ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಂಗಭದ್ರಾ ಜಲಾಶಯ | 90 ಟಿಎಂಸಿ ಅಡಿ ನೀರು ಸಂಗ್ರಹ, ರೈತರ ಆತಂಕ ದೂರ

Published : 29 ಆಗಸ್ಟ್ 2024, 5:22 IST
Last Updated : 29 ಆಗಸ್ಟ್ 2024, 5:22 IST
ಫಾಲೋ ಮಾಡಿ
Comments

ಹೊಸಪೇಟೆ (ವಿಜಯನಗರ): ತುಂಗಭದ್ರಾ ಜಲಾಶಯದಲ್ಲಿ ಗುರುವಾರ ಬೆಳಿಗ್ಗೆ 9 ಗಂಟೆ ವೇಳೆಗೆ 90.45 ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದು, ಮೊದಲ ಬೆಳೆಯ ನಿರೀಕ್ಷೆಯಲ್ಲಿರುವ ರೈತರ ಕಷ್ಟವೆಲ್ಲವನ್ನೂ ತುಂಗಭದ್ರೆ ನಿವಾರಿಸಿದ್ದಾಳೆ.

ಆಗಸ್ಟ್‌ 10ರಂದು ರಾತ್ರಿ ಅಣೆಕಟ್ಟೆಯ 19ನೇ ಕ್ರಸ್ಟ್‌ಗೇಟ್ ನೀರಲ್ಲಿ ಕೊಚ್ಚಿ ಹೋದ ಕಾರಣ 36 ಟಿಎಂಸಿ ಅಡಿಯಷ್ಟು ನೀರು ಪೋಲಾಗಿತ್ತು. ವಾರದೊಳಗೆಯೇ ತಾತ್ಕಾಲಿಕ ಗೇಟ್ ಕೂರಿಸಿ ನೀರು ಪೋಲಾಗುವುದನ್ನು ತಡೆದ ಬಳಿಕ ಮತ್ತೆ ನೀರು ಸಂಗ್ರಹ ಆರಂಭವಾಗಿತ್ತು. ಕಳೆದ 12 ದಿನಗಳಲ್ಲಿ 20 ಟಿಎಂಸಿ ಅಡಿಯಷ್ಟು ನೀರು ಸಂಗ್ರಹವಾಗಿದೆ.

‘ಜಲಾಶಯದಲ್ಲಿ 90 ಟಿಎಂಸಿ ಅಡಿ ನೀರು ಸಂಗ್ರಹವಾದರೆ ರಾಜ್ಯ, ಆಂಧ್ರ, ತೆಲಂಗಾಣಗಳ ಸುಮಾರು 15 ಲಕ್ಷ ಎಕರೆ ಪ್ರದೇಶಗಳಲ್ಲಿ ಬೆಳೆದ ಮೊದಲ ಬೆಳೆಗೆ ನೀರು ಸಿಗಲಿದೆ. ಕುಡಿಯಲು ಮತ್ತು ಕೈಗಾರಿಕೆಗಳಿಗೆ ಸಹ ನೀರು ಸಿಗಲಿದೆ’ ಎಂದು ನೀರಾವರಿ ತಜ್ಞರೂ ಆಗಿರುವ ಕ್ರಸ್ಟ್‌ಗೇಟ್ ತಜ್ಞ ಕನ್ನಯ್ಯ ನಾಯ್ಡು ಆಗಸ್ಟ್‌ 17ರಂದು ತಿಳಿಸಿದ್ದರು. ಅವರ ನಿರೀಕ್ಷೆಯಂತೆಯೇ ಒಳಹರಿವಿನ ಪ್ರಮಾಣವೂ ಸರಾಸರಿ 25 ಸಾವಿರ ಕ್ಯುಸೆಕ್‌ಗಿಂತ ಅಧಿಕ ಇತ್ತು. ಹೀಗಾಗಿ ಈ 12 ದಿನಗಳಲ್ಲೇ ನೀರಿನ ಸಂಗ್ರಹ 90 ಟಿಎಂಸಿ ಅಡಿ ಮೀರಿದೆ.

ಗರಿಷ್ಠ 1,633 ಅಡಿ ಎತ್ತರದ ಅಣೆಕಟ್ಟೆಯಲ್ಲಿ ಸದ್ಯ ನೀರಿನ ಮಟ್ಟ 1629.03 ಅಡಿಯಷ್ಟಿದೆ. ಒಳಹರಿವಿನ ಪ್ರಮಾಣ 30,919 ಕ್ಯುಸೆಕ್‌ನಷ್ಟಿದೆ. ಇನ್ನು ಕೇವಲ ನಾಲ್ಕು ಅಡಿ ನೀರು ಬಂದರೆ (15 ಟಿಎಂಸಿ ಅಡಿ ನೀರು) ಅಣೆಕಟ್ಟು ಭರ್ತಿಯಾಗಲಿದೆ. ಸದ್ಯ ಪ್ರತಿದಿನ ಬಹುತೇಕ ಒಂದು ಟಿಎಂಸಿ ಅಡಿಗಿಂತ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ನೀರು ವಿವಿಧ ಕಾಲುವೆಗಳಲ್ಲಿ ಹರಿಯುತ್ತಿದೆ.

ಮತ್ತೆ ನೀರು ಹೊರಕ್ಕೆ ಸಾಧ್ಯತೆ:

ಮಲೆನಾಡು ಭಾಗದಲ್ಲಿ ಮುಂಗಾರು ಅಂತಿಮ ಚರಣದಲ್ಲಿ ಮಳೆ ಮುಂದುವರಿದಿದೆ. ಹೀಗಾಗಿ ಮತ್ತೆ ಕೆಲವು ದಿನ ದೊಡ್ಡ ಪ್ರಮಾಣದಲ್ಲಿ ನೀರು ಹರಿದು ಬರುವ ನಿರೀಕ್ಷೆ ಇದೆ. 50 ಸಾವಿರ ಕ್ಯುಸೆಕ್‌ಗಿಂತ ಅಧಿಕ ನೀರು ಹರಿದು ಬಂದರೆ ಜಲಾಶಯದಲ್ಲಿ 98 ಟಿಎಂಸಿ ಅಡಿ ನೀರು ಸಂಗ್ರಹವಾಗುತ್ತಿದ್ದಂತೆಯೇ ಕೆಲವು ಕ್ರಸ್ಟ್‌ಗೇಟ್‌ಗಳನ್ನು ತೆರೆದು ನದಿಗೆ ನೀರು ಹರಿಸುವ ಸಾಧ್ಯತೆ ಇದೆ ಎಂದು ತುಂಗಭದ್ರಾ ಮಂಡಳಿಯ ಮೂಲಗಳು ತಿಳಿಸಿವೆ.

‘ನೀರಿನ ಒಳಹರಿವು ನೋಡಿಕೊಂಡು ಮುಂದಿನ ದಿನಗಳಲ್ಲಿ ನಿರ್ಧಾರಕ್ಕೆ ಬರಲಾಗುವುದು. ಸದ್ಯಕ್ಕಂತೆ ಗೇಟ್ ತೆರೆಯುವ ಪ್ರಶ್ನೆ ಇಲ್ಲ’ ಎಂದು ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತುಂಗಭದ್ರಾ ಜಲಾಶಯ

ತುಂಗಭದ್ರಾ ಜಲಾಶಯ

ಹಿಂಗಾರು ಮಳೆಯಿಂದಲೂ ನೀರು:

ಈ ಬಾರಿ ಹಿಂಗಾರು ಮಳೆ ಸಹ ಉತ್ತಮವಾಗಿರುವ ನಿರೀಕ್ಷೆ ಇದ್ದು, ಹೀಗಾದಲ್ಲಿ ಅಕ್ಟೋಬರ್‌, ನವೆಂಬರ್‌ ತಿಂಗಳಲ್ಲಿ ಮತ್ತೆ ನೀರು ಸಂಗ್ರಹವಾಗಿ 90 ಟಿಎಂಸಿ ಅಡಿಗಿಂತಲೂ ಹೆಚ್ಚು ನೀರು ಜಲಾಶಯದಲ್ಲಿ ಸಂಗ್ರಹವಾಗುವ ನಿರೀಕ್ಷೆ ಇದೆ. ಹೀಗಿದ್ದಲ್ಲಿ ಎರಡನೇ ಬೆಳೆಗೂ ನೀರು ಸಿಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT