ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕಾರಿಪುರ: ವಿರೋಧದ ಮಧ್ಯೆಯೂ ಟೋಲ್ ನಿರ್ಮಾಣ, ರೈತರ ಆಕ್ರೋಶ

Published 28 ಫೆಬ್ರುವರಿ 2024, 5:47 IST
Last Updated 28 ಫೆಬ್ರುವರಿ 2024, 5:47 IST
ಅಕ್ಷರ ಗಾತ್ರ

ಶಿಕಾರಿಪುರ: ತಾಲ್ಲೂಕಿನ ಜನರ ವಿರೋಧದ ನಡುವೆಯೂ ಕಣಿವೆಮನೆ ಗ್ರಾಮ ಸಮೀಪದ ರಾಜ್ಯ ಹೆದ್ದಾರಿಯಲ್ಲಿ ಕುಟ್ರಳ್ಳಿ ಟೋಲ್ ಗೇಟ್ ನಿರ್ಮಾಣಗೊಂಡಿದೆ.

ಶಿವಮೊಗ್ಗದಿಂದ ಹಾನಗಲ್ ಮಾರ್ಗವಾಗಿ ಹುಬ್ಬಳ್ಳಿ ಕಡೆಗೆ ಸಂಚರಿಸಲು ಅನುಕೂಲವಾಗುವ ನಿಟ್ಟಿನಲ್ಲಿ ರಾಜ್ಯ ಹೆದ್ದಾರಿ ಅಭಿವೃದ್ಧಿ ನಿಗಮವು 8 ವರ್ಷಗಳ ಹಿಂದೆ ಈ ಹೆದ್ದಾರಿ ನಿರ್ಮಾಣ ಮಾಡಿತ್ತು. ಈಗ ಹೆದ್ದಾರಿ– 57ರಲ್ಲಿ ಕುಟ್ರಳ್ಳಿ ಹಾಗೂ ಕಣಿವೆಮನೆ ಗ್ರಾಮದ ಮಧ್ಯೆ ಟೋಲ್ ಸ್ಥಾಪಿಸಿರುವುದು ತಾಲ್ಲೂಕಿನ ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಗಿದೆ.

ಶಿಕಾರಿಪುರ ಕೃಷಿ ಪ್ರಧಾನ ತಾಲ್ಲೂಕು. ನಿತ್ಯ ಸಾವಿರಾರು ರೈತರು ಈ ಹೆದ್ದಾರಿ ಮೂಲಕ ಕೃಷಿ ಚಟುವಟಿಕೆ ನಡೆಸಲು ತೆರಳುತ್ತಾರೆ. ಸಾವಿರಾರು ವಿದ್ಯಾರ್ಥಿಗಳು ಶಾಲೆ, ಕಾಲೇಜಿಗೆ ಹಾಗೂ ಗಾರ್ಮೆಂಟ್ಸ್‌ ಉದ್ಯೋಗಿಗಳು ಕೆಲಸಕ್ಕೆ ತೆರಳಲು ಈ ರಸ್ತೆ ಬಳಸುತ್ತಾರೆ.

ಟೋಲ್ ನಿರ್ಮಾಣ ಕಾಮಗಾರಿ ಆರಂಭಿಸುವ ಸಂದರ್ಭದಲ್ಲಿಯೇ ರೈತ ಸಂಘಟನೆ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿ ಟೋಲ್ ನಿರ್ಮಾಣವಾಗಿರುವ ಸ್ಥಳದಲ್ಲಿಯೇ ಪ್ರತಿಭಟನೆ ನಡೆಸಿದ್ದರು. ಆದರೂ ರಾಜ್ಯ ಹೆದ್ದಾರಿ ನಿಗಮ ಟೋಲ್ ಗೇಟ್ ನಿರ್ಮಿಸಿದ್ದು, ಹಣ ಸಂಗ್ರಹಕ್ಕೆ ಅಗತ್ಯ ಸಿಬ್ಬಂದಿಯನ್ನೂ ನೇಮಿಸಿದೆ.

ಹಾನಗಲ್, ಹುಬ್ಬಳಿ ಕಡೆಗೆ ಸಂಪರ್ಕಿಸುವ ಈ ಹೆದ್ದಾರಿಯಲ್ಲಿ ತಾಲ್ಲೂಕಿನ ಶಿರಾಳಕೊಪ್ಪ ಪಟ್ಟಣ, ಕಪ್ಪನಹಳ್ಳಿ, ಹರಗುವಳ್ಳಿ, ಸಂಡ, ಜಕ್ಕನಹಳ್ಳಿ, ಪುನೇದಹಳ್ಳಿ, ಬಳ್ಳಿಗಾವಿ, ತಾಳಗುಂದ, ಬಂದಳಿಕೆ, ತೊಗರ್ಸಿ, ಸುಣ್ಣದಕೊಪ್ಪ, ಹಿರೇಜಂಬೂರು, ಉಡುಗಣಿ, ಕುಸ್ಕೂರು, ನಾಗೀಹಳ್ಳಿ, ಬೋಗಿ, ಕಡೇನಂದಿಹಳ್ಳಿ ಸೇರಿ ವಿವಿಧ ಗ್ರಾಮಗಳ ಹಾಗೂ ಸೊರಬ ತಾಲ್ಲೂಕಿನ  ರೈತರಿಗೆ ತೊಂದರೆಯಾಗಲಿದೆ.

ಟೋಲ್ ಸಂಗ್ರಹ ಮಾಡುವ ಮಟ್ಟಿಗೆ ಈ ರಸ್ತೆ ಅಭಿವೃದ್ಧಿಯಾಗಿಲ್ಲ. ದೊಡ್ಡ ಮಟ್ಟದ ರಸ್ತೆಯೂ ಅಲ್ಲ ಎಂಬುದು ನಿತ್ಯ ಸಂಚರಿಸುವ ವಾಹನ ಸವಾರರ ದೂರು.

Quote - ಈ ರಸ್ತೆ ಮೂಲಕ ಸಾವಿರಾರು ರೈತರು ಕೃಷಿ ಭೂಮಿಗೆ ತೆರಳುತ್ತಾರೆ. ನಿತ್ಯ ಟೋಲ್‌ಗೆ ಹಣ ಕಟ್ಟಿ ಕೃಷಿ ಚಟುವಟಿಕೆಗೆ ತೆರಳುವುದು ಕಷ್ಟವಾಗುತ್ತದೆ. ಟೋಲ್ ಸಂಗ್ರಹದಿಂದ ರೈತರ ಮೇಲೆ ಆರ್ಥಿಕ ಹೊರೆ ಬೀಳಲಿದೆ. ಫಾಲಾಕ್ಷಪ್ಪ ರೈತ ಕಣಿವೆಮನೆ

Quote - ಈ ಹೆದ್ದಾರಿ ಚಿಕ್ಕದಾಗಿದ್ದು ಟೋಲ್ ಸಂಗ್ರಹಿಸುವುದು ಅವೈಜ್ಞಾನಿಕ. ಟೋಲ್ ಹಣ ನೀಡಿ ಸಂಚರಿಸುವುದು ಕಷ್ಟಕರ. ರಾಜಪ್ಪ ವಾಹನ ಸವಾರ

Cut-off box - ಸಾಲ ಮರು ಪಾವತಿಗಾಗಿ ಟೋಲ್‌ ಸಂಗ್ರಹ ರಾಜ್ಯ ಹೆದ್ದಾರಿ ಅಭಿವೃದ್ಧಿ ನಿಗಮ 2011ರಲ್ಲಿ ರಾಜ್ಯದಾದ್ಯಂತ 21 ಹೆದ್ದಾರಿಗಳ ಅಭಿವೃದ್ಧಿಗಾಗಿ  ವಿಶ್ವಬ್ಯಾಂಕ್‌ನಿಂದ ಸಾಲ ಪಡೆದಿದೆ. ಆ ಸಾಲವನ್ನು ಟೋಲ್ ಸಂಗ್ರಹ ಮೂಲಕ ತೀರಿಸಬೇಕು ಎಂಬ ಆದೇಶವನ್ನು ನೀಡಿದ್ದ ಸರ್ಕಾರ ಈ ರಸ್ತೆಗಳಲ್ಲಿ ಟೋಲ್ ಸಂಗ್ರಹ ಹೊಣೆಯನ್ನೂ ನಿಗಮಕ್ಕೆ ವಹಿಸಿತ್ತು. ಸರ್ಕಾರದ ಆದೇಶದಂತೆ ನಿಗಮದಿಂದ ಟೆಂಡರ್ ಕರೆಯಲಾಗಿತ್ತು. 2023 ಮಾರ್ಚ್‌ 23ರಂದು ಟೋಲ್ ಸಂಗ್ರಹ ಮಾಡಲು ಸಂಸ್ಥೆಯೊಂದರ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈಗಾಗಲೇ ಬಹುತೇಕ ರಸ್ತೆಗಳಲ್ಲಿ ಟೋಲ್ ಸಂಗ್ರಹಿಸಲಾಗುತ್ತಿದ್ದು ಇದೇ ಮಾರ್ಚ್‌ 1ರಿಂದ ಈ ರಸ್ತೆಯಲ್ಲಿ ಟೋಲ್ ಸಂಗ್ರಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ನಾಗರಾಜ್ ಕೆ. ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT