ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು | ಮಾರುಕಟ್ಟೆಯಲ್ಲಿ ಈರುಳ್ಳಿ ದರ ಇಳಿಕೆ: ಟೊಮೆಟೊ ಏರಿಕೆ

Published 19 ನವೆಂಬರ್ 2023, 6:48 IST
Last Updated 19 ನವೆಂಬರ್ 2023, 6:48 IST
ಅಕ್ಷರ ಗಾತ್ರ

ತುಮಕೂರು: ಈರುಳ್ಳಿ ಬೆಲೆ ಇಳಿಕೆಯತ್ತ ಮುಖ ಮಾಡಿದ್ದರೆ, ಟೊಮೆಟೊ ಏರಿಕೆಯತ್ತ ಸಾಗಿದೆ. ತರಕಾರಿ, ಸೊಪ್ಪು, ಹಣ್ಣು ತುಸು ದುಬಾರಿಯಾಗಿದ್ದರೆ; ಕೋಳಿ ಮಾಂಸ, ಮೀನು ಅಗ್ಗವಾಗಿದೆ.

ಈರುಳ್ಳಿ ಅಗ್ಗ– ಟೊಮೆಟೊ ದುಬಾರಿ: ಹಿಂದಿನ ವಾರಕ್ಕೆ ಹೋಲಿಸಿದರೆ ಈರುಳ್ಳಿ ಧಾರಣೆ ಇಳಿಕೆಯಾಗುತ್ತಿದ್ದು, ಕೆ.ಜಿಗೆ ₹10 ಕಡಿಮೆಯಾಗಿದ್ದು, ದರ ಕೆ.ಜಿ ₹40–50ಕ್ಕೆ ಇಳಿಕೆಯಾಗಿದೆ. ತೀವ್ರ ಕುಸಿತ ಕಂಡಿದ್ದ ಟೊಮೆಟೊ ಬೆಲೆ ನಿಧಾನವಾಗಿ ಚೇತರಿಕೆ ಕಾಣುತ್ತಿದ್ದು, ಕೆ.ಜಿ ₹25–30ಕ್ಕೆ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಇದೇ ಸ್ಥಿತಿ ಮುಂದುವರಿಯಲಿದೆ ಎಂದು ಹೇಳಲಾಗುತ್ತಿದೆ.

ಮೂರು ವಾರದಿಂದ ಗಗನಮುಖಿಯಾಗಿರುವ ಬೀನ್ಸ್ ಬೆಲೆ ಈ ವಾರ ಮತ್ತೂ ಹೆಚ್ಚಳವಾಗಿದೆ. ಒಮ್ಮೆಲೆಗೆ ಕೆ.ಜಿಗೆ ₹20 ದುಬಾರಿಯಾಗಿದ್ದು, ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಕೆ.ಜಿ ₹60–70ಕ್ಕೆ ತಲುಪಿದೆ. ಚಿಲ್ಲರೆಯಾಗಿ, ಇತರೆ ಮಾರುಕಟ್ಟೆಗಳಲ್ಲಿ ಇನ್ನೂ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಆವಕ ಕಡಿಮೆ ಇರುವುದರಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಳವಾಗಬಹುದು ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.

ತರಕಾರಿ ದುಬಾರಿಯಾಗಿದ್ದು, ಕ್ಯಾರೇಟ್, ಗೆಡ್ಡೆಕೋಸು, ಬೆಂಡೆಕಾಯಿ, ಬದನೆಕಾಯಿ, ತೊಂಡೆಕಾಯಿ, ಹೂಕೋಸು, ಹಾಗಲಕಾಯಿ ಬೆಲೆ ಏರಿಕೆಯಾಗಿದೆ. ಶುಭಕಾರ್ಯಗಳು ಆರಂಭವಾಗುತ್ತಿದ್ದಂತೆ ಇಳಿಕೆ ಕಂಡಿದ್ದ ನುಗ್ಗೇಕಾಯಿ ದರ ಹೆಚ್ಚಳವಾಗಿದ್ದು, ಒಮ್ಮೆಲೆ ಕೆ.ಜಿಗೆ ₹30–40 ಏರಿದ್ದು, ಕೆ.ಜಿ ₹80–100ಕ್ಕೆ ತಲುಪಿದೆ.

ಸೊಪ್ಪಿಗೆ ಉತ್ತಮ ಬೆಲೆ: ಸೊಪ್ಪಿನ ಬೆಲೆ ಚೇತರಿಸಿಕೊಂಡಿದ್ದು, ಈ ವಾರ ಉತ್ತಮ ದರ ಕಂಡುಕೊಂಡಿದೆ. ಬಹುತೇಕ ಸೊಪ್ಪುಗಳು ದುಬಾರಿಯಾಗಿದ್ದು, ಕೊತ್ತಂಬರಿ ಸೊಪ್ಪು ಬೆಲೆ ದುಪ್ಪಟ್ಟಾಗಿದೆ. ಕೊತ್ತಂಬರಿ ಸೊಪ್ಪು ಕೆ.ಜಿ ₹40–50, ಸಬ್ಬಕ್ಕಿ ಕೆ.ಜಿ ₹40–50, ಮೆಂತ್ಯ ಸೊಪ್ಪು ಕೆ.ಜಿ ₹40–50, ಪಾಲಕ್ ಸೊಪ್ಪು (ಕಟ್ಟು) ₹40ಕ್ಕೆ ಏರಿಕೆ ಕಂಡಿದೆ.

ಹಣ್ಣು ದುಬಾರಿ: ಹಣ್ಣುಗಳ ಧಾರಣೆ ಮತ್ತೆ ಸ್ವಲ್ಪಮಟ್ಟಿಗೆ ಹೆಚ್ಚಳವಾಗಿದೆ. ಸೇಬಿನ ದರದಲ್ಲಿ ಹೆಚ್ಚಿನ ವ್ಯತ್ಯಾಸವಾಗದಿದ್ದರೂ ದಾಳಿಂಬೆ, ಮೂಸಂಬಿ, ಸೀಬೆ, ಪಪ್ಪಾಯ, ಕರಬೂಜ, ದ್ರಾಕ್ಷಿ ಮತ್ತಷ್ಟು ದುಬಾರಿಯಾಗಿದೆ. ಪಪ್ಪಾಯ ದರ ಕೆ.ಜಿಗೆ ₹40 ತಲುಪಿದ್ದು, ಹಣ ಕೊಟ್ಟರೂ ಮಾರುಕಟ್ಟೆಯಲ್ಲಿ ಗುಣಮಟ್ಟದ ಹಣ್ಣು ಸಿಗದಾಗಿದೆ. ಸೀತಾಫಲ ಮಾರುಕಟ್ಟೆಗೆ ಬಂದಿದ್ದು, ಕೆ.ಜಿ ₹160–180ಕ್ಕೆ ಸಿಗುತ್ತಿದೆ.

ಅಡುಗೆ ಎಣ್ಣೆ ಯಥಾಸ್ಥಿತಿ: ಈ ವಾರ ಅಡುಗೆ ಎಣ್ಣೆ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಗೋಲ್ಡ್‌ವಿನ್ನರ್ ಕೆ.ಜಿ ₹105–108, ಪಾಮಾಯಿಲ್ ಕೆ.ಜಿ ₹85–90, ಕಡಲೆಕಾಯಿ ಎಣ್ಣೆ ಕೆ.ಜಿ ₹150–155ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಧಾನ್ಯ– ಬೇಳೆ: ಬೇಳೆ ಕಾಳುಗಳು, ಧಾನ್ಯ, ಇತರೆ ಮಸಾಲ ಪದಾರ್ಥಗಳ ಧಾರಣೆ ಬಹುತೇಕ ಯಥಾಸ್ಥಿತಿಯಲ್ಲಿ ಮುಂದುವರಿದಿದೆ. ಜೀರಿಗೆ, ಕಾಳುಮೆಣಸಿನ ದರದಲ್ಲಿ ಅಲ್ಪಸ್ವಲ್ಪ ವ್ಯತ್ಯಾಸ ಆಗಿರುವುದನ್ನು ಹೊರತುಪಡಿಸಿದರೆ ಇತರೆ ಪದಾರ್ಥಗಳ ಬೆಲೆ ಸ್ಥಿರವಾಗಿದೆ.

ಧನ್ಯ ಕೆ.ಜಿ ₹110–150, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹550–600, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹230–240, ಹುಣಸೆಹಣ್ಣು ₹120–180, ಕಾಳುಮೆಣಸು ಕೆ.ಜಿ ₹650–680, ಜೀರಿಗೆ ಕೆ.ಜಿ ₹550–600, ಸಾಸಿವೆ ಕೆ.ಜಿ ₹80–85, ಮೆಂತ್ಯ ಕೆ.ಜಿ ₹95–100, ಚಕ್ಕೆ ಕೆ.ಜಿ ₹250–270, ಲವಂಗ ಕೆ.ಜಿ ₹1,050–1,100, ಗುಣಮಟ್ಟದ ಗಸಗಸೆ ಕೆ.ಜಿ ₹1,400–1,450, ಬಾದಾಮಿ ಕೆ.ಜಿ ₹650–670, ಗೋಡಂಬಿ ಕೆ.ಜಿ ₹600–650, ದ್ರಾಕ್ಷಿ ಕೆ.ಜಿ ₹200–220ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಕೋಳಿ ಇಳಿಕೆ: ಎರಡು ವಾರದಿಂದ ಕೋಳಿ ಮಾಂಸದ ದರ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಕಾರ್ತಿಕ ಮಾಸ ಆರಂಭವಾಗಿದ್ದು, ಮಾಂಸಾಹಾರ ಸೇವನೆ ಕಡಿಮೆಯಾಗಿರುವುದು ಬೆಲೆ ಇಳಿಕೆಗೆ ಪ್ರಮುಖ ಕಾರಣವಾಗಿದೆ. ಬ್ರಾಯ್ಲರ್ ಕೋಳಿ ಕೆ.ಜಿ ₹110, ರೆಡಿ ಚಿಕನ್ ಕೆ.ಜಿ ₹180, ಸ್ಕಿನ್‌ಲೆಸ್ ಕೆ.ಜಿ ₹200, ಮೊಟ್ಟೆ ಕೋಳಿ (ಫಾರಂ) ಕೆ.ಜಿ ₹115ಕ್ಕೆ ಇಳಿಕೆಯಾಗಿದೆ.

ಮೀನು ಅಗ್ಗ: ಸಮುದ್ರ ಮೀನಿನ ಬೆಲೆಯೂ ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ. ಅಂಜಲ್, ಕಪ್ಪುಮಾಂಜಿ ಮೀನಿನ ದರ ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗಿದೆ. ಬಂಗುಡೆ ಕೆ.ಜಿ ₹160, ಬೂತಾಯಿ ಕೆ.ಜಿ ₹140, ಬೊಳಿಂಜರ್ ಕೆ.ಜಿ ₹240, ಅಂಜಲ್ ಕೆ.ಜಿ ₹680, ಬಿಳಿ ಮಾಂಜಿ ಕೆ.ಜಿ ₹900, ಕಪ್ಪುಮಾಂಜಿ ಕೆ.ಜಿ ₹650, ಸೀಗಡಿ ಕೆ.ಜಿ ₹450ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT