ಮಂಗಳವಾರ, ಸೆಪ್ಟೆಂಬರ್ 29, 2020
23 °C
ವಿವಿಧ ರೈಲ್ವೆ ಕಾಮಗಾರಿ ಲೋಕಾರ್ಪಣೆ ಮಾಡಿದ ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ

ಪ್ರಮುಖ ಪ್ರವಾಸಿ ತಾಣವಾಗಿ ಅರಸಾಳು ನಿಲ್ದಾಣ: ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಅರಸಾಳು ರೈಲುನಿಲ್ದಾಣವನ್ನು ರಾಜ್ಯದ ಪ್ರಮುಖ ಪ್ರವಾಸಿ ತಾಣವಾಗಿ ರೂಪಿಸಲಾಗಿದೆ. 28 ಬೋಗಿಗಳ ರೈಲು ನಿಲ್ಲುವ ಸೌಲಭ್ಯ ಕಲ್ಪಿಸಲಾಗಿದೆ ಎಂದು ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ಹೇಳಿದರು.

ಶಿವಮೊಗ್ಗ ಪೆಸಿಟ್‌ ಕಾಲೇಜು ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವರ್ಚುವಲ್ ವೀಡಿಯೊ ಮೂಲಕ ನಗರದ ಮುಖ್ಯ ರೈಲುನಿಲ್ದಾಣದ ಲಿಫ್ಟ್‌ ಹಾಗೂ ನವೀಕೃತ ಅರಸಾಳುನಿಲ್ದಾಣ, ವಿಸ್ತರಣೆಯಾದ ಪ್ಲಾಟ್‌ಫಾರಂ, ಮ್ಯೂಸಿಯಂ ಮಾಲ್ಗುಡಿ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಶಿವಮೊಗ್ಗ-ಶಿಕಾರಿಪುರ-ರಾಣೇಬೆನ್ನೂರು ರೈಲು ಮಾರ್ಗದ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಸ್ವಾಧೀನಕ್ಕೆ ₹  245 ಕೋಟಿ ವೆಚ್ಚವಾಗಲಿದೆ. ಇನ್ನೆರಡು ತಿಂಗಳಲ್ಲಿ ಭೂಸ್ವಾಧೀನ ಪೂರ್ಣಗೊಳ್ಳಲಿದೆ. ₹  994 ಕೋಟಿ ವೆಚ್ಚದಲ್ಲಿ ಹೊಸ ರೈಲು ಯೋಜನೆ ಅನುಷ್ಠಾನಕ್ಕೆ ಮುಖ್ಯಮಂತ್ರಿ ಉಚಿತವಾಗಿ ಭೂಮಿ ಒದಗಿಸುತ್ತಿದ್ದಾರೆ. ರಾಜ್ಯ ಸರ್ಕಾರದಿಂದ ಶೇ 50ರಷ್ಟು ಯೋಜನಾ ವೆಚ್ಚ ಭರಿಸುವ ಭರವಸೆ ನೀಡಿದ್ದಾರೆ. ಅದೇ ರೀತಿ ದಾವಣಗೆರೆ-ಬೆಂಗಳೂರು ಮಧ್ಯೆ ದ್ವಿಪಥ ಮಾರ್ಗ ನಿರ್ಮಾಣಕ್ಕೂ ಜಮೀನು ಒದಗಿಸಲಾಗುತ್ತಿದೆ. ರೈಲ್ವೆ ಇಲಾಖೆಗೆ ಭೂಮಿ ಹಸ್ತಾಂತರಿಸಿದ ತಕ್ಷಣ ಕಾಮಗಾರಿ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಶಿವಮೊಗ್ಗ ರೈಲುನಿಲ್ದಾಣದಲ್ಲಿ ₹ 1 ಕೋಟಿ ವೆಚ್ಚದಲ್ಲಿ ಎರಡು ಲಿಫ್ಟ್‍ಗಳನ್ನು ನಿರ್ಮಿಸಲಾಗಿದೆ. ಇದರಿಂದ ಹಿರಿಯ ನಾಗರಿಕರಿಗೆ, ಅಂಗವಿಕಲ, ಅಶಕ್ತ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದರು.

ಶಿವಮೊಗ್ಗ-ಹರಿಹರ ರೈಲು ಮಾರ್ಗ, ಬೀರೂರು-ಶಿವಮೊಗ್ಗ ದ್ವಿಪಥ ಮಾರ್ಗ, ತಾಳಗುಪ್ಪ-ಸಿದ್ದಾಪುರ ಹಾಗೂ ಶಿವಮೊಗ್ಗದಿಂದ ಶೃಂಗೇರಿ ಮಾರ್ಗವಾಗಿ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಯೋಜನೆಗಳು ಕಾರ್ಯರೂಪಕ್ಕೆ ಬರಬೇಕಿದೆ. ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಶಿವಮೊಗ್ಗದ ನೂರು ಅಡಿ ವರ್ತುಲ ರಸ್ತೆಯೂ ಎರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದರು.

ನಾಲ್ಕು ರೈಲು ಸೇತುವೆ ನಿರ್ಮಾಣ: ₹ 100 ಕೋಟಿ ವೆಚ್ಚದಲ್ಲಿ ಶಿವಮೊಗ್ಗ ವಿದ್ಯಾನಗರ, ಭದ್ರಾವತಿಯ ಜೆಡಿ ಕಟ್ಟೆ, ಕಾಶಿಪುರ ಮತ್ತು ಸವಳಂಗ ರಸ್ತೆಯಲ್ಲಿ ರೈಲು ಮೇಲು ಸೇತುವೆ ನಿರ್ಮಾಣಕ್ಕೆ ಈಗಾಗಲೇ ಅನುಮೋದನೆ ದೊರೆತಿದೆ. ಕಾಮಗಾರಿ ಆದಷ್ಟು ಬೇಗನೆ ಆರಂಭವಾಗಲಿದೆ ಎಂದು ವಿವರ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು