ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ದಿನ 286 ಮಂದಿಗೆ ಕೋವಿಡ್‌ ಲಸಿಕೆ

ಅಂತೂ ಸಿಕ್ತು ಕೊರೊನಾಗೆ ಲಸಿಕೆ; 22,333 ಸಿಬ್ಬಂದಿ ಲಸಿಕೆಗೆ ನೋಂದಣಿ
Last Updated 16 ಜನವರಿ 2021, 15:41 IST
ಅಕ್ಷರ ಗಾತ್ರ

ಉಡುಪಿ: ಬಹು ನಿರೀಕ್ಷಿತ ಕೋವಿಡ್‌ ಲಸಿಕಾ ಅಭಿಯಾನಕ್ಕೆ ಜಿಲ್ಲೆಯಲ್ಲಿ ಶನಿವಾರ ಚಾಲನೆ ದೊರೆಯಿತು. ಪ್ರಧಾನಿ ನರೇಂದ್ರ ಮೋದಿ ದೇಶದಾದ್ಯಂತ ಕೋವಿಡ್‌ ಅಭಿಯಾನಕ್ಕೆ ಗ್ರೀನ್‌ ಸಿಗ್ನಲ್ ನೀಡುತ್ತಿದ್ದಂತೆ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯ ಗಣಪತಿ ಹೆಗಡೆ, ಹಾಗೂ ಗ್ರೂಪ್‌ ‘ಡಿ’ ನೌಕರ ಬಸವರಾಜ ಅವರಿಗೆ ಕೋವಿಡ್‌ ಚುಚ್ಚುಮದ್ದು ಹಾಕಲಾಯಿತು.

ಮೊದಲ ದಿನ ಉಡುಪಿ ಜಿಲ್ಲಾ ಆಸ್ಪತ್ರೆ, ನಗರ ಸಾರ್ವಜನಿಕ ಆರೋಗ್ಯ ಕೇಂದ್ರ, ಉಡುಪಿಯ ಡಾ.ಟಿ.ಎಂ.ಎ. ಪೈ ಆಸ್ಪತ್ರೆ, ಕುಂದಾಪುರ ತಾಲ್ಲೂಕು ಆಸ್ಪತ್ರೆ, ಕಂಡ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಕಾರ್ಕಳ ತಾಲ್ಲೂಕು ಆಸ್ಪತ್ರೆಯಲ್ಲಿ ಮೊದಲ ಹಂತದಲ್ಲಿ 538 ಮಂದಿಗೆ ಲಸಿಕೆ ಹಾಕಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಸಮಯದ ಅಭಾವದಿಂದ ಹಾಗೂ ಲಸಿಕೆ ಹಾಕಿಸಿಕೊಳ್ಳುವವರಿಗೆ ಮಾಹಿತಿ ತಲುಪದ ಕಾರಣ 286 ಮಂದಿಗೆ ಮಾತ್ರ ಲಸಿಕೆ ಹಾಕಲಾಯಿತು.

ಪ್ರತಿ ಕೇಂದ್ರದಲ್ಲಿ ಐವರು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಲಸಿಕೆ ಹಾಕಿಸಿಕೊಳ್ಳಲು ನೋಂದಾಯಿಸಿಕೊಂಡವರ ಆಧಾರ್ ಕಾರ್ಡ್‌ ಹಾಗೂ ಇತರೆ ವಿವರಗಳನ್ನು ಪರಿಶೀಲಿಸಿ ಲಸಿಕೆ ಹಾಕಲಾಯಿತು. ಲಸಿಕೆ ಹಾಕಿದ ಬಳಿಕ 15 ರಿಂದ 30 ನಿಮಿಷ ವಿಚಕ್ಷಣಾ ಕೊಠಡಿಯಲ್ಲಿಸಿ ಅವರ ಆರೋಗ್ಯದ ಮೇಲೆ ನಿಗಾ ಇರಿಸಲಾಯಿತು. ಯಾವುದೇ ಕೇಂದ್ರದಲ್ಲಿ ಗೊಂದಲಗಳು ನಡೆಯಲಿಲ್ಲ. ಲಸಿಕೆ ಹಾಕಿಸಿಕೊಂಡವ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಲಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.

ಜಿಲ್ಲೆಯಲ್ಲಿ ಸರ್ಕಾರಿ 5,712 ಹಾಗೂ ಖಾಸಗಿ ಆರೋಗ್ಯ ಸಂಸ್ಥೆಗಳ 16,621 ಸೇರಿ 22,333 ಸಿಬ್ಬಂದಿ ಕೋವಿಡ್ ಲಸಿಕೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಸಧ್ಯ ಜಿಲ್ಲೆಗೆ 12,000 ಲಸಿಕೆಗಳು ಬಂದಿದ್ದು ಹಂತ ಹಂತವಾಗಿ ಬಾಕಿ ಲಸಿಕೆಗಳು ಬರಲಿವೆ. 258 ಲಸಿಕಾ ಶಿಬಿರಗಳನ್ನು ಲಸಿಕೆ ಹಾಕಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ಮಾಹಿತಿ ನೀಡಿದರು.

ಲಸಿಕಾ ಅಭಿಯಾನವನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು ಉದ್ಘಾಟಿಸಿದರು. ಶಾಸಕರಾದ ಕೆ. ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ಜಿಲ್ಲಾ ಪಂಚಾಯಿತಿ ಸಿಇಒ ಡಾ. ನವೀನ್ ಭಟ್, ಡಿಎಚ್‌ಒ ಡಾ. ಸುಧೀರ್‌ಚಂದ್ರ ಸೂಡ, ಜಿಲ್ಲಾ ಸರ್ಜನ್ ಡಾ. ಮಧುಸೂದನ್ ನಾಯಕ್, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಲಸಿಕಾ ಅಧಿಕಾರಿ ಡಾ. ಎಂ.ಜಿ. ರಾಮ, ಕೋವಿಡ್‌ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT