ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಳಿ ಮಾಂಸದ ದರ ಇಳಿಕೆ: ಮೊಟ್ಟೆ ಏರಿಕೆ

ಚಿಕನ್‌ ಪ್ರಿಯರಿಗೆ ಖುಷಿ; ಮೀನಿನ ಅಲಭ್ಯತೆ ನಡುವೆ ಕೋಳಿಗೆ ಬೇಡಿಕೆ
Last Updated 14 ಜುಲೈ 2022, 19:30 IST
ಅಕ್ಷರ ಗಾತ್ರ

ಉಡುಪಿ: ಮಾರುಕಟ್ಟೆಯಲ್ಲಿ ವಾರದ ಹಿಂದಷ್ಟೆ ಗಗನಕ್ಕೇರಿದ್ದ ಕೋಳಿ ಮಾಂಸದ ದರ ಸದ್ಯ ಕುಸಿತವಾಗಿದೆ. ಮೀನಿನ ದರ ಹೆಚ್ಚಾಗಿರುವುದರ ನಡುವೆ ಚಿಕ್‌ನ್ ದರ ಇಳಿಕೆಯಾಗಿರುವುದಕ್ಕೆ ಮಾಂಸ ಪ್ರಿಯರು ಸಂತಸಗೊಂಡಿದ್ದಾರೆ.

ವಾರದ ಹಿಂದಷ್ಟೆ ಮಾಂಸ ಮಾರುಕಟ್ಟೆಯಲ್ಲಿ ಬ್ರಾಯ್ಲರ್ ಚಿಕನ್‌ (ಸ್ಕಿನ್ ಲೆಸ್‌) ಕೆ.ಜಿಗೆ ₹ 260 ದರ ಇತ್ತು. ವಿತ್‌ ಸ್ಕಿನ್ ಚಿಕನ್‌ ಕೆ.ಜಿಗೆ ₹ 240 ದರ ಇತ್ತು. ಸದ್ಯ ಸ್ಕಿನ್‌ಲೆಸ್‌ ಕೆಜಿಗೆ 220 ಇದ್ದರೆ, ವಿತ್ ಸ್ಕಿನ್ ₹ 200ರ ಆಸುಪಾಸಿನಲ್ಲಿದೆ. ಜೀವಂತ ಕೋಳಿ ಕೆ.ಜಿಗೆ ₹ 160 ಇದ್ದ ದರ ಈಗ ₹ 140ಕ್ಕೆ ಕುಸಿದಿದೆ. ಆದರೆ, ಊರಿನ ಕೋಳಿಯ ದರ ಮಾತ್ರ ಇಳಿಕೆಯಾಗಿಲ್ಲ. ಬದಲಾಗಿ ಕೆ.ಜಿ.ಗೆ ₹ 300 ರಿಂದ 320ಕ್ಕೆ ಹೆಚ್ಚಾಗಿದೆ ಎನ್ನುತ್ತಾರೆ ಚಿಕನ್‌ ಸೆಂಟರ್‌ ಮಾಲೀಕರಾದ ರಫೀಕ್.

ಸಾಮಾನ್ಯವಾಗಿ ಬೇಸಗೆ ರಜೆಯ ದಿನಗಳಲ್ಲಿ ಕೋಳಿ ಮಾಂಸಕ್ಕೆ ಬೇಡಿಕೆ ಹೆಚ್ಚಾಗಿರುತ್ತದೆ. ದರವೂ ಏರುಮುಖವಾಗಿರುತ್ತದೆ. ಈಗ ಶಾಲೆಗಳು ಆರಂಭವಾಗಿರುವುದರಿಂದ ಕೋಳಿ ಮಾಂಸಕ್ಕೆ ಬೇಡಿಕೆ ಕಡಿಮೆ. ಮುಖ್ಯವಾಗಿ ಆಷಾಡ ತಿಂಗಳಿನಲ್ಲಿ ಸಮಾರಂಭಗಳು ನಡೆಯುವುದಿಲ್ಲ. ಕಾರಣ ಕೋಳಿ ಮಾಂಸಕ್ಕೆ ಸಹಜವಾಗಿ ಬೇಡಿಕೆ ಕುಸಿದು ದರ ಇಳಿಕೆಯಾಗಿದೆ ಎನ್ನುತ್ತಾರೆ ಕೋಳಿ ವ್ಯಾಪಾರಿಗಳು.

ಕೋಳಿ ಮರಿ ಕೇವಲ 45 ದಿನಗಳಲ್ಲಿ ಬೆಳೆದು ಮಾಂಸದ ಕೋಳಿಯಾಗುತ್ತದೆ. ನಿರ್ವಹಣಾ ವೆಚ್ಚ ಹೆಚ್ಚಾಗುವ ಕಾರಣಕ್ಕೆ ಫಾರಂ ಮಾಲೀಕರು ಅವಧಿ ಮೀರಿದ ಕೋಳಿಗಳನ್ನು ಫಾರಂನಲ್ಲಿ ಇಟ್ಟುಕೊಳ್ಳುವುದಿಲ್ಲ. ಮಾರುಕಟ್ಟೆಯಲ್ಲಿ ಮಾಂಸಕ್ಕೆ ಬೇಡಿಕೆ ಕಡಿಮೆಯಾದಾಗ ಬೆಲೆ ಇಳಿಸುತ್ತಾರೆ. ಬೇಡಿಕೆ ಹೆಚ್ಚಾದಾಗ ಬೆಲೆ ಹೆಚ್ಚಿಸುತ್ತಾರೆ. ಕೋಳಿ ಮಾಂಸದ ದರ ಪ್ರತಿದಿನ ಬದಲಾಗುತ್ತಿರುತ್ತದೆ ಎನ್ನುತ್ತಾರೆ ಮಾಲೀಕರು.

ಸದ್ಯ ಮೀನುಗಾರಿಕಾ ಋತುವಿಗೆ ರಜೆ ಇರುವ ಕಾರಣ ಆಳಸಮುದ್ರ ಮೀನುಗಾರಿಕೆ ನಡೆಯುತ್ತಿಲ್ಲ. ಗ್ರಾಹಕರ ಬೇಡಿಕೆಯಷ್ಟು ಮೀನು ಸಿಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಚಿಕನ್ ದರ ಕೊಂಚ ತಗ್ಗಿರುವುದು ಸಂತಸ ತಂದಿದೆ ಎನ್ನುತ್ತಾರೆ ಗ್ರಾಹಕರಾದ ಬಸಪ್ಪ.

ಕುರಿ ಮಾಂಸದ ಬೆಲೆ ಸ್ಥಿರ:ಮಾರುಕಟ್ಟೆಯಲ್ಲಿ ಕುರಿ, ಆಡು, ಮೇಕೆಯ ಮಾಂಸದ ಬೆಲೆ ಸ್ಥಿರವಾಗಿದೆ. ಬನ್ನೂರು ಹೆಸರಿನಲ್ಲಿ ಮಾರುವ ಮಟನ್ ಕೆ.ಜಿಗೆ ₹750 ದರ ಇದ್ದರೆ, ಸಾಮಾನ್ಯ ಮಟನ್‌ ಕೆ.ಜಿಗೆ ₹ 650 ಇದೆ.

ಮೊಟ್ಟೆಯ ದರ ಏರಿಕೆ:ಕೋಳಿ ಮಾಂಸದ ಬೆಲೆ ಇಳಿಕೆಯಾದರೆ ಮೊಟ್ಟೆಯ ದರ ಮಾತ್ರ ಏರಿಕೆಯಾಗಿದೆ. ತಿಂಗಳ ಹಿಂದಷ್ಟೆ ₹ 5.50 ರಿಂದ ₹ 6ರ ಆಸುಪಾಸಿನಲ್ಲಿದ್ದ ದರ ಈಗ ₹ 7ಕ್ಕೆ ಮುಟ್ಟಿದೆ.

ಕೋಳಿ ಆಹಾರ ದರ ಹೆಚ್ಚಳ:ಕುಕ್ಕುಟೋದ್ಯಮ ಆಹಾರಗಳ ದರ ಹೆಚ್ಚಾಗಿರುವ ಕಾರಣ ಮೊಟ್ಟೆಯ ದರ ಏರಿಕೆಯಾಗಿದೆ. ಕೋಳಿಗಳಿಗೆ ಆಹಾರ ತಯಾರಿಸುವ ಕಚ್ಛಾ ಪದಾರ್ಥಗಳಾದ ಮೆಕ್ಕೆಜೋಳ, ಸೋಯಾ, ಸೂರ್ಯಕಾಂತಿ ದರ ಶೇ 20ರಷ್ಟು ಹೆಚ್ಚಾಗಿರುವ ಕಾರಣ ಮೊಟ್ಟೆ ದರ ಹೆಚ್ಚಾಗಿದೆ ಎನ್ನುತ್ತಾರೆ ಕೋಳಿ ಫಾರಂ ಮಾಲೀಕರು.

ಮಳೆಗಾಲದಲ್ಲಿ ಮೊಟ್ಟೆ ಬಳಕೆ ಹೆಚ್ಚಾಗಿರುತ್ತದೆ. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ಮಳೆಗಾಲದಲ್ಲಿ ಶೀತದ ವಾತಾವರಣ ಇರುವ ಕಾರಣ ಮೊಟ್ಟೆಗಳ ಉತ್ಪಾದನೆ ಕಡಿಮೆಯಾಗುತ್ತದೆ. ಮಳೆಗಾಲ ಹೊರತಾದ ಅವಧಿಯಲ್ಲಿ ಒಂದು ಮೊಟ್ಟೆ ಉತ್ಪಾದನಾ ವೆಚ್ಚ ₹ 3.50 ರಿಂದ ₹ 4 ಇದ್ದರೆ, ಮಳೆಗಾಲದಲ್ಲಿ ₹ 5ರವರೆಗೆ ಮುಟ್ಟುತ್ತದೆ ಎನ್ನುತ್ತಾರೆ ಮಾಲೀಕರು.

‘ಹೊರ ಜಿಲ್ಲೆಗಳಿಂದ ಪೂರೈಕೆ’
ಉಡುಪಿ ಜಿಲ್ಲೆಯ ಬೇಡಿಕೆಯ ಬಹುಪಾಲು ಕೋಳಿ ಮಾಂಸ ಹೊರ ಜಿಲ್ಲೆಗಳಿಂದ ಪೂರೈಕೆಯಾಗುತ್ತದೆ. ಮುಖ್ಯವಾಗಿ ದಾವಣಗೆರೆ ಜಿಲ್ಲೆಯ ಫಾರಂಗಳಿಂದ ಜಿಲ್ಲೆಗೆ ಹೆಚ್ಚಿನ ಪ್ರಮಾಣದಲ್ಲಿ ಮಾಂಸ ಬರುತ್ತದೆ. ಇಲ್ಲಿನ ಹವಾಗುಣ ಕುಕ್ಕುಟ ಉದ್ಯಮಕ್ಕೆ ಅಷ್ಟು ಪೂರಕವಾಗಿಲ್ಲ ಎಂಬ ಅಭಿಪ್ರಾಯ ಉದ್ಯಮ ವಲಯದಲ್ಲಿದೆ. ಜಿಲ್ಲೆಗೆ ಮೊಟ್ಟೆ ಹಾಗೂ ಕುರಿಯ ಮಾಂಸ ಸರಬರಾಜು ಕೂಡ ಹೊರ ಜಿಲ್ಲೆಗಳಿಂದಲೇ ಬರುತ್ತದೆ.

‘ಹೋಲ್‌ಸೇಲ್ ದರ ಹೆಚ್ಚಾಗಿಲ್ಲ’
ಹೋಲ್‌ಸೇಲ್ ಮಾರುಕಟ್ಟೆಯಲ್ಲಿ ಮೊಟ್ಟೆದರ ಹೆಚ್ಚಾಗಿಲ್ಲ. ಸದ್ಯ ಬೇಡಿಕೆಯಷ್ಟು ಮೀನು ಸಿಗದ ಕಾರಣ ಮೊಟ್ಟೆಗೆ ಬೇಡಿಕೆ ಹೆಚ್ಚಾಗಿರುವುದನ್ನು ಬಂಡವಾಳ ಮಾಡಿಕೊಂಡಿರುವ ಚಿಲ್ಲರೆ ಮಾರಾಟಗಾರರು ದರ ಹೆಚ್ಚಿಸಿದ್ದಾರೆ. ದರ ಏರಿಕೆ, ಇಳಿಕೆಯ ಮಧ್ಯೆ ಹೋಲ್‌ಸೇಲ್ ಮೊಟ್ಟೆ ಮಾರಾಟಗಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನುತ್ತಾರೆ ಬನ್ನಂಜೆಯ ಚಿಕ್ಕಯ್ಯ ಎಗ್ ಹೌಸ್ ಮಾಲೀಕರಾದ ಅಚ್ಯುತ್ ಸೂಡಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT