ಕಾರವಾರ: ‘ಸದೃಢ ದೇಶ, ಸುಸಂಸ್ಕೃತ ಸಮಾಜ ಕಟ್ಟುವುದು ಬಿಜೆಪಿಯ ಧ್ಯೇಯ. ರಾಜಕೀಯದಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಿದ್ದು ನಮ್ಮ ಪಕ್ಷ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಇಲ್ಲಿನ ಮಿತ್ರ ಸಮಾಜ ಮೈದಾನದಲ್ಲಿ ಶುಕ್ರವಾರ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಜಿಲ್ಲಾ ಮಹಿಳಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
‘ಜಗತ್ತು ಆರ್ಥಿಕ ಅಸ್ಥಿರತೆಯಿಂದ ತಲ್ಲಣಗೊಂಡಿದೆ. ಮೋದಿ ಆಡಳಿತದ ಪರಿಣಾಮ ದೇಶ ನೆಮ್ಮದಿಯಿಂದ ಇದೆ. ಅರ್ಜಿ ಕೊಡದೆ ಸವಲತ್ತು ನೀಡುವ ಕಿಸಾನ್ ಸಮ್ಮಾನ್‍ನಂತಹ ಯೋಜನೆ ಜಾರಿಗೆ ತರಲಾಗಿದೆ. ಮೂರು ವರ್ಷದಲ್ಲಿ ಜಿಲ್ಲೆಯ ಒಂಬತ್ತೂವರೆ ಸಾವಿರ ಮನೆಗಳಿಗೆ ವಿದ್ಯುತ್ ಸಂಪರ್ಕ ಒದಗಿಸಿದ್ದೇವೆ’ ಎಂದರು.
ವಾಗ್ಮಿ ಆದರ್ಶ ಗೋಖಲೆ, ‘ದೇಶವನ್ನು ಹಿಂದುತ್ವ ಆಳುತ್ತಿದೆ. ಮುಂದೆಯೂ ಇದೇ ಆಳಲಿದೆ. ಈ ನೆಲದ ಮಹಿಳೆಯರಲ್ಲಿ ಕಿತ್ತೂರು ಚನ್ನಮ್ಮ, ಒನಕೆ ಓಬವ್ವ, ಜೀಜಾಬಾಯಿಯ ಡಿಎನ್ಎ ಇದೆ. ಸಾಮಾನ್ಯ ಮಹಿಳೆಗೂ ಸಮಾಜ ಕಟ್ಟುವ ಶಕ್ತಿ ಇದೆ’ ಎಂದರು.
‘ಮಹಿಳೆಯ ಒಂದು ಮತ ದೇಶದಲ್ಲಿ ಬದಲಾವಣೆ ತಂದಿದೆ. ರಾಜ್ಯದ ಅಭಿವೃದ್ಧಿಯ ಪರ್ವಕ್ಕೆ ಮಹಿಳಾ ಮತದಾರರು ಶಕ್ತಿ ತುಂಬಿಸಬೇಕು’ ಎಂದರು.
ಶಾಸಕಿ ರೂಪಾಲಿ ನಾಯ್ಕ, ‘ಕೌಟುಂಬಿಕ ಜವಾಬ್ದಾರಿ ನಿಭಾಯಿಸುವ ಜತೆಗೆ ಸಮಾಜದ ಒಳಿತಿಗೆ ದುಡಿಯಬಲ್ಲಳು. ಜನ ಪ್ರತಿನಿಧಿಯಾಗಿ ಅಲ್ಲದೆ ಜನ ಸೇವಕಿಯಾಗಿ ಕೆಲಸ ಮಾಡಿದ್ದೇನೆ. ಮಹಿಳೆ ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡಲು ಹೊರಟರೆ ಅಪಪ್ರಚಾರ ಮಾಡುವವರು ಹೆಚ್ಚಾಗುತ್ತಾರೆ. ಎಲ್ಲವನ್ನೂ ಮೆಟ್ಟಿನಿಂತು ಗಟ್ಟಿಯಾಗಿ ನಿಂತಿದ್ದೇನೆ’ ಎಂದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ನಾಯಕ, ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಘಟಕದ ಕಾರ್ಯದರ್ಶಿ ಭಾರತಿ ಮಗ್ದುಮ್ ಮಾತನಾಡಿದರು.
ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ರೇಣುಕಾ ನಾಗರಾಜ್, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷೆ ಶೋಭಾ ನಾಯ್ಕ, ಬಿಜೆಪಿ ಜಿಲ್ಲಾ ಘಟಕದ ಪದಾಧಿಕಾರಿಗಳಾದ ಗುರುಪ್ರಸಾದ ಹೆಗಡೆ, ಚಂದ್ರು ಎಸಳೆ, ಉಷಾ ಹೆಗಡೆ, ಗಜಾನನ ಗುನಗಾ, ಆರತಿ ಗೌಡ, ಹೂವಾ ಖಂಡೇಕರ್ ಇದ್ದರು.
ಪಕ್ಷ ಸೇರ್ಪಡೆ:
ಕಾರವಾರ, ಅಂಕೋಲಾ ತಾಲ್ಲೂಕಿನ 50ಕ್ಕೂ ಹೆಚ್ಚು ಮುಸ್ಲಿಂ ಮಹಿಳೆಯರು ಸೇರಿದಂತೆ, ಕಾರವಾರ ತಾಲ್ಲೂಕಿನ ಅಸ್ನೋಟಿ, ಮುಡಗೇರಿ, ಹಣಕೋಣ, ಘಾಡಸಾಯಿ ಗ್ರಾಮ ಪಂಚಾಯ್ತಿಯ ಸದಸ್ಯರು ಬಿಜೆಪಿ ಸೇರ್ಪಡೆಗೊಂಡರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.