ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸಪೇಟೆ | ಪುನರ್ವಸತಿ ಕಲ್ಪಿತ ದೇವದಾಸಿಯರಿಗೆ ಎಲ್ಲ ನೆರವು: DC, SP ಭರವಸೆ

Published : 25 ಸೆಪ್ಟೆಂಬರ್ 2024, 12:17 IST
Last Updated : 25 ಸೆಪ್ಟೆಂಬರ್ 2024, 12:17 IST
ಫಾಲೋ ಮಾಡಿ
Comments

ಹೊಸಪೇಟೆ (ವಿಜಯನಗರ): ‘ರಾಜ್ಯದಲ್ಲಿ 45 ಸಾವಿರಕ್ಕೂ ಅಧಿಕ ಪುನರ್ವಸತಿ ಕಲ್ಪಿತ ದೇವದಾಸಿಯರಿದ್ದಾರೆ, ವಿಜಯನಗರ ಜಿಲ್ಲೆಯಲ್ಲಿ ಒಂಭತ್ತು ಸಾವಿರಕ್ಕಿಂತ ಅಧಿಕ ಮಂದಿ ಇದ್ದಾರೆ. ಸಮಾಜ ಇವರನ್ನು ಕೆಟ್ಟ ದೃಷ್ಟಿಯಿಂದ ನೋಡಬಾರದು. ಶಿಕ್ಷಣದಿಂದ ಮಾತ್ರ ಇವರಲ್ಲಿರುವ ಕೀಳರಿಮೆ ತೊಲಗಲು ಸಾಧ್ಯ’ ಎಂದು ಜಿಲ್ಲಾಧಿಕಾರಿ ಎಂ.ಎಸ್‌.ದಿವಾಕರ್ ಹೇಳಿದರು.

ನಗರದ ಸಖಿ ಟ್ರಸ್ಟ್‌ ವತಿಯಿಂದ ಬುಧವಾರ ಇಲ್ಲಿ ನಡೆದ ‘ದೇವದಾಸಿ ತಾಯಂದಿರು ಮತ್ತು ಮಕ್ಕಳ ಘನತೆ ಮತ್ತು ಸುಸ್ಥಿರತೆಯ ಸಮಾವೇಶ’ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪುನರ್ವಸತಿ ಕಲ್ಪಿತ ದೇವದಾಸಿಯರ ಸಮೀಕ್ಷೆ ನಡೆದಿದ್ದರೂ, ಇನ್ನಷ್ಟು ಮಂದಿ ಅದರಿಂದ ಹೊರಗೆ ಉಳಿದಿರುವ ಮಾಹಿತಿ ಇದೆ. ಇನ್ನೊಮ್ಮೆ ಸಮಗ್ರ ಸಮೀಕ್ಷೆ ನಡೆಸಬೇಕೆಂಬ ಒತ್ತಾಯ ಇದೆ. ಇದನ್ನು ಸರ್ಕಾರ ಮಟ್ಟದಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

‘ಪುನರ್ವಸತಿ ಕಲ್ಪಿತ ದೇವದಾಸಿ ಮಹಿಳೆಯರು ಮತ್ತು ಅವರ ಮಕ್ಕಳ ಆರೋಗ್ಯ ರಕ್ಷಣೆಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಹಾಸ್ಟೆಲ್‌ಗಳಲ್ಲಿ ಮೀಸಲಾತಿಯೂ ಇದೆ. ಇದೆಲ್ಲವನ್ನೂ ಬಳಸಿಕೊಳ್ಳಬೇಕು. ಸಖಿ ಟ್ರಸ್ಟ್‌ ಪುನರ್ವಸತಿ ಕಲ್ಪಿತ ದೇವದಾಸಿಯರ ಬದುಕು ಸುಧಾರಣೆಗೆ ಸಾಕಷ್ಟು ಕೆಲಸ ಮಾಡುತ್ತಿದ್ದು, ಜಿಲ್ಲಾಡಳಿತದೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡು ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಗಮನಕ್ಕೆ ತಂದರೆ ಅದನ್ನು ಆದ್ಯತೆಯ ಮೇರೆಗೆ ಪರಿಹರಿಸಲು ಕ್ರಮ ವಹಿಸಲಾಗುವುದು’ ಎಂದು ದಿವಾಕರ್ ಭರವಸೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್‌. ಮಾತನಾಡಿ, ‘1982ರಲ್ಲೇ ದೇವದಾಸಿ ನಿರ್ಮೂಲನೆ ಕಾಯ್ದೆ ಅನುಷ್ಠಾನಕ್ಕೆ ಬಂದಿದೆ. ಕಾಯ್ದೆಯಲ್ಲಿ 8 ಸೆಕ್ಷನ್‌ಗಳಷ್ಟೇ ಇವೆ. ಈ ಪದ್ಧತಿಯನ್ನು ಉತ್ತೇಜಿಸುವವರಿಗೆ 3ರಿಂದ 5 ವರ್ಷ ಜೈಲು ಶಿಕ್ಷೆಗೂ ಅವಕಾಶ ಇದೆ, ಹೀಗಾಗಿ ಎಲ್ಲರೂ ಈ ಕಾಯ್ದೆಯ ಬಗ್ಗೆ ತಿಳಿದುಕೊಂಡು ಪುನರ್ವಸತಿ ಕಲ್ಪಿತ ದೇವದಾಸಿಯರ ಘನತೆಯ ಬದುಕಿಗೆ ಅವಕಾಶ ಮಾಡಿಕೊಡಬೇಕು’ ಎಂದರು.

‘ಜಿಲ್ಲೆಯಲ್ಲಿ ಬಾಲ್ಯವಿವಾಹ ಪ್ರಕರಣಗಳು ಜಾಸ್ತಿ ದಾಖಲಾಗುತ್ತಿವೆ. ಶಿಕ್ಷಣದಿಂದ ಮಾತ್ರ ಇಂತಹ ಪಿಡುಗನ್ನು ನಿವಾರಿಸಲು ಸಾಧ್ಯ. ಪುನರ್ವಸತಿ ಕಲ್ಪಿತ ದೇವದಾಸಿಯರು ಅಥವಾ ಅವರ ಮಕ್ಕಳಿಗೆ ಯಾವುದೇ ಸಮಸ್ಯೆ ಎದುರಾದರೂ ಅದನ್ನು ಬಗೆಹರಿಸುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡುತ್ತದೆ’ ಎಂದು ಎಸ್‌ಪಿ ಭರವಸೆ ನೀಡಿದರು.

ಸಖಿ ಟ್ರಸ್ಟ್‌ನ ನಿರ್ದೇಶಕಿ ಡಾ.ಎಂ.ಭಾಗ್ಯಲಕ್ಷ್ಮಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ 22 ವರ್ಷಗಳಿಂದ ಟ್ರಸ್ಟ್ ನಡೆಸುತ್ತ ಬಂದಿರುವ ಕೆಲಸಗಳನ್ನು ವಿವರಿಸಿದರು. ಪುನರ್ವಸತಿ ಕಲ್ಪಿತ ದೇವದಾಸಿ ಮಹಿಳೆಯರು, ಅವರ ಮಕ್ಕಳ ಬಾಳಿನಲ್ಲಿ ಆಗಿರುವ ಹಲವು ಬದಲಾವಣೆಗಳನ್ನು ಸಾಕ್ಷಿ ಸಮೇತ ಪರಿಚಯಿಸಿದರು.

ಪುನರ್ವಸತಿ ಕಲ್ಪಿತ ದೇವದಾಸಿಯ ಮಗಳಾಗಿ ಹುಟ್ಟಿದರೂ ಉನ್ನತ ಶಿಕ್ಷಣ ಪಡೆದು ದೆಹಲಿ ಸರ್ಕಾರದ ಎಂಸಿಡಿ ಶಾಲಾ ಕಾರ್ಯಕ್ರಮದ ತಂಡ ನಾಯಕಿ ಎನ್‌.ಕಾಮಾಕ್ಷಿ ಅವರು ತಮ್ಮ ಅನುಭವ ಹಂಚಿಕೊಂಡು, ಎಷ್ಟೇ ಕಷ್ಟ ಇದ್ದರೂ ಉನ್ನತ ಶಿಕ್ಷಣ ಪಡೆಯುವ ಪ್ರಯತ್ನ ಬಿಡಬಾರದು, ಶಿಕ್ಷಣದಿಂದ ಎಲ್ಲ ಕಳಂಕವೂ ದೂರವಾಗುವುದು ನಿಶ್ಚಿತ, ಸಮಾಜವೂ ತನ್ನಿಂದ ತಾನೇ ಬದಲಾಗುತ್ತದೆ ಎಂದರು.

ಹೂವಿನಹಡಗಲಿ ತಾಲ್ಲೂಕು ಕಾಲ್ವಿ ತಾಂಡಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕಿ ಎಚ್‌. ಅಂಜಿನಮ್ಮ ಅವರು ಸಹ ತಮ್ಮ ಅನುಭವ ಹಂಚಿಕೊಂಡು, ಧೈರ್ಯ ಕಳೆದುಕೊಳ್ಳದೆ ದಿಟ್ಟತನದಿಂದ ಸಮಾಜವನ್ನು ಎದುರಿಸಬೇಕು, ಸಖಿ ಟ್ರಸ್ಟ್‌ನಂತಹ ಸಂಸ್ಥೆಗಳ ನೆರವು ದೊರೆತರೆ ಜೀವನ ಸಾಗಿಸುವುದು ಸುಲಭವಾಗುತ್ತದೆ ಎಂದರು.

ಬೆಂಗಳೂರಿನ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ತಳಸಮುದಾಯಗಳ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಪ್ರೊ.ಆರ್.ವಿ.ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು.

ಸಖಿ ಟ್ರಸ್ಟ್‌ನ ದೇವದಾಸಿ ಸಹಾಯವಾಣಿಯ ಜಿಲ್ಲಾ ಸಂಚಾಲಕಿ ಮಂಜುಳಾ ಮಾಳ್ಗಿ, ಕೂಡ್ಲಿಗಿಯಲ್ಲಿ ಶೇಂಗಾ ಚಿಕ್ಕಿ ಘಟಕ ನಡೆಸುತ್ತಿರುವ ಗಂಗಮ್ಮ, ಜೇನುಗೂಡು ಮಹಿಳಾ ಸಹಕಾರಿ ಸಂಘದ ಸದಸ್ಯೆ ಹುಲಿಗೆಮ್ಮ ಇದ್ದರು.

ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪುನರ್ವಸತಿ ಕಲ್ಪಿತ ದೇವದಾಸಿ ಕುಟುಂಬದ ಮಹಿಳೆಯರಾದ ಪಿ.ಭಾರತಿ, ಗಂಗಮ್ಮ, ಅನಿತಾ ಪಿ.ಎ., ಹುಲಿಗೆಮ್ಮ, ಎಚ್‌.ಅನ್ನ‍ಪೂರ್ಣಾ, ಎಚ್‌.ಮಂಜುಳಾ ಅವರನ್ನು ಸನ್ಮಾನಿಸಲಾಯಿತು. ಪುನರ್ವಸತಿ ಕಲ್ಪಿತ ದೇವದಾಸಿ ಕುಟುಂಬದ, ಉನ್ನತ ವ್ಯಾಸಂಗ ಮಾಡುತ್ತಿರುವ ಯುವಕ, ಯುವತಿಯರಿಗೆ ಶೈಕ್ಷಣಿಕ ಧನಸಹಾಯ ನೀಡಲಾಯಿತು.

125 ಹೊಲಿಗೆ ಯಂತ್ರ:

ಪುನರ್ವಸತಿ ಕಲ್ಪಿತ ದೇವದಾಸಿ ಮಹಿಳೆಯರು ಮತ್ತು ಅವರ ಮಕ್ಕಳು ಸ್ವಾವಲಂಬಿ ಬದುಕು ಸಾಗಿಸಬೇಕು ಎಂಬ ಕಾಳಜಿಯಿಂದ ಸಖಿ ಟ್ರಸ್ಟ್‌ ಕಳೆದ ನಾಲ್ಕು ತಿಂಗಳಿಂದ ವಿವಿಧ ಕ್ಷೇತ್ರಗಳಲ್ಲಿ ತರಬೇತಿ ನೀಡುತ್ತಿತ್ತು. ಸಾವಿರಕ್ಕೂ ಅಧಿಕ ಮಂದಿ ಇಂತಹ ತರಬೇತಿ ಪಡೆದಿದ್ದು, ಅವರಿಗೆ ಪ್ರಮಾಣಪತ್ರ ನೀಡಲಾಯಿತು ಹಾಗೂ 125 ಮಂದಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು. 

ಕಾರ್ಯಕ್ರಮದಲ್ಲಿ ಬೆಂಗಳೂರಿನ ಜಂಗಮ ಕಲೆಕ್ಟಿವ್ ತಂಡದವರು ನಡೆಸಿಕೊಟ್ಟ ‘ಬಾಬ್ ಮಾರ್ಲಿ ಫ್ರಂ ಕೋಡಿಹಳ್ಳಿ’ ನಾಟಕ ಗಮನ ಸೆಳೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT