ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ | ಅಡಿಕೆ ಕೊಳೆ: ಶುಂಠಿ ಬೆಳೆಗಾರರಿಗೆ ಬರೆ!

ಕೊಳೆ ರೋಗಕ್ಕೆ ಸ್ಥಳೀಯವಾಗಿ ಸಿಗದ ಶಿಲೀಂದ್ರನಾಶಕ
Published : 27 ಆಗಸ್ಟ್ 2024, 4:34 IST
Last Updated : 27 ಆಗಸ್ಟ್ 2024, 4:34 IST
ಫಾಲೋ ಮಾಡಿ
Comments

ಶಿರಸಿ: ಅಡಿಕೆಗೆ ತಗುಲಿದ ಕೊಳೆ ನಿಯಂತ್ರಣಕ್ಕೆ ವ್ಯಾಪಕ ಪ್ರಮಾಣದಲ್ಲಿ ಶಿಲೀಂದ್ರನಾಶಕ ಸಿಂಪಡಣೆ ಮಾಡುತ್ತಿರುವುದರ ಪರಿಣಾಮ ಶುಂಠಿ ಕೊಳೆ ರೋಗಕ್ಕೆ ಔಷಧ ಕೊರತೆ ಎದುರಾಗಿದೆ. ಇದರಿಂದಾಗಿ ಈಗಾಗಲೇ ಅರ್ಧ ಬೆಳೆ ಕೈತಪ್ಪಿದ್ದು, ಶುಂಠಿ ಬೆಳೆಗಾರರು ಹೊರ ಜಿಲ್ಲೆಗಳಿಂದ ಔಷಧ ತರುವಂತಾಗಿದೆ. 

ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ವ್ಯಾಪಕ ಮಳೆಗೆ ಅಡಿಕೆ, ಶುಂಠಿ, ಕಾಳುಮೆಣಸು ಸೇರಿ ವಿವಿಧ ಬೆಳೆಗಳಿಗೆ ಕೊಳೆ ರೋಗ ಬಾಧಿಸುತ್ತಿದೆ. ಅಡಿಕೆ ಬೆಳೆಗಾರರು ಸಾಂಪ್ರದಾಯಿಕ ಬೋರ್ಡೋ ದ್ರಾವಣದ ಜತೆ ಇತರ ಶಿಲೀಂದ್ರನಾಶಕಗಳ ಬಳಕೆಯನ್ನೂ ವ್ಯಾಪಕವಾಗಿ ಮಾಡುತ್ತಿದ್ದಾರೆ.

ಮಾರುಕಟ್ಟೆಯಲ್ಲಿ ಕೊಳೆ ನಿಯಂತ್ರಣಕ್ಕೆ ಪೂರಕವಾಗಿದ್ದ ಮೆಟಲಾಕ್ಸಿಲ್ ಮ್ಯಾಂಕೋಝೆಬ್, ಮೆಟಲಾಕ್ಸಿಲ್ ಟೈಗನ್ ಇನ್ನಿತರ ಪರಿಣಾಮಕಾರಿ ಶಿಲೀಂದ್ರನಾಶಕಗಳ ಕೊರತೆ ಎದುರಾಗಿದೆ. ಇದು ಶುಂಠಿ ಕೊಳೆಯಿಂದ ಹೈರಾಣಾದ ಬೆಳೆಗಾರರ ಚಿಂತೆಗೆ ಕಾರಣವಾಗಿದೆ. 

‘ಅತಿವೃಷ್ಟಿಗೆ ಜಿಲ್ಲೆಯಲ್ಲಿ ಹೆಚ್ಚು ಶುಂಠಿ ಬೆಳೆಯುವ ಶಿರಸಿಯ ಬನವಾಸಿ ಹೋಬಳಿ, ಮುಂಡಗೋಡ ತಾಲ್ಲೂಕಿನಲ್ಲಿ ಶುಂಠಿ ಹಸಿರು ಕೊಳೆ ವ್ಯಾಪಕವಾಗಿದೆ. ಈ ಭಾಗದ ಸಾವಿರಾರು ಎಕರೆ ಪ್ರದೇಶದಲ್ಲಿ ಶೇ 50ಕ್ಕೂ ಹೆಚ್ಚು ಶುಂಠಿಗೆ ಕೊಳೆ ಹರಡಿದೆ. ಅತಿ ಕಡಿಮೆ ಅವಧಿಯಲ್ಲಿ ಈ ರೋಗ ವ್ಯಾಪಿಸುತ್ತಿದ್ದು, ಆರೋಗ್ಯವಂತ ಶುಂಠಿ ಬೆಳೆ ಕಾಯಿಲೆಗೆ ತುತ್ತಾಗುವ ಆತಂಕ ಎದುರಾಗಿದೆ. ಕೊಳೆರೋಗಕ್ಕೆ ತುತ್ತಾದ ಮಡಿಯಲ್ಲಿನ ಶುಂಠಿಯನ್ನು ಬುಡ ಸಮೇತ ಕಿತ್ತು ನಾಶಪಡಿಸಿ, ಉಳಿದ ಗಿಡಗಳಿಗೆ ಶಿಲೀಂದ್ರನಾಶಕ ಮತ್ತು ಸುಣ್ಣವನ್ನು ಹಾಕಿ ನಿಯಂತ್ರಣಕ್ಕೆ ಯತ್ನಿಸಲಾಗುತ್ತಿದೆ. ಆದರೆ ಪರಿಣಾಮಕಾರಿಯಾಗಿದ್ದ ಶಿಲೀಂದ್ರನಾಶಕ ಸಿಂಪಡಿಸಲು ಸ್ಥಳೀಯ ಮಾರುಕಟ್ಟೆಯಲ್ಲಿ  ಕೊರತೆಯಿದೆ. ಈ ಭಾಗದಲ್ಲಿ ಅಡಿಕೆ ಪ್ರಧಾನ ಬೆಳೆಯಾಗಿದ್ದು, ಎಲ್ಲೆಡೆ ಕೊಳೆ ಬಂದಿದೆ. ಹೀಗಾಗಿ ಅಡಿಕೆ ಬೆಳೆಗಾರರೂ ಬೆಳೆ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಶಿಕಾರಿಪುರ ಭಾಗಕ್ಕೆ ಸ್ವತಃ ಶುಂಠಿ ಬೆಳೆದ ರೈತರು ತೆರಳಿ ಔಷಧ ತರುವಂತಾಗಿದೆ' ಎಂದು ಕೃಷಿಕರು ಹೇಳುತ್ತಿದ್ದಾರೆ. 

‘ಒಂದು ಎಕರೆ ಪ್ರದೇಶದಲ್ಲಿ ಶುಂಠಿ ಬೆಳೆಯಲು, ಬಿತ್ತನೆ ಬೀಜ, ಗೊಬ್ಬರ, ಕೀಟನಾಶಕ, ಕಾರ್ಮಿಕರ ಕೂಲಿ ಎಲ್ಲಸೇರಿ ವಾರ್ಷಿಕ ₹ 1.50 ಲಕ್ಷಕ್ಕೂ ಹೆಚ್ಚು ವೆಚ್ಚವಾಗುತ್ತದೆ. ಶುಂಠಿ ಬಿತ್ತನೆ ಮಾಡಿ ಈಗಾಗಲೇ 3 ತಿಂಗಳು ಕಳೆದಿರುವುದರಿಂದ ಶೇ 75ರಷ್ಟು ಹಣವನ್ನು ವ್ಯಯಿಸಲಾಗಿದೆ. ಶುಂಠಿ ಮೊಳ ಉದ್ದ ಬೆಳೆದು ಗದ್ದೆ ಹಚ್ಚಹಸಿರಿನಿಂದ ಕಂಗೊಳಿಸುತ್ತಿದ್ದಾಗ ಕೊಳೆ ರೋಗ ಕಾಣಿಸಿಕೊಂಡಿದೆ. ಸೂಕ್ತ ಔಷಧ ಸಿಂಪಡಿಸಲು ಅದರ ಲಭ್ಯತೆ ಇಲ್ಲ. ಹೀಗಾಗಿ ಬೇರೆ ಬೇರೆ ಶಿಲೀಂದ್ರನಾಶಕಗಳನ್ನು ದುಬಾರಿ ಬೆಲೆ ನೀಡಿ ಖರೀದಿಸುವಂತಾಗಿದೆ. ಆದರೆ ಕೊಳೆ ಹತೋಟಿಗೆ ಬರುತ್ತಿಲ್ಲ' ಎಂಬುದು ರೈತರ ದೂರಾಗಿದೆ.

ಲಾಭದಾಯಕ ಬೆಳೆ ಎಂದು 3 ಎಕರೆಯಲ್ಲಿ ಶುಂಠಿ ಕೃಷಿ ಆರಂಭಿಸಿದ್ದು ಕೊಳೆ ವ್ಯಾಪಕವಾಗಿದೆ. ಸೂಕ್ತ ಶಿಲೀಂದ್ರನಾಶಕ ಸಿಗುತ್ತಿಲ್ಲ. ಈ ಬಗ್ಗೆ ಇಲಾಖೆ ಅಧಿಕಾರಿಗಳು ಕ್ರಮವಹಿಸಬೇಕು.
-ರಮೇಶ ಗೌಡ ಬನವಾಸಿ, ಶುಂಠಿ ಬೆಳೆಗಾರ
ಅಡಿಕೆಗೆ ಕೊಳೆ ವ್ಯಾಪಕವಾಗಿ ಬಂದ ಪರಿಣಾಮ ಶಿಲೀಂದ್ರನಾಶಕ ಹೆಚ್ಚಿನ ಪ್ರಮಾಣದಲ್ಲಿ ಖಾಲಿಯಾಗುತ್ತಿದೆ. ಇದರಿಂದ ಶುಂಠಿ ಬೆಳೆಗಾರರಿಗೆ ಅಗತ್ಯವಾಗಿ ಬೇಕಿದ್ದ ಮೆಟಲಾಕ್ಸಿಲ್ ಟೈಗನ್ ಕೊರತೆಯಾಗಿರುವ ಸಾಧ್ಯತೆಯಿದೆ.
-ಗಣೇಶ ಹೆಗಡೆ, ತೋಟಗಾರಿಕಾ ಇಲಾಖೆ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT