ಮಂಗಳವಾರ, ಜೂನ್ 22, 2021
23 °C
ಅನೇಕ ವರ್ಷಗಳಿಂದ ಸಂಶೋಧನೆಯಲ್ಲಿ ತೊಡಗಿಕೊಂಡಿರುವ ಪ್ರಾಧ್ಯಾಪಕ ಎಸ್.ವೈ. ಸೋಮಶೇಖರ್

ಪ್ರಾಗೈತಿಹಾಸಿಕ ನೆಲೆ ಹುಡುಕಾಟಕ್ಕೆ ಸಮರ್ಪಣೆ

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಪ್ರಾಗೈತಿಹಾಸಿಕ ನೆಲೆಗಳ ಹುಡುಕಾಟಕ್ಕಾಗಿಯೇ ಹೆಚ್ಚಿನ ಸಮಯ ಮೀಸಲಿಟ್ಟು, ಅದನ್ನು ದಾಖಲಿಸಿ ಚರಿತ್ರೆಯೊಂದಿಗೆ ಮುಖಾಮುಖಿಯಾಗಿಸಿ, ಅದರ ಮೇಲೆ ಹೊಸ ನೋಟ ಬೀರುವುದಕ್ಕಾಗಿಯೇ ಸಮರ್ಪಿಸಿಕೊಂಡಿದ್ದಾರೆ ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎಸ್‌.ವೈ. ಸೋಮಶೇಖರ್‌.

ಅನೇಕ ವರ್ಷಗಳಿಂದ ಸದ್ದಿಲ್ಲದೆ ಮಾಡುತ್ತಿರುವ ಅವರು ಕನ್ನಡ ವಿಶ್ವವಿದ್ಯಾಲಯದ ಪ್ರಾಚ್ಯಶಾಸ್ತ್ರ ಮತ್ತು ಪುರಾತತ್ವ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಸೋಮಶೇಖರ್‌ ಅವರು ನಾಲ್ಕು ಗೋಡೆಗಳಿಗೆ ಸೀಮಿತರಾಗದೆ ಸತತ ಹುಡುಕಾಟದ ಮೂಲಕ ನಿರಂತರ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಭೇಟಿ ನೀಡಿರುವ ಅವರು ಅಲ್ಲಿನ ದೇವಸ್ಥಾನ, ಕೋಟೆ ಕೊತ್ತಲ, ಪ್ರಾಗೈತಿಹಾಸಿಕ ನೆಲೆಗಳ ಅಪರೂಪದ ಸಂಗತಿಗಳ ಸುತ್ತ ಆಳವಾದ ಅಧ್ಯಯನ ನಡೆಸಿ, ಅದನ್ನು ದಾಖಲಿಸುವ ಮಹತ್ಕಾರ್ಯ ಮಾಡುತ್ತಿದ್ದಾರೆ. ಚಿತ್ರದುರ್ಗ ಜಿಲ್ಲೆಯೊಂದರಲ್ಲೇ 15 ಪ್ರಾಗೈತಿಹಾಸಿಕ ನೆಲೆಗಳನ್ನು ಪತ್ತೆ ಹಚ್ಚಿರುವುದು ವಿಶೇಷ. ಚಿತ್ರದುರ್ಗದ ಸಂಗೇನಹಳ್ಳಿಯಲ್ಲಿ ಹಳೇ ಶಿಲಾಯುಗದ ನೆಲೆ, ಕಲ್ಲು ಬಂಡೆಗಳ ಮೇಲೆ ಬಿಡಿಸಿದ ರೇಖಾಚಿತ್ರ, ಹಳೇ ಶಿಲಾಯುಗದ ಆಯುಧ, ಚಿಪ್ಪಿನಕೆರೆಯಲ್ಲಿ ಮಣ್ಣಿನ ಮಡಕೆ, ಬೂದಿಗುಡ್ಡದ ನೆಲೆ, ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಶಿಲಾಯುಗದ ಪಳೆಯುಳಿಕೆ ಗುರುತಿಸಿರುವುದು ಪ್ರಮುಖವಾದವುಗಳು.

ಸೋಮಶೇಖರ್‌ ಅವರ ಅಧ್ಯಯನದ ಸಂದರ್ಭದಲ್ಲಿ ಸಿಕ್ಕಿರುವ ಅನೇಕ ಕಲ್ಲಿನ ಮೂರ್ತಿ, ಆಯುಧ ಸೇರಿದಂತೆ ಇತರೆ ಬಳಕೆಯ ವಸ್ತುಗಳನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಸ್ತು ಸಂಗ್ರಹಾಲಯದಲ್ಲಿ ಇರಿಸಲಾಗಿದೆ. ಅಂದಹಾಗೆ, ಪ್ರಾಗೈತಿಹಾಸಿಕದ ಬಗ್ಗೆ ಸೋಮಶೇಖರ್‌ ಅವರು ಹುಚ್ಚು ಹಿಡಿಸಿಕೊಂಡಿದ್ದು 1993–94ರಿಂದ. ಅಂದಿನಿಂದ ಸತತವಾಗಿ ಅದರ ಬಗ್ಗೆ ಆಳವಾದ ಅಧ್ಯಯನ ನಡೆಸುತ್ತಿದ್ದಾರೆ.

ಪ್ರಾಗೈತಿಹಾಸಿಕ ನೆಲೆಗಳ ಕುರಿತು ನೂರಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ. ಈಗ ಅದನ್ನವರು ಪುಸ್ತಕ ರೂಪದಲ್ಲಿ ಹೊರತಂದು, ಮುಂದಿನ ತಲೆಮಾರಿಗೆ ತಲುಪಿಸುವ ಯೋಜನೆ ಹಾಕಿಕೊಂಡಿದ್ದಾರೆ. ಈಗಾಗಲೇ ‘ಶಿಲಾಯುಗ’ ಶೀರ್ಷಿಕೆಯ ಪುಸ್ತಕ ಅಂತಿಮಗೊಂಡಿದ್ದು, ಬಿಡುಗಡೆಯ ನಿರೀಕ್ಷೆಯಲ್ಲಿದೆ.

‘ನಾವು ಎಷ್ಟೇ ಮುಂದುವರಿದರೂ ಇತಿಹಾಸವೇ ಅದಕ್ಕೆ ಬುನಾದಿ. ಪ್ರಾಚೀನರ ಬದುಕು ಹೇಗಿತ್ತು? ಕಾಲಕಾಲಕ್ಕೆ ಏನೆಲ್ಲ ಬದಲಾವಣೆಗಳಾದವು ಎನ್ನುವುದು ತಿಳಿದುಕೊಳ್ಳುವುದರ ಮೂಲಕ ನಮ್ಮ ಜ್ಞಾನದ ಹರವು ವಿಸ್ತರಿಸಿಕೊಳ್ಳುವ ಅಗತ್ಯವಿದೆ’ ಎನ್ನುತ್ತಾರೆ ಸೋಮಶೇಖರ್‌.

‘ಪ್ರತಿಯೊಂದು ಜ್ಞಾನ, ಆಚರಣೆ, ಪರಂಪರೆ, ಕಲೆ, ಭಾಷೆಯ ಬೆಳವಣಿಗೆ ಹೀಗೆ ಎಲ್ಲದಕ್ಕೂ ಒಂದು ಹಿನ್ನೆಲೆ ಇರುತ್ತದೆ. ಅದನ್ನು ತಿಳಿದುಕೊಳ್ಳುವುದು ಬಹಳ ಅಗತ್ಯ. ಆರಂಭದಿಂದಲೂ ಇದರ ಬಗ್ಗೆ ಆಸಕ್ತಿ ಇದೆ. ಈಗಲೂ ಅದನ್ನು ಮುಂದುವರಿಸಿರುವೆ’ ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು