ್ಖಾನೆ ಬಾಗಿಲು ತೆರೆಯಿತಾದರೂ ಯೂನಿಯನ್ ಬಿಗಿಪಟ್ಟಿನ ಕಾರಣ ನ.23ರಂದು ಎರಡನೇ ಬಾರಿಗೆ ಲೌಕೌಟ್ ಘೋಷಣೆ ಮಾಡಿತ್ತು. ಈ ನಡುವೆಯೂ ಕಂಪನಿಯ ಷರತ್ತುಗಳನ್ನು ಒಪ್ಪಿ ಬರುವವರಿಗೆ ಕೆಲಸಕ್ಕೆ ಅವಕಾಶ ನೀಡಿದ್ದು, ಸುಮಾರು 1200 ಕಾರ್ಮಿಕರೊಂದಿಗೆ ಅಲ್ಪ ಪ್ರಮಾಣದಲ್ಲಿ ಉತ್ಪಾದನೆ ಮುಂದುವರಿಸಿತ್ತು.

ಯೂನಿಯನ್ ಪ್ರತಿಕ್ರಿಯೆ
ಲಾಕೌಟ್‌ ತೆರವು ಬಗ್ಗೆ ಟಿಕೆಎಂ ಕಾರ್ಮಿಕರ ಸಂಘವು ಪ್ರತಿಕ್ರಿಯಿಸಿದ್ದು ‘ಒಂದೆಡೆ ಲಾಕೌಟ್‌ ತೆರವು ಎನ್ನುವ ಕಾರ್ಖಾನೆಯು ಮತ್ತೊಂದು ಕಡೆ ಮುಚ್ಚಳಿಕೆ ಬರೆದುಕೊಟ್ಟು ಒಳಗೆ ಬನ್ನಿ ಎಂದು ಷರತ್ತು ವಿಧಿಸಿರುವುದು ಕಾನೂನುಬಾಹಿರವಾಗಿದೆ’ ಎಂದು ಟೀಕಿಸಿದೆ.

‘ಲಾಕೌಟ್‌ ಅವಧಿಯಲ್ಲಿನ ಸಂಪೂರ್ಣ ಸಂಬಳವನ್ನು ಕಾರ್ಮಿಕರಿಗೆ ನೀಡಬೇಕು. ಈ ಅವಧಿಯಲ್ಲಿ ಹೊರಡಿಸಲಾದ ಎಲ್ಲ ಅಮಾನತು ಹಾಗೂ ಶಿಕ್ಷೆ ಆದೇಶಗಳನ್ನು ಹಿಂಪಡೆಯಬೇಕು. ಅಲ್ಲಿಯವರೆಗೂ ನಾವು ಹೋರಾಟ ಮುಂದುವರಿಸುತ್ತೇವೆ’ ಎಂದು ಕಾರ್ಮಿಕ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್ ಚಕ್ಕೆರೆ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು