ಭಾನುವಾರ, ಡಿಸೆಂಬರ್ 4, 2022
20 °C
ದೇಶ-ವಿದೇಶದಿಂದ ಆಗಮಿಸಿದ್ದ ಸಾವಿರಾರು ಸಂಖ್ಯೆಯ ಭಕ್ತರು.

ಕೊಲ್ಲೂರು: ನವರಾತ್ರಿಯ ಸಂಭ್ರಮಕ್ಕೆ ಸಾಕ್ಷಿಯಾದ ವೈಭವದ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಂದಾಪುರ: ಇಲ್ಲಿಗೆ ಸಮೀಪದ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಮಂಗಳವಾರ ಮಹಾ ನವರಾತ್ರಿ ಉತ್ಸವದ ಅಂಗವಾಗಿ ಮಧ್ಯಾಹ್ನ 1.೦೫ ಕ್ಕೆ ನಡೆದ ಶ್ರೀ ದೇವಿಯ ವೈಭವದ ರಥೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. 

ನವರಾತ್ರಿ ಪ್ರಾರಂಭವಾದ ದಿನದಿಂದ ನವರಾತ್ರಿಯವರೆಗೂ ದೇವಸ್ಥಾನದಲ್ಲಿ ವಿವಿಧ ಪೂಜೆ ಹಾಗೂ ಧಾರ್ಮಿಕ ಆಚರಣೆಗಳು ನಡೆದಿದ್ದಬು. ಮಂಗಳವಾರ ಮಧ್ಯಾಹ್ನದ ವೇಳೆಗೆ ದೇಗುಲದಿಂದ ಹೊರಕ್ಕೆ ತರಲಾದ ಶ್ರೀ ದೇವಿಯ ಉತ್ಸವ ಮೂರ್ತಿಯ ಪ್ರದಕ್ಷಿಣಿ ಹಾಗೂ ಬಲಿ ಸೇವೆ ನಡೆದ ಬಳಿಕ ಶ್ರೀ ದೇವಿಯನ್ನು ಅಲಂಕರಿಸಿದ ಪುಷ್ಪ ರಥದಲ್ಲಿ ಕುಳ್ಳಿರಿಸಲಾಯಿತು.

ದೇವಸ್ಥಾನದ ತಂತ್ರಿ ರಾಮಚಂದ್ರ ಅಡಿಗರು ರಥಾರೋಹಣಳಾದ ಶ್ರೀ ದೇವಿಗೆ ಪೂಜೆ ನೆರವೇರಿಸಿ, ಮಂಗಳಾರತಿ ಎತ್ತಿದ ಬಳಿಕ, ರಥ ಪೂಜೆಯ ನಡೆಸಲಾಯಿತು. ನಂತರ ಸೇರಿದ್ದ ಸಾವಿರಾರು ಜನರು ಶ್ರೀ ದೇವಿಯ ಜಯ ಘೋಷದೊಂದಿಗೆ ರಥವನ್ನು ಎಳೆದರು. ದೇವಳದ ಒಳ ಪ್ರಾಂಗಣದಲ್ಲಿ ಮೂರು ಸುತ್ತು–ಬಂದು ಮತ್ತೆ ರಥ ಮೂಲ ಸ್ಥಾನವನ್ನು ತಲುಪಿದ ಬಳಿಕ ರಥದ ಮೇಲಿನಿಂದ ಅರ್ಚಕರು ಎಸೆದ ನಾಣ್ಯವನ್ನು ಪಡೆದುಕೊಳ್ಳಲು ಭಕ್ತರು ನೂಕು-ನುಗ್ಗಲು ನಡೆಸಿದರು. ಉತ್ಸವ ಮೂರ್ತಿಯನ್ನು ರಥದಿಂದ ಕೆಳಕ್ಕೆ ತರುವ ಕ್ಷಣಗಳಿಗಾಗಿ ಕಾಯುತ್ತಿದ್ದ ಭಕ್ತ ವರ್ಗ, ಕ್ಷಣ ಮಾತ್ರದಲ್ಲಿ ರಥಕ್ಕೆ ಅಲಂಕರಿಸಿದ್ದ ಹೂಗಳನ್ನು ಕಿತ್ತು ಅಲಂಕೃತ ರಥವನ್ನು ಬರಿದುಗೊಳಿಸಿದರು. 

ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಜಿಲ್ಲಾಧಿಕಾರಿ ಕೂರ್ಮರಾವ್ ಎಂ, ದೇವಸ್ಥಾನದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಕೆರಾಡಿ, ಕೇರಳ ರಾಜ್ಯದ ಹಿರಿಯ ಐಪಿಎಸ್ ಅಧಿಕಾರಿ ಶ್ರೀಜಿತ್, ಕಾರ್ಯನಿರ್ವಹಣಾಧಿಕಾರಿ ಪಿ.ಬಿ.ಮಹೇಶ್, ಸಮಿತಿಯ ಸದಸ್ಯರಾದ ಡಾ.ಅತುಲಕುಮಾರ ಶೆಟ್ಟಿ, ಜಯಾನಂದ ಹೋಬಳಿದಾರ್, ಗಣೇಶ್ ಕಿಣಿ ಬೆಳ್ವೆ, ಗೋಪಾಲಕೃಷ್ಣ ನಾಡ, ಸಂಧ್ಯಾ ರಮೇಶ್, ರತ್ನಾ ರಮೇಶ್ ಕುಂದರ್, ಕೆ.ಪಿ ಶೇಖರ್, ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ ಅಡ್ಯಾಂತಾಯ, ಮಾಜಿ ಸದಸ್ಯರಾದ ವಂಡಬಳ್ಳಿ ಜಯರಾಮ್ ಶೆಟ್ಟಿ, ಮೋಹನ್‌ಚಂದ್ರ ನಂಬಿಯಾರ್, ರಮೇಶ್ ಗಾಣಿಗ ಕೊಲ್ಲೂರು, ಜಿಲ್ಲಾ ಬಿಜೆಪಿ ಯುವಮೋರ್ಚಾ ಮುಖಂಡ ಶರತ್ ಕುಮಾರ ಶೆಟ್ಟಿ ಉಪ್ಪುಂದ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಉಮೇಶ್ ಶೆಟ್ಟಿ ಕಲ್ಗದ್ದೆ ಇದ್ದರು, 

ನೂಕು-ನುಗ್ಗಲು

ಮಧ್ಯಾಹ್ನದ ನಡೆಯುವ ರಥೋತ್ಸವದಲ್ಲಿ ಪಾಲ್ಗೊಳ್ಳಲು ಕಾಯುತ್ತಿದ್ದ ಭಕ್ತರು ಮುಂಜಾನೆಯಿಂದಲೇ ದೇವಸ್ಥಾನದ ಆವರಣದ ಒಳಗೆ ಠಿಕಾಣೆ ಹೂಡಿದ್ದರಿಂದ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರನ್ನು ನಿಯಂತ್ರಿಸಲು ಪೋಲಿಸರು ಹಾಗೂ ದೇವಸ್ಥಾನದ ಸಿಬ್ಬಂದಿಗಳು ಹರಸಾಹಸ ಮಾಡಬೇಕಾಯ್ತು. ವಿಶೇಷ ಪ್ರವೇಶಕ್ಕಾಗಿ ಟಿಕೇಟ್ ಪಡೆದುಕೊಂಡಿದ್ದ ಭಕ್ತರು ಕೂಡ ಜನದಟ್ಟಣೆಯ ಕಾರಣಕ್ಕಾಗಿ ಆನೆ ಬಾಗಿಲಿನಲ್ಲಿ ಗಂಟೆ ಗಟ್ಟಲೆ ಕಾಯುವ ಪರಿಸ್ಥಿತಿಗಳು ನಿರ್ಮಾಣವಾಗಿತ್ತು.

ದೇವರ ದರ್ಶನ ಹಾಗೂ ಉತ್ಸವದಲ್ಲಿ ಪಾಲ್ಗೊಳ್ಳಲು ನಿರೀಕ್ಷೆಗೆ ಮೀರಿದ ಜನಸ್ತೋಮವಾಗಿರುವ ಮಾಹಿತಿ ಪಡೆದುಕೊಂಡ ಕುಂದಾಪುರ ಉಪವಿಭಾಗದ ಡಿವೈಎಸ್‌ಪಿ ಶ್ರೀಕಾಂತ್ ಕೆ ಹಾಗೂ ಬೈಂದೂರು ಸರ್ಕಲ್ ಇನ್ಸ್‌ಪೆಕ್ಟರ್ ಸಂತೋಷ್ ಕಾಯ್ಕಿಣಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳನ್ನು ಕರೆಸಿಕೊಂಡರಲ್ಲದೆ, ತಾವೇ ಸ್ವತ: ಭಕ್ತಾಧಿಗಳ ನೂಕು-ನುಗ್ಗಲು ನಿಯಂತ್ರಿಸಲು ಮುಂದಾದ ಘಟನೆಯೂ ನಡೆಯಿತು. 

ದೇವರ ದರ್ಶನಕ್ಕೆ ಬರುವಲ್ಲಿಯೂ ಸಾಕಷ್ಟು ನೂಕು-ನುಗ್ಗಲು ಉಂಟಾಗಿದ್ದು, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಸಂಧ್ಯಾ ರಮೇಶ್, ರತ್ನಾ ರಮೇಶ್ ಕುಂದರ್ ಹಾಗೂ ಸ್ಥಳೀಯ ಭಕ್ತರು , ನೂಕು-ನುಗ್ಗಲು ನಿಯಂತ್ರಿಸುವಲ್ಲಿ ಪ್ರಯತ್ನ ಪಡುತ್ತಿದ್ದ ದೃಶ್ಯಗಳು ಗಮನ ಸೆಳೆಯಿತು.

ಮಧ್ಯಾಹ್ನ ಹಾಗೂ ರಾತ್ರಿ ನಡೆದ ಅನ್ನಸಂತರ್ಪಣೆಯಲ್ಲಿ ಸಾವಿರಾರು ಜನರ ಅನ್ನ ಪ್ರಸಾದ ಸ್ವೀಕರಿಸಿದರು. ದೇಶದ ವಿವಿಧ ಭಾಗಗಳಿಂದ ಕಲಾ ತಂಡಗಳು ದೇಗುಲದ ಸ್ವರ್ಣಮುಖಿ ಮಂಟಪ ಹಾಗೂ ಸರಸ್ವತಿ ಮಂಟಪದಲ್ಲಿ ಸೇವಾ ರೂಪವಾಗಿ ಕಲಾ ಪ್ರದರ್ಶನ ನೀಡಿದರು. ಕಲಾ ಪ್ರದರ್ಶನ ನೀಡಿದ ಕಲಾ ತಂಡದ ಪರವಾಗಿ ಕಲಾವಿದರನ್ನು ದೇವಸ್ಥಾನದ ವತಿಯಿಂದ ಗೌರವಿಸಲಾಯಿತು.

ಹುಲಿವೇಷ ಸೇವೆ : ಜಿಲ್ಲೆಯ ಪ್ರಸಿದ್ಧ ಹುಲಿವೇಷಧಾರಿಗಳ ತಂಡವಾದ ಮಲ್ಪೆ ಕೊಳ ಫ್ರೆಂಡ್ಸ್ ತಂಡದ ಸದಸ್ಯರು, ಕೊಲ್ಲೂರು ಫ್ರೆಂಡ್ಸ್ ಸಂಘಟನೆಯ ಆಯೋಜನೆಯಲ್ಲಿ ವಿಜಯದಶಮಿ ಅಂಗವಾಗಿ ಬುಧವಾರ ಬೆಳಿಗ್ಗೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಆವರಣದ ಒಳಗೆ ಹುಲಿ ವೇಷದ ನರ್ತನ ಸೇವೆ ನಡೆಸಿದರು. ನರ್ತನ ಸೇವೆ ನಡೆಸಿದ ಕಲಾವಿದರನ್ನು ದೇವಸ್ಥಾನದ ವತಿಯಿಂದ ಗೌರವಿಸಲಾಯಿತು.

ಬುಧವಾರ ವಿಜಯದಶಮಿ ಆಚರಣೆಯ ಅಂಗವಾಗಿ ಬೆಳಿಗ್ಗೆ 3 ಗಂಟೆಯಿಂದ ಪುಟಾಣೆ ಮಕ್ಕಳಿಗೆ ದೇವಸ್ಥಾನದ ಋತ್ವೀಜರ ಮೂಲಕ ಅಕ್ಷರಾಭ್ಯಾಸ ಕಾರ್ಯಕ್ರಮ, ಕದಿರು ಹಬ್ಬದ ಆಚರಣೆ, ನವನ್ನಾಪ್ರಾಶನ ಹಾಗೂ ಸಂಜೆ ವಿಜಯೋತ್ಸವ ನಡೆಯಿತು. 
––––––––
ವರದಿ : ರಾಜೇಶ್ ಕೆ.ಸಿ ಕುಂದಾಪುರ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು