ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ದುಡಿಯವ ಕೈಗಳಿಗೆ ಉದ್ಯೋಗ, ಬತ್ತಿದ ಕೆರೆಗಳಲ್ಲಿ ಜೀವ ಸೆಲೆ

ಕಾಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆ ಪರಿಣಾಮಕಾರಿ ಅನುಷ್ಠಾನ
Last Updated 24 ನವೆಂಬರ್ 2022, 19:30 IST
ಅಕ್ಷರ ಗಾತ್ರ

ಉಡುಪಿ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯು ಜಿಲ್ಲೆಯಲ್ಲಿ ದುಡಿಯುವ ಕೈಗಳಿಗೆ ಉದ್ಯೋಗ ನೀಡುವುದರ ಜತೆಗೆ ಕೃಷಿ ಭೂಮಿಯನ್ನು ಹಸನುಗೊಳಿಸಿದೆ. ಬತ್ತಿಹೋಗಿದ್ದ ಕೆರೆ, ಮದಗ, ಬಾವಿಗಳಲ್ಲಿ ಜೀವ ಸೆಲೆ ಪುಟಿಯುವಂತೆ ಮಾಡಿದೆ.

ಕಾಡೂರು ನಡೂರು ಯಶೋಗಾಥೆ:ಕೆಲ ವರ್ಷಗಳ ಹಿಂದಷ್ಟೆ ಬ್ರಹ್ಮಾವರ ತಾಲ್ಲೂಕಿನ ಕಾಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಬೇಸಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುತ್ತಿತ್ತು. ಅಂತರ್ಜಲ ಸಮಸ್ಯೆ ಹಾಗೂ ನೀರಿನ ಅಲಭ್ಯತೆಯ ಕಾರಣದಿಂದ ಹಿಂಗಾರಿನಲ್ಲಿ ಬೆಳೆ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ.

ಈಗ ಪರಿಸ್ಥಿತಿ ಸುಧಾರಿಸಿದೆ. ನಾಲ್ಕೈದು ವರ್ಷಗಳಿಂದ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಅಷ್ಟಾಗಿ ಬಾಧಿಸಿಲ್ಲ. ಬೇಸಗೆಯಲ್ಲಿ ಸಂಪೂರ್ಣ ಬತ್ತಿ ಹೋಗುತ್ತಿದ್ದ ಬಾವಿಗಳಲ್ಲಿ ಜೀವ ಜಲ ಕಾಣುತ್ತಿದೆ. ಅಂತರ್ಜಲ ವೃದ್ಧಿಯಾಗಿ ಹಿಂಗಾರಿನಲ್ಲೂ ರೈತರು ತರಕಾರಿ ಬೆಳೆಯುತ್ತಿದ್ದಾರೆ.

ಇದೆಲ್ಲವೂ ಸಾಧ್ಯವಾಗಿದ್ದು ನೀರಾವರಿ ಯೋಜನೆಗಳ ಅನುಷ್ಠಾನದಿಂದಲ್ಲ. ಬದಲಾಗಿ, ನರೇಗಾ ಯೋಜನೆಯ ಪರಿಣಾಮಕಾರಿ ಅನುಷ್ಠಾನದಿಂದ. ಉದ್ಯೋಗ ಖಾತ್ರಿ ಯೋಜನೆಯಡಿ ಕಾಡೂರು ನಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 19 ಕೆರೆಗಳನ್ನು ಅಭಿವೃದ್ಧಿಗೊಳಿಸಲಾಗಿದೆ. ಎರಡು ವರ್ಷಗಳಲ್ಲಿ 8 ಕೆರೆಗಳು ಸಮಗ್ರ ಅಭಿವೃದ್ಧಿಗೊಂಡಿವೆ.

ಮಾನವ ದಿನಗಳ ಸೃಜನೆಯಲ್ಲೂ ಕಾಡೂರು ಗ್ರಾಮ ಪಂಚಾಯಿತಿ ಉತ್ತಮ ಸಾಧನೆ ತೋರಿದೆ. ಕಳೆದ ವರ್ಷ 12,379 ಮಾನವ ದಿನಗಳನ್ನು ಸೃಜಿಸಿದ್ದ ಪಂಚಾಯಿತಿ, ಈ ವರ್ಷ ಈಗಾಗಲೇ 7,000ಕ್ಕೂ ಹೆಚ್ಚು ಮಾನವ ದಿನಗಳನ್ನು ಸೃಜಿಸಿದೆ.

ಯೋಜನೆ ಅನುಷ್ಠಾನಗೊಂಡ ಬಗೆ:ನರೇಗಾ ಅಡಿಯಲ್ಲಿ ಉದ್ಯೋಗ ಕೋರಿ ಗ್ರಾಮದ ಮಹಿಳೆಯರು ಅರ್ಜಿ ಸಲ್ಲಿಸಿದಾಗ ಎಲ್ಲರಿಗೂ ಕೆಲಸ ಕೊಡಬೇಕು ಹಾಗೂ ದೂರದೃಷ್ಟಿಯ ಯೋಜನೆ ಅನುಷ್ಠಾನವಾಗಬೇಕು ಎಂಬ ದೃಷ್ಟಿಯಿಂದ ಗ್ರಾಮಗಳ ಕೆರೆ ಹಾಗೂ ಮದಗಗಳನ್ನು ಹೂಳೆತ್ತಲು ಪಂಚಾಯಿತಿ ನಿರ್ಧರಿಸಿತು.

ಜಲ ತಜ್ಞ ಶ್ರೀಪಡ್ರೆಯವರ ಸಲಹೆಯೊಂದಿಗೆ ಜನಪ್ರತಿನಿಧಿಗಳು, ಮುಖಂಡರು, ಗ್ರಾಮಸ್ಥರೆಲ್ಲ ಸೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ವಹಣೆ ಕೊರತೆಯಿಂದ ಮುಚ್ಚಿಹೋಗಿದ್ದ ಮದಗಳನ್ನು ಗುರುತಿಸಿ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಕೋವಿಡ್‌–19 ಕಾರಣದಿಂದ ಹಳ್ಳಿಗೆ ಮರಳಿದ ಯುವಕರಿಗೂ ನರೇಗಾ ಅಡಿ ಉದ್ಯೋಗ ಕೊಡಲಾಯಿತು. ನೋಡ ನೋಡುತ್ತಿದ್ಧಂತೆ 14 ಕೆರೆಗಳು ಜೀರ್ಣೋದ್ಧಾರಗೊಂಡವು. ಬಾವಿಗಳಲ್ಲಿ ಅಂತರ್ಜಲ ಹೆಚ್ಚಾಗಿ ಕುಡಿಯುವ ನೀರಿನ ಸಮಸ್ಯೆ ಕಡಿಮೆಯಾಯಿತು. ಮಳೆಗಾಲದಲ್ಲಿ ಮದಗಗಳು ತುಂಬಿ ಬೇಸಗೆಯ ಕೃಷಿಗೆ ಬಳಕೆಯಾಯಿತು ಎಂದು ಯೋಜನೆ ಸಾಕಾರಗೊಂಡ ಬಗೆಯನ್ನು ಕಾಡೂರು ಗ್ರಾಮ ಪಂಚಾಯಿತಿ ಪಿಡಿಒ ಮಹೇಶ್‌ ವಿವರಿಸಿದರು.

ಅಭಿವೃದ್ಧಿಗೊಂಡ ಕೆರೆಗಳ ವಿವರ
ಚುಳ್ಳಿಕೆರೆ, ಸಣ್ಣಕೆರೆ, ದೊಟ್ಟಕೆರೆ, ಪಡ್ಡುಗುಡ್ಡೆ ದೇವರಕೆರೆ, ಕಂಡಿಕೆ ಮದಗ, ಅವುಡಿ ಮದಗ, ದೋಣಿಕೆರೆ, ನಡೂರು ಬಾಳೆಕೆರೆ, ಬಾಳೆಗದ್ದೆ ಕೆರೆ, ಜಡ್ಡಿನ ಕೆರೆ, ಜೋಬಲಜೆಟ್ಟು ಕೆರೆ, ಹಾಲಿಗನ ಕೆರೆ, ಹೊಟ್ಕೆರೆ, ಬರದಕಲ್ಲು ಮದಗ, ನಡೂರು ಮೇಲಿನ ಬಾಳೆಕೆರೆ ಮದಗ, ಕುಂಬ್ರಿ ಕೆರೆ, ನೀರ್ಮಕ್ಕಿ ಪಾಂಡಿಕೆರೆ, ಬಡಾಬೆಟ್ಟು ಕೆರೆ, ಮುಂಡಾಡಿ ಕಟ್ಕೆರೆ.

ಕರಾವಳಿಗೆ ಅವಶ್ಯವಾಗಿ ಬೇಕು
ಕರಾವಳಿಯಲ್ಲಿ ಕೆರೆಗಳನ್ನು ಹೂಳೆತ್ತುವ ಕಾರ್ಯ ಅವಶ್ಯವಾಗಿ ಆಗಬೇಕು. ಕಾರಣ ಉಡುಪಿಯಲ್ಲಿ ಅತಿ ಹೆಚ್ಚು ಮಳೆ ಬಿದ್ದರೂ ಬೇಸಗೆಯಲ್ಲಿ ಹಲವು ಕಡೆ ನೀರಿಗೆ ತತ್ವಾರ ಶುರುವಾಗುತ್ತದೆ. ಹಳ್ಳಿಗಳಲ್ಲಿ ಮದಗ ಕೆರೆಗಳ ಜೀರ್ಣೋದ್ಧಾರಗೊಂಡರೆ ಅಂತರ್ಜಲ ಹೆಚ್ಚುತ್ತದೆ, ಕೃಷಿಗೆ ಹಾಗೂ ಕುಡಿಯಲು ನೀರು ಸಿಗುತ್ತದೆ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಸಿಇಒ ಎಚ್‌.ಪ್ರಸನ್ನ.

*
ಗ್ರಾಮಸ್ಥರಲ್ಲಿ ಜಲ ಸಾಕ್ಷರತೆ
ಕಾಡೂರು ಹಾಗೂ ನಡೂರು ಗ್ರಾಮಗಳ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಜಲಸಾಕ್ಷರತೆಯ ಬಗ್ಗೆ ಹೆಚ್ಚಿನ ಅರಿವು ಹೊಂದಿದ್ದಾರೆ. ಸಾಮೂಹಿಕ ಆಸ್ತಿ ಸೃಜನೆ, ಕಾಮಗಾರಿ ಅನುಷ್ಠಾನಕ್ಕೆ ಆಸಕ್ತಿ ತೋರಿಸುತ್ತಿರುವುದು ಮಾದರಿಯಾಗಿದೆ.
– ಕೆ.ಮಹೇಶ್, ಕಾಡೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT